ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ; TOCIRA ಔಷಧ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ

| Updated By: Lakshmi Hegde

Updated on: Sep 06, 2021 | 4:18 PM

Tocilizumab Drug: ಹೆಟೆರೋ ಔಷಧ ಕಂಪನಿಯ ಟೊಸಿಲಿಜುಮಾಬ್ (Tocilizumab) ಔಷಧಿಯ ಜನರಿಕ್​ ಆವೃತ್ತಿಯಾದ TOCIRA ವನ್ನು ತುರ್ತು ಬಳಕೆ ಮಾಡಬಹುದು ಎಂದು ಡಿಸಿಜಿಐ ಇದೀಗ ಹೇಳಿದೆ.

ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ; TOCIRA ಔಷಧ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ
Tocilizumab Drug
Follow us on

ಆಸ್ಪತ್ರೆಗೆ ದಾಖಲಾದ  ಕೊವಿಡ್​ 19 ರೋಗಿಗಳಿಗೆ ಚಿಕಿತ್ಸೆ ನೀಡಲು ಟೊಸಿಲಿಜುಮಾಬ್ (Tocilizumab)ಔಷಧಿಯ ಜನರಿಕ್​ ಆವೃತ್ತಿಯನ್ನು ತುರ್ತು ಬಳಕೆ ಮಾಡಬಹುದು ಎಂದು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (DCGI) ನಮಗೆ ಅನುಮತಿ ನೀಡಿದೆ ಎಂದು ಹೈದರಾಬಾದ್ ಮೂಲದ ಔಷಧೀಯ ಕಂಪನಿ ಹೆಟೆರೋ ಗ್ರೂಪ್​ ಇಂದು ತಿಳಿಸಿದೆ. ಈ ಔಷಧಿಯನ್ನು ಕೊವಿಡ್​ 19 ಸೋಂಕು ಗಂಭೀರವಾಗಿರುವ ರೋಗಿಗಳಿಗೆ ಮಾತ್ರ ಬಳಸಬಹುದು ಎಂದು ಜುಲೈನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿತ್ತು.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಹೆಟೆರೋ ಗ್ರೂಪ್​ ಚೇರ್​ಮೆನ್​ ಡಾ. ಪಿ.ಸಾರಥಿ ರೆಡ್ಡಿ, ನಮ್ಮ ಕಂಪನಿಗೆ Tocilizumab ಔಷಧಿಯ ತುರ್ತು ಬಳಕೆಗೆ ಅನುಮೋದನೆ ನೀಡಿದ್ದಕ್ಕೆ ತುಂಬ ಸಂತೋಷವಾಗಿದೆ. ಜಾಗತಿಕವಾಗಿ ಈ ಔಷಧದ ಕೊರತೆ ಇರುವ ಹೊತ್ತಲ್ಲಿ, ಭಾರತದಲ್ಲಿ ಪೂರೈಕೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಡಿಸಿಜಿಐನ ಅನುಮೋದನೆ ತುಂಬ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ. ಹಾಗೇ, ಔಷಧವನ್ನು ಸರಿಯಾದ ರೀತಿ, ನ್ಯಾಯಸಮ್ಮತವಾಗಿ ವಿತರಣೆ ಮಾಡುವ ನಿಟ್ಟಿನಲ್ಲಿ, ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ ಎಂದೂ ಹೇಳಿದ್ದಾರೆ.

ಹೆಟೆರೋ ಔಷಧ ಕಂಪನಿಯು ಟೊಸಿಲಿಜುಮಾಬ್ (Tocilizumab) ಔಷಧಿಯ ಜನರಿಕ್​ ಆವೃತ್ತಿಯಾದ TOCIRA ವನ್ನು ತುರ್ತು ಬಳಕೆ ಮಾಡಬಹುದು ಎಂದು ಡಿಸಿಜಿಐ ಇದೀಗ ಹೇಳಿದೆ. ಹಾಗಂತ ಇದನ್ನು ಯಾರ್ಯಾರೋ ಬಳಸುವಂತಿಲ್ಲ. ಆಸ್ಪತ್ರೆಗೆ ದಾಖಲಾದ, ಗಂಭೀರ ಸ್ಥಿತಿಯಲ್ಲಿರುವ, ಆಕ್ಸಿಜನ್​ ಪೂರೈಕೆ, ವೆಂಟಿಲೇಟರ್​​ ಅಗತ್ಯವಿರುವ ರೋಗಿಗಳಿಗೆ ಮಾತ್ರ ನೀಡಬಹುದಾಗಿದೆ. ಅದೂ ಕೂಡ ವೈದ್ಯರು ಸೂಚಿಸಬೇಕು.

ಮಾರಾಟದ ಹೊಣೆ ಯಾರದ್ದು?
ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಈ TOCIRAವನ್ನು ಹೆಟೆರೋ ಗ್ರೂಪ್​​ನ ಜೈವಿಕ ವಿಭಾಗದ ಹೆಟೆರೋ ಬಯೋಪಾರ್ಮಾ ಉತ್ಪಾದನೆ ಮಾಡಲಿದೆ. ಈ ವಿಭಾಗ ಹೈದರಾಬಾದ್​ನಲ್ಲಿಯೇ ಇದೆ. ಇಲ್ಲಿ ಔಷಧ ತಯಾರಿಕೆಗೆ ಅಗತ್ಯವಾದ ಎಲ್ಲ ಜೈವಿಕ ವ್ಯವಸ್ಥೆಯೂ ಇದೆ. ಇನ್ನು ಮಾರಾಟದ ಜವಾಬ್ದಾರಿಯನ್ನು  ಸಹವರ್ತಿ ಸಂಸ್ಥೆ ಹೆಟೆರೋ ಹೆಲ್ತ್​ಕೇರ್ ವಹಿಸಿಕೊಳ್ಳಲಿದೆ. ದೇಶದೆಲ್ಲೆಡೆ ಹೆಟೆರೋ ನೆಟ್​​ವರ್ಕ್​ ಇದ್ದು, ಶಾಖೆಗಳ ಸಹಕಾರಿಂದ ಈ ಔಷಧಿಯ ಮಾರಾಟ ನಡೆಸಲಿದೆ. ಟೊಸಿರಾ ಬ್ರ್ಯಾಂಡ್​​ನಡಿ ಬಳಕೆಗೆ ಸಿಗುವ ಈ ಔಷಧವನ್ನು ಸೆಪ್ಟೆಂಬರ್ ಅಂತ್ಯದೊಳಗೆ ಸರಿಯಾಗಿ ಪೂರೈಸಲು ಹೆಟೆರೋ ಮುಂದಾಗಿದೆ.

Tocilizumab ಔಷಧ ಬಳಕೆ ಯಾವ ಸಮಸ್ಯೆಗೆ?
ಟೊಸಿಲಿಜುಮಾಬ್ ಔಷಧವನ್ನು ಸಾಮಾನ್ಯವಾಗಿ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಲು ನೀಡಲಾಗುತ್ತದೆ. Actemra (ಅಕ್ಟೆಮ್ರಾ) ಎಂಬ ಹೆಸರಿನಲ್ಲಿ ಮಾರಾಟವಾಗುವ ಈ ಟೊಸಿಲಿಜುಮಾಬ್​ ಔಷಧ, ಮಕ್ಕಳಲ್ಲಿ ಕಂಡುಬರುವ ಸಂಧಿವಾತ, ಸಂಧಿವಾತಕ್ಕೆ ನೀಡಲ್ಪಡುತ್ತದೆ. ಈ ಔಷಧವನ್ನು ಕೊವಿಡ್​ 19 ರೋಗಿಗಳ ಚಿಕಿತ್ಸೆಗೆ ತುರ್ತು ಬಳಕೆ ಮಾಡಲು ಅಮೆರಿಕ 2021ರ ಜೂನ್​ನಲ್ಲಿ ಅನುಮೋದನೆ ನೀಡಿದೆ. ಅದರ ಜನರಿಕ್​ ಆವೃತ್ತಿಯನ್ನು ಭಾರತದ ಹೆಟೆರೋ ಕಂಪನಿ ತಯಾರಿಸಲು ಮುಂದಾಗಿದೆ.

ಇದನ್ನೂ ಓದಿ: ಮಗ-ಸೊಸೆಯ ಡಿವೋರ್ಸ್​ ವದಂತಿಯಿಂದ ಮುಖ್ಯ ನಿರ್ಧಾರ ತೆಗೆದುಕೊಂಡ ನಾಗಾರ್ಜುನ? ಹೆಚ್ಚಿತು ಸಂಶಯದ ಬೆಂಕಿ

Hubballi-Dharwad Municipal Election Results 2021: ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದವರ ಸಂಪೂರ್ಣ ಪಟ್ಟಿ ಇಲ್ಲಿದೆ

Published On - 3:54 pm, Mon, 6 September 21