
ಲಕ್ನೋ, ನವೆಂಬರ್ 23: ದಿಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಉಗ್ರ ಜಾಲದ ಒಂದೊಂದೇ ಎಳೆಗಳು ತೆರೆದುಕೊಂಡು ಬೆಚ್ಚಿಬೀಳಿಸುತ್ತಿವೆ. ಫರೀದಾಬಾದ್ನಲ್ಲಿರುವ ಅಲ್ ಫಲಾ ಯೂನಿವರ್ಸಿಟಿಯಲ್ಲಿ (Al-Falah University) ಜನರ ಜೀವ ರಕ್ಷಿಸುವ ಕಾಯಕದ ವೈದ್ಯರೇ ನರಹಂತಕ ಯೋಜನೆಗಳಿಗೆ ಪಿತೂರಿಗಳನ್ನು ರೂಪಿಸಿರುವುದು ನಡುಕ ಹುಟ್ಟಿಸುವಂತಿದೆ. ಬಂಧಿತರಾಗಿರುವ ಡಾ. ಮುಜಾಮ್ಮಿಲ್, ಡಾ. ಶಾಹೀನ್, ಡಾ. ಅದೀಲ್ ಮತ್ತು ಆಮಿರ್ ಮತ್ತಿತರರು ರೈಫಲ್, ಪಿಸ್ತೂಲ್ ಇತ್ಯಾದಿ ಆಯುಧಗಳು, ಸ್ಫೋಟಕಗಳು ಹಾಗೂ ಹಣದ ಸಂಗ್ರಹವನ್ನು ಹೇಗೆ ಮಾಡುತ್ತಿದ್ದರು ಎನ್ನುವ ವಿಚಾರ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.
ರಷ್ಯಾ ಎಕೆ ಕ್ರಿಂಕೋವ್ ರೈಫಲ್, ಚೀನೀ ನಿರ್ಮಿತ ಬೆರೆಟ್ಟಾ ಪಿಸ್ತೂಲ್, ಸಾವಿರಾರು ಕಿಲೋ ಸ್ಫೋಟಕಗಳನ್ನು ಫರೀದಾಬಾದ್ನಲ್ಲಿ ಸೀಜ್ ಮಾಡಲಾಗಿತ್ತು. ಡಾ. ಅದೀಲ್ಗೆ ಸೇರಿದ ಲಾಕರ್ನಲ್ಲಿ ರಷ್ಯನ್ ನಿರ್ಮಿತ ಎಕೆ-56 ಅಸ್ಸಾಲ್ಟ್ ರೈಫಲ್ ಸಿಕ್ಕಿತ್ತು. ತನಿಖಾಧಿಕಾರಿಗಳ ಪ್ರಕಾರ, ಡಾ. ಮುಜಾಮ್ಮಿಲ್ 5 ಲಕ್ಷ ರೂಗೆ ಡಾ. ಶಾಹೀನ್ಗಳ ನೆರವಿನಿಂದ ಈ ರೈಫಲ್ ಅನ್ನು ಖರೀದಿಸಿದ್ದಾನೆ.
ಇದನ್ನೂ ಓದಿ: ಇನ್ನೂ ಅಂತಿಮ ನಿರ್ಧಾರ ಇಲ್ಲ: ಚಂಡೀಗಡಕ್ಕೆ ಆರ್ಟಿಕಲ್ 240 ಪ್ರಸ್ತಾಪದ ಬಗ್ಗೆ ಕೇಂದ್ರದ ಸ್ಪಷ್ಟನೆ
ಲಕ್ನೋ ಮೂಲದ ಡಾ. ಶಾಹೀನ್ ಸ್ಫೋಟಕ, ರೈಫಲ್ ಇತ್ಯಾದಿ ಆಯುಧಗಳನ್ನು ಖರೀದಿಸಲು ತನ್ನ ನೆಟ್ವರ್ಕ್ ಬಳಸಿಕೊಳ್ಳುತ್ತಿದ್ದಳು. ಹಣದ ವ್ಯವಸ್ಥೆಯನ್ನೂ ಆಕೆ ಮಾಡುತ್ತಿದ್ದಳು. ಪುಲ್ವಾಮ ದಾಳಿಯ ಮಾಸ್ಟರ್ ಮೈಡ್ ಆದ ಉಮರ್ ಫಾರೂಕ್ನ ಹೆಂಡತಿ ಆಫೀರಾ ಬೀಬಿ ಎಂಬಾಕೆ ಡಾ. ಶಾಹೀನ್ಳಿಗೆ ವೆಪನ್ ಖರೀದಿಗೆ ನೆರವು ನೀಡುತ್ತಿದ್ದ ಸಾಧ್ಯತೆ ಇದೆ ಎಂದು ತನಿಖಾ ತಂಡದವರು ನಂಬಿದ್ದಾರೆ.
ಜೈಷ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ನ ಸಂಬಂಧಿಯಾದ ಉಮರ್ ಫಾರೂಕ್ 2019ರಲ್ಲಿ ಸಂಭವಿಸಿದ ಪುಲ್ವಾಮ ದಾಳಿ ಘಟನೆಯ ಮಾಸ್ಟರ್ಮೈಂಡ್ ಆಗಿದ್ದ. ಈತನನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿತ್ತು. ಈತ ಹೊಂದಿದ್ದ ನೆಟ್ವರ್ಕ್ ಅನ್ನು ಆತನ ಪತ್ನಿ ಆಫೀರಾ ಬೀಬಿ ಮುಂದುವರಿಸಿದ್ದಿರಬಹುದು. ಅಲ್ ಫಲಾ ಯೂನಿವರ್ಸಿಟಿಯ ಡಾ. ಶಾಹೀನ್ ಮೊದಲಾದವರಿಗೆ ಈಕೆ ನೆರವು ನೀಡುತ್ತಿದ್ದಿರಬಹುದು.
ಇದನ್ನೂ ಓದಿ: ಉತ್ತರಾಖಂಡ್ನ ಶಾಲೆ ಬಳಿ ಭಾರೀ ಸ್ಫೋಟಕಗಳು ಪತ್ತೆ; ಹೆಚ್ಚಿದ ಉಗ್ರಾತಂಕ
ದಿಲ್ಲಿ ಬಾಂಬ್ ಸ್ಫೋಟದ ಆತ್ಮಹತ್ಯಾ ದಾಳಿಕೋರ ಡಾ. ಉಮರ್ ವಿಚಾರದಲ್ಲೂ ಕೆಲ ಮಹತ್ವದ ಸಂಗತಿಗಳು ಬೆಳಕಿಗೆ ಬರತೊಡಗಿವೆ. ಬಾಂಬ್ ತಯಾರಿಸುವ ಕುರಿತು ಸಾಕಷ್ಟು ಅಧ್ಯಯನವನ್ನು ಈತ ಮಾಡುತ್ತಿದ್ದ. ಟರ್ಕಿ ದೇಶದ ಹ್ಯಾಂಡ್ಲರ್ಗಳು ಈತನಿಗೆ ನಿರ್ದೇಶನ ನೀಡುತ್ತಿದ್ದರು. ಬಾಂಬ್ ತಯಾರಿಕೆಗೆ ಬೇಕಾದ ರಾಸಾಯನಿಕಗಳು, ಎಲೆಕ್ಟ್ರಾನಿಕ್ ಬಿಡಿಭಾಗಗಳು, ಫ್ರೀಜರ್ ಇತ್ಯಾದಿಯನ್ನು ವಿವಿಧ ಮೂಲಗಳಿಂದ ಈತ ತರಿಸಿಕೊಳ್ಳುತ್ತಿದ್ದ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ