ಮುಂಬೈ: ಭಾರತದಲ್ಲಿ ಕೊರೊನಾವೈರಸ್ ಕೇಸುಗಳ (Covid-19 Cases) ಸಂಖ್ಯೆ ಕೊಂಚ ಕಡಿಮೆಯಾಗಿದ್ದರಿಂದ ಆಫೀಸುಗಳಲ್ಲಿನ ವರ್ಕ್ ಫ್ರಂ ಹೋಂ ಆಯ್ಕೆಯನ್ನು ಹಲವು ಕಂಪನಿಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಎಂದಿನಂತೆ ಉದ್ಯೋಗಿಗಳು ಕಚೇರಿಗೆ ಹೋಗಿ ಕೆಲಸ ಮಾಡತೊಡಗಿದ್ದಾರೆ. ಹಾಗೇ, ಹಲವು ರಾಜ್ಯಗಳಲ್ಲಿ ಕೊರೊನಾ ನಿಯಮಗಳನ್ನು (Coronavirus Rules) ಸಡಿಲಗೊಳಿಸಲಾಗಿದೆ. ಆದರೆ, ಇದರ ನಡುವೆ ಮುಂಬೈನಲ್ಲಿ ಕೊವಿಡ್-19 ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಕಳೆದ ಕೆಲವು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಹೊಸ ಕೊರೊನಾವೈರಸ್ ಸೋಂಕಿನ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಮಳೆಗಾಲದಲ್ಲಿ ಕೊವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಬಹುದು ಎಂದು ಮಹಾರಾಷ್ಟ್ರದ ಉನ್ನತ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಗುರುವಾರ 1,045 ಹೊಸ ಕೊವಿಡ್ ಸೋಂಕಿನ ಪ್ರಕರಣಗಳು ಮತ್ತು ಒಂದು ಸಾವು ದಾಖಲಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 4,559ಕ್ಕೆ ಏರಿಕೆಯಾಗಿದೆ.
ಕೊವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ ಮತ್ತು ಜನರು ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್ ನಿರ್ಬಂಧಗಳನ್ನು ವಿಧಿಸಬೇಕಾಗಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ. ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಜನರ ಮೇಲೆ ಮತ್ತೆ ಕೊರೊನಾ ನಿರ್ಬಂಧಗಳನ್ನು ಹೇರಬಾರದು ಎಂದರೆ ಎಲ್ಲರೂ ತಪ್ಪದೆ ಮಾಸ್ಕ್ ಧರಿಸಬೇಕು, ಕೊವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಶಿಸ್ತನ್ನು ಅನುಸರಿಸಬೇಕು ಎಂದು ಮುಖ್ಯಮಂತ್ರಿ ಠಾಕ್ರೆ ಹೇಳಿದ್ದಾರೆ.
ಇದನ್ನೂ ಓದಿ: ಮುಂಬೈಯಲ್ಲಿ 739 ಹೊಸ ಕೊವಿಡ್ ಪ್ರಕರಣ ಪತ್ತೆ; ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ 1,081ಕ್ಕೆ ಏರಿಕೆ
ಕಳೆದ ಒಂದೂವರೆ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಪ್ರಕರಣಗಳು 7 ಪಟ್ಟು ಹೆಚ್ಚಾಗಿದೆ ಎಂದು ಸಿಎಂ ಉದ್ಧವ್ ಠಾಕ್ರೆ ಎಚ್ಚರಿಸಿದರು. ಮಹಾರಾಷ್ಟ್ರ ಸರ್ಕಾರವು ಹದಿನೈದು ದಿನಗಳ ಕಾಲ ಪರಿಸ್ಥಿತಿಯ ಮೇಲೆ ನಿಗಾ ಇಡಲಿದೆ. ಇದರ ನಡುವೆ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮಾತನಾಡಿ, ರಾಜ್ಯದಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ ಮತ್ತೆ ಮಾಸ್ಕ್ ಕಡ್ಡಾಯಗೊಳಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ