AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ಷೇತ್ರ ಪುನರ್ ​ವಿಂಗಡಣೆ ಕುರಿತು ಸರ್ವಪಕ್ಷ ಸಭೆ ನಡೆಸಿ’; ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಸಂಸತ್ತಿನಲ್ಲಿ ಯಾವುದೇ ಸಮಾಲೋಚನೆ ಅಥವಾ ಚರ್ಚೆ ನಡೆಸದೆ ಮತ್ತೊಂದು ಸಾವಿಧಾನಿಕ ತಿದ್ದುಪಡಿ ಮಸೂದೆಯನ್ನು ಬಲವಂತವಾಗಿ ಅಂಗೀಕರಿಸಲು ಯತ್ನಿಸಬೇಡಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ಶಾಸನಗಳು ಮತ್ತು ಸಾವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಮಂಡಿಸುವ ಮುನ್ನ ವಿರೋಧ ಪಕ್ಷಗಳೊಂದಿಗೆ ಮತ್ತು ಸಂಸದೀಯ ಸಮಿತಿಗಳೊಂದಿಗೆ ಸಮಗ್ರ ಚರ್ಚೆ ನಡೆಸಬೇಕು. ಆದರೆ ಸರ್ಕಾರವು ಯಾವುದೇ ಚರ್ಚೆಗೆ ಅವಕಾಶ ನೀಡದೆ ಏಕಪಕ್ಷೀಯವಾಗಿ ಮಸೂದೆಗಳನ್ನು ಜಾರಿಗೆ ತರಲು ಮುಂದಾಗುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕ್ಷೇತ್ರ ಪುನರ್ ​ವಿಂಗಡಣೆ ಕುರಿತು ಸರ್ವಪಕ್ಷ ಸಭೆ ನಡೆಸಿ'; ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ
ಪ್ರಧಾನಿ ಮೋದಿ- ಮಲ್ಲಿಕಾರ್ಜುನ ಖರ್ಗೆ Image Credit source: PTI
ಸುಷ್ಮಾ ಚಕ್ರೆ
|

Updated on:Oct 16, 2026 | 8:03 PM

Share

ಮುಖ್ಯಾಂಶಗಳು

  • ಮುಂದೂಡಲ್ಪಟ್ಟ ಉಭಯ ಸದನಗಳ ಅಧಿವೇಶನ ಆರಂಭಿಸಲು ಖರ್ಗೆ ಮನವಿ
  • ಕ್ಷೇತ್ರ ಪುನರ್​ವಿಂಗಡಣೆ ಬಗ್ಗೆ ಸರ್ವಪಕ್ಷ ಸಭೆ ನಡೆಸಿ ಎಂದು ಮೋದಿಗೆ ಕಾಂಗ್ರೆಸ್ ಮನವಿ
  • ಪ್ರಧಾನಿ ಮೋದಿಗೆ 4ನೇ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಅಕ್ಟೋಬರ್ 16: ಕ್ಷೇತ್ರ ಪುನರ್​ ವಿಂಗಡಣೆಗೆ ಸಂಬಂಧಿಸಿದಂತೆ ಹೊಸ ಪ್ರಸ್ತಾಪಗಳನ್ನು ಮಂಡಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ‘ಸರ್ವಪಕ್ಷ ಸಭೆ’ ಕರೆಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಸೂಕ್ತ ಸಮಾಲೋಚನೆಗಳಿಲ್ಲದೆ ಪ್ರಮುಖ ಸಾವಿಧಾನಿಕ ತಿದ್ದುಪಡಿಗಳನ್ನು ಬಲವಂತವಾಗಿ ಜಾರಿಗೆ ತರಲು ಯತ್ನಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ. ಪ್ರಧಾನಿಯವರಿಗೆ ಬರೆದಿರುವ ಪತ್ರದಲ್ಲಿ, ಆಗಸ್ಟ್ 13ರಂದು ಮುಂಗಾರು ಅಧಿವೇಶನವು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟು 64 ದಿನಗಳು ಕಳೆದಿದ್ದರೂ ಸಂಸತ್ತಿನ ಎರಡೂ ಸದನಗಳನ್ನು ಮರು ಆರಂಭಿಸದಿರುವುದು ಖಂಡನೀಯ ಎಂದು ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.

“ಆಗಸ್ಟ್ 13ರಂದು ಸಂಸತ್ತಿನ ಮುಂಗಾರು ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟು ಈಗಾಗಲೇ 64 ದಿನಗಳು ಕಳೆದಿವೆ. ಆದರೆ ಸಂಸತ್ತಿನ ಎರಡೂ ಸದನಗಳ ಕಲಾಪವನ್ನು ಇನ್ನೂ ಮರು ಆರಂಭಿಸಿಲ್ಲ. ಈ ರೀತಿಯ ಸನ್ನಿವೇಶ ಹಿಂದೆಂದೂ ನಡೆದಿಲ್ಲ. ಕ್ಷೇತ್ರ ಪುನರ್ವಿಂಗಡಣೆ ಕುರಿತು ಯಾವುದೇ ಸಾವಿಧಾನಿಕ ತಿದ್ದುಪಡಿ ಮಸೂದೆಯನ್ನು ತರುವ ಮೊದಲು ಸರ್ವಪಕ್ಷ ಸಭೆ ಕರೆಯುವಂತೆ ಏಪ್ರಿಲ್ 11, 2026ರಂದು ನಾನು ನಿಮಗೆ ಮೊದಲ ಬಾರಿ ಪತ್ರ ಬರೆದಿದ್ದೆ. ಆದರೆ ನೀವು ಅದನ್ನು ಮಾಡಲಿಲ್ಲ. ತದನಂತರ ಏಪ್ರಿಲ್ 14, 2026ರ ತಡರಾತ್ರಿ ಮಸೂದೆಗಳನ್ನು ಬಹಿರಂಗಪಡಿಸಿ, ಏಪ್ರಿಲ್ 16ರಂದು ವಿಶೇಷ ಅಧಿವೇಶನ ಕರೆದಿದ್ದೀರಿ. ಏಪ್ರಿಲ್ 17, 2026ರಂದು ಲೋಕಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ಆ ಸಾವಿಧಾನಿಕ ತಿದ್ದುಪಡಿ ಮಸೂದೆಯು ಅಗತ್ಯವಿದ್ದ ಮೂರನೇ ಎರಡರಷ್ಟು (2/3) ಬಹುಮತ ಸಿಗದೆ ಬಿದ್ದುಹೋಯಿತು” ಎಂದು ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಅಧಿವೇಶನದ ಮೊದಲ ದಿನವೇ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ: ಸಾಧಕ-ಬಾಧಕಗಳ ಬಗ್ಗೆ ಸುದೀರ್ಘ ಸಮಾಲೋಚನೆ

“ಅದರ ನಂತರ ಜುಲೈ 16, 2026 ಮತ್ತು ಆಗಸ್ಟ್ 27, 2026ರಂದು ಸರ್ವಪಕ್ಷ ಸಭೆಗೆ ಕೋರಿ ನಾನು ಮತ್ತೊಮ್ಮೆ ನಿಮಗೆ ಪತ್ರ ಬರೆದಿದ್ದೆ. ಈಗ ನಾನು ನಾಲ್ಕನೇ ಬಾರಿಗೆ ಈ ಮನವಿ ಮಾಡುತ್ತಿದ್ದೇನೆ. ನಿಮ್ಮ ಹೊಸ ಪ್ರಸ್ತಾಪಗಳನ್ನು ಸಂಸತ್ತಿನಲ್ಲಿ ಮಂಡಿಸುವ ಮುನ್ನ ಅವುಗಳ ಕುರಿತು ಸುದೀರ್ಘ ಚರ್ಚೆ ನಡೆಸಲು ದಯವಿಟ್ಟು ಸರ್ವಪಕ್ಷ ಸಭೆಯನ್ನು ಕರೆಯಿರಿ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ನಡುವೆ ಚರ್ಚಿಸಲು ತಕ್ಕಷ್ಟು ಸಮಯ ಸಿಗಬೇಕು. ಈ ಹಿಂದೆ ಯತ್ನಿಸಿ ಸೋಲುಂಡಂತೆ, ಪ್ರಭಾವಶಾಲಿ ಸಾವಿಧಾನಿಕ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಬಲವಂತವಾಗಿ ಜಾರಿಗೆ ತರಲು ಮತ್ತೊಮ್ಮೆ ಯತ್ನಿಸಬೇಡಿ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್‌ನ ಪ್ರಮುಖ ಆಗ್ರಹಗಳು:

ಕ್ಷೇತ್ರ ಪುನರ್ವಿಂಗಡಣೆಯಂತಹ ಪ್ರಮುಖ ಸಾವಿಧಾನಿಕ ನಿರ್ಧಾರಗಳನ್ನು ವ್ಯಾಪಕ ರಾಜಕೀಯ ಒಪ್ಪಂದವಿಲ್ಲದೆ ಜಾರಿಗೆ ತರಬಾರದು ಎಂದು ಖರ್ಗೆ ಎಚ್ಚರಿಸಿದ್ದಾರೆ. ಯಾವುದೇ ಹೊಸ ಮಸೂದೆಯನ್ನು ಸಂಸತ್ತಿಗೆ ತರುವ ಮೊದಲು ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಅದರ ಪರಿಣಾಮಗಳ ಕುರಿತು ಅಧ್ಯಯನ ಮಾಡಲು ಮತ್ತು ಅಭಿಪ್ರಾಯ ಹಂಚಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡುವುದು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಖರ್ಗೆ ಅವರ ಪತ್ರವನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮುಂಗಾರು ಅಧಿವೇಶನದ ಸತ್ರಾವಸಾನಕ್ಕೆ ಆಗುತ್ತಿರುವ ವಿಳಂಬ ಮತ್ತು ಸರ್ಕಾರದ ಮುಂದಿನ ನಡೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:02 pm, Fri, 16 October 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More