ನವದೆಹಲಿ: ಕೊನೆಗೂ ಭಾರತದ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಾಗಿದೆ. 2-18 ವರ್ಷದ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆ ನೀಡಲು ವಿಷಯ ತಜ್ಞರ ಸಮಿತಿ ಸಭೆಯಲ್ಲಿ ಅನುಮತಿ ಸಿಕ್ಕಿದೆ. ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಗ್ರೀನ್ಸಿಗ್ನಲ್ ಸಿಕ್ಕಿದ್ದು, ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ. ಇಂದು ನಡೆದ ವಿಷಯ ತಜ್ಞರ ಸಮಿತಿ ಸಭೆಯಲ್ಲಿ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿದೆ.
ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆಯ ಪರೀಕ್ಷೆ ನಡೆದಿದ್ದು, ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶವನ್ನು ಭಾರತ್ ಬಯೋಟೆಕ್ ಕಂಪನಿ ಡಿಸಿಜಿಐಗೆ ಸಲ್ಲಿಸಿತ್ತು. ಐಸಿಎಂಆರ್ ಮತ್ತು ಹೈದರಾಬಾದ್ ಮೂಲದ ಲಸಿಕೆ ತಯಾರಕ ಭಾರತ್ ಬಯೋಟೆಕ್ ಕೊವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದ್ದು, ಭಾರತದ ಮೊದಲ ಸ್ಥಳೀಯ ಕೋವಿಡ್ -19 ಲಸಿಕೆ ಆಗಿದೆ.
2ರಿಂದ 18 ವರ್ಷದ ಮಕ್ಕಳಿಗೆ ಸ್ವದೇಶಿ ಕೋವಿಡ್ ಲಸಿಕೆಯಾದ ಕೋವ್ಯಾಕ್ಸಿನ್ ನೀಡುವ ಬಗ್ಗೆ ಒಂದು ವಾರದ ಹಿಂದೆ ಕ್ಲಿನಿಕಲ್ ಪ್ರಯೋಗದ ವರದಿಯನ್ನು ಡಿಸಿಜಿಐಗೆ ಸಲ್ಲಿಸಲಾಗಿತ್ತು. ಈ ವರದಿ 1, 2 ಮತ್ತು 3ನೇ ಹಂತದ ಕ್ಲಿನಿಕಲ್ ಪರೀಕ್ಷೆಯ ವಿವರ, ಫಲಿತಾಂಶವನ್ನು ಒಳಗೊಂಡಿತ್ತು. ಸೆ. 21ರಂದು ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡುವ 3ನೇ ಹಂತದ ಪ್ರಯೋಗ ಪೂರ್ಣಗೊಂಡಿತ್ತು. ಒಟ್ಟು 1,000 ಮಕ್ಕಳ ಮೇಲೆ ಪ್ರಯೋಗ ನಡೆಸಲಾಗಿತ್ತು.
ಈ ತಿಂಗಳ ಅಂತ್ಯ ಅಥವಾ ನವೆಂಬರ್ ಮೊದಲ ವಾರದಲ್ಲಿ ಕೊರೊನಾ 3ನೇ ಅಲೆ ಕಾಣಿಸಿಕೊಳ್ಳಲಿದೆ. ಈ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇದೀಗ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ಸಿಕ್ಕಿರುವುದು ಸಮಾಧಾನಕರ ಸಂಗತಿಯಾಗಿದೆ.
ಇದರ ಜೊತೆಗೆ ಭಾರತ ಮೂಲದ ಜೈಡಸ್ ಕ್ಯಾಡಿಲಾ (Zydus Cadila) ಕಂಪನಿ ಅಭಿವೃದ್ಧಿಪಡಿಸಿರುವ ಜೈಕೊವ್-ಡಿ ಲಸಿಕೆಯ (ZyCov-D Vaccine) ತುರ್ತು ಬಳಕೆಗೆ ಈಗಾಗಲೇ ಅನುಮತಿ ಸಿಕ್ಕಿದೆ. ಮೂರು ಡೋಸ್ಗಳನ್ನು ಹೊಂದಿರುವ ಈ ಲಸಿಕೆಯನ್ನು ಅಕ್ಟೋಬರ್ ಬಳಿಕ 12ರಿಂದ 17 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವುದು. ಮುಖ್ಯವಾಗಿ ಆರೋಗ್ಯ ಸಮಸ್ಯೆಗಳಿರುವ ಮಕ್ಕಳಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗುವುದು ಎನ್ನಲಾಗಿದೆ. 12 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಈ ಜೈಕೋವ್-ಡಿ ಲಸಿಕೆ ಬಹಳ ಪರಿಣಾಮಕಾರಿಯಾಗಲಿದೆ.
ಇದನ್ನೂ ಓದಿ: Covaxin: ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ ಬಗ್ಗೆ ಮುಂದಿನ ವಾರ ಅಂತಿಮ ನಿರ್ಧಾರ
Published On - 1:25 pm, Tue, 12 October 21