‘ಈಗ ಎಲ್ಲ ಮಕ್ಕಳೂ ಕುಡಿಯುತ್ತಾರೆ..ಅದೇನೂ ದೊಡ್ಡ ವಿಷಯವಲ್ಲ, ನನ್ನ ಸೋದರಳಿಯನ ಬಿಟ್ಟುಬಿಡಿ’-ಪೊಲೀಸರಿಗೆ ತಾಕೀತು ಮಾಡಿದ ಕಾಂಗ್ರೆಸ್​ ಶಾಸಕಿ

| Updated By: Lakshmi Hegde

Updated on: Oct 19, 2021 | 4:15 PM

ಶಾಸಕಿಯ ಮಾತನ್ನು ಪೊಲೀಸರು ಕೇಳಲಿಲ್ಲ. ಆರೋಪಿಯನ್ನು ಹಾಗೇ ಬಿಟ್ಟು ಕಳಿಸಲು ಸುತಾರಾಂ ಒಪ್ಪಲಿಲ್ಲ. ಅದರ ಬದಲಿಗೆ ಶಾಸಕಿ ಮತ್ತು ಆಕೆಯ ಪತಿ ಒಂದೇ ಸಮ ಕೂಗುತ್ತಿದ್ದುದನ್ನು ಪೊಲೀಸ್​ ಅಧಿಕಾರಿಯೊಬ್ಬ ವಿಡಿಯೋ ಮಾಡಿದ್ದಾರೆ.

‘ಈಗ ಎಲ್ಲ ಮಕ್ಕಳೂ ಕುಡಿಯುತ್ತಾರೆ..ಅದೇನೂ ದೊಡ್ಡ ವಿಷಯವಲ್ಲ, ನನ್ನ ಸೋದರಳಿಯನ ಬಿಟ್ಟುಬಿಡಿ’-ಪೊಲೀಸರಿಗೆ ತಾಕೀತು ಮಾಡಿದ ಕಾಂಗ್ರೆಸ್​ ಶಾಸಕಿ
ಪೊಲೀಸ್​ ಠಾಣೆಯಲ್ಲಿ ಧರಣಿ ಕುಳಿತ ಕಾಂಗ್ರೆಸ್​ ಶಾಸಕಿ ಮತ್ತವರ ಪತಿ
Follow us on

ಕುಡಿದು ಸಿಕ್ಕಿಬಿದ್ದ ತನ್ನ ಸೋದರಳಿಯನನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್​ ಶಾಸಕಿಯೊಬ್ಬರು ಪೊಲೀಸ್​ ಠಾಣೆಯಲ್ಲಿ ಧರಣಿ ಕುಳಿತ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಧರಣಿಯಲ್ಲಿ ಈ ಶಾಸಕಿಯ ಪತಿಯೂ ಸಾಥ್​ ಕೊಟ್ಟಿದ್ದಾರೆ. ಕಾಂಗ್ರೆಸ್​ ಶಾಸಕಿ ಮೀನಾ ಕನ್ವರ್​ರ ಸೋದರಳಿಯ ಮದ್ಯ ಸೇವಿಸಿ ಗಾಡಿ ಓಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಆತನನ್ನು ಜೋಧ್​ಪುರದ ಶ್ರೇಗಡ್​ ಪೊಲೀಸ್​ ಠಾಣೆಗೆ ಕರೆದುಕೊಂಡು ಬಂದ ವಿಷಯ ಕೇಳಿ ಶಾಸಕಿ ತಮ್ಮ ಪತಿ ಉಮೇದ್​ ಸಿಂಗ್​​ರೊಂದಿಗೆ ಅಲ್ಲಿಗೆ ಬಂದು ಪೊಲೀಸರ ಜತೆ ವಾಗ್ವಾದವನ್ನೂ ನಡೆಸಿದ್ದಾರೆ.  

ಪೊಲೀಸ್​ ಠಾಣೆಯಲ್ಲಿ ನೆಲದ ಮೇಲೆ ಪತಿಯೊಂದಿಗೆ ಕುಳಿತ ಶಾಸಕಿ ತನ್ನ ಸೋದರಳಿಯನನ್ನು ಬಿಡುವಂತೆ ಪೊಲೀಸರಿಗೆ ಆಗ್ರಹಿಸುತ್ತಿರುವ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ. ಪೊಲೀಸರೊಟ್ಟಿಗೆ ಜಗಳ ಮಾಡುವ ವೇಳೆ ಆಕೆ, ಈಗಿನ ಕಾಲದಲ್ಲಿ ಎಲ್ಲ ಮಕ್ಕಳೂ ಕುಡಿಯುತ್ತಾರೆ. ಆಗೊಮ್ಮೆ, ಈಗೊಮ್ಮೆ ಮದ್ಯ ಸೇವಿಸುವುದು ಸಾಮಾನ್ಯ. ಅದು ದೊಡ್ಡ ವಿಷಯವಲ್ಲ. ಈಗ ನನ್ನ ಸೋದರಳಿಯನನ್ನು ಬಿಡಿ ಎಂದು ಪೊಲೀಸರಿಗೆ ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ನಾನು ಫೋನ್​​ನಲ್ಲಿಯೇ ನಿಮಗೆ ಮನವಿ ಮಾಡಿದ್ದೇನೆ. ಅದರ ರೆಕಾರ್ಡ್​ ಕೂಡ ಮಾಡಿಟ್ಟುಕೊಂಡಿದ್ದೇನೆ ಎಂದೂ ತಿಳಿಸಿದ್ದಾರೆ.  ಆದರೆ ವಿಡಿಯೋ ನೋಡಿದ ನೆಟ್ಟಿಗರು, ಶಾಸಕಿ ಹೇಳಿದ ಎಲ್ಲ ಮಕ್ಕಳೂ ಕುಡಿಯುತ್ತಾರೆ ಎಂಬ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಾಸಕಿಯ ಮಾತನ್ನು ಪೊಲೀಸರು ಕೇಳಲಿಲ್ಲ. ಆರೋಪಿಯನ್ನು ಹಾಗೇ ಬಿಟ್ಟು ಕಳಿಸಲು ಸುತಾರಾಂ ಒಪ್ಪಲಿಲ್ಲ. ಅದರ ಬದಲಿಗೆ ಶಾಸಕಿ ಮತ್ತು ಆಕೆಯ ಪತಿ ಒಂದೇ ಸಮ ಕೂಗುತ್ತಿದ್ದುದನ್ನು ಪೊಲೀಸ್​ ಅಧಿಕಾರಿಯೊಬ್ಬ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುವುದನ್ನು ನೋಡಿದ ಶಾಸಕಿ ಅದಕ್ಕೂ ರೇಗಿದ್ದಾಳೆ. ನಿನ್ನೆಯಷ್ಟೇ ಈ ಠಾಣೆಯ ಕೆಲವು ಅಧಿಕಾರಿಗಳು ಅಮಾನತುಗೊಂಡಿದ್ದಾರೆ..ಮರೆತುಹೋಗಿದೆಯಾ ಎಂದು ಉಮೇದ್​ ಸಿಂಗ್ ಖಾರವಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪೊಲೀಸರೂ ಕೂಡ, ಸ್ವಲ್ಪ ಸರಿಯಾಗಿ, ವಿನಯತೆಯಿಂದ ಮಾತನಾಡಿ ಎಂದು ದಂಪತಿಗೆ ಸೂಚಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಹೀಗೆ ತುಂಬ ಹೊತ್ತು ಕಳೆದ ಬಳಿಕ ಡಿಸಿಪಿ ಮಧ್ಯಪ್ರವೇಶ ಮಾಡಿದ್ದಾರೆ. ಶಾಸಕಿಯ ಸೋದರಳಿಯ ಮತ್ತು ಆತನ ವಾಹನ ಎರಡನ್ನೂ ಬಿಟ್ಟು ಕಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಅವರ ಪಕ್ಷದ ಸಂಸ್ಕೃತಿ ತೋರಿಸುತ್ತೆ: ಕಟೀಲ್ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರು

China Economy: ಕೊರೊನಾ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ ಚೀನಾದಲ್ಲಿ ರಿಯಲ್ ಎಸ್ಟೇಟ್, ನಿರ್ಮಾಣ ಕ್ಷೇತ್ರ ಕುಸಿತ