ಕೊರೊನಾ ಲಸಿಕೆಯೂ ಪೋಲಾಗುತ್ತಿದೆ; ತಮಿಳುನಾಡಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಲಸಿಕೆ ವ್ಯರ್ಥ: ಆರ್​ಟಿಐ ವರದಿ

ಕೊರೊನಾ ಲಸಿಕೆಯೂ ಪೋಲಾಗುತ್ತಿದೆ; ತಮಿಳುನಾಡಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಲಸಿಕೆ ವ್ಯರ್ಥ: ಆರ್​ಟಿಐ ವರದಿ
ಪ್ರಾತಿನಿಧಿಕ ಚಿತ್ರ

ತಮಿಳುನಾಡಿನಲ್ಲಿ ಶೇ.12.10, ಹರ್ಯಾಣ ರಾಜ್ಯದಲ್ಲಿ ಶೇ.9.74, ಮಣಿಪುರದಲ್ಲಿ ಶೇ.7.8 ಹಾಗೂ ತೆಲಂಗಾಣದಲ್ಲಿ ಶೇ.7.55ರಷ್ಟು ಲಸಿಕೆಯನ್ನು ಪೋಲು ಮಾಡಲಾಗಿದೆ ಎಂಬ ಸಂಗತಿ ಬಯಲಾಗಿದ್ದು, 10 ಕೋಟಿ ಡೋಸ್ ಪೈಕಿ ಅಂದಾಜು 44 ಲಕ್ಷ ಡೋಸ್ ವ್ಯರ್ಥವಾಗಿರುವುದು ಆರ್​ಟಿಐ ಮೂಲಕ ತಿಳಿದುಬಂದಿದೆ.

Skanda

| Edited By: ganapathi bhat

Apr 20, 2021 | 2:53 PM

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಅತ್ಯಂತ ವೇಗವಾಗಿ ವ್ಯಾಪಿಸುತ್ತಿದ್ದು ಕಳೆದ ಬಾರಿಗಿಂತಲೂ ಹೆಚ್ಚು ಗಂಭೀರತೆಯನ್ನು ಸೃಷ್ಟಿಸಿದೆ. ಈ ಬಾರಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಊಹೆಗೂ ಮೀರಿ ಏರಿಕೆಯಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯವನ್ನು ಪೂರೈಸುವುದೂ ಕಷ್ಟವಾಗಿದೆ. ಇದಕ್ಕೆ ತಕ್ಕನಾಗಿ ಅನೇಕ ರಾಜ್ಯಗಳು ತಮ್ಮಲ್ಲಿ ಕೊರೊನಾ ಲಸಿಕೆಯ ಅಭಾವ ಸೃಷ್ಟಿಯಾಗಿದೆ ಎಂದು ಹೇಳಿಕೊಂಡಿದ್ದವು. ಆದರೆ, ಇದೇ ವಿಚಾರವಾಗಿ ಸಲ್ಲಿಸಲಾದ ಆರ್​ಟಿಐ ಅರ್ಜಿಗೆ ಉತ್ತರ ಬಂದಿದ್ದು, ರಾಜ್ಯಗಳಿಗೆ ಏಪ್ರಿಲ್ 11ರ ತನಕ ಕಳುಹಿಸಲಾದ ಕೊರೊನಾ ಲಸಿಕೆಯ ಶೇ.23ರಷ್ಟು ಭಾಗವನ್ನು ವ್ಯರ್ಥ ಮಾಡಲಾಗಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ತಮಿಳುನಾಡಿನಲ್ಲಿ ಶೇ.12.10, ಹರ್ಯಾಣ ರಾಜ್ಯದಲ್ಲಿ ಶೇ.9.74, ಮಣಿಪುರದಲ್ಲಿ ಶೇ.7.8 ಹಾಗೂ ತೆಲಂಗಾಣದಲ್ಲಿ ಶೇ.7.55ರಷ್ಟು ಲಸಿಕೆಯನ್ನು ಪೋಲು ಮಾಡಲಾಗಿದೆ ಎಂಬ ಸಂಗತಿ ಬಯಲಾಗಿದ್ದು, 10 ಕೋಟಿ ಡೋಸ್ ಪೈಕಿ ಅಂದಾಜು 44 ಲಕ್ಷ ಡೋಸ್ ವ್ಯರ್ಥವಾಗಿರುವುದು ಆರ್​ಟಿಐ ಮೂಲಕ ತಿಳಿದುಬಂದಿದೆ. ಇದಕ್ಕೆ ತದ್ವಿರುದ್ಧವಾಗಿ ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಾಂ, ಗೋವಾ, ದಮನ್​ ಮತ್ತು ದಿಯು, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷದ್ವೀಪಗಳಲ್ಲಿ ಕೊರೊನಾ ಲಸಿಕೆಯನ್ನು ಅತ್ಯಂತ ಸಮರ್ಪಕವಾಗಿ ಬಳಸಲಾಗಿದ್ದು, ಇಲ್ಲಿನ ಆಡಳಿತ ವ್ಯವಸ್ಥೆ ಕೊರೊನಾ ಲಸಿಕೆ ವ್ಯರ್ಥವಾಗಲು ಬಿಟ್ಟಿಲ್ಲ ಎನ್ನುವುದನ್ನು ವರದಿ ತಿಳಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಲಸಿಕೆಯ ಅಭಾವ ಎನ್ನುವ ವಾದ ರಾಜಕೀಯ ತಿರುವುಗಳನ್ನು ಪಡೆದುಕೊಂಡಿದ್ದು, ಕೇಂದ್ರ ಸರ್ಕಾರ ಹಾಗೂ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಕೊರೊನಾ ಲಸಿಕೆಯ ಉತ್ಪಾದನೆ ಹೆಚ್ಚಿಸುವ ಸಲುವಾಗಿ ದೇಶದಲ್ಲಿ ಇನ್ನೂ ಕೆಲ ಸಂಸ್ಥೆಗಳಿಗೆ ಕೇಂದ್ರದ ವತಿಯಿಂದ ಅನುಮತಿ ದೊರೆತಿದ್ದು, ಲಸಿಕೆ ಉತ್ಪಾದಕರಿಗೆ ₹4,500ಕೋಟಿ ಬಿಡುಗಡೆ ಮಾಡಲಾಗಿದೆ.

ಕೊವಿಶೀಲ್ಡ್ ಲಸಿಕೆ ಉತ್ಪಾದಿಸುವ ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗೆ ₹3,000 ಕೋಟಿ, ಕೊವ್ಯಾಕ್ಸಿನ್ ಲಸಿಕೆ ತಯಾರಿಸುವ ಭಾರತ್ ಬಯೋಟೆಕ್ ಸಂಸ್ಥೆಗೆ ₹1,500 ಕೊಟಿ ಬಿಡುಗಡೆ ಮಾಡಲಾಗಿದೆ. ಕೆಲದಿನಗಳ ಹಿಂದೆ ಒಂದಷ್ಟು ರಾಜ್ಯಗಳು ಕೊರೊನಾ ಲಸಿಕೆ ಕೊರತೆ ಬಗ್ಗೆ ಮಾತೆತ್ತಿದಾಗಲೂ ಕೇಂದ್ರ ಸರ್ಕಾರ ಲಸಿಕೆ ವ್ಯರ್ಥವಾಗದಂತೆ ಅದನ್ನು ಸರಿಯಾಗಿ ನಿರ್ವಹಿಸುವುದು ಅವಶ್ಯಕ ಎಂಬರ್ಥದಲ್ಲಿ ಉತ್ತರಿಸಿತ್ತು.

ಇದನ್ನೂ ಓದಿ: Explainer: ವಿದೇಶಿ ಕೊರೊನಾ ಲಸಿಕೆಗಳಿಗೆ ಅನುಮತಿ ನೀಡಲು ತುದಿಗಾಲಲ್ಲಿ ನಿಂತಿದೆ ಭಾರತ ಸರ್ಕಾರ; ಉಂಟಾ ಏನಾದರೂ ಪ್ರಯೋಜನ? 

ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಜೊತೆಗೆ ಭಾರತದಲ್ಲಿ ಸಿಗಲಿದೆ ಸ್ಪುಟ್ನಿಕ್​-ವಿ ಕೊರೊನಾ ಲಸಿಕೆ; ಮೂರರಲ್ಲಿ ಯಾವುದು ಉತ್ತಮ?

Follow us on

Related Stories

Most Read Stories

Click on your DTH Provider to Add TV9 Kannada