ದೆಹಲಿ: ಕೊಲ್ಕತ್ತಾ ಮೂಲದ ಕಂಪನಿಗೆ ಹವಾಲ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ದೆಹಲಿಯ ಆರೋಗ್ಯ ಸಚಿವ (Delhi Health Minister) ಮತ್ತು ಆಮ್ ಆದ್ಮಿಪಕ್ಷದ ನಾಯಕ ಸತ್ಯೇಂದರ್ ಜೈನ್ (Satyendar jain) ಅವರನ್ನು ಜಾರಿ ನಿರ್ದೇಶನಾಲಯ (Enforcement Directorate) ಸೋಮವಾರ ಬಂಧಿಸಿದೆ. ಸಿಬಿಐ ನೋಂದಾಯಿಸಿದ ಎಫ್‌ಐಆರ್‌ನ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಸತ್ಯೇಂದರ್ ಕುಮಾರ್ ಜೈನ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 109, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(2) ಮತ್ತು13(1) (e) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಏಪ್ರಿಲ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ), ಜೈನ್ ಮತ್ತು ಕುಟುಂಬದ ಒಡೆತನದಲ್ಲಿರುವ ಐದು ಸಂಸ್ಥೆಗಳ 4.81 ಕೋಟಿ ರೂ. ಮೊತ್ತದ ಸ್ಥಿರಾಸ್ಥಿ ಮುಟ್ಟುಗೋಲು ಹಾಕಿದ್ದು ಅಕ್ರಮ ಹಣ ವ್ಯವಹಾರ ತಡೆ ಕಾಯ್ದೆ ಅಡಿಯಲ್ಲಿ ಮೂವರು ಮಹಿಳೆಯರನ್ನು ತನಿಖೆಗೊಳಪಡಿಸಿತ್ತು. ಹಿರಿಯ ಇಡಿ ಅಧಿಕಾರಿಯೊಬ್ಬರು ಈ ಭೂಮಿ ಅಕಿನ್ಚಾನ್ ಡೆವಲಪರ್ಸ್ ಪ್ರೈ. ಲಿಮಿಟೆಡ್, ಇಂಡೋ ಮೆಟಲ್ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್, ಪರಿಯಾಸ್ ಇನ್ಫೋಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್, ಮಂಗ್ಲಾಯತನ್ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್, ಜೆ.ಜೆ. ಆದರ್ಶ ಎಸ್ಟೇಟ್ ಪ್ರೈ. ಲಿಮಿಟೆಡ್ ಮತ್ತು ಮೂವರು ಮಹಿಳೆಯರಾದ ಸ್ವಾತಿ ಜೈನ್, ಸುಶಿಲಾ ಜೈನ್ ಮತ್ತು ಇಂದೂ ಜೈನ್ ಗೆ ಸೇರಿದ್ದು ಎಂದು ಹೇಳಿದ್ದಾರೆ.
2015-16ರ ಅವಧಿಯಲ್ಲಿ ಜೈನ್ ಸಾರ್ವಜನಿಕ ಸೇವಕರಾಗಿದ್ದಾಗ ಈ ಕಂಪನಿಗಳು ಅವರಿಂದ ಲಾಭದಾಯಕವಾಗಿ ನಿಯಂತ್ರಿಸಲ್ಪಡುತ್ತಿತ್ತು. ಹವಾಲಾ ಮೂಲಕ ಪಡೆದ ಹಣವನ್ನು ಭೂಮಿ ಖರೀದಿಸಲು ಅಥವಾ ದೆಹಲಿಯಲ್ಲಿ ಕೃಷಿ ಭೂಮಿ ಖರೀದಿಸಲು ಪಡೆದ ಸಾಲ ತೀರಿಸಲು ಬಳಸಲಾಗಿತ್ತು ಎಂದು ಇಡಿ ಹೇಳಿದೆ.
ಫೆಬ್ರವರಿಯಲ್ಲಿ ಕೇಜ್ರಿವಾಲ್ ಅವರು ಪಂಜಾಬ್ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚೆ ಇಡಿ ಸತ್ಯೇಂದರ್ ಜೈನ್ ಅವರನ್ನು ಬಂಧಿಸಲಿದೆ ಎಂದು ನಮಗೆ ತಿಳಿದುಬಂದಿದೆ. ಬಿಜೆಪಿ ಚುನಾವಣೆಯಲ್ಲಿ ಸೋಲಲಿದೆ ಎಂಬ ಕಾರಣದಿಂದ ಅವರು ಎಎಪಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
A fake case is being run against Satyendar Jain for 8yrs. ED called many times before & stopped for many yrs in between as they couldn’t find anything. Now it’s started again as he’s HP’s poll in-charge… He’ll be released in few days as case is bogus: Delhi Dy CM Manish Sisodia pic.twitter.com/1Ny3nn8293
— ANI (@ANI) May 30, 2022
ಸತ್ಯೇಂದರ್ ಮೇಲೆ ಹೊರಿಸಿದ್ದು ಸುಳ್ಳು ಆರೋಪ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ
ಎಂಟು ವರ್ಷಗಳಿಂದ ಸತ್ಯೇಂದರ್ ಜೈನ್ ವಿರುದ್ಧ ಸುಳ್ಳು ಪ್ರಕರಣಗಳು ನಡೆಯುತ್ತಿವೆ. ಇಡಿ ಹಲವಾರು ಬಾರಿ ಅವರನ್ನು ಕರೆಸಿತ್ತು. ಇಡಿಗೆ ಏನೂ ಸಿಗಲಿಲ್ಲ. ಇದೀಗ ಮತ್ತೆ ಶುರು ಮಾಡಿದೆ. ಸತ್ಯೇಂದರ್ ಹಿಮಾಚಲ ಪ್ರದೇಶದ ಚುನಾವಣೆ ಉಸ್ತುವಾರಿ ವಹಿಸಿದ್ದಾರೆ. ಈ ಪ್ರಕರಣ ಸುಳ್ಳು ಆಗಿರುವ ಕಾರಣ ಅವರು ಕೆಲವೇ ದಿನಗಳಲ್ಲಿ ಹೊರಬರಲಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 7:32 pm, Mon, 30 May 22