ಕೇಂದ್ರ ಸರ್ಕಾರ ಕೊರೊನಾ ಬಗ್ಗೆ ಅರ್ಥಮಾಡಿಕೊಂಡಿಲ್ಲ; ಲಸಿಕಾ ಅಭಿಯಾನ ಸಮರ್ಪಕವಾಗಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ
ಕೊವಿಡ್-19 ಹಾಗೂ ಲಾಕ್ಡೌನ್ಗೆ ಲಸಿಕೆಯೊಂದೇ ಸೂಕ್ತ ಪರಿಹಾರವಾಗಿದೆ. ಸಾಮಾಜಿಕ ಅಂತರ ಅಥವಾ ಮಾಸ್ಕ್ ಕೂಡ ತಾತ್ಕಾಲಿಕವಾಗಿದೆ. ಲಸಿಕೆ ನೀಡಿಕೆಯಲ್ಲಿ ಸರಿಯಾದ ಕ್ರಮ ಕೈಗೊಳ್ಳದೆ ಹೋದರೆ ಕೊರೊನಾದ ವಿವಿಧ ಅಲೆಗಳನ್ನು ನಾವು ಎದುರಿಸಬೇಕಾಗಬಹುದು ಎಂದು ರಾಹುಲ್ ಮುನ್ಸೂಚನೆ ಕೊಟ್ಟಿದ್ದಾರೆ.
ದೆಹಲಿ: ಕೊವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ಇಂದು (ಮೇ 28) ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಅಥವಾ ಆಡಳಿತವು ಕೊರೊನಾವನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಈಗಿನ ಗತಿಯಲ್ಲಿ ಲಸಿಕಾ ಅಭಿಯಾನ ಮುಂದುವರಿದರೆ ಕೊರೊನಾ ಸೋಂಕಿನ ಹಲವು ಅಲೆಗಳನ್ನು ನಾವು ಎದುರಿಸಬೇಕಾಗಬಹುದು ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
ಕೊರೊನಾದ ಮೊದಲನೇ ಅಲೆ ಯಾರಿಗೂ ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ, ಎರಡನೇ ಅಲೆಯು ಪ್ರಧಾನ ಮಂತ್ರಿಯವರ ಜವಾಬ್ದಾರಿಯ ಕೊರತೆ, ಸಮಸ್ಯೆಯಿಂದ ಉಂಟಾಗಿದೆ ಎಂದು ವರ್ಚುವಲ್ ವಿಧಾನದ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಒಬ್ಬ ಈವೆಂಟ್ ಮ್ಯಾನೇಜರ್ ಆಗಿದ್ದಾರೆ. ಅವರಿಗೆ ಒಮ್ಮೆಗೆ ಒಂದು ಸಂಗತಿಗಿಂತ ಹೆಚ್ಚಿನದನ್ನು ನಿಭಾಯಿಸಲು ಸಾಧ್ಯವಿಲ್ಲ. ಏನಾದರೂ ಆದರೆ ಒಮ್ಮೆಗೆ ಒಂದು ವಿಚಾರದ ಬಗ್ಗೆ ಮಾತ್ರ ಗಮನಹರಿಸುತ್ತಾರೆ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದೂ ಟೀಕಿಸಿದ್ದಾರೆ.
ಪ್ರಧಾನ ಮಂತ್ರಿ ದೇಶದ ಯಜಮಾನ ಇದ್ದಂತೆ. ಅವರು ಈ ಸಾಂಕ್ರಾಮಿಕ ಸೋಂಕಿನ ಎರಡನೇ ಅಲೆಗೂ ಕಾರಣರು. ಆದರೆ, ಮೋದಿ ಒಂದು ಬಬಲ್ ಒಳಗೆ ಬದುಕುತ್ತಿದ್ದಾರೆ. ಅವರು ಕೊರೊನಾ ನಿಯಂತ್ರಿಸುವ ವಿಧಾನದಿಂದ ಯಾರೂ ಕೂಡ ಅವರೊಡನೆ ಸಂವಾದ ನಡೆಸುತ್ತಿಲ್ಲ. ಅದರ ಪರಿಣಾಮವಾಗಿ ಹಡಗು ಎತ್ತ ಸಾಗುತ್ತಿದೆ ಎಂಬ ಸುಳಿವು ಇಲ್ಲದೆ ಮುಂದುವರಿದಂತಾಗಿದೆ ಎಂದು ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕವಾಗಿ ತಮ್ಮ ವ್ಯಕ್ತಿತ್ವವನ್ನು ಸರಿಹೊಂದಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ, ಅವರ ಇಮೇಜ್ ಕಳೆದುಹೋಗಿದೆ. ಇದು ಎದ್ದು ನಿಂತು ದೇಶವನ್ನು ಮುನ್ನಡೆಸಬೇಕಾದ ಸಮಯ. ಈಗ ತಮ್ಮ ನಾಯಕತ್ವ, ಧೈರ್ಯ ಮತ್ತು ಸಾಮರ್ಥ್ಯ ತೋರಿಸಲು ಇರುವ ಸಮಯವಾಗಿದೆ. ಎಂಥಾ ಒಳ್ಳೆಯ ನಾಯಕ ಎಂದು ಸಾಧಿಸಿ ಎಂದು ರಾಹುಲ್ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಕೊವಿಡ್-19 ಹಾಗೂ ಲಾಕ್ಡೌನ್ಗೆ ಲಸಿಕೆಯೊಂದೇ ಸೂಕ್ತ ಪರಿಹಾರವಾಗಿದೆ. ಸಾಮಾಜಿಕ ಅಂತರ ಅಥವಾ ಮಾಸ್ಕ್ ಕೂಡ ತಾತ್ಕಾಲಿಕವಾಗಿದೆ. ಲಸಿಕೆ ನೀಡಿಕೆಯಲ್ಲಿ ಸರಿಯಾದ ಕ್ರಮ ಕೈಗೊಳ್ಳದೆ ಹೋದರೆ ಕೊರೊನಾದ ವಿವಿಧ ಅಲೆಗಳನ್ನು ನಾವು ಎದುರಿಸಬೇಕಾಗಬಹುದು ಎಂದು ರಾಹುಲ್ ಮುನ್ಸೂಚನೆ ಕೊಟ್ಟಿದ್ದಾರೆ.
ದೇಶದಲ್ಲಿ ಕೇವಲ ಶೇ.3ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಕೊವಿಡ್ ಲಸಿಕಾ ಕೇಂದ್ರಗಳ ಬಾಗಿಲನ್ನೇ ತೆರೆಯುತ್ತಿಲ್ಲ. ಕೊವಿಡ್ ಲಸಿಕೆ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇನೆ. ಕೇಂದ್ರ ಸರ್ಕಾರ ಕೊರೊನಾ ಬಗ್ಗೆ ಅರ್ಥಮಾಡಿಕೊಂಡಿಲ್ಲ. ವಿಪಕ್ಷಗಳು ಸರ್ಕಾರದ ಶತ್ರುಗಳಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕೊರೊನಾ ವಿರುದ್ಧ ಗೆಲುವು ಸಾಧಿಸಿದೆವು ಎಂದು ಬೇಗನೇ ಹೇಳಿ, ಜಾಗತಿಕವಾಗಿ ದೊಡ್ಡವರಾಗುವುದಕ್ಕೆ ಲಸಿಕೆಯ ರಫ್ತು ಮಾಡಿರುವುದನ್ನು ಅವರು ಖಂಡಿಸಿದ್ದಾರೆ. ಸರ್ಕಾರ ಸತ್ಯಸಂದವಾಗಿರಬೇಕು. ಇದು ದೇಶದ ಭವಿಷ್ಯದ, ಜನರ ಜೀವದ ಪ್ರಶ್ನೆಯಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾದಿಂದ ಪಾಲಕರು ಮೃತಪಟ್ಟು ಅನಾಥರಾದ ಮಕ್ಕಳ ಹೊಣೆಯನ್ನು ಜಿಲ್ಲಾಡಳಿತಗಳಿಗೆ ವಹಿಸಿದ ಸುಪ್ರೀಂಕೋರ್ಟ್
ಇದು ಸಾವುಗಳೋ ಅಥವಾ ಕೊಲೆಯೋ; ರಾಜ್ಯ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನೆ
Published On - 3:37 pm, Fri, 28 May 21