2 ರಿಂದ 18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಿಕೆ; 10 ದಿನದಲ್ಲಿ ಪ್ರಯೋಗ ಆರಂಭ: ನೀತಿ ಆಯೋಗ ಸದಸ್ಯ

| Updated By: ganapathi bhat

Updated on: Aug 21, 2021 | 10:14 AM

2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡುವ ಸಂಬಂಧ 2ನೇ ಮತ್ತು 3ನೇ ಹಂತದ ವೈದ್ಯಕೀಯ ಪ್ರಯೋಗ ನಡೆಸಲು ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದ್ದಾರೆ.

2 ರಿಂದ 18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಿಕೆ; 10 ದಿನದಲ್ಲಿ ಪ್ರಯೋಗ ಆರಂಭ: ನೀತಿ ಆಯೋಗ ಸದಸ್ಯ
ಕೊವ್ಯಾಕ್ಸಿನ್
Follow us on

ದೆಹಲಿ: 2ರಿಂದ 18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಕೊರೊನಾ ಲಸಿಕೆ ನೀಡುವ ಬಗ್ಗೆ 2ನೇ ಮತ್ತು 3ನೇ ಹಂತದ ಪ್ರಯೋಗವನ್ನು ಭಾರತ್ ಬಯೋಟೆಕ್ ಕಂಪೆನಿ ಮುಂದಿನ 10-12 ದಿನಗಳಲ್ಲಿ ಮಾಡಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಇಂದು (ಮೇ 18) ತಿಳಿಸಿದರು. 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡುವ ಸಂಬಂಧ 2ನೇ ಮತ್ತು 3ನೇ ಹಂತದ ವೈದ್ಯಕೀಯ ಪ್ರಯೋಗ ನಡೆಸಲು ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದ್ದಾರೆ.

ಮಕ್ಕಳಿಗೆ ಕೊವ್ಯಾಕ್ಸಿನ್ ನೀಡಲು ಪ್ರಯೋಗ ನಡೆಸಬಹುದು ಎಂದು ಡಿಸಿಜಿಐ ಭಾರತ್ ಬಯೋಟೆಕ್​ಗೆ ಮೇ 11ರಂದು ಅನುಮತಿ ನೀಡಿತ್ತು. ಸಿಡಿಎಸ್​ಸಿಒನ ವಿಷಯ ತಜ್ಞರ ಸಮಿತಿ ಸೂಚನೆಯಂತೆ ಡಿಸಿಜಿಐ ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಿತ್ತು.

5ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಕೊವ್ಯಾಕ್ಸಿನ್ ಲಸಿಕೆಯ ಪ್ರಯೋಗ ಮಾಡುವ ಬಗ್ಗೆ ಅನುಮತಿ ಕೋರಿ ಭಾರತ್ ಬಯೋಟೆಕ್ ಸಂಸ್ಥೆ ಫೆಬ್ರವರಿಯಲ್ಲಿ ಕೇಳಿಕೊಂಡಿತ್ತು. ಆಗ ಕೋರಿಕೆ ತಿರಸ್ಕೃತವಾಗಿತ್ತು. ವಯಸ್ಕರಲ್ಲಿ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಮೊದಲು ಮಾಹಿತಿ ನೀಡುವಂತೆ ಕೇಳಿತ್ತು.

4 ಕಡೆ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ
ದೇಶದಲ್ಲಿ ಕೊವಿಡ್ ಲಸಿಕೆ ವಿತರಣೆ ಅಭಿಯಾನವನ್ನು ತೀವ್ರಗೊಳಿಸಲು ಸರ್ಕಾರ ಹವಣಿಸುತ್ತಿದೆ. ಸದ್ಯ ಕೊವಿಡ್ ಲಸಿಕೆ ಉತ್ಪಾದಿಸುತ್ತಿರುವ ಭಾರತ್ ಬಯೋಟೆಕ್​ನ ಜತೆ ದೇಶದ 4 ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಕೊವಿಡ್ ಲಸಿಕೆಯ ಉತ್ಪಾದನೆ ಹೆಚ್ಚಿಸಲು ಅನವರತ ತೊಡಗಿಕೊಂಡಿವೆ. ಭಾರತ್ ಬಯೋಟೆಕ್ ಒಂದರಲ್ಲಷ್ಟೇ ಅಲ್ಲದೇ ಈ  4  ಸಂಸ್ಥೆಗಳಲ್ಲಿ ಕೊವಿಡ್ ಲಸಿಕೆ ಉತ್ಪಾದಿಸುವ ಮೂಲಕ ದೇಶದಲ್ಲಿನ ಲಸಿಕೆ ಕೊರತೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಕ್ರಮ ಕೈಗೊಂಡಿದೆ.

ಮುಂಬೈಯ ಹಾಫ್​ಕಿನ್ ಫಾರ್ಮಾಸೂಟಿಕಲ್ಸ್ ಕಾರ್ಪೊರೇಶನ್ ಲಿಮಿಟೆಡ್​ ಮಹಾರಾಷ್ಟ್ರ ಸರ್ಕಾರದ ಅಡಿಯ ಪ್ರಮುಖ ಸಾರ್ವಜನಿಕ ಸಂಸ್ಥೆ. ಕೊವಿಡ್ ಲಸಿಕೆ ಉತ್ಪಾದನೆಗೆ ಸರ್ವ ಸನ್ನದ್ಧವಾಗಿರುವಂತೆ ಸೂಚಿಸಿರುವ ಭಾರತ ಸರ್ಕಾರ, ಈ ಹಾಪ್​ಕಿನ್ ಫಾರ್ಮಾಸೂಟಿಕಲ್ಸ್​ಗೆ 65 ಕೋಟಿ ಧನ ಸಹಾಯ ಒದಗಿಸಿದೆ. ಸದ್ಯ ಲಸಿಕೆ ಉತ್ಪಾದನೆಯ ಕುರಿತು ಕೆಲವು ಪ್ರಕ್ರಿಯೆಯಗಳು ನಡೆಯುತ್ತಿದ್ದು, ಪ್ರತಿ ತಿಂಗಳು 20 ಕೋಟಿ ಕೊವಿಡ್ ಲಸಿಕೆ ಉತ್ಪಾದನೆ ಮಾಡಲು ಹಾಪ್​ಕಿನ್ ಫಾರ್ಮಾಸೂಟಿಕಲ್ಸ್ ಸಂಸ್ಥೆ ಶಕ್ತವಾಗಿದೆ.

ಹೈದರಾಬಾದ್​ನ ಇಂಡಿಯನ್ ಇಮ್ಯುನೋಲಾಜಿಕಲ್ ಲಿಮಿಟೆಡ್​ಗೆ ಸರ್ಕಾರ 60 ಕೋಟಿ ಸಹಾಯ ಧನ ನೀಡಿದ್ದು, ಕೊವಿಡ್ ಲಸಿಕೆ ಉತ್ಪಾದನೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ನಿರ್ಮಿಸಲು ತಿಳಿಸಿದೆ. ಇವೆರೆಡು ಸಂಸ್ಥೆಗಳ ಜತೆಗೆ ಬುಲಶಂದರ್​ನಲ್ಲಿರುವ ಭಾರತ್ ಇಮ್ಯನೊಲಾಜಿಕಲ್ ಆ್ಯಂಡ್ ಬಯೋಲಾಜಿಕಲ್ ಲಿಮಿಟೆಡ್​ಗೆ (BIBCOL) 30 ಕೋಟಿ ಸಹಾಯ ಧನ ನೀಡಿರುವ ಕೇಂದ್ರ ಸರ್ಕಾರ ಪ್ರತಿ ತಿಂಗಳಿಗೆ 1ರಿಂದ1.5 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಇಂಡಿಯನ್ ಇಮ್ಯುನೋಲಾಜಿಕಲ್ ಲಿಮಿಟೆಡ್ ಹೊಂದಿದೆ.

ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್​ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವೂ ಸಹ ಭಾರತ್ ಬಯೋಟೆಕ್​ನ ಜತೆ ನಿಕಟ ಸಂಪರ್ಕದಲ್ಲಿದೆ. ಭಾರತ್ ಬಯೋಟೆಕ್​ನಿಂದ ಲಸಿಕೆ ಉತ್ಪಾದನೆಯ ಫಾರ್ಮುಲಾ ಹಂಚಿಕೊಳ್ಳುವ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು ಪ್ರತಿ ತಿಂಗಳೂ 2 ಕೋಟಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಗುಜರಾತ್​ನ ಈ ಸಂಸ್ಥೆ ಸಜ್ಜಾಗಿದೆ.

ಇದನ್ನೂ ಓದಿ: ಧಾರವಾಡದ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಜಿಲ್ಲೆಯಲ್ಲಿಯೇ ಆರಂಭ

ಡಿಸೆಂಬರ್ ಅಂತ್ಯದೊಳಗೆ ದೇಶದ ಎಲ್ಲರಿಗೂ ಲಸಿಕೆ; ಕ್ಯಾಲೆಂಡರ್ ಆಫ್ ಇವೆಂಟ್ಸ್ ಸಿದ್ಧಪಡಿಸುತ್ತಿರುವ ಕೇಂದ್ರ

Published On - 7:53 pm, Tue, 18 May 21