ನವದೆಹಲಿ: ಭಾರತದಲ್ಲಿ ಇಂದು 1,007 ಹೊಸ ಕೊರೊನಾವೈರಸ್ ಸೋಂಕುಗಳು (New Covid-19 Cases) ಪತ್ತೆಯಾಗಿದೆ. ದೈನಂದಿನ ಕೊವಿಡ್ ಪಾಸಿಟಿವ್ ದರವು ಶೇ. 0.23ರಷ್ಟಿದೆ. COVID-19 ಪ್ರಕರಣಗಳ ಹೆಚ್ಚಳವು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ 4 ಪ್ರಮುಖ ನಗರಗಳಲ್ಲಿ ಹೆಚ್ಚಾಗಿದೆ. ಬುಧವಾರ ದೆಹಲಿಯಲ್ಲಿ 299 ಹೊಸ COVID-19 ಪ್ರಕರಣಗಳು ದಾಖಲಾಗಿವೆ. ಎರಡು ದಿನಗಳ ಹಿಂದೆ ದಾಖಲಾದ ದೈನಂದಿನ ಎಣಿಕೆಗಿಂತ ಇದು ಶೇ. 118ರಷ್ಟು ಜಿಗಿತವಾಗಿದೆ.
ದೆಹಲಿಯಲ್ಲಿ ಕೋವಿಡ್ ಪಾಸಿಟಿವಿಟಿ ದರವು ಒಂದು ವಾರದಲ್ಲಿ ಶೇ. 0.5ರಿಂದ 2.70ಕ್ಕೆ ಜಿಗಿದಿದೆ. ಬುಧವಾರದಂದು ರಾಷ್ಟ್ರ ರಾಜಧಾನಿಯಲ್ಲಿ 18,66,881 ಕೊವಿಡ್ ಕೇಸುಗಳು ಪತ್ತೆಯಾಗಿತ್ತು. ಹಾಗೇ ಸಾವಿನ ಸಂಖ್ಯೆ 26,158ಕ್ಕೆ ಏರಿತ್ತು. ಇದರ ನಡುವೆ ದೆಹಲಿಯ ನೆರೆಯ ನೋಯ್ಡಾ ಮತ್ತು ಗುರುಗ್ರಾಮದಲ್ಲಿ ಕೂಡ ದೈನಂದಿನ COVID-19 ಪ್ರಕರಣಗಳಲ್ಲಿ ಹಠಾತ್ ಏರಿಕೆಯಾಗಿದೆ. ಗುರುಗ್ರಾಮದಲ್ಲಿ ಸುಮಾರು 40 ದಿನಗಳ ನಂತರ 128 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ನೋಯ್ಡಾದಲ್ಲಿ ಒಂದು ವಾರದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ.
ಗುರುಗ್ರಾಮದಲ್ಲಿ ಮಾರ್ಚ್ 4ರಂದು ಕೊನೆಯ ಬಾರಿಗೆ COVID-19 ಪ್ರಕರಣಗಳು 100ರ ಗಡಿ ದಾಟಿದ್ದು, 115 ಪ್ರಕರಣಗಳು ದಾಖಲಾಗಿವೆ. ಇದರ ನಂತರ ಕೊವಿಡ್ ಕೇಸುಗಳು 100ಕ್ಕಿಂತ ಕಡಿಮೆಯಾಗಿದೆ. ಹರಿಯಾಣವು ಫೆಬ್ರವರಿ 16ರಂದು ಎಲ್ಲಾ ಕೋವಿಡ್-ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಿದೆ.
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಾದ್ಯಂತ ಇರುವ ಎಲ್ಲಾ ಶಾಲೆಗಳು ಯಾವುದೇ ಮಗುವಿಗೆ ಕೆಮ್ಮು, ನೆಗಡಿ, ಜ್ವರ, ಅತಿಸಾರ ಅಥವಾ ಕೋವಿಡ್-19 ನ ಯಾವುದೇ ರೋಗಲಕ್ಷಣಗಳು ಕಂಡುಬಂದರೆ ಚಿಕಿತ್ಸೆಗಾಗಿ ತಕ್ಷಣವೇ ಆರೋಗ್ಯ ಇಲಾಖೆಗೆ ತಿಳಿಸಲು ಸೂಚಿಸಲಾಗಿದೆ. ಸೋಮವಾರ 13 ಮಕ್ಕಳು ಮತ್ತು ಮೂವರು ಶಿಕ್ಷಕರಿಗೆ ಸೋಂಕು ತಗುಲಿರುವ ಒಂದು ಶಾಲೆಯು ಮುಂದಿನ ವಾರದವರೆಗೆ ಆನ್ಲೈನ್ನಲ್ಲಿ ಪಾಠ ಮಾಡಲಿದೆ. ಈಗ COVID-19 ಪಾಸಿಟಿವ್ ಪತ್ತೆಯಾಗಿರುವ 10 ಮಕ್ಕಳು ಬೇರೆ ಬೇರೆ ಶಾಲೆಗಳಿಗೆ ಸೇರಿದವರು ಎಂದು ತಿಳಿದುಬಂದಿದ್ದರೂ ಇತರ ಶಾಲೆಗಳ ವಿವರಗಳು ಖಚಿತವಾಗಿಲ್ಲ.
ಇದಲ್ಲದೇ ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಒಮಿಕ್ರೋನ್ ಬಿಎ.4 ಹಾಗೂ ಬಿಎ.5 ಎಂಬ 2 ಹೊಸ ರೂಪಾಂತರಿಗಳು ಪತ್ತೆಯಾಗಿವೆ. ಇವು ಹೆಚ್ಚು ಅಪಾಯಕಾರಿ ಅಥವಾ ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಇದರ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಕೊವಿಡ್ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರಕ್ಕಾಗಿ ಸಮಯ ನಿಗದಿಪಡಿಸಿದ ಸುಪ್ರೀಂ ಕೋರ್ಟ್
ಕೊವಿಡ್-19 ಹೋಗಿಲ್ಲ, ರೂಪಗಳನ್ನು ಬದಲಾಯಿಸುತ್ತಾ ಮತ್ತೆ ಬರುತ್ತಿದೆ: ಪ್ರಧಾನಿ ಮೋದಿ