ಭಾರತದಲ್ಲಿ 2020ರ ಅಕ್ಟೋಬರ್ 5ನೇ ತಾರೀಕು ಮೊದಲ ಬಾರಿಗೆ ಕಾಣಿಸಿಕೊಂಡ ಎರಡೆರಡು ಬಾರಿ ರೂಪಾಂತರ ಹೊಂದಿರುವ B.1.617 ಮಾದರಿಯ ಕೊರೊನಾ ವೈರಾಣುವಿನಿಂದಲೇ ಎರಡನೇ ಅಲೆ ಉಲ್ಬಣಿಸುತ್ತಿದೆ ಎಂಬ ಅನುಮಾನವನ್ನು ಹಲವು ತಜ್ಞರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಆದರೆ, ಈಗ ಇನ್ನೂ ಹೆಚ್ಚಿನ ಆತಂಕ ಮೂಡಿಸುವ ಸಂಗತಿಯೊಂದು ಹೊರಬಿದ್ದಿದ್ದು B.1.617 ವೈರಾಣು ಮೂರನೇ ಬಾರಿಗೆ ರೂಪಾಂತರವಾಗಿದ್ದು ಅದರ ಮಾದರಿ ಪತ್ತೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೇ ಪ್ರಸ್ತುತ ವೈರಾಣು ಅತ್ಯಂತ ವೇಗವಾಗಿ ಹಬ್ಬುತ್ತಿರುವುದರಿಂದ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ಯಾವುದೇ ಹೊಸ ವೈರಾಣು ಪತ್ತೆಯಾದಾಗ ಅದರ ಜೀನೋಮ್ ಸೀಕ್ವೆನ್ಸಿಂಗ್ ಅಧ್ಯಯನ ಬಹು ಮುಖ್ಯವಾಗುತ್ತದೆ. ವೈರಾಣುವಿನ ಮೂಲ ಧಾತುವಿಗೆ ಸಂಬಂಧಿಸಿದಂತೆ ಅದರ ಗುಣಾವಗುಣಗಳೇನು? ಅದು ಜೀವಿಯ ಮೇಲೆ ಯಾವ ಬಗೆಯ ಪರಿಣಾಮ ಬೀರಬಹುದು? ಅದರ ಮೇಲೆ ಸುತ್ತಲಿನ ವಾತಾವರಣ ಬೀರಬಹುದಾದ ಪರಿಣಾಮ, ಅದು ರೂಪಾಂತರಗೊಳ್ಳುವ ರೀತಿ, ರೂಪಾಂತರವಾದ ನಂತರ ವೈರಾಣುವಿನ ಶಕ್ತಿ ಹೆಚ್ಚಿತೋ ಅಥವಾ ಕುಂಠಿತವಾಯಿತೋ ಎನ್ನುವ ಅಧ್ಯಯನ ಎಲ್ಲವೂ ವೈರಾಣು ನಿಯಂತ್ರಣಕ್ಕೆ ಬೇಕಾದ ಕ್ರಮಕೈಗೊಳ್ಳುವಲ್ಲಿ ಸಾಕಷ್ಟು ಸಹಕಾರಿಯಾಗಿದೆ. ಜತೆಗೆ ಲಸಿಕೆ ಹಾಗೂ ಔಷಧ ಅಭಿವೃದ್ಧಿಪಡಿಸುವಲ್ಲಿಯೂ ನೆರವಾಗುತ್ತದೆ. ಕಳೆದ ಬಾರಿ ಚೀನಾ, ಅಮೆರಿಕಾ ಸೇರಿದಂತೆ ಪ್ರಮುಖ ದೇಶಗಳು ಈ ತೆರನಾದ ಅಧ್ಯಯನದಿಂದಲೇ ಅತ್ಯಂತ ವೇಗವಾಗಿ ಕೊರೊನಾ ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾದವು.
ಆದರೆ, ಭಾರತದಲ್ಲಿ ಕೊರೊನಾ ಬಂದ ಮೊದಲ ಆರು ತಿಂಗಳಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಅತ್ಯಂತ ನಿಧಾನಗತಿಯಲ್ಲಿ ಸಾಗಿತ್ತು. ಆರಂಭಿಕ ಅವಧಿಯಲ್ಲಿ ಬೇರೆ ದೇಶಗಳು ಸಾವಿರದ ಲೆಕ್ಕದಲ್ಲಿ ಈ ಅಧ್ಯಯನ ಮಾಡುತ್ತಿದ್ದರೆ ಭಾರತ ಮಾತ್ರ ನೂರರ ಲೆಕ್ಕದಲ್ಲಿ ಕುಂಟುತ್ತಾ ಸಾಗುತ್ತಿತ್ತು. ಜನವರಿ 2021ರ ನಂತರವಷ್ಟೇ Indian SARS-CoV2 Genomics Consortium (INSACOG) ಮೂಲಕ ಅಧ್ಯಯನಕ್ಕೆ ಮುಂದಾದ ಭಾರತ ಸರ್ಕಾರ 10 ಪ್ರಯೋಗಾಲಯಗಳ ಮೂಲಕ ಇದನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಲು ಮುಂದಾಯಿತು. ಈ ಅಧ್ಯಯನದ ಮೂಲ ಉದ್ದೇಶವೇ ವೈರಾಣುವಿನಲ್ಲಾಗಬಹುದಾದ ಬದಲಾವಣೆಗಳ ಬಳಕೆ ತಿಳಿದು ಅದನ್ನು ಮುಂದಿನ ಹಂತದಲ್ಲಿ ನಿಯಂತ್ರಿಸುವ ಬಗ್ಗೆ ತಿಳಿದುಕೊಳ್ಳುವುದಾಗಿದೆ.
ಅಧ್ಯಯನಕ್ಕೆ ನೂರೆಂಟು ಸವಾಲುಗಳೂ ಇವೆ
ಸದರಿ ಮಾರ್ಗದ ಮೂಲಕ ಇಷ್ಟೆಲ್ಲಾ ಸಂಗತಿಗಳನ್ನು ತಿಳಿದುಕೊಳ್ಳಬಹುದಾದರೂ ಇದು ಹೆಚ್ಚು ಸಮಯವನ್ನು ಪಡೆಯುವ ಮತ್ತು ಖರ್ಚುವೆಚ್ಚದ ವಿಚಾರದಲ್ಲಿ ಅಧಿಕ ಮೊತ್ತವನ್ನು ಬೇಡುವ ಅಧ್ಯಯನವಾಗಿದೆ. ವೈರಾಣುವನ್ನು ತೆಗೆದು, ಸಂಸ್ಕರಿಸಿ, ಪ್ರಯೋಗಾಲಯಕ್ಕೆ ಕಳುಹಿಸಿ ಒಂದು ಅನುಕ್ರಮವನ್ನು ಅಭಿವೃದ್ಧಿಪಡಿಸಲು ಏನೆಂದರೂ ಮೂರರಿಂದ ಐದು ದಿನಗಳನ್ನು ಬೇಡುವ ಈ ಪ್ರಕ್ರಿಯೆಗೆ ಮೀಸಲಿರುವುದು ಕೂಡ ಕೆಲವೇ ಕೆಲವು ಸರ್ಕಾರಿ ಸ್ವಾಮ್ಯದ ಪ್ರಯೋಗಾಲಯಗಳು. ಇವು ತಾಂತ್ರಿಕವಾಗಿಯೂ ಹೆಚ್ಚು ಕೆಲಸವನ್ನು ಬೇಡುವುದಾಗಿದ್ದು ಬರೀ ಒಂದೇ ಒಂದು ಅನುಕ್ರಮದ ಅಭಿವೃದ್ಧಿಗೆ ₹3 ಸಾವಿರದಿಂದ ₹5 ಸಾವಿರದಷ್ಟು ಖರ್ಚಾಗುತ್ತದೆ.
ಈ ಅಧ್ಯಯನಕ್ಕಾಗಿ INSACOG ಆರಂಭಿಕ ಹಂತದಲ್ಲಿ ಆರು ತಿಂಗಳಿಗೆ ₹115ಕೋಟಿ ತೆಗೆದಿರಿಸಿತ್ತು. ಇದು ಕೇಂದ್ರ ಸರ್ಕಾರದಿಂದ ಬರಬೇಕಾದ ಹಣವಾಗಿದ್ದು, ಹೆಚ್ಚುವರಿ ಹಣವೂ ಇಲ್ಲವಾದ್ದರಿಂದ ಜೈವಿಕ ತಂತ್ರಜ್ಞಾನ ವಿಭಾಗವು ತನ್ನ ಸಂಪನ್ಮೂಲಗಳಿಂದಲೇ ಹೆಚ್ಚು ಹಣ ಸಂಗ್ರಹಿಸಬೇಕಾಗಿ ಬಂತು. ಸಾಲದ್ದಕ್ಕೆ ಕಡೇಕ್ಷಣದಲ್ಲಿ ಮಂಜೂರಾದ ಹಣದ ಮೊತ್ತವನ್ನೂ ₹80ಕೋಟಿಗೆ ಇಳಿಸಲಾಯಿತು. ಸಮಸ್ಯೆಗಳ ಮೇಲೆ ಸಮಸ್ಯೆ ಎಂಬಂತೆ ಇದನ್ನೆಲ್ಲಾ ಅಧ್ಯಯನ ಮಾಡಬೇಕಾದ ಪ್ರಯೋಗಾಲಯಗಳಲ್ಲಿ ಸಹ ಸೌಲಭ್ಯದ ಕೊರತೆ ಕಾಣಿಸಿಕೊಂಡು ಒಟ್ಟಾರೆ ಪ್ರಕ್ರಿಯೆಗೆ ಮತ್ತಷ್ಟು ತೊಡಕಾಯಿತು.
ಎಚ್ಚೆತ್ತುಕೊಳ್ಳದ ಪರಿಣಾಮ ಇಕ್ಕಟ್ಟಿಗೆ ಸಿಲುಕಿದ್ದೇವೆ
ಈ ಅವ್ಯವಸ್ಥೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ತಜ್ಞರೊಬ್ಬರು ದೇಶದಲ್ಲಿ ಕೊರೊನಾ ವೈರಾಣುವಿಗೆ ಸಂಬಂಧಿಸಿದಂತೆ ನಾವು ಎಚ್ಚೆತ್ತುಕೊಂಡಿದ್ದು ಏನೇನೂ ಸಾಲದು. ರೂಪಾಂತರಿ ವೈರಾಣು ಕಳೆದ ಅಕ್ಟೋಬರ್ನಲ್ಲೇ ಕಾಣಿಸಿಕೊಂಡಿದ್ದರೂ ಅದನ್ನೊಂದು ಗಂಭೀರ ವಿಷಯವನ್ನಾಗಿ ಪರಿಗಣಿಸಿರಲಿಲ್ಲ. ಇದೀಗ ಮಹಾರಾಷ್ಟ್ರದಲ್ಲಿ ಏಕಾಏಕಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾದಾಗ ಎಲ್ಲರೂ ತಲೆಕೆಡಿಸಿಕೊಂಡರು. ವಾಸ್ತವವಾಗಿ ರೂಪಾಂತರಿಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಮುಂದಿನ ಕ್ರಮಗಳ ಬಗ್ಗೆ ಸವಿಸ್ತಾರ ಅಧ್ಯಯನ ಆಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳದಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ ವೈರಾಣು ಮೂರನೇ ಬಾರಿಗೆ ರೂಪಾಂತರವಾಗಿರುವುದು ಗೋಚರವಾಗಿದ್ದು, ಕಳೆದ ವಾರ ಸರ್ಕಾರ ತಿಳಿಸಿದ್ದ ಎರಡನೇ ಬಾರಿಗೆ ರೂಪಾಂತರಗೊಂಡ ವೈರಾಣು ಇದೀಗ ಮೂರನೇ ಹಂತಕ್ಕೆ ಕಾಲಿಟ್ಟಂತಾಗಿದೆ. ಸದ್ಯ ದೇಶದಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳ ಶೇ.5ರಷ್ಟು ಮಾದರಿಯನ್ನು ಅಧ್ಯಯನಕ್ಕೆ ಒಳಪಡಿಸುವುದಾದರೂ 12,500 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕು. ಆದರೆ, ಈಗ ಶೇ.1ಕ್ಕಿಂತಲೂ ಕಡಿಮೆ ಮಾದರಿಗಳನ್ನು ಅಧ್ಯಯನ ಮಾಡಲಷ್ಟೇ ನಾವು ಶಕ್ತರಾಗಿದ್ದೇವೆನ್ನುವುದು ಇನ್ನೊಂದು ಗಂಭೀರ ಸಂಗತಿ.
ಇಂತಹ ಗೊಂದಲಗಳ ಮಧ್ಯೆ ಇದೀಗ ಭಾರತದಲ್ಲಿ ಎರಡನೇ ಅಲೆಗೆ ಕಾರಣವಾಗಿರುವುದು ದೇಶಿ B.1.617 ಮಾದರಿಯೋ ಅಥವಾ ಬ್ರಿಟನ್ ಮಾದರಿಯೋ ಎಂಬ ಪ್ರಶ್ನೆಗೂ ನಿರ್ದಿಷ್ಟ ಉತ್ತರ ಸಿಕ್ಕಿಲ್ಲ. ವೈರಾಣು ರೂಪಾಂತರಗೊಂಡಿದೆ ಎನ್ನುವುದು ತಿಳಿದಿದ್ದರೂ ಎಚ್ಚೆತ್ತುಕೊಂಡು ಮುಂದಿನ ಕ್ರಮಗಳ ಬಗ್ಗೆಯಾಗಲೀ, ಅಪಾಯದ ಬಗ್ಗೆಯಾಗಲೀ ಯೋಚಿಸದೇ, ಸೋಂಕು ಇಳಿಮುಖವಾಗಿದೆ ಎಂಬ ಕಾರಣಕ್ಕೆ ಮೈಮರೆತು ಈಗ ಅಪಾಯ ಎದುರಾಗಿದೆ ಎಂದು ತಲ್ಲಣಕ್ಕೆ ಒಳಗಾಗಿರುವುದು ಮಾತ್ರ ಈ ವ್ಯವಸ್ಥೆಯ ಅತಿದೊಡ್ಡ ವ್ಯಂಗ್ಯ.
ಇದನ್ನೂ ಓದಿ: ಕೊರೊನಾ ಲಸಿಕೆಯೂ ಪೋಲಾಗುತ್ತಿದೆ; ತಮಿಳುನಾಡಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಲಸಿಕೆ ವ್ಯರ್ಥ: ಆರ್ಟಿಐ ವರದಿ
Published On - 3:06 pm, Tue, 20 April 21