Cyber Crime: ಸೈಬರ್ ವಂಚನೆ: ಆನ್ಲೈನ್ನಲ್ಲಿ 82 ಲಕ್ಷ ರೂ. ಕಳೆದುಕೊಂಡ ಟೆಕ್ಕಿ, ಉಗ್ರ ಸಂಘಟನೆಗೂ ಇದೆ ಲಿಂಕ್
ಹೈದರಾಬಾದ್ ಪೊಲೀಸರು ಚೀನಾದ ವ್ಯಕ್ತಿಗಳ ಕೈವಾಡವಿರುವ ಬೃಹತ್ ಸೈಬರ್ ವಂಚನೆ ಜಾಲವನ್ನು ಪತ್ತೆ ಮಾಡಿದ್ದಾರೆ.
ಹೈದರಾಬಾದ್, ಜುಲೈ 25: ಹೈದರಾಬಾದ್ ಪೊಲೀಸರು ಚೀನಾದ ವ್ಯಕ್ತಿಗಳ ಕೈವಾಡವಿರುವ ಬೃಹತ್ ಸೈಬರ್ ವಂಚನೆ ಜಾಲವನ್ನು ಪತ್ತೆ ಮಾಡಿದ್ದಾರೆ. ಇವರು ಇದರಲ್ಲಿ ಕನಿಷ್ಠ 15,000 ಭಾರತೀಯರು ಒಂದು ವರ್ಷದೊಳಗೆ 700 ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೈದರಾಬಾದ್ನ ಸಾಫ್ಟ್ವೇರ್ ಇಂಜಿನಿಯರ್ ಶಿವ ಎಂಬುವವರು ಆನ್ಲೈನ್ನಲ್ಲಿ 82 ಲಕ್ಷ ರೂ ಕಳೆದುಕೊಂಡಿದ್ದು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೈದರಾಬಾದ್ ಸೈಬರ್ ಕ್ರೈಂ ವಿಭಾಗದ ಪೊಲೀಸರು ತನಿಖೆ ಕೈಗೊಂಡಿದ್ದಾರೆ, ಚೀನಾ ಬೆಂಬಲಿತ ತಂಡವೊಂದು 700 ಕೋಟಿ ರೂ ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ಇಲ್ಲಿಯವರೆಗೆ 9 ಮಂದಿಯನ್ನು ಬಂಧಿಸಲಾಗಿದೆ.
ಚೀನಾದಲ್ಲಿ ಕಾರ್ಯಾಚರಿಸುತ್ತಿರುವ ಕೆವಿನ್ ಜುನ್, ಲು ಲಾಂಗ್ಶೋ ಮತ್ತು ಶಾಶಾ ಎಂಬ ಮೂವರನ್ನು ಒಳಗೊಂಡ ಈ ಗ್ಯಾಂಗ್ ಭಾರತದಲ್ಲಿ ಕೆಲವರ ಸಹಕಾರದೊಂದಿಗೆ ಕೆಲಸ ಮಾಡುತ್ತಿದೆ. ಇದಕ್ಕೂ ಹಾಗೂ ಭಯೋತ್ಪಾದಕ ಸಂಘಟನೆಯೊಂದಕ್ಕೆ ಸಂಬಂಧವಿದೆ ಎನ್ನಲಾಗಿದೆ.
ಮತ್ತಷ್ಟು ಓದಿ: ರಾಜ್ಯದಲ್ಲಿ ದಾಖಲಾದ ಪ್ರಕರಣಗಳಲ್ಲಿ ಸೈಬರ್ ಕ್ರೈಂ ಶೇ.20ರಷ್ಟಿದೆ: ಎಂ ಎ ಸಲೀಂ
ಈ ವಂಚನೆಯ ಮಾಸ್ಟರ್ಮೈಂಡ್ ಅಹಮದಾಬಾದ್ನ ಪ್ರಕಾಶ ಪ್ರಜಾಪತಿ ಹಾಗೂ ಕುಮಾರ್ ಪ್ರಜಾಪತಿ ಎಂದು ಗುರುತಿಸಲಾಗಿದ್ದು ಅವರನ್ನು ಬಂಧಿಸಲಾಗಿದೆ.
ವಿವಿಧ ಬೋಗಸ್ ಕಂಪನಿ ಹೆಸರಿನಲ್ಲಿ 48 ಬ್ಯಾಂಕ್ ಖಾತೆಗಳಿಗೆ 584 ಕೋಟಿ ರೂ. ಜಮಾ ಆಗಿದೆ. ಹೆಚ್ಚಿನ ತನಿಖೆಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಇನ್ನೂ 128 ಕೋಟಿ ರೂ.ಗಳನ್ನು ಅಕ್ರಮವಾಗಿ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಯೂಟ್ಯೂಬ್ ಹಾಗೂ ಫೇಸ್ಬುಕ್ ಮೂಲಕ ಈ ತಂಡ ಅಮಾಯಕರನ್ನು ಟಾರ್ಗೆಟ್ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಹಣವನ್ನು ದುಬೈ ಮೂಲಕ ಚೀನಾಕ್ಕೆ ರವಾನಿಸಲಾಗಿದೆ ಮತ್ತು ಅದರಲ್ಲಿ ಕೆಲವನ್ನು ಲೆಬನಾನ್ ಮೂಲದ ಭಯೋತ್ಪಾದಕ ಗುಂಪು ಹೆಜ್ಬುಲ್ಲಾ ನಿರ್ವಹಿಸುತ್ತಿರುವ ಖಾತೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಈ ಬಗ್ಗೆ ಕೇಂದ್ರ ಏಜೆನ್ಸಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಮತ್ತು ಕೇಂದ್ರ ಗೃಹ ಸಚಿವಾಲಯದ ಸೈಬರ್ ಕ್ರೈಂ ಘಟಕಕ್ಕೆ ವಿವರಗಳನ್ನು ನೀಡಲಾಗಿದೆ.
ಹಣದ ಒಂದು ಭಾಗವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಲಾಗಿದೆ ಮತ್ತು ಹಿಜ್ಬುಲ್ಲಾ ನಿರ್ವಹಿಸುವ ವ್ಯಾಲೆಟ್‌ಗೆ ಠೇವಣಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಹೂಡಿಕೆ ಮತ್ತು ಅರೆಕಾಲಿಕ ಉದ್ಯೋಗಗಳ ಹೆಸರಿನಲ್ಲಿ ಜನರನ್ನು ಆಮಿಷವೊಡ್ಡಿರುವುದು ಕಂಡುಬಂದಿದೆ. 5-6 ಲಕ್ಷ ಹಣವನ್ನು ಕಳೆದುಕೊಂಡವರನ್ನು ವಾಟ್ಸಾಪ್ ಹಾಗೂ ಟೆಲಿಗ್ರಾಮ್ನಲ್ಲಿ ಸಂಪರ್ಕಿಸಿ ಅವರಿಗೆ 5 ಸಾವಿರ ಮೊತ್ತದ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಕೇಳಿದ್ದಾರೆ, ಮೊದಲ ಕಾರ್ಯ ಪೂರ್ಣಗೊಂಡ ಬಳಿಕ ದುಪ್ಪಟ್ಟು ಹಣ ನೀಡಿ, ನಂತರ ಹೆಚ್ಚಿನ ಮೊತ್ತವನ್ನು ಹಾಕಿಸಿಕೊಂಡು ಯಾಮಾರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ