ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ್ದಕ್ಕೆ ಕ್ಷಮೆಯಾಚಿಸಿದ ಮಹಾರಾಷ್ಟ್ರ ಸಚಿವ ಗುಲಾಬ್​​ರಾವ್ ಪಾಟಿಲ್

ಭಾನುವಾರ ಜಲಗಾಂವ್ ಜಿಲ್ಲೆಯ ಬೋದ್ವಾಡ್ ನಗರ ಪಂಚಾಯತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಾಟಿಲ್, 30 ವರ್ಷಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದವರು ನನ್ನ ಧರಂಗಾವ್ ಕ್ಷೇತ್ರಕ್ಕೆ ಭೇಟಿ ನೀಡಬೇಕು. ನನ್ನ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿಯನ್ನು ಅವರು ನೇರವಾಗಿ ನೋಡಬೇಕು.

ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ್ದಕ್ಕೆ ಕ್ಷಮೆಯಾಚಿಸಿದ ಮಹಾರಾಷ್ಟ್ರ ಸಚಿವ ಗುಲಾಬ್​​ರಾವ್ ಪಾಟಿಲ್
ಗುಲಾಬ್​​ರಾವ್ ಪಾಟಿಲ್
Follow us
| Updated By: ರಶ್ಮಿ ಕಲ್ಲಕಟ್ಟ

Updated on:Dec 20, 2021 | 6:16 PM

ಮುಂಬೈ: ತಮ್ಮ ಕ್ಷೇತ್ರದ ರಸ್ತೆಗಳನ್ನು ಹೇಮಾ ಮಾಲಿನಿ (Hema Malini)ಅವರ ಕೆನ್ನೆಗೆ ಹೋಲಿಸಿದ್ದಕ್ಕಾಗಿ ಬಿಜೆಪಿ(BJP) ಮತ್ತು ಎನ್‌ಸಿಪಿಯಂತಹ (NCP) ರಾಜಕೀಯ ಪಕ್ಷಗಳಿಂದ ವ್ಯಾಪಕ ಖಂಡನೆ ಮತ್ತು ರಾಜ್ಯ ಮಹಿಳಾ ಆಯೋಗದ ಆಕ್ರೋಶಕ್ಕೆ ಕಾರಣವಾದ ನಂತರ ಮಹಾರಾಷ್ಟ್ರದ ನೀರು ಸರಬರಾಜು ಮತ್ತು ನೈರ್ಮಲ್ಯ ಸಚಿವ ಗುಲಾಬ್​​ರಾವ್ ಪಾಟಿಲ್ (Gulabrao Patil) ಕ್ಷಮೆಯಾಚಿಸಿದ್ದಾರೆ. “ನನ್ನ ಕ್ಷೇತ್ರದಲ್ಲಿ ಉತ್ತಮ ರಸ್ತೆಗಳನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಆದರೆ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಹೇಳಿಕೆಯು ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಶಿವಸೇನಾ ಸಚಿವರು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಭಾನುವಾರ ಜಲಗಾಂವ್ ಜಿಲ್ಲೆಯ ಬೋದ್ವಾಡ್ ನಗರ ಪಂಚಾಯತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಾಟಿಲ್, 30 ವರ್ಷಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದವರು ನನ್ನ ಧರಂಗಾವ್ ಕ್ಷೇತ್ರಕ್ಕೆ ಭೇಟಿ ನೀಡಬೇಕು. ನನ್ನ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿಯನ್ನು ಅವರು ನೇರವಾಗಿ ನೋಡಬೇಕು. ಹೇಮಾ ಮಾಲಿನಿಯ ಕೆನ್ನೆಯಂತೆ ಧರಂಗಾವ್‌ನ ರಸ್ತೆಗಳು ನಿಮಗೆ ಕಾಣದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ ಎಂದು ತಮ್ಮ ರಾಜಕೀಯ ಎದುರಾಳಿ ಎನ್‌ಸಿಪಿ ನಾಯಕ ಏಕನಾಥ್ ಖಾಡ್ಸೆಯನ್ನು ಲೇವಡಿ ಮಾಡಿ ಹೇಳಿದ್ದರು.

“ಅವಮಾನಕರ ಮತ್ತು ಅಯೋಗ್ಯವಾದ ಹೇಳಿಕೆಗಳನ್ನು ನೀಡಿದ ಸಚಿವರ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ರಾಜ್ಯ ಬಿಜೆಪಿ ಹೇಳಿದೆ. ಪಾಟೀಲರ ವಿರುದ್ಧ ಮಹಿಳೆಯರನ್ನು ಅವಹೇಳನ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿಜೆಪಿ ನಾಯಕ ಪ್ರವೀಣ್ ದಾರೇಕರ್ ಹೇಳಿದ್ದಾರೆ.

ಪಾಟೀಲ್ ಅವರು ಕ್ಷಮೆಯಾಚಿಸಬೇಕು ಅಥವಾ ಕಾನೂನು ಕ್ರಮ ಎದುರಿಸಬೇಕು ಎಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ ಹೇಳಿದೆ. ರಾಜ್ಯ ಎನ್‌ಸಿಪಿ ಮಹಿಳಾ ವಿಭಾಗದ ಮುಖ್ಯಸ್ಥೆಯೂ ಆಗಿರುವ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಂಕರ್, “ಜನಪ್ರತಿನಿಧಿಯಾಗಿ ಪಾಟಿಲ್ ಅವರ ಹೇಳಿಕೆ ಅತ್ಯಂತ ಶೋಚನೀಯ ಮತ್ತು ಮಹಿಳಾ ಜನರನ್ನು ಅವಮಾನಿಸುವಂತಿದೆ. ಅಂತಹ ಹೋಲಿಕೆ ಮಾಡುವ ಮೂಲಕ, ಅವರು ತಮ್ಮದೇ ಆದ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಎತ್ತಿ ತೋರಿಸಿದ್ದಾರೆ. ಅವರು ಕ್ಷಮೆಯಾಚಿಸದಿದ್ದರೆ, ನಾವು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಬಿಜೆಪಿಯ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಉಮಾ ಖಪ್ರೆ, ಪಾಟಿಲ್ ಅವರು ಹೇಮಾಮಾಲಿನಿ ಹೆಸರನ್ನು ಚರ್ಚೆಗೆ ಎಳೆದುಕೊಳ್ಳುವ ಅಗತ್ಯವಿರಲಿಲ್ಲ ಎಂದಿದ್ದಾರೆ. ಇದೇ ವೇಳೆ ಪಾಟಿಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾಡ್ಸೆ, ಜನರು 30 ವರ್ಷಗಳ ಕಾಲ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರೆ ನಾನು ಅವರಿಗಾಗಿ ಕೆಲಸ ಮಾಡಿದ್ದೇನೆ ಎಂದರ್ಥ ಎಂದು ಹೇಳಿದ್ದಾರೆ.

ಸಚಿವರ ಕ್ಷಮೆಯಾಚನೆಯೊಂದಿಗೆ ಎನ್‌ಸಿಪಿ ಈ ಪ್ರಕರಣಕ್ಕೆ ಅಂತ್ಯ ಹಾಡಿದೆ. ಆದರೆ ಪಾಟಿಲ್ ವಿರುದ್ಧ ಕಾನೂನು ಕ್ರಮಕ್ಕೆ ಇನ್ನೂ ಚಿಂತನೆ ನಡೆಸುತ್ತಿದೆ ಎಂದು ಬಿಜೆಪಿ ಹೇಳಿದೆ.

ಈ ರೀತಿ ಹೋಲಿಕೆ  ಹೇಮಾಮಾಲಿನಿ ಅವರಿಗೆ  ಗೌರವ ನೀಡುವ ಉದ್ದೇಶ ಬಾಲಿವುಡ್ ಹಿರಿಯ ನಟಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಹೇಮಾ ಮಾಲಿನಿ ಅವರ ಕೆನ್ನೆಯನ್ನು ನಯವಾದ ರಸ್ತೆಗಳಿಗೆ ಹೋಲಿಸುವುದು ಅವರಿಗೆ ಗೌರವವನ್ನು ನೀಡುವ ಉದ್ದೇಶವಾಗಿದೆ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವುತ್ ಸೋಮವಾರ ಹೇಳಿದ್ದಾರೆ. ಪಾಟೀಲ್ ನೆಗೆಟಿವ್ ರೀತಿಯಲ್ಲಿ ಕಾಮೆಂಟ್ ಮಾಡಿಲ್ಲ. ಅಂತಹ ಹೋಲಿಕೆಗಳು ಈ ಹಿಂದೆಯೂ ನಡೆದಿವೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರು ಇದೇ ರೀತಿಯ ಉದಾಹರಣೆಯನ್ನು ನೀಡಿದ್ದಾರೆ. ನಾವು ಹೇಮಮಾಲಿನಿಯನ್ನು ಗೌರವಿಸುತ್ತೇವೆ ಎಂದು ರಾವುತ್ ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ 161 ಒಮಿಕ್ರಾನ್‌ ಪ್ರಕರಣ ಪತ್ತೆ: ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ

Published On - 5:39 pm, Mon, 20 December 21