ಉತ್ತರಾಖಂಡ್ (Uttarakhand) ರಾಜ್ಯದ ಚಮೋಲಿಯಲ್ಲಿ ಸೇನೆಯಿಂದ ಆಯುಧ ಪೂಜೆ ಆಚರಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು (Defense Minister Rajnath Singh) ಯೋಧರೊಂದಿಗೆ ದಸರಾ ಆಚರಿಸಿದ್ದಾರೆ. ವಿಜಯದಶಮಿ ಹಿನ್ನೆಲೆ ಯೋಧರು ಸಾಮೂಹಿಕವಾಗಿ ಸೇನಾ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಲಾಗಿದೆ (Shastra Puja).
ಈ ವೇಳೆ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶಸ್ತ್ರಾಸ್ತ್ರ ಆಯುಧ ಪೂಜೆ ಮಾಡುವ ಏಕೈಕ ದೇಶ ಭಾರತ. ನಮ್ಮ ದೇಶವು ನಮ್ಮ ಸಶಸ್ತ್ರ ಪಡೆಗಳ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ನಮಗೆ ವಿಶ್ವಾಸವಿದೆ. ನಮ್ಮ ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳ ಯೋಧರು ನಮ್ಮ ದೇಶದ ಹೆಮ್ಮೆ ಎಂದು ಅವರು ಹೇಳಿದರು.
ಸುದ್ದಿ ಸಂಸ್ಥೆ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ರಾಜನಾಥ್ ಸಿಂಗ್ ಅವರು ಸಶಸ್ತ್ರ ಪಡೆಗಳ ಸಮ್ಮುಖದಲ್ಲಿ ಮಂತ್ರಗಳ ಪಠಣಗಳ ನಡುವೆ ಧಾರ್ಮಿಕ ಕ್ರಿಯೆಗಳನ್ನು ನಡೆಸುತ್ತಿರುವುದನ್ನು ತೋರಿಸಿದೆ. ಮತ್ತೊಂದು ಕ್ಲಿಪ್ ಸೈನಿಕರು ದೇಶಭಕ್ತಿ ಗೀತೆಗಳನ್ನು ಹಾಡುವುದನ್ನು ತೋರಿಸಿದೆ.
ನಿನ್ನೆ ಮಂಗಳವಾರವೇ ಉತ್ತರಾಖಂಡ್ ಗೆ ಆಗಮಿಸಿರುವ ರಾಜನಾಥ್ ಸಿಂಗ್ 2 ದಿನಗಳ ರಾಜ್ಯ ಪ್ರವಾಸದಲ್ಲಿದ್ದಾರೆ. ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ನಲ್ಲಿಯೂ ಸೇನಾವತಿಯಿಂದ ಆಯುಧ ಪೂಜೆ ನಡೆದಿದೆ. ರಾಜನಾಥ್ ಸಿಂಗ್ ಅವರು ದೇಶದ ರಕ್ಷಣಾ ಸಚಿವರಾದಾಗಿನಿಂದಲೂ ಪ್ರತಿ ವರ್ಷ ವಿಜಯದಶಮಿ ದಿನದಂದು ಯೋಧರ ಜೊತೆ ಸಮಯ ಕಳೆಯುತ್ತಾರೆ. ಅವರೊಂದಿಗೆ ಬೆರೆತು ಮಾತುಕತೆ ನಡೆಸುತ್ತಾರೆ. ಈ ವೇಳೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ಪೂಜೆ ನಡೆಯುತ್ತದೆ. ಇನ್ನು ಚೀನಾ ಗಡಿಗೆ ಹೊಂದಿಕೊಂಡಿರುವ ಅವಲಿ ಮತ್ತು ಮನಾ ಗ್ರಾಮಗಳಿಗೆ ತೆರಳಿ ಯೋಧರ ಜೊತೆ ಸಂವಾದ ನಡೆಸಿದ್ದಾರೆ.
ಗಮನಾರ್ಹವೆಂದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ವರ್ಷ ಕೋವಿಡ್ ನಿರ್ಬಂಧದ ಮಧ್ಯೆ ದಸರಾ ಆಯುಧ ಪೂಜೆಯನ್ನು ದೆಹಲಿಯಲ್ಲಿ ಡಿಆರ್ಡಿಒ ಸಂಸ್ಥೆಯಲ್ಲಿ (Defense Research and Development Organization -DRDO) ಕಟ್ಟುನಿಟ್ಟಾಗಿ ಆಚರಿಸಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ಜಾಲತಾಣ ವರದಿ ಮಾಡಿದೆ.
दशहरा के अवसर पर आयोजित ‘शस्त्र पूजन समारोह’ https://t.co/wzk33RVrCO
— Rajnath Singh (@rajnathsingh) October 5, 2022