ಕೊರೊನಾದ ಎರಡನೇ ಅಲೆಯೇ ಇನ್ನೂ ಮುಗಿದಿಲ್ಲ. ಆಗಲೇ ಮೂರನೇ ಅಲೆಯ ಭೀತಿ ಎದುರಾಗಿದೆ. ಎರಡನೇ ಅಲೆಯಲ್ಲಿ ಕೊರೊನಾ ವೈರಸ್ 18 ರಿಂದ 35 ವರ್ಷದೊಳಗಿನ ಯುವಜನತೆಯ ಮೇಲೆ ದಾಳಿ ಮಾಡ್ತಿದೆ. ಮೂರನೇ ಅಲೆಯಲ್ಲಿ ಕೊರೊನಾ ವೈರಸ್ 18 ವರ್ಷದೊಳಗಿನವರ ಮೇಲೆ ಹೆಚ್ಚಿನ ದಾಳಿ ನಡೆಸಬಹುದು ಎಂದು ತಜ್ಞ ವೈದ್ಯರು ಹೇಳುತ್ತಿದ್ದಾರೆ. ಇದು ಮತ್ತಷ್ಟು ಭೀತಿಗೆ ಕಾರಣವಾಗಿದೆ.
ಕೊರೊನಾದ ಮೊದಲ ಅಲೆಯಲ್ಲಿ 50 ವರ್ಷ ಮೇಲ್ಪಟ್ಟವರು ಕೊರೊನಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದರು. ಈಗ ಬಂದಿರುವ ಎರಡನೇ ಅಲೆಯಲ್ಲಿ 50 ವರ್ಷದೊಳಗಿನವರು ಕೂಡ ಕೊರೊನಾ ಸೋಂಕಿಗೆ ತುತ್ತಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಇನ್ನೂ ಕೊರೊನಾದ ಮೂರನೇ ಅಲೆಯೂ ಕೂಡ ಕೆಲವೇ ತಿಂಗಳಲ್ಲಿ ಬಂದಪ್ಪಳಿಸಲಿದೆ. ಮೂರನೇ ಅಲೆಯಲ್ಲಿ ಕೊರೊನಾ ವೈರಸ್ಗೆ ಮಕ್ಕಳು ತುತ್ತಾಗಲಿದ್ದಾರೆ ಎಂದು ವೈರಾಣು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಭಾರತವೀಗ ಕೊರೊನಾದ ಎರಡನೇ ಅಲೆಯನ್ನು ಎದುರಿಸುತ್ತಿದೆ. ಈ ಎರಡನೇ ಅಲೆಯ ಅಬ್ಬರ ಮುಗಿದ ಬಳಿಕ ಮೂರನೇ ಅಲೆ ಕೂಡ ಬೇಗನೇ ಭಾರತಕ್ಕೆ ಅಪ್ಪಳಿಸುವ ಭೀತಿ ಇದೆ. ಭಾರತಕ್ಕೆ ಆಕ್ಟೋಬರ್ನಿಂದ ಡಿಸೆಂಬರ್ ವೇಳೆಗೆ ಕೊರೊನಾದ ಮೂರನೇ ಅಲೆ ಅಪ್ಪಳಿಸಬಹುದು ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಮೂರನೇ ಅಲೆಯಲ್ಲಿ ಕೊರೊನಾ ವೈರಸ್ ದಾಳಿ ಮತ್ತಷ್ಟು ಭೀಕರವಾಗಿರಲಿದೆ. ಮೂರನೇ ಅಲೆಯಲ್ಲಿ ಕೊರೊನಾ ವೈರಸ್ ಎಳೆಯ ಮಕ್ಕಳ ಮೇಲೆ ದಾಳಿ ಮಾಡುವ ಭೀತಿ ಇದೆ. ಕೊರೊನಾದ ಮೂರನೇ ಅಲೆಗೆ ಮಕ್ಕಳು ತುತ್ತಾಗಬಹುದು ಎಂದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಖ್ಯಾತ ವೈರಾಣು ತಜ್ಞ ಡಾಕ್ಟರ್ ರವಿ ಹೇಳಿದ್ದಾರೆ.
ನಮ್ಮ ದೇಶದಲ್ಲಿ ಮೊದಲೇ ಮಕ್ಕಳ ತಜ್ಞರ ಕೊರತೆ ಇದೆ. ಪಿಡಿಯಾಟ್ರಿಕ್ ಕೋವಿಡ್ ವಾರ್ಡ್ಗಳ ಕೊರತೆ ಕೂಡ ಇದೆ. ಆದಷ್ಟ ಬೇಗನೇ ದೇಶದಲ್ಲಿ ಪಿಡಿಯಾಟ್ರಿಕ್ ಕೋವಿಡ್ ವಾರ್ಡ್ಗಳ ಮೂಲಸೌಕರ್ಯ ಹೆಚ್ಚಿಸಬೇಕು. ಮಕ್ಕಳ ಮೇಲೆ ದೊಡ್ಡ ಪ್ರಮಾಣದಲ್ಲಿ ಕೊರೊನಾ ವೈರಸ್ ದಾಳಿ ಮಾಡಬಹುದು ಎನ್ನುವ ಭೀತಿ ಇದೆ ಎಂದು ವೈರಾಣು ತಜ್ಞ ರವಿ ಪ್ರತಿಕ್ರಿಯಿಸಿದ್ದಾರೆ.
ಮೂರನೇ ಅಲೆಗೆ ಸಿದ್ದವಾಗಬೇಕೆಂದ ಸುಪ್ರೀಂಕೋರ್ಟ್
ತಜ್ಞ ವೈದ್ಯರ ಎಚ್ಚರಿಕೆ ಹಿನ್ನಲೆಯಲ್ಲಿ ದೇಶದ ನ್ಯಾಯಾಂಗ ಕೂಡ ಕೇಂದ್ರ ಮತ್ತು ರಾಜ್ಯಗಳನ್ನು ಎಚ್ಚರಿಸುವ ಕೆಲಸ ಮಾಡಿದೆ. ಭಾರತಕ್ಕೆ ಕೊರೊನಾದ ಮೂರನೇ ಅಲೆ ದೊಡ್ಡ ಪ್ರಮಾಣದಲ್ಲಿ ಅಪ್ಪಳಿಸಲಿದೆ. ಮೂರನೇ ಅಲೆಯಲ್ಲಿ ಮಕ್ಕಳು ಕೊರೊನಾಗೆ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗಲಿದ್ದಾರೆ. ಹೀಗಾಗಿ 18 ವರ್ಷದೊಳಗಿನವರಿಗೂ ಕೊರೊನಾ ಲಸಿಕೆಯನ್ನು ನೀಡುವ ಮೂಲಕ ಕೊರೊನಾ ವೈರಸ್ನಿಂದ ರಕ್ಷಿಸಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಢ ಮತ್ತು ಜಸ್ಟೀಸ್ ಎಂ.ಆರ್.ಶಾ ಅವರನ್ನೊಳಗೊಂಡ ಪೀಠವು ನಾವು ಈಗಿನಿಂದಲೇ ಕೊರೊನಾದ ಮೂರನೇ ಅಲೆಯನ್ನು ಎದುರಿಸಲು ಸಿದ್ದತೆ ನಡೆಸಿದರೆ, ಮೂರನೇ ಅಲೆಯನ್ನು ಎದುರಿಸಬಹುದು. ವೈಜ್ಞಾನಿಕವಾಗಿ ಯೋಜನೆ ರೂಪಿಸಿ ಜನರಿಗೆ ಕೊರೊನಾ ಲಸಿಕೆ ನೀಡುವುದು ಅಗತ್ಯವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೊರೊನಾದ ಮೂರನೇ ಅಲೆ ಭಾರತದಲ್ಲಿ ಸದ್ಯದಲ್ಲೇ ಬರಬಹುದು. ತಜ್ಞರು ಹೇಳುವ ಪ್ರಕಾರ ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ತಗುಲಲಿದೆ. ಮಕ್ಕಳು ಕೊರೊನಾ ಸೋಂಕಿತರಾಗಿ ಆಸ್ಪತ್ರೆಗೆ ಹೋದಾಗ, ತಂದೆ, ತಾಯಿ ಕೂಡ ಆಸ್ಪತ್ರೆಗೆ ಹೋಗ್ತಾರೆ. ಹೀಗಾಗಿ ನಾವು ಈ ವರ್ಗದ ಜನರಿಗೆ ಕೊರೊನಾ ಲಸಿಕೆಯನ್ನು ನೀಡಿ ಮುಗಿಸಬೇಕು. ನಾವು ಇದಕ್ಕಾಗಿ ವೈಜ್ಞಾನಿಕ ಯೋಜನೆ ರೂಪಿಸಿ ಜಾರಿಗೆ ತರಬೇಕು. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ನಾವು ಈಗ ಸಿದ್ದವಾದರೆ, ಕೊರೊನಾ ಮೂರನೇ ಅಲೆ ಎದುರಿಸಲು ಸಾಧ್ಯ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಎಂಬಿಬಿಎಸ್ ಪದವಿ ಪೂರೈಸಿ ಸ್ನಾತಕೋತ್ತರ ವೈದ್ಯಕೀಯ ಪದವಿಗೆ ಸೇರ್ಪಡೆಯಾಗಲು ಕಾಯುತ್ತಿರುವವರ ಸೇವೆಯನ್ನ ಬಳಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಲಿ. ಕೊರೊನಾದ ಮೂರನೇ ಅಲೆ ಎದುರಿಸಲು ಇವರ ಸೇವೆ ಬಹಳ ಮುಖ್ಯ. ಪ್ರತಿ ವರ್ಷ 1.5 ಲಕ್ಷ ವೈದ್ಯರು ಮೆಡಿಕಲ್ ಕೋರ್ಸ್ ಪೂರೈಸುತ್ತಿದ್ದಾರೆ. ನೀಟ್ ಪರೀಕ್ಷೆ ಬರೆಯಲು ಕಾಯತ್ತಿದ್ದಾರೆ. ದೇಶದಲ್ಲಿ ಒಂದೂವರೆ ಲಕ್ಷ ವೈದ್ಯರು, ಎರಡೂವರೆ ಲಕ್ಷ ನರ್ಸ್ಗಳು ಮನೆಯಲ್ಲಿದ್ದಾರೆ. ಇವರ ಸೇವೆ ಬಳಸಿಕೊಳ್ಳುವುದು ಮೂರನೇ ಅಲೆ ಎದುರಿಸಲು ಬಹಳ ಮುಖ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಹೀಗಾಗಿ 18 ವರ್ಷದೊಳಗಿನವರಿಗೆ ಕೊರೊನಾ ಲಸಿಕೆಯನ್ನು ನೀಡಲು ಸಾಧ್ಯವೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಿ ಉತ್ತರ ಕೊಡಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದಕ್ಕೆ ಇನ್ನೂ ಕೇಂದ್ರ ಸರ್ಕಾರ ಉತ್ತರ ನೀಡಿಲ್ಲ. ಆದರೇ, ಕೆಲ ದೇಶಗಳಲ್ಲಿ 18 ವರ್ಷದೊಳಗಿನವರಿಗೂ ಕೊರೊನಾ ಲಸಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಕೆನಡಾ ದೇಶದಲ್ಲಿ ಮಾತ್ರ 18 ವರ್ಷದೊಳಗಿನವರಿಗೂ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಕೆನಡಾದಲ್ಲಿ 12 ರಿಂದ 18 ವರ್ಷದೊಳಗಿನವರಿಗೂ ಕೊರೊನಾ ಲಸಿಕೆ ನೀಡಲು ಒಪ್ಪಿಗೆ ನೀಡಲಾಗಿದೆ. ಫೈಜರ್ ಕಂಪನಿಯು ತನ್ನ ಲಸಿಕೆಯನ್ನು 16 ವರ್ಷ ಮೇಲ್ಪಟ್ಟವರಿಗೆ ನೀಡಲು ಒಪ್ಪಿಗೆ ನೀಡಿದೆ. ಬ್ರಿಟಿಷ್ ಕೊಲಂಬಿಯಾದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಲಾಗುತ್ತಿದೆ.
ಹೀಗಾಗಿ ಭಾರತದಲ್ಲೂ ಮೂರನೇ ಅಲೆಯಲ್ಲಿ ಕೊರೊನಾದಿಂದ ದೇಶದ ಭವಿಷ್ಯದ ಪ್ರಜೆಗಳ ಜೀವ ಕಾಪಾಡಲು ಮಕ್ಕಳಿಗೂ ಕೊರೊನಾ ಲಸಿಕೆ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಆದರೆ, ಈಗ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಿಗುತ್ತಿಲ್ಲ. ಲಸಿಕೆಯ ಉತ್ಪಾದನೆ ಸಾಮರ್ಥ್ಯವನ್ನು ಆದಷ್ಟು ನಾಲ್ಕೈದು ಪಟ್ಟು ಹೆಚ್ಚಿಸಬೇಕು. ಪ್ರತಿ ತಿಂಗಳು 30 ರಿಂದ 40 ಕೋಟಿ ಡೋಸ್ ಉತ್ಪಾದನೆಯಾಗಿ ದೇಶದ ಜನರಿಗೆ ಲಸಿಕೆ ಸಿಗುವಂತೆ ಮಾಡಬೇಕು. ಈಗ ಪ್ರತಿ ತಿಂಗಳು 8 ಕೋಟಿ ಡೋಸ್ ಮಾತ್ರ ಉತ್ಪಾದನೆಯಾಗುತ್ತಿದೆ.
(Coronavirus 3rd Wave Children may be affected more from covid-19 Experts Suggest Precautionary Measures)
ಇದನ್ನೂ ಓದಿ: ಮಕ್ಕಳಿಗೆ ಅಪಾಯ ಎಂಬ ಆತಂಕವಿರುವ ಕೊವಿಡ್ 3ನೇ ಅಲೆಯನ್ನು ಹೇಗೆ ನಿಭಾಯಿಸ್ತೀರಿ? ಭಾರತ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
ಇದನ್ನೂ ಓದಿ: 3ನೇ ಅಲೆ ಬರುವುದರೊಳಗೆ ಎಲ್ಲರಿಗೂ ಲಸಿಕೆ, ಹವಾಮಾನದಿಂದ ಆಕ್ಸಿಜನ್ ಉತ್ಪತ್ತಿ ಮಾಡ್ತೀವಿ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್
Published On - 6:27 pm, Fri, 7 May 21