
ದೆಹಲಿ: ಪಂಜಾಬ್ ರೈತರು ಮತ್ತು ಕೇಂದ್ರ ಸರ್ಕಾರ ಆರನೇ ಹಂತದ ಮಾತುಕತೆಯ ದಿನಾಂಕ ಇಂದು ನಿರ್ಧಾರವಾಗಲಿದೆ. ಇಂದಿಗೆ ಪಂಜಾಬ್ ರೈತರ ಚಳವಳಿ ಬರೋಬ್ಬರಿ 27ನೇ ದಿನಕ್ಕೆ ಕಾಲಿಟ್ಟಿದ್ದು, ಚಳವಳಿಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಈ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಗಡಿಗಳಲ್ಲಿ ನೆಲೆಸಿರುವ ರೈತರು ಇಂದು ಸಭೆ ಸೇರಿ ಕೇಂದ್ರ ಸರ್ಕಾರದ ಮುಂದೆ ಇಡುವ ಪ್ರಸ್ತಾಪಗಳನ್ನು ಚರ್ಚಿಸಲಿದ್ದಾರೆ. ಅಲ್ಲದೇ ರೈತರ ಆಂತರಿಕ ಸಭೆಯಲ್ಲಿ ಸರ್ಕಾರದ ಜೊತೆ ಮಾತನಾಡುವ ದಿನಾಂಕವನ್ನು ನಿರ್ಧರಿಸಲಿದ್ದಾರೆ.
ಈಗಾಗಲೇ ರೈತರಿಗೆ ಕಳಿಸಲಾಗಿರುವ 8 ತಿದ್ದುಪಡಿ ಪ್ರಸ್ತಾಪವೇ ಅಂತಿಮವಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಪಂಜಾಬ್ ರೈತರು ಪ್ರಸ್ತಾಪ ಕಳಿಸಲಾದ ನಂತರವೂ ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲ ದಿನಗಳಲ್ಲಿ ನಡೆಯಲಿರುವ ಆರನೃಏ ಹಂತದ ಮಾತುಕತೆಯಲ್ಲಿ ಹಿಂದೆ ಕಳಿಸಲಾಗಿರುವ ಪ್ರಸ್ತಾಪವನ್ನೇ ಅಂತಿಮ ಎಂದು ತಿಳಿಯಬೇಕಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೆ ಚಳವಳಿಯನ್ನು ಅಂತಿಮಗೊಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧತೆ ನಡೆಸಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ನಾಳೆ ಕರೆಯಲಾದ ಕೇರಳ ವಿಧಾನ ಸಭೆಯ ವಿಶೇಚ ಅಧಿವೇಶನದಲ್ಲಿ ನೂತನ ಕೃಷಿ ಕಾಯ್ದೆಗಳ ಕುರಿತು ವಿಸ್ತ್ರತ ಚರ್ಚೆ ನಡೆಯಲಿದೆ. ಜೊತೆಗೆ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಿರ್ಣಯವನ್ನು ಹೊರಡಿಸುವ ನಿರ್ಧಾರ ತಳೆದಿದೆ. ಕೇವಲ ಪ್ರಮುಖ ನಾಯಕರಷ್ಟೇ ವಿಶೇಷ ಅಧಿವೇಶನದಲ್ಲಿ ಭಾಗವಹಿಸಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಕೃಷಿ ಮಸೂದೆ ವಿರೋಧಿ ನಿರ್ಣಯದ ಅಂಗೀಕರಿಸುವ ಕುರಿತು ಚರ್ಚೆ ನಡೆಸಿದ್ದಾರೆ.