
ನವದೆಹಲಿ, ಅಕ್ಟೋಬರ್ 19: ಉತ್ತರಪ್ರದೇಶದಲ್ಲಿರುವ ಅಯೋಧ್ಯೆಯಲ್ಲಿ ದೀಪಾವಳಿ (Deepavali) ಹಬ್ಬದ ಪ್ರಯುಕ್ತ ಭರ್ಜರಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ವೇಳೆ ಎರಡು ಗಿನ್ನೆಸ್ ದಾಖಲೆ ನಿರ್ಮಾಣಗೊಂಡಿವೆ. ಅಯೋಧ್ಯೆಯ 56 ಘಾಟ್ಗಳ ಸಾಲುಗಳುದ್ದಕ್ಕೂ ಅತಿಹೆಚ್ಚು ದೀಪಗಳನ್ನು ಹಚ್ಚಿದ್ದು, ಹಾಗೂ ಅತಿ ಹೆಚ್ಚು ಜನರು ಒಟ್ಟಿಗೆ ದೀಪಾರತಿ ಮಾಡಿದ್ದು, ಈ ಎರಡು ವಿಶ್ವ ದಾಖಲೆಗಳು ಸ್ಥಾಪನೆಯಾಗಿವೆ. ಗಿನ್ನೆಸ್ ಬುಕ್ ಆಫ್ ರೆಕಾರ್ಡ್ನಿಂದ (Guinness world records) ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದಾಖಲೆ ನಿರ್ಮಾಣಗೊಂಡದ್ದಕ್ಕೆ ಪ್ರಮಾಣಪತ್ರ ಕೊಡಲಾಗಿದೆ.
ಅಯೋಧ್ಯೆಯಲ್ಲಿ ಪ್ರತೀ ವರ್ಷ ದೀಪೋತ್ಸವ ಆಚರಿಸಲಾಗುತ್ತಿದೆ. ಮರ್ಯಾದಾ ಪುರುಷೋತ್ತಮ ರಾಮ 14 ವರ್ಷ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ್ದ ನೆನಪಿನಲ್ಲಿ ದೀಪೋತ್ಸವ ಆಚರಿಸಲಾಗುತ್ತದೆ. ಈ ಬಾರಿ ಅಯೋಧ್ಯೆಯ ಘಾಟ್ಗಳಾದ್ಯಂತ 26,17,215 (ಬರೋಬ್ಬರಿ 26 ಲಕ್ಷಕ್ಕೂ ಅಧಿಕ) ದೀಪಗಳನ್ನು ಹಚ್ಚಲಾಯಿತು.
ಇದನ್ನೂ ಓದಿ: ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಹೋಗಿ ವಾಪಸಾದ ಅರ್ಜಿತ್ ಚೌಬೆ
ಹಲವಾರು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸ್ವಯಂಸೇವಕರು ಬಂದು ದೀಪಾರತಿಯಲ್ಲಿ ಭಾಗವಹಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ದೀಪಾರತಿಯ ಹಲವು ವಿಡಿಯೋಗಳು ಶೇರ್ ಆಗುತ್ತಿವೆ.
ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂಸೇವಕರು ದೀಪಕ್ಕೆ ಎಣ್ಣೆ ಮತ್ತು ಬತ್ತಿಯನ್ನು ಹಾಕಿ ಘಾಟ್ಗಳ ಉದ್ದಕ್ಕೂ ವಿಶೇಷ ಮಾದರಿಯಲ್ಲಿ ಇಟ್ಟಿದ್ದಾರೆ. ವಿಶ್ವದಾಖಲೆ ಸ್ಥಾಪನೆಯಾಗುತ್ತಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನ ಪ್ರತಿನಿಧಿ ರಿಚರ್ಡ್ ಸ್ಟೆನ್ನಿಂಗ್ ಬಂದಿದ್ದರು. ದೀಪ ಇಡುವ ಪ್ರತಿಯೊಬ್ಬ ವ್ಯಕ್ತಿಯ ಪ್ರವೇಶವನ್ನು ದಾಖಲಿಸಲು ಕ್ಯೂಆರ್ ಕೋಡ್ ಅನ್ನು ಬಳಸಲಾಯಿತು. ಪ್ರತೀ ವಲಯವನ್ನೂ ಎಚ್ಚರಿಕೆಯಿಂದ ಗಮಿಸಲಾಯಿತು ಎಂದು ರಿಚರ್ಡ್ ಸ್ಟೆನ್ನಿಂಗ್ ಮಾಹಿತಿ ನೀಡಿದರು.
ಇದನ್ನೂ ಓದಿ: ಡಿಸ್ಕ್ ಕಟ್ಟರ್ ಹಿಡಿದು ಮ್ಯೂಸಿಯಂಗೆ ನುಗ್ಗಿದ ಖದೀಮರು; ನೆಪೋಲಿಯನ್ ಕಾಲದ ಆಭರಣ ದೋಚಿದ ಕಳ್ಳರು
ಉತ್ತರಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಅಯೋಧ್ಯೆಯ ದೀಪಾರತಿ ಉತ್ಸವವನ್ನು ಟೀಕಿಸಿ ಬಿಜೆಪಿಯ ದಾಳಿಗೆ ಹೊಸ ಅಸ್ತ್ರ ಕೊಟ್ಟಿದ್ದಾರೆ. ದೀಪ ಮತ್ತು ಕ್ಯಾಂಡಲ್ಗಳನ್ನು ಹಚ್ಚಲು ಇಷ್ಟು ಹಣ ವ್ಯಯ ಮಾಡುವುದು ಯಾಕೆ ಎಂದು ಅಖಿಲೇಶ್ ಯಾದವ್ ಟೀಕಿಸಿದ್ದರು.
ಬಿಜೆಪಿ ನಾಯಕರು ಅಖಿಲೇಶ್ ಅವರ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜವಾದಿ ಪಕ್ಷಕ್ಕೆ ರಾಮಮಂದಿರ ಆಂದೋಲನ ಹತ್ತಿಕ್ಕುವ ಮತ್ತು ಹಿಂದೂ ವಿರೋಧಿ ಭಾವನೆಯನ್ನು ಪ್ರಚುರಪಡಿಸುವ ಪರಂಪರೆಯೇ ಇದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ