Punjab CM: ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಛನ್ನಿ ಯಾರು? ರಾಜಕೀಯ ಹಿನ್ನೆಲೆ ಏನು?
Charanjit Singh Channi: ಹಲವು ರಾಜಕೀಯ ಲೆಕ್ಕಾಚಾರಗಳ ಬಳಿಕ ಇದೀಗ ಕಾಂಗ್ರೆಸ್ ದಲಿತ ನಾಯಕ ಚರಣ್‌ಜಿತ್ ಸಿಂಗ್ ಛನ್ನಿ ಅವರನ್ನು ಪಂಜಾಬ್‌ನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಈ ಸಂಬಂಧ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಟ್ವೀಟ್ ಮಾಡಿದ್ದಾರೆ.
ದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಆಮೇಲಿನ, ಹಲವು ರಾಜಕೀಯ ಲೆಕ್ಕಾಚಾರಗಳ ಬಳಿಕ ಇದೀಗ ಕಾಂಗ್ರೆಸ್ ದಲಿತ ನಾಯಕ ಚರಣ್‌ಜಿತ್ ಸಿಂಗ್ ಛನ್ನಿ ಅವರನ್ನು ಪಂಜಾಬ್‌ನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಈ ಸಂಬಂಧ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಟ್ವೀಟ್ ಮಾಡಿದ್ದಾರೆ. ಚರಣ್‌ಜಿತ್ ಸಿಂಗ್ ಛನ್ನಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಳಿಕ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದಾರೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ರಂಧಾವಾ ಅವರ ಹೆಸರು ಮುಂಚೂಣಿಯಲ್ಲಿತ್ತು. ಸಿಧು ಬಣದಲ್ಲಿ ಗುರುತಿಸಿಕೊಂಡಿದ್ದ ಸುಖ್ಜಿಂದರ್ ರಂಧಾವಾ ಬದಲು ದಲಿತ ನಾಯಕ ಚರಣ್‌ಜಿತ್ ಸಿಂಗ್ಗೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕಲ್ಪಿಸಿದೆ. ಕೆಲವೇ ಕ್ಷಣಗಳಲ್ಲಿ ಚರಣ್‌ಜಿತ್ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.
ಚರಣ್‌ಜಿತ್ ಸಿಂಗ್ ಛನ್ನಿ ಯಾರು?
- 48 ವರ್ಷ ವಯಸ್ಸಿನ ಚರಣ್‌ಜಿತ್ ಸಿಂಗ್ ಛನ್ನಿ, ಚಾಮ್ಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಗಿದ್ದಾರೆ
- ಛನ್ನಿ, ದಲಿತ ಸಮುದಾಯಕ್ಕೆ ಸೇರಿದವರು. ದಲಿತ ಸಮುದಾಯದ ಜನಸಂಖ್ಯೆ ಪಂಜಾಬ್ನಲ್ಲಿ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಇದೆ
- ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದ ಛನ್ನಿ, ಪಂಜಾಬ್ ಕಾಂಗ್ರೆಸ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿ ಸಚಿವರಾಗಿದ್ದರು
- ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಧ್ವನಿ ಎತ್ತಿದ್ದ ಪಂಜಾಬ್ ಕಾಂಗ್ರೆಸ್ ನಾಯಕರಲ್ಲಿ ಚರಣ್‌ಜಿತ್ ಸಿಂಗ್ ಛನ್ನಿ ಕೂಡ ಒಬ್ಬರಾಗಿದ್ದಾರೆ
- ಛನ್ನಿ, ಮೂರು ಬಾರಿ ಮುನ್ಸಿಪಾಲ್ ಕೌನ್ಸೆಲರ್ ಆಗಿ ಕಾರ್ಯನಿರ್ವಹಿಸಿದ್ದರು. ಖರಾರ್ ಎಂಬಲ್ಲಿ ಮುನ್ಸಿಪಾಲಿಟಿ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದರು. ಆ ಬಳಿಕ, 2007 ರಲ್ಲಿ ಮೊದಲ ಬಾರಿಗೆ ಅವರು ಪಂಜಾಬ್ ವಿಧಾನಸಭೆಗೆ ಆಯ್ಕೆ ಆಗಿದ್ದರು
- ಛನ್ನಿ ತಮ್ಮ ಬಾಲ್ಯದ ದಿನಗಳನ್ನು ಬಡತನದಲ್ಲಿ ಕಳೆದಿದ್ದರು. ಆ ಬಳಿಕ, ಪಂಜಾಬ್‌ನ ಖರಾರ್ ಎಂಬಲ್ಲಿ ಅವರು ಟೆಂಟ್ ಹೌಸ್ ಉದ್ಯಮ ಆರಂಭಿಸಿದ್ದರು. ಅಲ್ಲಿ ಅವರು ಟೆಂಟ್ ಬಾಯ್ ಆಗಿಯೂ ಕೆಲಸ ಮಾಡಿದ್ದರು
- ಚರಣ್‌ಜಿತ್ ಸಿಂಗ್ ಛನ್ನಿ ಗಾಂಧಿ ಕುಟುಂಬಕ್ಕೆ ಆಪ್ತರು ಎಂದು ಹೇಳಲಾಗಿದೆ. ಅಮರಿಂದರ್ ಸಿಂಗ್ ರಾಜೀನಾಮೆ ಬಳಿಕ ನವಜೋತ್ ಸಿಂಗ್ ಸಿಧು ಮತ್ತು ಸುಖ್ಜಿಂದರ್ ಸಿಂಗ್ ರಂಧಾವಾ ಹೆಸರು ಕೇಳಿಬಂದಿತ್ತು. ಸುನಿಲ್ ಜಾಖರ್ ಮತ್ತು ಪ್ರತಾಪ್ ಸಿಂಗ್ ಬಜ್ವಾ ಹೆಸರು ಕೂಡ ಸುಳಿದಾಡಿತ್ತು. ಬಳಿಕ, ಭಾನುವಾರ ಬೆಳಗ್ಗೆ ಅಂಬಿಕಾ ಸೋನಿ ಹೆಸರು ಕೂಡ ಪ್ರಸ್ತಾಪ ಆಗಿತ್ತು. ಅಂತಿಮವಾಗಿ ಚರಣ್‌ಜಿತ್ ಸಿಂಗ್ ಛನ್ನಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ
ಇದನ್ನೂ ಓದಿ: Punjab CM: ಚರಣ್‌ಜಿತ್ ಸಿಂಗ್ ಛನ್ನಿ ಪಂಜಾಬ್‌ನ ನೂತನ ಮುಖ್ಯಮಂತ್ರಿ
ಇದನ್ನೂ ಓದಿ: Punjab Politics ಸಿಖ್ ನಾಯಕರೇ ಪಂಜಾಬ್ ಸಿಎಂ ಆಗಬೇಕು; ಮುಖ್ಯಮಂತ್ರಿ ಪ್ರಸ್ತಾಪ ತಿರಸ್ಕರಿಸಿದ ಅಂಬಿಕಾ ಸೋನಿ
Published On - 7:28 pm, Sun, 19 September 21