ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆಗಾಗಿ ಕೊವ್ಯಾಕ್ಸಿನ್ ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ: ಡಾ ಸೌಮ್ಯಾ ಸ್ವಾಮಿನಾಥನ್
Covaxin ಕೊವ್ಯಾಕ್ಸಿನ್ 90 ರಿಂದ 100 ದಿನಗಳನ್ನು ತೆಗೆದುಕೊಂಡಿತು" ಎಂದು ಡಾ ಸ್ವಾಮಿನಾಥನ್ ಹೇಳಿದರು. ತುರ್ತು ಬಳಕೆಗಾಗಿ ಅನುಮತಿ ನೀಡಲು ವಿಶ್ವ ಆರೋಗ್ಯ ಸಂಸ್ಥೆಯ ಸಮಿತಿಯು ಕಳೆದ ವಾರ ಸಭೆ ನಡೆಸಿ ಹೆಚ್ಚುವರಿ ಸ್ಪಷ್ಟೀಕರಣಗಳನ್ನು ಕೇಳಿದೆ ಎಂದು ಅವರು ಹೇಳಿದರು.
ದೆಹಲಿ: ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಅನುಮೋದನೆಯನ್ನು ಪಡೆಯಲು ಕೊವ್ಯಾಕ್ಸಿನ್ ಯಾವುದೇ ರೀತಿಯಿಂದಲೂ ಹೆಚ್ಚು ಸಮಯ ತೆಗೆದುಕೊಂಡಿಲ್ಲ ಎಂದು ಮುಖ್ಯ ವಿಜ್ಞಾನಿ ಡಾ ಸೌಮ್ಯಾ ಸ್ವಾಮಿನಾಥನ್ (Dr Soumya Swaminathan) ಬುಧವಾರ ಹೇಳಿದ್ದಾರೆ. ಆರೋಗ್ಯ ಸಂಸ್ಥೆಯು ಭಾರತದ ಲಸಿಕೆ ಅನುಮೋದನೆಯನ್ನು ತಡೆಹಿಡಿದಿದೆ. ಅದೇ ವೇಳೆ ಚೀನಾದ ಲಸಿಕೆಗೆ ಅನುಮೋದನೆ ನೀಡಿದೆ ಎಂಬ ವಾದವನ್ನು ಡಾ ಸೌಮ್ಯಾ ತಳ್ಳಿ ಹಾಕಿದ್ದಾರೆ.
ಎನ್ಡಿಟಿವಿಯೊಂದಿಗೆ ಮಾತನಾಡಿದ ಡಾ ಸೌಮ್ಯಾ ಸ್ವಾಮಿನಾಥನ್, ಲಸಿಕೆ ತುರ್ತು ಬಳಕೆ ಅನುಮೋದನೆಯನ್ನು ಪಡೆಯಲು ಸರಾಸರಿ 50-60 ದಿನಗಳನ್ನು ತೆಗೆದುಕೊಂಡಿತು. ಆದರೆ ಕೆಲವು 165 ದಿನಗಳವರೆಗೆ ತೆಗೆದುಕೊಂಡವು. ಚೀನಾ ನಿರ್ಮಿತ ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳು ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆಯನ್ನು ಪಡೆಯಲು 150-165 ದಿನಗಳ ನಡುವೆ ತೆಗೆದುಕೊಂಡಿತು ಎಂದು ಅವರು ಹೇಳಿದರು.
“ಕೊವ್ಯಾಕ್ಸಿನ್ 90 ರಿಂದ 100 ದಿನಗಳನ್ನು ತೆಗೆದುಕೊಂಡಿತು” ಎಂದು ಡಾ ಸ್ವಾಮಿನಾಥನ್ ಹೇಳಿದರು. ತುರ್ತು ಬಳಕೆಗಾಗಿ ಅನುಮತಿ ನೀಡಲು ವಿಶ್ವ ಆರೋಗ್ಯ ಸಂಸ್ಥೆಯ ಸಮಿತಿಯು ಕಳೆದ ವಾರ ಸಭೆ ನಡೆಸಿ ಹೆಚ್ಚುವರಿ ಸ್ಪಷ್ಟೀಕರಣಗಳನ್ನು ಕೇಳಿದೆ ಎಂದು ಅವರು ಹೇಳಿದರು. “ಸಮಿತಿಯು ಇಂದು ಮತ್ತೆ ಭೇಟಿಯಾಯಿತು ಮತ್ತು ತುಂಬಾ ತೃಪ್ತವಾಗಿದೆ” ಎಂದು ಅವರು ಹೇಳಿದರು. ಅದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆಗಾಗಿ ಇನ್ನೂ 13 ಲಸಿಕೆಗಳು ಕಾಯುತ್ತಿವೆ.
ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಪಟ್ಟಿಯು ಸಾರ್ವಜನಿಕ ಆರೋಗ್ಯ ತುರ್ತು ಸಂದರ್ಭಗಳಲ್ಲಿ ಬಳಸಬಹುದಾದ ಹೊಸ ಅಥವಾ ಪರವಾನಗಿರಹಿತ ಉತ್ಪನ್ನಗಳನ್ನು ನಿರ್ಣಯಿಸಲು ಮತ್ತು ಪಟ್ಟಿ ಮಾಡಲು ಅಪಾಯ-ಆಧಾರಿತ ಕಾರ್ಯವಿಧಾನವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಎಂದರೆ ‘ಮೇಡ್-ಇನ್-ಇಂಡಿಯಾ’ ಲಸಿಕೆಯನ್ನು ಇತರ ದೇಶಗಳು ಗುರುತಿಸುತ್ತವೆ. ಲಸಿಕೆ ಪಡೆದ ಭಾರತೀಯರು ಸ್ವಯಂ-ಕ್ವಾರಂಟೈನ್ ಹೊಂದುವ ಅಗತ್ಯವಿಲ್ಲ ಅಥವಾ ವಿದೇಶಕ್ಕೆ ಪ್ರಯಾಣಿಸುವಾಗ ನಿರ್ಬಂಧಗಳನ್ನು ಎದುರಿಸಬೇಕಾಗಿಲ್ಲ.
ಇದನ್ನೂ ಓದಿ: Covaxin: ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ