ಪಶ್ಚಿಮ ಬಂಗಾಳದ (West Bengal)ಉತ್ತರ 24 ಪರಗಣ ಜಿಲ್ಲೆಯ ಪಾನಿಹಾಟಿ (Panihati) ಪ್ರದೇಶದಲ್ಲಿ ದಂಡ ಮಹೋತ್ಸವದ (Danda Mahotsav) ಸಂದರ್ಭದಲ್ಲಿ ನಡೆದ ಜಾತ್ರೆಯಲ್ಲಿ ಭಾನುವಾರ ಮಧ್ಯಾಹ್ನ ಉರಿ ಬಿಸಿಲು ಮತ್ತು ಬಳಲಿಕೆಯಿಂದ 60 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 125 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಸ್ಥಳದಲ್ಲಿ ಹಲವಾರು ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಲಾಯಿತು. ಬೇರೆ ಜಿಲ್ಲೆಗಳಿಂದಲೂ ಭಕ್ತರು ಬಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 15 ನೇ ಶತಮಾನದ ಭಾರತೀಯ ಸಂತ ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಗೌರವ ಸಲ್ಲಿಸಲು ಈ ಜಾತ್ರೆಯನ್ನು ನಡೆಸಲಾಯಿತು. ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಗೆ ಸೇರಿದ ಒಂದು ದೇವಾಲಯ ಸೇರಿದಂತೆ ನಾಲ್ಕು ದೇವಾಲಯಗಳು ಜಾತ್ರೆಯ ಮೈದಾನದ ಸುತ್ತಲೂ ಇವೆ. ಆಡಳಿತ ಮಂಡಳಿ ದೇವಾಲಯದ ಅಧಿಕಾರಿಗಳಿಗೆ ಬಾಗಿಲು ಮುಚ್ಚುವಂತೆ ಸೂಚಿಸಿತು. ಜಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. “ಪಾನಿಹಾಟಿಯ ಇಸ್ಕಾನ್ ದೇವಸ್ಥಾನದಲ್ಲಿ ದಂಡ ಮಹೋತ್ಸವದಲ್ಲಿ ಬಿಸಿಲು ಮತ್ತು ತೇವಾಂಶದಿಂದ 3 ಭಕ್ತರು ಸಾವನ್ನಪ್ಪಿದ್ದಾರೆ ಎಂದು ತಿಳಿದು ದುಃಖವಾಗಿದೆ. ಸಿಪಿ ಮತ್ತು ಡಿಎಂ ಧಾವಿಸಿದ್ದಾರೆ, ಎಲ್ಲಾ ಸಹಾಯವನ್ನು ಒದಗಿಸಲಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.ಸ್ಥಳೀಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕರು ಮತ್ತು ಲೋಕಸಭಾ ಸದಸ್ಯ ಸೌಗತ ರಾಯ್ ಸ್ಥಳಕ್ಕೆ ಆಗಮಿಸಿದ್ದಾರೆ.
ಕೊವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮೂರು ವರ್ಷಗಳಿಂದ ಜಾತ್ರೆ ನಡೆಯಲಿಲ್ಲ. ಇದರಿಂದಾಗಿ ಭಾನುವಾರ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ಸಾವನ್ನಪ್ಪಿದವರೆಲ್ಲರೂ 60 ವರ್ಷಕ್ಕಿಂತ ಮೇಲ್ಪಟ್ಟವರು. ಅತಿಯಾದ ಶಾಖ ಮತ್ತು ತೇವಾಂಶದಿಂದಾಗಿ ಅನೇಕ ಜನರು ಅಸ್ವಸ್ಥರಾಗಿದ್ದಾರೆ, ”ಎಂದು ಟಿಎಂಸಿಯ ಪಾನಿಹಾಟಿ ಶಾಸಕ ನಿರ್ಮಲ್ ಘೋಷ್ ಹೇಳಿದ್ದಾರೆ.
Distressed to know of 3 old devotees’ death due to heat and humidity in Danda Mahotsav at ISKCON temple at Panihati. CP and DM have rushed, all help being provided. My condolences to the bereaved families, solidarity to devotees.
— Mamata Banerjee (@MamataOfficial) June 12, 2022
ಜಾತ್ರೆಯಲ್ಲಿ ಯಾವುದೇ ಪೊಲೀಸ್ ನಿಯೋಜನೆ ಇರಲಿಲ್ಲ ಎಂದು ನನಗೆ ಖಚಿತವಾಗಿದೆ. ಈ ಸಾವುಗಳಿಗೆ ಮುಖ್ಯಮಂತ್ರಿ ಹೊಣೆ ಹೊರುತ್ತಾರಾ? ಎಂದು ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಕೋಲ್ಕತ್ತಾದಲ್ಲಿ ಹೇಳಿದ್ದಾರೆ.
ಮಜುಂದಾರ್ ಅವರನ್ನು “ಟ್ರೇನಿ ರಾಜ್ಯಾಧ್ಯಕ್ಷ” ಎಂದು ಕರೆದ ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್, ಅವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಜನರು ಶಾಖ ಮತ್ತು ಬಳಲಿಕೆಯಿಂದ ಸತ್ತರು. ಬಿಜೆಪಿ ನಡೆಸುತ್ತಿರುವ ರಾಜ್ಯಗಳಲ್ಲಿ ಕಾಲ್ತುಳಿತದಲ್ಲಿ ಯಾತ್ರಿಕರು ಸಾವನ್ನಪ್ಪಿದ ಅನೇಕ ಉದಾಹರಣೆಗಳಿವೆ ಎಂದಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ