ದೆಹಲಿ: ಈ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ಕೊವಿಡ್-19 ವಿರುದ್ಧ ಪೂರ್ಣಪ್ರಮಾಣದ ಲಸಿಕೆ ನೀಡಿಕೆ ಪ್ರಕ್ರಿಯೆ ಅಂತ್ಯಗೊಂಡಿರುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇಂದು (ಮೇ 28) ತಿಳಿಸಿದ್ದಾರೆ. ದೇಶದ 130 ಕೋಟಿ ಜನರಲ್ಲಿ ಕೇವಲ ಶೇ. 3ರಷ್ಟು ಮಂದಿಗೆ ಮಾತ್ರ ಕೊರೊನಾ ವಿರುದ್ಧದ ಎರಡು ಡೋಸ್ ಲಸಿಕೆ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಜಾವಡೇಕರ್ ಹೀಗೆ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಲಸಿಕೆ ನೀಡಿಕೆಯ ಬಗೆಗಿನ ನೀಲಿನಕ್ಷೆಯತ್ತ ರಾಹುಲ್ ಗಾಂಧಿ ಗಮನಸೆಳೆದ ಜಾವಡೇಕರ್, ಡಿಸೆಂಬರ್ ಒಳಗೆ 108 ಕೋಟಿ ಜನರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಹೇಳಿದ್ದಾರೆ. ಜೊತೆಗೆ, ದೇಶದ ಜನರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ವಿಶ್ವದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ವೇಗವಾಗಿ ಲಸಿಕೆ ನೀಡುತ್ತಿರುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಈವರೆಗೆ ಒಟ್ಟು 20 ಕೋಟಿ ಲಸಿಕೆ ಡೋಸ್ಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಭಾರತದ ಲಸಿಕಾ ಅಭಿಯಾನ 2021ರ ಒಳಗೆ ಪೂರ್ಣವಾಗಲಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ನೀಲಿನಕ್ಷೆಯ ಪ್ರಕಾರ 108 ಕೋಟಿ ಜನರು 216 ಕೋಟಿ ಲಸಿಕೆ ಡೋಸ್ಗಳ ಮೂಲಕ ಡಿಸೆಂಬರ್ ಒಳಗೆ ಲಸಿಕೆ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ. ನೀವು ಲಸಿಕೆ ನೀಡಿಕೆಯ ಬಗ್ಗೆ ಚಿಂತಿಸುತ್ತೀರಾದರೆ, ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಬಗ್ಗೆ ಗಮನಹರಿಸಿ. ಅಲ್ಲಿ 18-44 ವರ್ಷ ವಯಸ್ಸಿನ ಲಸಿಕೆ ಪಡೆಯಬಹುದಾದ ಜನರೂ ಲಸಿಕೆ ಪಡೆಯುತ್ತಿಲ್ಲ ಎಂದು ಜಾವಡೇಕರ್ ತಿರುಗೇಟು ನೀಡಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ದರು. ಕೊರೊನಾ ನಿಯಂತ್ರಣ, ಲಸಿಕೆ ಅಭಿಯಾನದ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೊರೊನಾದ ಮೊದಲನೇ ಅಲೆ ಯಾರಿಗೂ ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ, ಎರಡನೇ ಅಲೆಯು ಪ್ರಧಾನ ಮಂತ್ರಿಯವರ ಜವಾಬ್ದಾರಿಯ ಕೊರತೆ, ಸಮಸ್ಯೆಯಿಂದ ಉಂಟಾಗಿದೆ ಎಂದು ವರ್ಚುವಲ್ ವಿಧಾನದ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪ್ರಧಾನಿ ಮೋದಿ ಒಬ್ಬ ಈವೆಂಟ್ ಮ್ಯಾನೇಜರ್ ಆಗಿದ್ದಾರೆ. ಅವರಿಗೆ ಒಮ್ಮೆಗೆ ಒಂದು ಸಂಗತಿಗಿಂತ ಹೆಚ್ಚಿನದನ್ನು ನಿಭಾಯಿಸಲು ಸಾಧ್ಯವಿಲ್ಲ. ಏನಾದರೂ ಆದರೆ ಒಮ್ಮೆಗೆ ಒಂದು ವಿಚಾರದ ಬಗ್ಗೆ ಮಾತ್ರ ಗಮನಹರಿಸುತ್ತಾರೆ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದೂ ಟೀಕಿಸಿದ್ದರು.
ಇದನ್ನೂ ಓದಿ: ಕೇಂದ್ರ ಸರ್ಕಾರ ಕೊರೊನಾ ಬಗ್ಗೆ ಅರ್ಥಮಾಡಿಕೊಂಡಿಲ್ಲ; ಲಸಿಕಾ ಅಭಿಯಾನ ಸಮರ್ಪಕವಾಗಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ
Published On - 4:27 pm, Fri, 28 May 21