ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಅವರ ಪಕ್ಷದ ಸಂಸ್ಕೃತಿ ತೋರಿಸುತ್ತೆ: ಕಟೀಲ್ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರು

ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಅವರ ಪಕ್ಷದ ಸಂಸ್ಕೃತಿ ತೋರಿಸುತ್ತೆ: ಕಟೀಲ್ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರು
ಸಿದ್ದರಾಮಯ್ಯ

ಕಟೀಲ್ ಅವರು ಈ ಕೂಡಲೇ ಭೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ರಸ್ತೆಗಿಳಿದು ಪ್ರತಿಭಟಿಸುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Oct 19, 2021 | 4:09 PM


ವಿಜಯಪುರ: ನಳಿನ್‌ ಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಬಿಜೆಪಿಯವರಿಗೆ ಸೊಕ್ಕು ಬಂದಿದೆ. ಮೊನ್ನೆ ಗುಜರಾತ್​​ನಲ್ಲಿ ಸಿಕ್ಕ ಡ್ರಗ್ಸ್ ಅವರು ಸೇವಿಸಿರಬೇಕು. ಅವರನ್ನ ಆದಷ್ಟು ಬೇಗ ನಶಾಮುಕ್ತಿ ಕೇಂದ್ರಕ್ಕೆ ಸೇರಿಸಬೇಕು. ಅಧಿಕಾರದ ನಶೆಯಲ್ಲಿ ಬಿಜೆಪಿ ನಾಯಕರು ತೇಲುತ್ತಿದ್ದಾರೆ. ಹೀಗಾಗಿ ಇಂತಹ ಹೀನ ಹೇಳಿಕೆ ನೀಡುತ್ತಿದ್ದಾರೆ. ನಳಿನ್ ಕುಮಾರ್ ಕಟೀಲುರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಕಾಂಗ್ರೆಸ್​ ಪಕ್ಷದ ಕರ್ನಾಟಕ ಉಸ್ತುವಾರಿ ಸುರ್ಜೇವಾಲ ಲೇವಡಿ ಮಾಡಿದರು.

ಸಿಂದಗಿ ತಾಲ್ಲೂಕು ಬಳಗಾನೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚಿಸಿದ ಅವರು, ಕಟೀಲ್ ಅಂಥ ಹೇಳಿಕೆ ನೀಡಬಾರದಿತ್ತು ಎಂದರು.

ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ವಾಗ್ದಾಳಿ ನಡೆಸಿದರು. ಪೆಟ್ರೊಲ್-ಡಿಸೇಲ್ ದರ‌ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಏನೂ ಅನುಕೂಲ ಮಾಡಿಕೊಟ್ಟಿಲ್ಲ. ಬಡವರ ನೋವು ಮೋದಿಗೆ ಅರ್ಥವಾಗಲ್ಲಾ. ಇಂಥ ಸರ್ಕಾರವನ್ನು ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.

ರೈತರನ್ನು ಈ ಸರ್ಕಾರ ಕಾಲಕಸ ಮಾಡಿಕೊಂಡಿದೆ. ಹತ್ತು ತಿಂಗಳಿನಿಂದ ರೈತರು ಹೋರಾಟ ಮಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ಮಾತನಾಡಿಲ್ಲಾ. ಕೇಂದ್ರ ಸಚಿವರ ಮಗ ರೈತರ‌ ಮೇಲೆ ವಾಹನ ಹರಿಸಿ ಸಾಯಿಸಿದ. ಇದು ಕೊಲೆಗಡುಕರ ಸರ್ಕಾರ. ಇಂಥ ಸರ್ಕಾರ ಕಿತ್ತೊಗೆಯಬೇಕು. ಇವರು ದೇಶ ಹಾಗೂ ರಾಜ್ಯ ಹಾಳು ಮಾಡಿದ್ದಾರೆ. ಭಾರತ ಸರ್ಕಾರದ ಸಾಲ 135 ಲಕ್ಷ ಕೋಟಿ ರೂಪಾಯಿಗೆ ಮುಟ್ಟಿದೆ. ನಮ್ಮ ದೇಶಕ್ಕೆ ಮಾತೃಹೃದಯದ ಪ್ರಧಾನಿ ಬೇಕು ಎಂದು ಹೇಳಿದರು.

ಅಲ್ಪಸಂಖ್ಯಾತರು ಜೆಡಿಎಸ್​ಗೆ‌ ಒಂದು ಮತವನ್ನೂ ಹಾಕಬಾರದು ಎಂದು ಮನವಿ ಮಾಡಿದ ಅವರು, ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವ ಪಕ್ಷ ಕಾಂಗ್ರೆಸ್. 2005ರಲ್ಲಿ ಬಿಜೆಪಿಯವರ ಜೊತೆಗೆ ಜೆಡಿಎಸ್ ಸರ್ಕಾರ ಮಾಡಿರಲಿಲ್ವಾ? ಹೆಸರಿಗೆ ಮಾತ್ರ ಜನತಾದಳ ಸೆಕ್ಯೂಲರ್. ಅದರೆ ಕೋಮುವಾದಿಗಳ ಜೊತೆ ಭಾಯಿ ಭಾಯಿ. ಈ ಒಳ ಒಪ್ಪಂದಕ್ಕೆ ನೀವೆಲ್ಲಾ ಮನ್ನಣೆ ಕೊಡಬಾರದು. ನಾವು ಹೆಜ್ಜೆ ಹೆಜ್ಜೆಗೂ ಬಿಜೆಪಿ ವಿರೋಧಿಸಿದ್ದೇವೆ. ನಮ್ಮ ಸರ್ಕಾರ ಇದ್ದಾಗ ಏಳು‌ ಕೆಜಿ ಅಕ್ಕಿ ಕೊಡುತ್ತಿದ್ದೆವು. ಈಗ ಇದು ಐದು ಕೆಜಿಗೆ ಇಳಿದಿದೆ. ನನ್ನ ಅಧಿಕಾರದ ಅವಧಿಯಲ್ಲಿ 15 ಲಕ್ಷ ಬಡವರಿಗೆ ಮನೆಗಳನ್ನು ಕೊಟ್ಟಿದ್ದೆ. ಮೂರು ವರ್ಷಗಳಲ್ಲಿ ಒಂದೇ ಒಂದು ಮನೆ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಹುಲ್ ಗಾಂಧಿ ಬಗ್ಗೆ ನಳಿನ್‌ ಕುಮಾರ್ ಕಟೀಲ್ ಹೇಳಿಕೆ ಬಿಜೆಪಿಯ ಸಂಸ್ಕೃತಿ ತೋರಿಸುತ್ತದೆ. ಕಟೀಲ್ ಅವರು ಈ ಕೂಡಲೇ ಭೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ರಸ್ತೆಗಿಳಿದು ಪ್ರತಿಭಟಿಸುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಅಂಚೆ ಕಾರ್ಡ್ ಮಹಾ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ನಳಿನ್‍ಕುಮಾರ್ ಕಟೀಲ್
ಇದನ್ನೂ ಓದಿ: ಅಲ್ಪಸಂಖ್ಯಾತರನ್ನು ಓಲೈಸುವುದು ಖಯಾಲಿಯಾಗಿಬಿಟ್ಟಿದೆ: ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಸರಣಿ ಟ್ವೀಟ್

Follow us on

Related Stories

Most Read Stories

Click on your DTH Provider to Add TV9 Kannada