ಹರಿಯಾಣ: ದೇಶದಲ್ಲಿ ಕೊರೊನಾ ನಿಯಂತ್ರಿಸಲು ಪರದಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಒಂದೆಡೆ ಸೋಂಕಿತರನ್ನು ರಕ್ಷಿಸುವುದು ಸವಾಲಾಗಿದ್ದರೆ, ಇನ್ನೊಂದೆಡೆ ಕಳ್ಳರಿಂದ ಕೊರೊನಾ ಲಸಿಕೆಯನ್ನು ಕಾಪಾಡಿಕೊಳ್ಳುವುದೂ ದೊಡ್ಡ ತಲೆನೋವಾಗಿದೆ. ದೇಶದಲ್ಲಿ ಕೊರೊನಾ ಲಸಿಕೆಯ ಕೊರತೆ ತಲೆದೋರಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ ಹರಿಯಾಣದ ಜಿಂದ್ನಲ್ಲಿರುವ ಸಿವಿಲ್ ಆಸ್ಪತ್ರೆಯ ಪಿಪಿಸಿ ಸೆಂಟರ್ನಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಬರೋಬ್ಬರಿ 1,710 ಡೋಸ್ ಕೊರೊನಾ ಲಸಿಕೆ ಹಾಗೂ ಕೆಲ ಕಡತಗಳು ಕಣ್ಮರೆಯಾಗಿದೆ.
ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದು ಹಲವೆಡೆ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿರುವುದರಿಂದ ಸೋಂಕಿನ ತೀವ್ರತೆಗೆ ಆರೋಗ್ಯ ವ್ಯವಸ್ಥೆ ಅಕ್ಷರಶಃ ನಲುಗಿ ಹೋಗಿದೆ. ಮೊದಲ ಅಲೆಗಿಂತಲೂ ಹೆಚ್ಚಿನ ಕಠಿಣತೆ ಈಗ ಎದುರಾಗಿದೆ. ಸದ್ಯದ ಸಂದರ್ಭದಲ್ಲಿ ಸೋಂಕು ತಡೆಗಟ್ಟಲು ಕೊರೊನಾ ಲಸಿಕೆಗೆ ಸರ್ಕಾರ ಹೆಚ್ಚು ಮಹತ್ವ ನೀಡುತ್ತಿದ್ದು, ಲಸಿಕೆ ಉತ್ಪಾದನೆಯನ್ನೂ ಹೆಚ್ಚಿಸಲಾಗುತ್ತಿದೆ. ಆದರೆ, ಇಂತಹ ಸಂಕಷ್ಟದ ಸಂದರ್ಭದಲ್ಲೇ ಆಸ್ಪತ್ರೆಗಳ ಮೇಲೆ ಕಣ್ಣಿಟ್ಟಿರುವ ಕಳ್ಳರು ಲಸಿಕೆಯನ್ನೇ ಎಗರಿಸಿದ್ದಾರೆ.
ಜಿಂದ್ನ ಸಿವಿಲ್ ಆಸ್ಪತ್ರೆಯ ಪಿಪಿಸಿ ಸೆಂಟರ್‌ನಿಂದ ಲಸಿಕೆ ಕಳ್ಳತನವಾಗಿದ್ದು, ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಎರಡೂ ಲಸಿಕೆಗಳನ್ನು ಖದೀಮರು ಹೊತ್ತೊಯ್ದಿರುವುದು ಗಮನಕ್ಕೆ ಬಂದಿದೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ಕೆಲ ಕಡತಗಳು ಸಹ ಕಣ್ಮರೆಯಾಗಿದ್ದು, ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:
ಬೆಂಗಳೂರಿನ ಕೆಲವೆಡೆ ಕೊರೊನಾ ಲಸಿಕೆ ಕೊರತೆ; ಎರಡನೇ ಡೋಸ್ ಪಡೆಯಲು ಬಂದವರಿಗೆ ಲಸಿಕೆಯೇ ಸಿಗುತ್ತಿಲ್ಲ
Published On - 12:36 pm, Thu, 22 April 21