ಕೊವಿಡ್ ದುಸ್ಥಿತಿ ಸಂದರ್ಭ ಕೇಳಿಬರುತ್ತಿರುವ ‘ಕಾಂಗ್ರೆಸ್ ಟೂಲ್​ಕಿಟ್’ ಯಾವುದು? ಬಿಜೆಪಿ ಆರೋಪದ ಹತ್ತು ಅಂಶಗಳು ಇಲ್ಲಿದೆ

ಕಾಂಗ್ರೆಸ್ ಟೂಲ್​ಕಿಟ್ ಎಂದು ಹಲವು ಬಿಜೆಪಿ ನಾಯಕರು ದಾಖಲೆಯೊಂದನ್ನು ಹಂಚಿಕೊಂಡಿದ್ದರು. ಈ ಪ್ರಕರಣದ ಹತ್ತು ಮುಖ್ಯಾಂಶಗಳನ್ನು ಈ ಕೆಳಗೆ ನೀಡಲಾಗಿದೆ.

ಕೊವಿಡ್ ದುಸ್ಥಿತಿ ಸಂದರ್ಭ ಕೇಳಿಬರುತ್ತಿರುವ ‘ಕಾಂಗ್ರೆಸ್ ಟೂಲ್​ಕಿಟ್’ ಯಾವುದು? ಬಿಜೆಪಿ ಆರೋಪದ ಹತ್ತು ಅಂಶಗಳು ಇಲ್ಲಿದೆ
ಬಿಜೆಪಿ ಹಾಗೂ ಕಾಂಗ್ರೆಸ್ ಧ್ವಜ
Follow us
TV9 Web
| Updated By: ganapathi bhat

Updated on:Aug 23, 2021 | 12:30 PM

ದೆಹಲಿ: ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಕಾಂಗ್ರೆಸ್ ಟೂಲ್ ಕಿಟ್ ಹಂಚಿಕೆ ಮಾಡಿದೆ ಎಂದು ಆರೋಪ ಕೇಳಿಬಂದಿದೆ. ಭಾರತದ ರೂಪಾಂತರಿ ಕೊರೊನಾ ’ಇಂಡಿಯಾ ಸ್ಟ್ರೈನ್’ ಹಾಗೂ ‘ಮೋದಿ ಸ್ಟ್ರೈನ್’ ಎಂಬ ಹೆಸರಿನಲ್ಲಿ ಕರೆದು ಸರ್ಕಾರಕ್ಕೆ ಕಳಂಕ ತರಲು ಉದ್ದೇಶಿಸಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಆರೋಪ ವ್ಯಕ್ತವಾಗಿದೆ. ಸದರಿ ಟೂಲ್​ಕಿಟ್​ನ್ನು ಕಾಂಗ್ರೆಸ್ ಟೂಲ್​ಕಿಟ್ ಎಂದು ಹಲವು ಬಿಜೆಪಿ ನಾಯಕರು ಹಂಚಿಕೊಂಡಿದ್ದರು. ಈ ಪ್ರಕರಣದ ಹತ್ತು ಮುಖ್ಯಾಂಶಗಳನ್ನು ಈ ಕೆಳಗೆ ನೀಡಲಾಗಿದೆ.

  • ಟೂಲ್​ಕಿಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಟೂಲ್​ಕಿಟ್​ನ್ನು ಫೇಕ್ ಎಂದು ಹೇಳಿದೆ. ಅಲ್ಲದೆ, ಪೊಲೀಸ್ ದೂರು ಕೂಡ ದಾಖಲಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಟೂಲ್​ಕಿಟ್ ಎಂದು ಹಂಚಿಕೊಂಡಿರುವವರ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.
  • ಸಮಾಜವನ್ನು ಒಡೆಯುವಲ್ಲಿ ಮತ್ತು ಇತರರ ಬಗ್ಗೆ ವಿಷ ಬಿತ್ತಲು ಕಾಂಗ್ರೆಸ್ ಮುಂಚೂಣಿಯಲ್ಲಿದೆ. ದೇಶ ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭ ಕಾಂಗ್ರೆಸ್ ಹೀಗೆ ಮಾಡಿದೆ. ಕಾಂಗ್ರೆಸ್ ಪಕ್ಷ ಟೂಲ್​ಕಿಟ್ ಮಾದರಿಯಿಂದ ಮುಂದೆ ಹೋಗಿ ಇತರ ಸಂಘಟನಾತ್ಮಕ ಕೆಲಸವನ್ನು ಮಾಡಬೇಕು ಎಂದು ಜೆ.ಪಿ. ನಡ್ಡಾ ಟ್ವೀಟ್ ಮಾಡಿದ್ದರು. ಅವರು #CongressToolkitExposed ಎಂಬ ಹ್ಯಾಷ್​ಟ್ಯಾಗ್ ಬಳಸಿದ್ದರು.
  • ಕಾಂಗ್ರೆಸ್ ರೂಪಿಸಿದ್ದು ಎಂದು ಹೇಳಲಾಗಿರುವ ಟೂಲ್​ಕಿಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ಕೊವಿಡ್ ಮ್ಯಾನೇಜ್​ಮೆಂಟ್ ವಿರುದ್ಧ ಆಕ್ಷೇಪಾರ್ಹ ಅಂಶಗಳಿವೆ.
  • ಬಿಜೆಪಿ ಹಂಚಿಕೊಂಡಿರುವ ಸ್ಕ್ರೀನ್​ಶಾಟ್ ದಾಖಲೆಗಳ ಪ್ರಕಾರ, ಟೂಲ್​ಕಿಟ್​ನಲ್ಲಿ ಭಾರತದ ಕೊರೊನಾ ವೈರಾಣು ಹರಡುವಿಕೆ ವಿವರಿಸಲು ‘ಇಂಡಿಯನ್ ಸ್ಟ್ರೈನ್’ ಎಂಬ ಪದ ಬಳಸುವಂತೆ ತಿಳಿಸಲಾಗಿದೆ. ಅಥವಾ ಸಾಮಾಜಿಕ ಜಾಲತಾಣಿಗರು ‘ಮೋದಿ ಸ್ಟ್ರೈನ್’ ಎಂದು ಕೂಡ ಬಳಸಬಹುದು ಎನ್ನಲಾಗಿದೆ.
  • ಸೆಂಟ್ರಲ್ ವಿಸ್ತಾ ಬಗ್ಗೆ ಕೂಡ ಸದರಿ ದಾಖಲೆಗಳಲ್ಲಿ ತಿಳಿಸಲಾಗಿದೆ. ಅದರಲ್ಲಿ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಮೋದಿಯ ವೈಯಕ್ತಿಕ ನಿವಾಸ ಎಂದು ಕರೆಯುವಂತೆ ಹೇಳಲಾಗಿದೆ.
  • ಪಿಎಮ್ ಕೇರ್ಸ್ (PM-CARES) ನಿಧಿ ಬಗ್ಗೆ ಕೂಡ ಟೂಲ್​ಕಿಟ್​ನಲ್ಲಿ ಪ್ರಶ್ನೆ ಎತ್ತುವಂತೆ ಸೂಚಿಸಲಾಗಿದೆ. ಮಾಜಿ ಸರ್ಕಾರಿ ಅಧಿಕಾರಿಗಳನ್ನು ಪಿಎಮ್​ ಕೇರ್ಸ್ ವಿರುದ್ಧ ಪ್ರಶ್ನೆ ಎತ್ತುವಂತೆ ಕೇಳಲಾಗಿದೆ. ಜೊತೆಗೆ, ಆರ್​​ಟಿಐ ಕಾರ್ಯಕರ್ತರು ಪಿಎಮ್​ ಕೇರ್ಸ್ ಬಗ್ಗೆ ಹಲವು ಆರ್​ಟಿಐ ಅರ್ಜಿ ದಾಖಲಿಸುವಂತೆ ಕೇಳಲಾಗಿದೆ.
  • ಟೂಲ್​ಕಿಟ್​ನಲ್ಲಿ ಇರುವ ಮತ್ತೊಂದು ವಿವಾದಾತ್ಮಕ ಅಂಶ ಕುಂಭಮೇಳದ ಬಗೆಗಿನದಾಗಿದೆ. ಕುಂಭಮೇಳವನ್ನು ಧರ್ಮದ ಹೆಸರಿನಲ್ಲಿ ನಡೆಯುವ ರಾಜಕೀಯ ಶಕ್ತಿಪ್ರದರ್ಶನದ ಕಾರ್ಯಕ್ರಮ ಎಂದು ಕರೆಯಲಾಗಿದೆ. ಅಷ್ಟೇ ಅಲ್ಲದೆ, ಈದ್ ಕೂಟವನ್ನು ಸಾಮಾಜಿಕ, ಕೌಟುಂಬಿಕ ಸಂಭ್ರಮದ ಸನ್ನಿವೇಶ ಎಂದು ಹೇಳಲಾಗಿದೆ.
  • ಪೊಲೀಸರಿಗೆ ನೀಡಿರುವ ದೂರಿನ ಪತ್ರದಂತೆ, ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಆರೋಪ ಮಾಡಿದೆ. ಎಐಸಿಸಿ ಲೆಟರ್ ಹೆಡ್​ನ್ನು ಟೂಲ್​ಕಿಟ್ ಹೆಸರಿನಲ್ಲಿ ಬಳಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ದೂರು ನೀಡಿದೆ. ದೂರು ಪ್ರತಿಯಲ್ಲಿ ಜೆ.ಪಿ. ನಡ್ಡಾ ಮಾತ್ರವಲ್ಲದೆ ಸ್ಮೃತಿ ಇರಾನಿ, ಬಿ.ಎಲ್. ಸಂತೋಷ್ ಹಾಗೂ ಸಂಬಿತ್ ಪಾತ್ರ ಹೆಸರನ್ನೂ ಉಲ್ಲೇಖಿಸಲಾಗಿದೆ.
  • ಭಾರತ ದೇಶ ಕೊರೊನಾದಿಂದ ತತ್ತರಿಸಿ ಹೋಗಿದೆ. ಇಂಥಾ ಸಂದರ್ಭದಲ್ಲಿ ಪರಿಹಾರ ನೀಡುವ ಬದಲು, ಬಿಜೆಪಿ ಹೀಗೆ ನಕಲು ವಿಚಾರ ಹಂಚಿಕೆಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ವಕ್ತಾರ ರಾಜೀವ್ ಗೌಡ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.
  • ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಬಿಜೆಪಿಯನ್ನು ಬಿಲ್​ಕುಲ್ ಜೂಟ್ ಪಾರ್ಟಿ ಎಂದು ದೂರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಸಿಂಗಾಪುರದಲ್ಲಿ ಪತ್ತೆಯಾದ ಕೊರೊನಾ ವೈರಾಣು ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು: ಅರವಿಂದ್ ಕೇಜ್ರಿವಾಲ್

2 ರಿಂದ 18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಿಕೆ; 10 ದಿನದಲ್ಲಿ ಪ್ರಯೋಗ ಆರಂಭ: ನೀತಿ ಆಯೋಗ ಸದಸ್ಯ

Published On - 10:29 pm, Tue, 18 May 21