ನವದೆಹಲಿ: ಭಾರತದಲ್ಲಿ ಉಚಿತ ಕೊವಿಡ್ ಲಸಿಕಾ ಅಭಿಯಾನ ಶುರುವಾಗಿದ್ದು, ಈ ವರ್ಷಾಂತ್ಯದೊಳಗೆ ಭಾರತದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಪಣ ತೊಟ್ಟಿದೆ. ಈ ನಡುವೆ 2022ರಲ್ಲಿ ಕೊರೊನಾ ಲಸಿಕೆ ಪಡೆದವರಿಗೆ ಬೂಸ್ಟರ್ ಶಾಟ್ಗಳ ಅಗತ್ಯವಿದೆ. ತುರ್ತಾಗಿ ಅಲ್ಲದಿದ್ದರೂ ನಿಧಾನವಾಗಿ ಬೂಸ್ಟರ್ ಶಾಟ್ಸ್ ಬೇಕಾಗಲಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿ (IGIB) ನಿರ್ದೇಶಕ ಡಾ. ಅನುರಾಗ್ ಅಗರ್ವಾಲ್ ತಿಳಿಸಿದ್ದಾರೆ.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಅಡಿಯಲ್ಲಿರುವ ಸಂಸ್ಥೆಯಾಗಿರುವ ಐಜಿಐಬಿ ಕೊರೊನಾ ಹೊಸ ರೂಪಾಂತರಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು SARS-CoV-2 ಜೀನ್ಸ್ ಅನ್ನು ಅಧ್ಯಯನ ಮಾಡುತ್ತಿದೆ. ಎರಡು ಡೋಸ್ಗಳ ಕೋವಿಡ್ ಲಸಿಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಒಂದು ಡೋಸ್ ಲಸಿಕೆ ಕೂಡ ನಮ್ಮಲ್ಲಿ ರೋಗನಿರೋಧ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಅಧ್ಯಯನ ಹೇಳಿದೆ. ಹೀಗಾಗಿ, ಭಾರತದ ಬಹುತೇಕ ಜನರಿಗೆ ಲಸಿಕೆ ಪಡೆದ ಬಳಿಕವೂ ಬೂಸ್ಟರ್ ಅಗತ್ಯವಿಲ್ಲ ಎಂದು ಐಸಿಎಂಆರ್ ಜೂನ್ 2021 ರ ಸಮೀಕ್ಷೆಯಲ್ಲಿ ಶೇ. 60ಕ್ಕಿಂತ ಹೆಚ್ಚಿನ ಸೆರೋಪೊಸಿಟಿವಿಟಿಯನ್ನು ಆಧರಿಸಿ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಆದರೆ, ಕೊರೊನಾ ಸೋಂಕು ತಗುಲುವ ಹೆಚ್ಚಿನ ಅಪಾಯ ಇರುವ ವ್ಯಕ್ತಿಗಳು ಅಥವಾ ಇತರೆ ರೋಗಗಳಿರುವ ರೋಗಿಗಳಿಗೆ ಬೂಸ್ಟರ್ ಅಗತ್ಯ ಉಂಟಾಗಬಹುದು. ಏಕೆಂದರೆ ನಮಗೆ ಜನರ ನಿಖರವಾದ ಸೋಂಕಿನ ಸ್ಥಿತಿ ಹೇಗಿದೆ ಎಂಬುದು ತಿಳಿದಿಲ್ಲ ಎಂದು ಅಗರ್ವಾಲ್ ಹೇಳಿದ್ದಾರೆ.
ಬೂಸ್ಟರ್ ಡೋಸ್‌ಗಳು ಹೆಚ್ಚಾಗಿ ಆರೋಗ್ಯ ಕಾರ್ಯಕರ್ತರು ಮುಂತಾದ ಕೊರೊನಾ ರೋಗಿಗಳ ಜೊತೆ ಒಡನಾಟ ಹೊಂದಬೇಕಾದ ಅನಿವಾರ್ಯತೆ ಇರುವ ಜನರಿಗೆ ಅಥವಾ ವಯಸ್ಸಾದವರಿಗೆ ಹೆಚ್ಚು ಅಗತ್ಯವಿದೆ. ಹಾಗೇ, ಕೊರೊನಾ ಮೂರನೇ ಅಲೆಯ ಭೀತಿಯೂ ಇರುವುದರಿಂದ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆಯಿದೆ ಎಂದು ಡಾ. ಅಗರ್ವಾಲ್ ತಿಳಿಸಿದ್ದಾರೆ.
ಭಾರತಕ್ಕೆ ಶೀಘ್ರದಲ್ಲೇ ಕೊವಿಡ್ 3ನೇ ಅಲೆ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಯಾವ ರೀತಿಯಲ್ಲಿ ಅಪಾಯ ಎದುರಾಗುತ್ತದೆ ಎಂದು ಊಹಿಸುವುದು ಕಷ್ಟ. ಹೀಗಾಗಿ, ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಅಗತ್ಯ. ಹೀಗಾಗಿ, ಆಯಾ ರಾಜ್ಯ ಸರ್ಕಾರಗಳು, ಸ್ಥಳೀಯ ಅಧಿಕಾರಿಗಳು ಹಾಗೂ ಸ್ಥಳೀಯರು ಪ್ರವಾಸಿಗರ ಬಗ್ಗೆ ನಿಗಾ ಇಡಬೇಕು. ಹಬ್ಬಗಳಿಂದಾಗಿ ತುಸು ಬೇಗವೇ ಕೊರೊನಾ ಮೂರನೇ ಅಲೆ ಭಾರತವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಈಗಾಗಲೇ ಅಧ್ಯಯನ ಹೇಳಿದೆ. ಸಾಲು ಸಾಲು ರಜೆಗಳಿರುವುದರಿಂದ ಕೊರೊನಾ ಕೇಸುಗಳು ಹೆಚ್ಚಾಗುವ ಸಾಧ್ಯತೆ ಶೇ. 103ರಷ್ಟಿದೆ. ಇನ್ನು 4 ವಾರ ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಹೀಗಾಗಿ, ರಜೆಗೆ ಪ್ರವಾಸಕ್ಕೆ ತೆರಳುವವರು ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಅಧ್ಯಯನ ತಿಳಿಸಿದೆ.
ಮುಂದಿನ ವರ್ಷ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಹೊಸ ರೀತಿಯ ಲಸಿಕೆಗಳ ಅಗತ್ಯ ಉಂಟಾಗಬಹುದು ಎಂದು ಕೂಡ ಅಧ್ಯಯನ ಹೇಳಿದೆ. ಭಾರತದಲ್ಲಿ ಹೊಸ ಮಾದರಿಯ ಕೊರೊನಾ ರೂಪಾಂತರಿಗಳು ಸೃಷ್ಟಿಯಾಗುತ್ತಿವೆ. ಹೊಸ ರೂಪಾಂತರಿ ವೈರಸ್ಗಳ ವಿರುದ್ಧ ಹೋರಾಡಲು ಬೂಸ್ಟರ್ ಲಸಿಕೆಗಳ ಅಗತ್ಯ ಉಂಟಾಗಬಹುದು. 2022ರ ಮಧ್ಯಂತರದ ಬಳಿಕ ಹೊಸ ಮಾದರಿಯ ಲಸಿಕೆಯ ಅಗತ್ಯ ಉಂಟಾಗಬಹುದು ಎಂದು ಕೂಡ ಅಧ್ಯಯನಕಾರರು ತಿಳಿಸಿದ್ದಾರೆ.
ಇದನ್ನೂ ಓದಿ: Covid 3rd Wave: ಹಬ್ಬಗಳಿಂದ 2 ವಾರ ಮೊದಲೇ ಭಾರತಕ್ಕೆ ಅಪ್ಪಳಿಸುತ್ತಾ ಕೊವಿಡ್ 3ನೇ ಅಲೆ?