ದೆಹಲಿಯಲ್ಲಿ ಕಾರು ಸ್ಫೋಟದಿಂದ 11 ಜನ ಸಾವು; ಅಮಿತ್ ಶಾಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ಇಂದು ಸಂಜೆ ದೆಹಲಿಯಲ್ಲಿ ಕಾರಿನಲ್ಲಿ ಸ್ಫೋಟ ಉಂಟಾಗಿದೆ. ಈ ಘಟನೆ ನಡೆದ ತಕ್ಷಣ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸ್ ಆಯುಕ್ತರು ಮತ್ತು ಗುಪ್ತಚರ ಬ್ಯೂರೋ ಮುಖ್ಯಸ್ಥರೊಂದಿಗೆ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಗೃಹ ಸಚಿವ ಅಮಿತ್ ಶಾ ಜೊತೆ ದೂರವಾಣಿಯಲ್ಲಿ ಮಾತನಾಡಿ, ಈ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಈ ಸ್ಫೋಟದ ಬಳಿಕ ದೆಹಲಿಯಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

ದೆಹಲಿಯಲ್ಲಿ ಕಾರು ಸ್ಫೋಟದಿಂದ 11 ಜನ ಸಾವು; ಅಮಿತ್ ಶಾಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
Amit Shah

Updated on: Nov 10, 2025 | 9:50 PM

ನವದೆಹಲಿ, ನವೆಂಬರ್ 10: ದೆಹಲಿಯ ಕೆಂಪು ಕೋಟೆಯ (Red Fort) ಮೆಟ್ರೋ ಸ್ಟೇಷನ್ ಬಳಿ ಇಂದು ಸಂಜೆ 6.55ಕ್ಕೆ ಕಾರಿನಲ್ಲಿ ಸ್ಫೋಟ (Delhi Car Blast) ಉಂಟಾಗಿದೆ. ಈ ವೇಳೆ ಅಕ್ಕಪಕ್ಕದ ಕಾರುಗಳಿಗೂ ಬೆಂಕಿ ಹೊತ್ತಿಕೊಂಡು 11 ಜನರು ಮೃತಪಟ್ಟಿದ್ದಾರೆ. ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ಅಳವಡಿಸಲಾದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ತನಿಖೆಗಾಗಿ ಎನ್ಐಎ, ಎನ್ಎಸ್​ಜಿ ಮತ್ತು ದೆಹಲಿ ಪೊಲೀಸರ ತಂಡಗಳನ್ನು ನಿಯೋಜಿಸಲಾಗಿದೆ.

ದೆಹಲಿಯಲ್ಲಿ ಸ್ಫೋಟ ಉಂಟಾದ ಹಿನ್ನಲೆಯಲ್ಲಿ ಗುಜರಾತ್‌ನಲ್ಲಿದ್ದ ದೆಹಲಿ ಲೆಫ್ಟಿನೆಂಟ್‌ ಜನರಲ್‌ ವಿನಯ್‌ ಕುಮಾರ್‌ ಸಕ್ಸೇನಾ ಹಾಗೂ ದೆಹಲಿಯ ಸಚಿವ ಕಪಿಲ್‌ ಮಿಶ್ರಾ ದೆಹಲಿಯತ್ತ ಆಗಮಿಸಿದ್ದಾರೆ. 11 ಜನರು ಮೃತಪಟ್ಟ ಹಿನ್ನೆಲೆಯಲ್ಲಿ ಈ ಘಟನೆಯ ಕುರಿತು ತುರ್ತು ತನಿಖೆ ನಡೆಸಿ ವರದಿ ಸಲ್ಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿ, ಘಟನೆಯ ಮಾಹಿತಿ ಪಡೆದಿದ್ದಾರೆ.


ಇದನ್ನೂ ಓದಿ: ದೆಹಲಿಯಲ್ಲಿ ಕಾರು ಸ್ಫೋಟ; ಧಗಧಗನೆ ಹೊತ್ತಿ ಉರಿದ ವಾಹನಗಳು

ಈ ಘಟನೆಯ ಕುರಿತು ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಅವರು ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕ ತಪನ್ ಕುಮಾರ್ ಅವರೊಂದಿಗೂ ಸಂಪರ್ಕದಲ್ಲಿದ್ದಾರೆ. ಈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಕೆಂಪು ಕೋಟೆ ಬಳಿ ಕಾರು ಸ್ಫೋಟವಾಗಿ 8 ಜನ ಸಾವು; ದೆಹಲಿಯಲ್ಲಿ ಹೈ ಅಲರ್ಟ್

ದೆಹಲಿಯ ಕೆಂಪುಕೋಟೆ ಮೆಟ್ರೋ ಸ್ಟೇಷನ್ ಗೇಟ್-1 ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ಎನ್‌ಐಎ, ಎನ್‌ಎಸ್‌ಜಿಯಿಂದ ತನಿಖೆ ನಡೆಸಲಾಗುತ್ತಿದೆ. ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ತೆರಳುತ್ತೇನೆ. ಆ ಬಳಿಕ ಆಸ್ಪತ್ರೆಗೆ ಭೇಟಿ ನೀಡುವೆ. ಕಾರು ಸ್ಫೋಟದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು. ಆ ಸ್ಫೋಟದ ಸ್ಥಳದಲ್ಲಿ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ. i20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ಸತ್ಯಾಸತ್ಯತೆ ಜನರಿಗೆ ತಿಳಿಸ್ತೇವೆ’ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ