Charanjit Singh Channi ಪಂಜಾಬ್‌ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಛನ್ನಿ ಪ್ರಮಾಣ ವಚನ ಸ್ವೀಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Sep 20, 2021 | 4:10 PM

Punjab CM: ಚರಣಜಿತ್ ಸಿಂಗ್ ಛನ್ನಿಪಂಜಾಬಿನಲ್ಲಿ ದಲಿತ ಸಮುದಾಯದಿಂದ ಉನ್ನತ ಹುದ್ದೆಯ ಉಸ್ತುವಾರಿ ವಹಿಸಿಕೊಂಡ ಮೊದಲ ವ್ಯಕ್ತಿಯಾಗಿದ್ದಾರೆ.

Charanjit Singh Channi ಪಂಜಾಬ್‌ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಛನ್ನಿ ಪ್ರಮಾಣ ವಚನ ಸ್ವೀಕಾರ
ಚರಣ್‌ಜಿತ್ ಸಿಂಗ್ ಛನ್ನಿ
Follow us on

ಚಂಡೀಗಢ: ಕಾಂಗ್ರೆಸ್ ನಾಯಕ ಚರಣಜಿತ್ ಸಿಂಗ್ ಛನ್ನಿ (Charanjit Singh Channi) ಚಂಡೀಗಢದ ರಾಜಭವನದಲ್ಲಿ ಸೋಮವಾರ ಪಂಜಾಬ್‌ನ 16 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಪಂಜಾಬ್‌ನಲ್ಲಿ ದಲಿತ ಸಮುದಾಯದಿಂದ ಉನ್ನತ ಹುದ್ದೆಯ ಉಸ್ತುವಾರಿ ವಹಿಸಿಕೊಂಡ ಮೊದಲ ವ್ಯಕ್ತಿಯಾಗಿದ್ದಾರೆ. ರೂಪನಗರದ ಚಮ್ಕೌರ್ ಸಾಹಿಬ್ ನಿಂದ ಮೂರು ಬಾರಿ ಶಾಸಕರಾಗಿದ್ದ ಛನ್ನಿ, ಭಾನುವಾರ ರೂಪನಗರದ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಿದರು. ಛನ್ನಿ ಪಂಜಾಬಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಹರೀಶ್ ರಾವತ್, ನವಜೋತ್ ಸಿಂಗ್ ಸಿಧು, ರಾಹುಲ್ ಗಾಂಧಿ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಸುಖ್ಜಿಂದರ್  ಸಿಂಗ್ ರಂಧಾವಾ, ಬ್ರಹ್ಮ ಮೊಹಿಂದ್ರಾ ಅವರು ಸೋಮವಾರ ಪಂಜಾಬ್‌ನ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದೆ, ಬ್ರಹ್ಮ ಮೊಹಿಂದ್ರ ಇಬ್ಬರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದರು, ಆದರೆ ಅವರ ಹೆಸರನ್ನು ಕೊನೇ ಹೊತ್ತಲ್ಲಿ ಕೈಬಿಡಲಾಗಿತ್ತು.


ಶನಿವಾರ, ಕಾಂಗ್ರೆಸ್ ನಾಯಕತ್ವವು ಚರಣ್‌ಜಿತ್ ಸಿಂಗ್ ಛನ್ನಿ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿತು. ಈ ಹಿಂದೆ ನೇತೃತ್ವದ ಅಮರಿಂದರ್ ಸಿಂಗ್ ಸಂಪುಟದಲ್ಲಿ, ಛನ್ನಿ ತಾಂತ್ರಿಕ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜೊತೆ ತಿಂಗಳುಗಳ ಅಧಿಕಾರ ಹಂಚಿಕೆ ಜಗಳದ ನಂತರ ಸಿಂಗ್ ಶನಿವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಂಜಾಬ್ ದೇಶದಲ್ಲಿ ಉಳಿದಿರುವ ಕೊನೆಯ ಮೂರು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಒಂದಾಗಿದೆ. ರಾಜೀನಾಮೆ ನೀಡಿದ ಅಮರಿಂದರ್ ಸಿಂಗ್ ತಾನು ಅವಮಾನಿತನಾಗಿದ್ದೇನೆ ಎಂದು ಹೇಳಿದ್ದರು.

ಏತನ್ಮಧ್ಯೆ, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರು ಛನ್ನಿ ಅವರಿಗೆ ಇಬ್ಬರು ಉಪ ಮುಖ್ಯಮಂತ್ರಿಗಳಿರುತ್ತಾರೆ ಎಂದು ಹೇಳಿದ್ದಾರೆ. “ಒಬ್ಬ ಉಪ ಮುಖ್ಯಮಂತ್ರಿಯು ಜಾಟ್ ಸಿಖ್ ಸಮುದಾಯದವರು ಮತ್ತು ಇನ್ನೊಬ್ಬರು ಹಿಂದೂ ಸಮುದಾಯದವರು” ಎಂದು ರಾವತ್ ಭಾನುವಾರ ಹೇಳಿದ್ದರು.

ಚರಣ್​ಜಿತ್ ಸಿಂಗ್ ಛನ್ನಿ ಯಾರು?

48 ವರ್ಷ ವಯಸ್ಸಿನ ಚರಣ್​ಜಿತ್ ಸಿಂಗ್ ಛನ್ನಿ, ಚಾಮ್​ಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಗಿದ್ದಾರೆ. ಛನ್ನಿ, ದಲಿತ ಸಮುದಾಯಕ್ಕೆ ಸೇರಿದವರು. ದಲಿತ ಸಮುದಾಯದ ಜನಸಂಖ್ಯೆ ಪಂಜಾಬ್​ನಲ್ಲಿ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಇದೆ.  ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದ ಛನ್ನಿ, ಪಂಜಾಬ್​ ಕಾಂಗ್ರೆಸ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿ ಸಚಿವರಾಗಿದ್ದರು

ಛನ್ನಿ, ಮೂರು ಬಾರಿ ಮುನ್ಸಿಪಾಲ್ ಕೌನ್ಸೆಲರ್ ಆಗಿ ಕಾರ್ಯನಿರ್ವಹಿಸಿದ್ದರು. ಖರಾರ್​ ಎಂಬಲ್ಲಿ ಮುನ್ಸಿಪಾಲಿಟಿ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದರು. ಆ ಬಳಿಕ, 2007 ರಲ್ಲಿ ಮೊದಲ ಬಾರಿಗೆ ಅವರು ಪಂಜಾಬ್ ವಿಧಾನಸಭೆಗೆ ಆಯ್ಕೆ ಆಗಿದ್ದರು.

ಛನ್ನಿ ತಮ್ಮ ಬಾಲ್ಯದ ದಿನಗಳನ್ನು ಬಡತನದಲ್ಲಿ ಕಳೆದಿದ್ದರು. ಆ ಬಳಿಕ, ಪಂಜಾಬ್​ನ ಖರಾರ್ ಎಂಬಲ್ಲಿ ಅವರು ಟೆಂಟ್ ಹೌಸ್ ಉದ್ಯಮ ಆರಂಭಿಸಿದ್ದರು. ಅಲ್ಲಿ ಅವರು ಟೆಂಟ್ ಬಾಯ್ ಆಗಿಯೂ ಕೆಲಸ ಮಾಡಿದ್ದರು
ಚರಣ್​ಜಿತ್ ಸಿಂಗ್ ಛನ್ನಿ ಗಾಂಧಿ ಕುಟುಂಬಕ್ಕೆ ಆಪ್ತರು ಎಂದು ಹೇಳಲಾಗಿದೆ.

ಅಮರಿಂದರ್ ಸಿಂಗ್ ರಾಜೀನಾಮೆ ಬಳಿಕ ನವಜೋತ್ ಸಿಂಗ್ ಸಿಧು ಮತ್ತು ಸುಖ್​ಜಿಂದರ್ ಸಿಂಗ್ ರಂಧಾವಾ ಹೆಸರು ಕೇಳಿಬಂದಿತ್ತು. ಸುನಿಲ್ ಜಾಖರ್ ಮತ್ತು ಪ್ರತಾಪ್ ಸಿಂಗ್ ಬಜ್ವಾ ಹೆಸರು ಕೂಡ ಸುಳಿದಾಡಿತ್ತು. ಬಳಿಕ, ಭಾನುವಾರ ಬೆಳಗ್ಗೆ ಅಂಬಿಕಾ ಸೋನಿ ಹೆಸರು ಕೂಡ ಪ್ರಸ್ತಾಪ ಆಗಿತ್ತು. ಅಂತಿಮವಾಗಿ ಚರಣ್​ಜಿತ್ ಸಿಂಗ್ ಛನ್ನಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಇದನ್ನೂ ಓದಿ: ‘ಸಿಧು ನೇತೃತ್ವದಲ್ಲಿ ಪಂಜಾಬ್ ಚುನಾವಣೆ’ ಹರೀಶ್ ರಾವತ್ ಟ್ವೀಟ್ ಪ್ರಶ್ನಿಸಿದ ಕಾಂಗ್ರೆಸ್ ಹಿರಿಯ ನಾಯಕ ಸುನಿಲ್ ಜಾಖಡ್

ಇದನ್ನೂ ಓದಿ: Punjab CM: ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಛನ್ನಿ ಯಾರು? ರಾಜಕೀಯ ಹಿನ್ನೆಲೆ ಏನು?

(Congress leader Charanjit Singh Channi sworn-in as the 16th chief minister of Punjab)

Published On - 11:43 am, Mon, 20 September 21