ಪತ್ತನಂತಿಟ್ಟ ಜುಲೈ 26: ಕೇರಳದ (Kerala) ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾದ ವೆಂಗಲ್‌ನಲ್ಲಿ ಶುಕ್ರವಾರ ನಿಗೂಢವಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡು ಅರವತ್ತರ ಹರೆಯದ ದಂಪತಿಗಳು ಸುಟ್ಟು ಭಸ್ಮವಾಗಿದ್ದಾರೆ. ಮೃತರನ್ನು ತಿರುವಲ್ಲಾದ ತುಕಲಶ್ಶೇರಿ ನಿವಾಸಿಗಳಾದ ರಾಜು ಥಾಮಸ್ (69) ಮತ್ತು ಅವರ ಪತ್ನಿ ಲೈಜಿ ಥಾಮಸ್ (63) ಎಂದು ಗುರುತಿಸಲಾಗಿದೆ. ತುಕಲಶ್ಶೇರಿಯ ಕೌನ್ಸಿಲರ್ ರೀನಾ ವಿಶಾಲ್ ಅವರ ಪ್ರಕಾರ, ಸಾವಿಗೀಡಾದ ದಂಪತಿ ಅರವತ್ತರ ಆಸುಪಾಸಿನವರು. ದಂಪತಿಯ ಏಕೈಕ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ದೇಹ ಪೂರ್ತಿ ಸುಟ್ಟು ಕರಕಲಾಗಿದ್ದರಿಂದ ಪೊಲೀಸರು ಅವರನ್ನು ಗುರುತಿಸಲು ಕಷ್ಟಪಡುತ್ತಿದ್ದರು. ಆದರೆ ಮಹಿಳೆಯನ್ನು ಆಕತೆ ಧರಿಸಿದ್ದ ಆಭರಣಗಳ ಮೂಲಕ ಗುರುತಿಸಲಾಯಿತು.
ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಂದ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದರು. ಕಾರಿನಿಂದ ಬೆಂಕಿ ಹೊತ್ತಿಕೊಂಡಿರುವುದು ಅವರ ಗಮನಕ್ಕೆ ಬಂದಿದೆ. ಮೊದಲಿಗೆ ಈ ಪ್ರದೇಶದಲ್ಲಿದ್ದ ಕಸದ ರಾಶಿಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಭಾವಿಸಿದ್ದರು. ಆದರೆ ಇದೊಂದು ಆತ್ಮಹತ್ಯೆ ಪ್ರಕರಣ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬರುತ್ತಿದೆ ಎಂದು ತಿರುವಲ್ಲ ಡಿವೈಎಸ್ಪಿ ಅರ್ಷದ್ ತಿಳಿಸಿದ್ದಾರೆ. ಕೌಟುಂಬಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ ಎಂದು ಅವರು ಹೇಳಿರುವುದಾಗಿ ಮಲಯಾಳಂ ರಿಪೋರ್ಟರ್ ಟಿವಿ ವರದಿ ಮಾಡಿದೆ.
ಆದಾಗ್ಯೂ, ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿದ್ದ ಕಾರಿನೊಳಗೆ ಸಿಲುಕಿಕೊಂಡಿದ್ದ ಇಬ್ಬರ ಜೀವಗಳನ್ನು ಉಳಿಸಲು ಸಾಧ್ಯವಾಗಿಲ್ಲ. ಈ ರಸ್ತೆಯನ್ನು ಸಾಮಾನ್ಯವಾಗಿ ಪ್ರಯಾಣಿಕರು ಬಳಸುವುದಿಲ್ಲ. ನಿರ್ದಿಷ್ಟ ಉದ್ದೇಶಕ್ಕಾಗಿ ಅಥವಾ ಪ್ರಕೃತಿಯನ್ನು ನೋಡುವುದಕ್ಕೆ ಮಾತ್ರ ಕೆಲವರು ಇಲ್ಲಿ ಬರುತ್ತಾರೆ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ.
ಇದನ್ನೂ ಓದಿ: ಎಂಎಸ್‌ಪಿ ಕುರಿತು ಸ್ವಾಮಿನಾಥನ್ ಸಲಹೆಯನ್ನು ಯುಪಿಎ ತಿರಸ್ಕರಿಸಿತ್ತು: ಶಿವರಾಜ್ ಸಿಂಗ್ ಚೌಹಾಣ್
ಇದು ಅಪಘಾತವೋ ಅಥವಾ ಇನ್ನಾವುದೇ ಅಂಶವೋ ಎಂಬುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ