ರೆಬೆಲ್​ ನಾಯಕರ ಭೇಟಿ ಬೆನ್ನಲ್ಲೇ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ

ತೆಲಂಗಾಣ, ಗುಜರಾತ್​, ಮಧ್ಯ ಪ್ರದೇಶ್​ ಹಾಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ನಾಯಕತ್ವ ಬದಲಿಸುವ ನಿರ್ಧಾರ ತೆಗೆದುಕೊಂಡಿದೆ. ಹೈದರಾಬಾದ್ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯ ಸೋಲು ಕಂಡಿತ್ತು. ಇದರ, ಜವಾಬ್ದಾರಿ ಹೊತ್ತು ತೆಲಂಗಾಣ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಉತ್ತಮ್​ ಕುಮಾರ್​ ರೆಡ್ಡಿ ರಾಜೀನಾಮೆ ನೀಡಿದ್ದಾರೆ.

  • TV9 Web Team
  • Published On - 16:28 PM, 20 Dec 2020
ರೆಬೆಲ್​ ನಾಯಕರ ಭೇಟಿ ಬೆನ್ನಲ್ಲೇ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ
ಸೋನಿಯಾ ಗಾಂಧಿ

ದೆಹಲಿ: ಅಧ್ಯಕ್ಷ ಹುದ್ದೆ ಬದಲಾಗಬೇಕೆಂದು 23 ರೆಬೆಲ್​ ನಾಯಕರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ ಶನಿವಾರ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆತ್ತು. ಈ ಸಭೆ ಬೆನ್ನಲ್ಲೇ ಕಾಂಗ್ರೆಸ್​ ವಿವಿಧ ರಾಜ್ಯಗಳ ನಾಯಕತ್ವ ಬದಲಾವಣೆಗೆ ಒತ್ತು ನೀಡಲು ಆರಂಭಿಸಿದೆ. ಉತ್ತಮ ಪ್ರದರ್ಶನ ನೀಡದ ರಾಜ್ಯಗಳಲ್ಲಿ ತಕ್ಷಣವೇ ಕಾಂಗ್ರೆಸ್​ ಅಧ್ಯಕ್ಷ ಹುದ್ದೆ ಬದಲಾವಣೆಗೆ ‘ಕೈ’ ಮುಂದಾಗಿದೆ.

ತೆಲಂಗಾಣ, ಗುಜರಾತ್​, ಮಧ್ಯ ಪ್ರದೇಶ್​ ಹಾಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ನಾಯಕತ್ವ ಬದಲಿಸುವ ನಿರ್ಧಾರ ತೆಗೆದುಕೊಂಡಿದೆ. ಹೈದರಾಬಾದ್ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯ ಸೋಲು ಕಂಡಿತ್ತು. ಇದರ, ಜವಾಬ್ದಾರಿ ಹೊತ್ತು ತೆಲಂಗಾಣ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಉತ್ತಮ್​ ಕುಮಾರ್​ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಗುಜರಾತ್​ ಉಪಚುನಾವಣೆಯ ಕಳಪೆ ಪ್ರದರ್ಶನದ ಕಾರಣ ನೀಡಿ, ಅಲ್ಲಿನ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಅಮಿತ್​ ಚಾವ್ಡಾ ಕೂಡ ಸ್ಥಾನ ತೊರೆದಿದ್ದಾರೆ.

ಮಧ್ಯ ಪ್ರದೇಶ ಕಾಂಗ್ರೆಸ್​ ಪಕ್ಷದ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಸಿಎಲ್‌ಪಿ ನಾಯಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಜಿ -23 ಜೊತೆ ಉನ್ನತ ಮಟ್ಟದ ನಾಯಕರು ಸಭೆ ಸೇರುವಂತೆ ಮಾಡುವಲ್ಲಿ ಕಮಲ್​ನಾಥ್​ ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿದೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷರಾಗಿರುವ ಬಾಲಾಸಾಹೇಬ್ ಥೋರತ್ ಅವರಿಗೆ ರಾಜ್ಯ ಶಾಸಕಾಂಗ ಪಕ್ಷದ ನಾಯಕ ಸ್ಥಾನ ನೀಡಲಾಗಿದೆ.

ಮುಂದಿನ ವರ್ಷ ಕೇರಳ ಹಾಗೂ ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಎರಡು ರಾಜ್ಯಗಳಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.

ನಿನ್ನೆಯ ಸಭೆಯಲ್ಲೇನಾಗಿತ್ತು?
ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ಗಾಂಧಿ ಕುಟುಂಬದ ಕೈಯಲ್ಲಿರುವುದಕ್ಕೆ ಕೈ ಪಕ್ಷದ ಪ್ರಮುಖ ನಾಯಕರು ಆಕ್ರೋಶ ಹೊರ ಹಾಕಿದ್ದರು. ಅಷ್ಟೇ ಅಲ್ಲ, ಕೂಡಲೇ ನಾಯಕತ್ವ ಬದಲಾವಣೆ ಆಗಬೇಕು, ಗಾಂಧಿ ಕುಟುಂಬದ ಹೊರತಾದ ನಾಯಕರು ಪಕ್ಷದ ನೇತೃತ್ವ ವಹಿಸಬೇಕು ಎಂದು ಆಗ್ರಹಿಸಿದ್ದರು. ಅಚ್ಚರಿ ಎಂಬಂತೆ 7 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಯಾರೊಬ್ಬರೂ ರಾಹುಲ್​ ಗಾಂಧಿಯನ್ನು ಟೀಕೆ ಮಾಡಿಲ್ಲವಂತೆ. ಬದಲಿಗೆ ಅವರನ್ನು ಬೆಂಬಲಿಸಿದ್ದರು. ಈ ಮೂಲಕ ರಾಹುಲ್​ ಎಐಸಿಸಿ ಅಧ್ಯಕ್ಷರಾಗಲು ಯಾವುದೇ ತೊಂದರೆ ಇಲ್ಲ ಎಂದು ರೆಬೆಲ್​ ನಾಯಕರು ಪರೋಕ್ಷವಾಗಿ ಸಮ್ಮತಿಸಿದ್ದರು.

 

ಗಾಂಧಿ ಕುಟುಂಬದ ನಾಯಕತ್ವ ವಿರೋಧಿಸಿದವರೇ ಈಗ ರಾಹುಲ್​ ಬೆಂಬಲಿಸಿದರು