ದೆಹಲಿ: ಕೊರೊನಾ ವೈರಸ್ನ ಡೆಲ್ಟಾ ಪ್ರಭೇದದ ವಿರುದ್ಧವೂ ಕೊರೊನಾ ಲಸಿಕೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮತ್ತು ಐಸಿಎಂಆರ್ ಕಾರ್ಯದರ್ಶಿ ಬಲರಾಮ್ ಭಾರ್ಗವ, ಕೊರೊನಾ ಸೋಂಕಿನ ಪ್ರಸ್ತುತ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು.
ದೇಶದಲ್ಲಿ ಈವರೆಗೂ ಸುಮಾರು 300 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ. ಬೂಸ್ಟರ್ ಡೋಸ್ ಲಸಿಕೆ ನೀಡುವ ವಿಚಾರ ವಿಶ್ವಮಟ್ಟದಲ್ಲಿ ಚರ್ಚೆಯಲ್ಲಿದೆ. ಈ ಬಗ್ಗೆ ಜಾಗತಿಕವಾಗಿ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಈವರೆಗೂ ವಿಶ್ವ ಆರೋಗ್ಯ ಸಂಸ್ಥೆ ಬೂಸ್ಟರ್ ಡೋಸ್ ನೀಡಬೇಕೆಂದು ಶಿಫಾರಸು ಮಾಡಿಲ್ಲ ಎಂದು ಹೇಳಿದರು.
ಭಾರತದಲ್ಲಿ ಕೊರೊನಾ ಸೋಂಕಿನ ಸ್ಥಿತಿಗತಿ ಕುರಿತು ತಜ್ಞರ ಸಮಿತಿಯು ವರದಿ ನೀಡಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಜನರ ಗುಂಪುಗೂಡುವಿಕೆಗೆ ಪೋತ್ಸಾಹ ನೀಡಬಾರದು. ಜನರು ಗುಂಪುಗೂಡುವ ಮುನ್ನ ಎರಡು ಡೋಸ್ ಲಸಿಕೆ ಪಡೆದಿರಬೇಕು. ಜನರು ಮನೆಗಳಲ್ಲಿಯೇ ಹಬ್ಬಗಳನ್ನು ಆಚರಿಸಲಿ. ಸಾಮೂಹಿಕ ಆಚರಣೆ ಬೇಡ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಲಾಯಿತು.
ಕೊರೊನಾ ತಡೆ ಮಾರ್ಗಸೂಚಿ ಪಾಲಿಸಬೇಕು. ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕು. ದೇಶದ ವಯಸ್ಕರ ಪೈಕಿ ಶೇ 54ರಷ್ಟು ಜನರು ಸಿಂಗಲ್ ಡೋಸ್, ಶೇ 16ರಷ್ಟು ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ದೇಶದ 39 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ 10ರಷ್ಟು ಇದೆ ಎಂದು ಹೇಳಿದರು.
38 ಜಿಲ್ಲೆಯಲ್ಲಿ ಶೇ 5-10 ರಷ್ಟು ವಾರದ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಇದೆ. ಒಟ್ಟಾರೆ ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ. ಆದರೆ ಕೊರೊನಾದ ಎರಡನೇ ಅಲೆಯ ಇನ್ನೂ ಅಂತ್ಯವಾಗಿಲ್ಲ ಎಂದು ಹೇಳಿದರು.
(Coronavirus Vaccine Work on Delta Variant Says ICMR and Union Health Ministry)
ಇದನ್ನೂ ಓದಿ: ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಜನರ ಮೇಲೆ ಯಾವುದೇ ನಿಬಂಧನೆ ಹೇರುವಂತಿಲ್ಲ: ರಾಜ್ಯ ಸರ್ಕಾರದಿಂದ ಸೂಚನೆ
ಇದನ್ನೂ ಓದಿ: Coronavirus cases in India: ದೇಶದಲ್ಲಿ 47,092 ಹೊಸ ಕೊವಿಡ್ ಪ್ರಕರಣ ಪತ್ತೆ, 509 ಮಂದಿ ಸಾವು