ಫೆಂಗಲ್ ಚಂಡಮಾರುತವು ಕೇವಲ ತಮಿಳುನಾಡಷ್ಟೇ ಅಲ್ಲ ಕರ್ನಾಟಕ, ಆಂಧ್ರಪ್ರದೇಶದ ಜನರಲ್ಲೂ ಆತಂಕ ಸೃಷ್ಟಿಸಿದೆ. ಮೊದಲು ಚಂಡಮಾರುತವು ಪುದುಚೇರಿ ಕರಾವಳಿಗೆ ಅಪ್ಪಳಿಸಿದೆ. ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ, ಕೇರಳ ಮತ್ತು ಕರ್ನಾಟಕದ ಒಳನಾಡಿನ ಹಲವಾರು ಭಾಗಗಳಲ್ಲಿ ಭಾರೀ ಮತ್ತು ಅತಿ ಹೆಚ್ಚು ಮಳೆಯಾಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪುದುಚೇರಿಯು ಕಳೆದ 30 ವರ್ಷಗಳಲ್ಲಿ ಕಾಣದ ದಾಖಲೆಯ ಮಳೆಯನ್ನು ಕಾಣುವುದಷ್ಟೇ ಅಲ್ಲದೆ ಪ್ರವಾಹದಂಥಾ ಸ್ಥಿತಿ ನಿರ್ಮಾಣವಾಗಿದೆ.
ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿದೆ, ರಾಣಿಪೇಟ್, ತಿರುವಣ್ಣಾಮಲೈ, ವೆಲ್ಲೂರು, ಪೆರಂಬಲೂರು, ಅರಿಯಲೂರು, ತಂಜಾವೂರು, ತಿರುವರೂರು, ಮೈಲಾಡುತುರೈ, ನಾಗಪಟ್ಟಣಂ ಜಿಲ್ಲೆಗಳು ಮತ್ತು ಕಾರೈಕಲ್ ಪ್ರದೇಶದಲ್ಲಿ ಭಾರೀ ಮಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮತ್ತಷ್ಟು ಓದಿ: ಬೆಂಗಳೂರನ್ನೂ ನಡುಗಿಸುತ್ತಿದೆ ಫೆಂಗಲ್, ಎಡೆಬಿಡದೇ ಸುರಿಯುತ್ತಿದೆ ಮಳೆ: ಕರ್ನಾಟಕದಾದ್ಯಂತ ಚಂಡಮಾರುತ ಪ್ರಭಾವ
ಡಿಸೆಂಬರ್ 2 ಮತ್ತು 3 ರಂದು ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.4,153 ದೋಣಿಗಳು ದಡಕ್ಕೆ ಮರಳಿವೆ ಮತ್ತು ಅಗತ್ಯವಿದ್ದರೆ 2,229 ಪರಿಹಾರ ಶಿಬಿರಗಳು ಬಳಕೆಗೆ ಸಿದ್ಧವಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಚಂಡಮಾರುತದಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುದುಚೇರಿಯಲ್ಲೂ ತಗ್ಗುಪ್ರದೇಶದಲ್ಲಿ ವಾಸವಾಗಿದ್ದ ಜನರನ್ನು ಜಿಲ್ಲಾಡಳಿತ ಸ್ಥಳಾಂತರಿಸಿದ್ದು, ಜನರಿಗೆ ಎಸ್ ಎಂಎಸ್ ಮೂಲಕ ಸೂಚನೆ ನೀಡಲಾಗಿತ್ತು ಎಂದು ವರದಿ ವಿವರಿಸಿದೆ.
ಚೆನ್ನೈನ ಪ್ರಸಿದ್ಧ ಮರೀನಾ ಬೀಚ್ ಹಾಗೂ ಮಹಾಬಲಿಪುರಂ ಬೀಚ್ ನಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಜನರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಚೆನ್ನೈಯಿಂದ ತಿರುಪತಿಗೆ ತೆರಳಬೇಕಿದ್ದ 20 ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿತ್ತು.
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಹಗುರದಿಂದ ಸಾಧಾರಣ ಮಳೆ ಮತ್ತು ಕೆಲವೊಮ್ಮೆ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಕೆಲವು ಸ್ಥಳಗಳಲ್ಲಿ ಬೆಳಗಿನ ಜಾವ ಮಂಜು ಬೀಳಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 23 ಮತ್ತು 19 ಡಿಗ್ರಿ ದಾಖಲಾಗುವ ಸಂಭವವಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಪುದುಚೇರಿಯು ಕಳೆದ 30 ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 46 ಸೆಂ.ಮೀ ಮಳೆಯನ್ನು ದಾಖಲಿಸಿದೆ.
ಅಕ್ಟೋಬರ್ 31, 2004 ರಂದು ಕೇಂದ್ರಾಡಳಿತ ಪ್ರದೇಶದಲ್ಲಿ 21 ಸೆಂ.ಮೀ ಮಳೆ ಸುರಿದಿತ್ತು. ಕಡಲೂರು ಸೇರಿದಂತೆ ಇತರೆಡೆ 23 ಸೆಂ.ಮೀ ಮಳೆಯಾಗಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ 14 ಸೆಂ.ಮೀ, ಯೆರ್ಕಾಡ್‌ನಲ್ಲಿ 14 ಸೆಂ, ಚೆನ್ನೈ (ಮೀನಂಬಾಕ್ಕಂ) 11 ಸೆಂ.ಮೀ., ಚೆನ್ನೈ (ನುಂಗಂಬಾಕ್ಕಂ), ವೆಲ್ಲೂರ್‌ನಲ್ಲಿ 11 ಸೆಂ.ಮೀ, ತಿರುಪತ್ತೂರಿನಲ್ಲಿ 8 ಸೆಂ.ಮೀ ಮಳೆ ದಾಖಲಾಗಿದೆ. ಮತ್ತು ಧರ್ಮಪುರಿ ಮತ್ತು ಸೇಲಂನಲ್ಲಿ ಕ್ರಮವಾಗಿ ತಲಾ 5 ಸೆಂ.ಮೀ. ಮಳೆಯಾಗಿದೆ.
ಕಳೆದ ಎರಡು ಗಂಟೆಗಳಲ್ಲಿ ಪುದುಚೇರಿಯ ಪ್ರವಾಹ ಪ್ರದೇಶಗಳಲ್ಲಿ ಭಾರತೀಯ ಸೇನೆ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ.
ಪುದುಚೇರಿಯ ಕೃಷ್ಣನಗರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಐದು ಅಡಿಗಳಷ್ಟು ನೀರಿನ ಮಟ್ಟ ತಲುಪಿದೆ.ಸುಮಾರು 500 ಮನೆಗಳಲ್ಲಿ ಸಿಲುಕಿರುವ ನಾಗರಿಕರನ್ನು ಸೇನೆ ರಕ್ಷಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ