ಇದು ದುರದೃಷ್ಟಕರ; ತಮಿಳಿಸೈ ಮೇಲೆ ರೇಗಿದ ಅಮಿತ್ ಶಾ ವಿರುದ್ಧ ದಯಾನಿಧಿ ಮಾರನ್ ಅಸಮಾಧಾನ

|

Updated on: Jun 13, 2024 | 3:51 PM

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮಿಳುನಾಡು ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಅವರೊಂದಿಗೆ ನಡೆಸಿದ ಸಣ್ಣ ಸಂಭಾಷಣೆಯ ವಿಡಿಯೋ ಭಾರೀ ವೈರಲ್ ಆಗಿತ್ತು. ಇದು ಮತ್ತೆ ತಮಿಳುನಾಡು ರಾಜ್ಯದಲ್ಲಿನ ಬಿಜೆಪಿಯಲ್ಲಿನ ಆಂತರಿಕ ಕಲಹದ ಬಗ್ಗೆ ಮತ್ತೆ ಚರ್ಚೆಗೆ ಎಡೆ ಮಾಡಿಕೊಟ್ಟಿತು.

ಇದು ದುರದೃಷ್ಟಕರ; ತಮಿಳಿಸೈ ಮೇಲೆ ರೇಗಿದ ಅಮಿತ್ ಶಾ ವಿರುದ್ಧ ದಯಾನಿಧಿ ಮಾರನ್ ಅಸಮಾಧಾನ
ತಮಿಳಿಸೈ ಮೇಲೆ ರೇಗಿದ ಅಮಿತ್ ಶಾ
Follow us on

ಚೆನ್ನೈ: ಬುಧವಾರ ಆಂಧ್ರಪ್ರದೇಶದ ಸಿಎಂ ಆಗಿ ಚಂದ್ರಬಾಬು ನಾಯ್ಡು (Chandrababu Naidu) ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಪಾಲ್ಗೊಂಡಿದ್ದರು. ಆಗ ವೇದಿಕೆಯ ಮೇಲೆ ಮಾಜಿ ರಾಜ್ಯಪಾಲೆ ಹಾಗೂ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ (Tamilisai Soundararajan) ಬಂದಾಗ ಅವರನ್ನು ಬಳಿ ಕರೆದು ಅವರ ಮೇಲೆ ರೇಗಿದರು. ಅಮಿತ್ ಶಾಗೆ ತಮಿಳಿಸೈ ಸಮಜಾಯಿಷಿ ಕೊಡಲು ಹೋದಾಗ ಅವರನ್ನು ತಡೆದ ಅಮಿತ್ ಶಾ ಮತ್ತೆ ಎಚ್ಚರ ನೀಡುತ್ತಿರುವ ಸಣ್ಣ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಆದರೆ, ಯಾವ ವಿಷಯಕ್ಕೆ ಈ ರೀತಿ ವರ್ತಿಸಿದರು ಎಂಬುದು ಬಹಿರಂಗವಾಗಿರಲಿಲ್ಲ.

ಈ ವಿಡಿಯೋಗೆ ಬಿಜೆಪಿಯ ಕೆಲವು ನಾಯಕರೇ ಅಸಮಾಧಾನ ಹೊರಹಾಕಿದ್ದರು. ಹಿರಿಯ ನಾಯಕಿ ಮತ್ತು ವೈದ್ಯೆಯೂ ಆಗಿರುವ ತಮಿಳಿಸೈ ಅಕ್ಕನ ಜೊತೆ ಈ ರೀತಿ ಸಾರ್ವಜನಿಕ ವೇದಿಕೆಯಲ್ಲಿ ವರ್ತನೆ ಮಾಡಿದ್ದು ಸರಿಯಲ್ಲ ಎಂದಿದ್ದರು. ಇದೀಗ ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ವೇದಿಕೆಯಲ್ಲಿ ಮಾಜಿ ರಾಜ್ಯಪಾಲೆ​​ ತಮಿಳ್​​ಸಾಯಿಗೆ ಗದರಿದ ಅಮಿತ್ ಶಾ, ಅಣ್ಣಾಮಲೈ ವಿರುದ್ಧ ನೀಡಿದ ಆ ಹೇಳಿಕೆ ಕಾರಣವೇ?

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಮತ್ತು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ದಯಾನಿಧಿ ಮಾರನ್ ಈ ಘಟನೆಯನ್ನು ‘ದುರದೃಷ್ಟಕರ’ ಎಂದು ಬಣ್ಣಿಸಿದ್ದಾರೆ.

“ಇದು ತುಂಬಾ ದುರದೃಷ್ಟಕರ. ತಮಿಳಿಸೈ ಅವರು ತೆಲಂಗಾಣ ಮತ್ತು ಪುದುಚೇರಿಯ ರಾಜ್ಯಪಾಲರಾಗಿದ್ದರು. ನಮಗೆ ಬೇಸರವಾಗುತ್ತಿದೆ” ಎಂದು ದಯಾನಿಧಿ ಮಾರನ್ ಹೇಳಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ಗೃಹ ಸಚಿವರಾಗಿದ್ದ ಅವಧಿಯಲ್ಲೇ ಅತೀ ಹೆಚ್ಚು ಭದ್ರತಾ ಸಿಬ್ಬಂದಿ, ನಾಗರಿಕರ ಹತ್ಯೆಯಾಗಿದ್ದು: ಸಂಜಯ್ ರಾವತ್

“ಗೃಹ ಸಚಿವ ಅಮಿತ್ ಶಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಕೂಡ ಇದೇ ರೀತಿ ಮಾಡುತ್ತಾರೆಯೇ? ತಮಿಳಿಸೈ ಅವರು ತಮಿಳುನಾಡಿನವರು ಎಂಬ ಕಾರಣಕ್ಕೆ ಆಕೆಯನ್ನು ಯಾವ ರೀತಿಯಲ್ಲಿ ಬೇಕಾದರೂ ನಡೆಸಿಕೊಳ್ಳಬಹುದೇ? ಇದು ಅತ್ಯಂತ ಅನಿರೀಕ್ಷಿತವಾದ ಘಟನೆಯಾಗಿದೆ” ಎಂದು ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ