ದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆ ನೀಡಲು ಬಳಸುತ್ತಿರುವ ಕೊವಿನ್ ಪೋರ್ಟಲ್ ವಿಶ್ವಭ್ರಾತೃತ್ವದ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ‘ಕೊವಿನ್’ ಸಮಾವೇಶದಲ್ಲಿ ಹೇಳಿದರು. ಕೊರೊನಾ ಪಿಡುಗು ಆರಂಭವಾದ ದಿನಗಳಿಂದಲೂ ಭಾರತವು ತನ್ನ ಎಲ್ಲ ಅನುಭವ, ಜ್ಞಾನ ಮತ್ತು ಸಂಪನ್ಮೂಲಗಳನ್ನು ಜಗತ್ತಿನೊಂದಿಗೆ ಹಂಚಿಕೊಂಡಿತು ಎಂದು ಹೇಳಿದರು.
ಸ್ವತಃ ನಾವು ಸಂಕಷ್ಟ ಅನುಭವಿಸುತ್ತಿದ್ದೆವು. ಆದರೆ ಹಲವು ಅಡೆತಡೆಗಳನ್ನು ಮೀರಿಯೂ ಜಗತ್ತಿಗೆ ನಮ್ಮ ಕೈಲಾದಷ್ಟೂ ಸೇವೆ ಮಾಡಿದ್ದೇವೆ. ಕೊವಿಡ್ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನವನ್ನು ಭಾರತ ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿತು ಎಂದು ಮೋದಿ ನುಡಿದರು.
ಕೊವಿಡ್ ನಿರ್ವಹಣೆಗಾಗಿ ಸಾಫ್ಟ್ವೇರ್ ರೂಪಿಸುವ ಮತ್ತು ಬಳಸುವ ವಿಚಾರದಲ್ಲಿ ಸಂಪನ್ಮೂಲಗಳ ಕೊರತೆ ನಮಗೆ ಎದುರಾಗಲಿಲ್ಲ. ಇದಕ್ಕಾಗಿಯೇ ನಾವು ನಮ್ಮ ಕೊವಿಡ್ ಆ್ಯಪ್ ಅನ್ನು ಓಪನ್ ಸೋರ್ಸ್ ರೂಪದಲ್ಲಿ ಇರಿಸಿದೆವು. ತಾಂತ್ರಿಕವಾಗಿ ಈ ಕೆಲಸಕ್ಕೆ ತೊಡಕುಗಳು ಎದುರಾಗಲಿಲ್ಲ. ಕೊವಿಡ್ ಪಿಡುಗಿನಿಂದ ಮಾನವ ಜಗತ್ತು ಮುಕ್ತಿ ಪಡೆಯಲು ಮಾನವ ಜಗತ್ತಿಗೆ ಲಸಿಕೆ ಒಂದು ಭರವಸೆಯಾಗಿ ಸಿಕ್ಕಿದೆ ಎಂದು ಹೇಳಿದರು.
ಭಾರತೀಯ ನಾಗರಿಕತೆಯು ವಿಶ್ವವನ್ನು ಒಂದು ಕುಟುಂಬವಾಗಿ ಪರಿಭಾವಿಸುತ್ತದೆ. ಈ ಆಶಯದ ಮೂಲತತ್ವವನ್ನು ಜಗತ್ತು ಈ ಮಹಾಪಿಡುಗಿನ ಸಂದರ್ಭದಲ್ಲಿ ಅರ್ಥ ಮಾಡಿಕೊಂಡಿತು. ಇದೇ ಕಾರಣಕ್ಕೆ ನಮ್ಮ ಕೊವಿಡ್ ಲಸಿಕಾಕರಣ ತಂತ್ರಜ್ಞಾನದ ವೇದಿಕೆಯನ್ನು ನಾವು ಕೊವಿನ್ ಎಂದು ಕರೆದಿದ್ದೇವೆ. ಇದನ್ನು ಓಪನ್ ಸೋರ್ಸ್ ಆಗಿಯೇ ಸಿದ್ಧಪಡಿಸಿ, ಬಳಸಲು ಆರಂಭಿಸಿದೆವು. ಕೊವಿಡ್ ಲಸಿಕೆ ನೀಡಲು ನಾವು ಬಳಸಿದ ಕೊವಿನ್ ತಂತ್ರಜ್ಞಾನವು ಶೀಘ್ರದಲ್ಲಿಯೇ ಇತರ ದೇಶಗಳಲ್ಲಿಯೂ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಈ ಓಪನ್ ಸೋರ್ಸ್ ಸಾಫ್ಟ್ವೇರ್ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ತಂತ್ರಜ್ಞಾನ ಬಳಸಿಕೊಂಡಿದೆ. ದೇಶದಲ್ಲಿ ಈವರೆಗೆ 35 ಕೋಟಿ ಜನರಿಗೆ ಕೊವಿಡ್ ಲಸಿಕೆ ನೀಡಲು ಈ ಸಾಫ್ಟ್ವೇರ್ ನೆರವಾಗಿದೆ. ಕೆಲ ದಿನಗಳ ಹಿಂದೆ ನಾವು ಒಂದೇ ದಿನ 90 ಲಕ್ಷ ಜನರಿಗೆ ಲಸಿಕೆ ನೀಡಿದ್ದೆವು. ಯಾವುದೇ ದೇಶ ಅಥವಾ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಕೊವಿನ್ ಸಾಫ್ಟ್ವೇರ್ ಮಾರ್ಪಡಿಸಿಕೊಳ್ಳಲು ಅವಕಾಶವಿದೆ ಎಂದು ಮೋದಿ ಹೇಳಿದರು.
Addressing #CoWINGlobalConclave. https://t.co/cC5cguCyWz
— Narendra Modi (@narendramodi) July 5, 2021
(Cowin Software is Symbol of World Brotherhood says PM Narendra Modi)
ಇದನ್ನೂ ಓದಿ: Digital India: ಆರೋಗ್ಯ ಸೇತು, ಕೊವಿನ್ ಆ್ಯಪ್ಗಳು ಡಿಜಿಟಲ್ ಇಂಡಿಯಾದ ಹೆಗ್ಗಳಿಕೆ..ಜಗತ್ತಿನ ಗಮನ ಸೆಳೆದಿವೆ: ಪ್ರಧಾನಿ ಮೋದಿ
ಇದನ್ನೂ ಓದಿ: CoWIN Portal: ವಿದೇಶಗಳ ಗಮನ ಸೆಳೆದ ಕೊವಿನ್ ಪೋರ್ಟಲ್; ವ್ಯವಸ್ಥೆ ಅಳವಡಿಸಿಕೊಳ್ಳಲು ಆಸಕ್ತಿ ತೋರುತ್ತಿವೆ ಹಲವು ರಾಷ್ಟ್ರಗಳು
Published On - 5:40 pm, Mon, 5 July 21