ಗೋವಾದ ಪ್ರತಿ ಮನೆಯ ಒಬ್ಬ ನಿರುದ್ಯೋಗಿಗೆ ತಿಂಗಳಿಗೆ 3000 ರೂ. ಭತ್ಯೆ; ಅರವಿಂದ್ ಕೇಜ್ರಿವಾಲ್ ಭರವಸೆ

| Updated By: Lakshmi Hegde

Updated on: Sep 21, 2021 | 5:19 PM

Goa Assembly Election: ಗೋವಾದ ಪ್ರತಿ ಮನೆಯಲ್ಲಿರುವ ಒಬ್ಬ ನಿರುದ್ಯೋಗಿಗೆ ತಿಂಗಳಿಗೆ 3000 ರೂ.ಭತ್ಯೆ ನೀಡಲಾಗುತ್ತದೆ. ಅವರಿಗೆ ಉದ್ಯೋಗ ಸಿಗುವವರೆಗೂ ಈ ಹಣ ನೀಡಲಾಗುತ್ತದೆ.

ಗೋವಾದ ಪ್ರತಿ ಮನೆಯ ಒಬ್ಬ ನಿರುದ್ಯೋಗಿಗೆ ತಿಂಗಳಿಗೆ 3000 ರೂ. ಭತ್ಯೆ; ಅರವಿಂದ್ ಕೇಜ್ರಿವಾಲ್ ಭರವಸೆ
ಅರವಿಂದ್ ಕೇಜ್ರಿವಾಲ್​
Follow us on

ಪಣಜಿ: ದೆಹಲಿ ಮುಖ್ಯಮಂತ್ರಿ, ಆಪ್​ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal)​ ಇದೀಗ ಗೋವಾ ವಿಧಾನಸಭಾ ಚುನಾವಣೆ (Goa Assembly Election)ಯತ್ತ ಗಮನಹರಿಸಿದ್ದಾರೆ. ಇತ್ತೀಚೆಗಷ್ಟೇ ಉತ್ತಾರಖಂಡ್​ಗೆ ಭೇಟಿ ನೀಡಿದ್ದ ಅರವಿಂದ್ ಕೇಜ್ರಿವಾಲ್​ ಅಲ್ಲಿ ನಿರುದ್ಯೋಗ ಸಮಸ್ಯೆ ನೀಗಿಸುವುದೇ ಮೊದಲ ಆದ್ಯತೆ ಎಂದಿದ್ದರು. ಹಾಗೇ, ಮುಂದಿನ ವರ್ಷದ ಚುನಾವಣೆಯಲ್ಲಿ ಆಪ್​ ಅಧಿಕಾರಕ್ಕೆ ಬಂದರೆ  6ತಿಂಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆಯನ್ನೂ ನೀಡಿದ್ದಾರೆ. ಹಾಗೇ, ಇಂದು ಗೋವಾಕ್ಕೆ ಭೇಟಿ ನೀಡಿರುವ ಅವರು, ಅಲ್ಲಿಯೂ ಸಹ ನಿರುದ್ಯೋಗ ನೀಗಿಸುವ ಆಶ್ವಾಸನೆಯನ್ನೇ ನೀಡಿದ್ದಾರೆ.  

ಗೋವಾದಲ್ಲಿ 2022ರಲ್ಲಿ ನಡೆಯಲಿರುವ ಚುನಾವಣೆ ನಿಮಿತ್ತ ಮತ ಸೆಳೆಯಲು ಅಲ್ಲಿಗೆ ಧಾವಿಸಿರುವ ಅರವಿಂದ್ ಕೇಜ್ರಿವಾಲ್​ ಏಳು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಮೊದಲನೇದಾಗಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.  ಲಂಚವಿಲ್ಲದೆ ಸರ್ಕಾರಿ ಕೆಲಸ ಪಡೆಯಲು ಸಾಧ್ಯವಿಲ್ಲ ಎಂಬ ನಂಬಿಕೆ ಬಲವಾಗಿ ಇದೆ. ಆ ಸಂಪ್ರದಾಯವನ್ನು ನಾವು ಸಂಪೂರ್ಣವಾಗಿ ಹೋಗಲಾಡಿಸುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಗೋವಾದ ಪ್ರತಿ ಮನೆಯಲ್ಲಿರುವ ಒಬ್ಬ ನಿರುದ್ಯೋಗಿಗೆ ತಿಂಗಳಿಗೆ 3000 ರೂ.ಭತ್ಯೆ ನೀಡಲಾಗುತ್ತದೆ. ಅವರಿಗೆ ಉದ್ಯೋಗ ಸಿಗುವವರೆಗೂ ಈ ಹಣ ನೀಡಲಾಗುತ್ತದೆ. ಕೆಲಸ ಸಿಕ್ಕ ಬಳಿಕ ಅದನ್ನು ನಿಲ್ಲಿಸಲಾಗುತ್ತದೆ. ಇನ್ನು ಶೇ.80ರಷ್ಟು ಉದ್ಯೋಗವನ್ನು ಗೋವಾದ ಜನರಿಗಾಗಿಯೇ ಅಂದರೆ ಸ್ಥಳೀಯರಿಗಾಗಿಯೇ ಮೀಸಲಿಡಲಾಗುತ್ತದೆ ಎಂದೂ ಭರವಸೆ ನೀಡಿದ್ದಾರೆ.

ಕೊವಿಡ್​ 19ನಿಂದಾಗಿ ಪ್ರವಾಸೋದ್ಯಮ ಅವಲಂಬಿತ ಕುಟುಂಬಗಳು ಉದ್ಯೋಗ ಕಳೆದುಕೊಂಡಿವೆ. ಕೆಲವರ ಉದ್ಯೋಗ ಹೋಗಿಲ್ಲವಾದರೂ ಕೈಯಲ್ಲಿ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಅಂಥವರು ಮತ್ತೆ ಕೆಲಸಕ್ಕೆ ಹೋಗಿ, ಸಂಬಳ ಪಡೆಯುವಂತೆ ಆಗುವವರೆಗೂ ತಿಂಗಳಿಗೆ 5 ಸಾವಿರ ರೂ ನೀಡಲಾಗುತ್ತದೆ. ಅದೇ ರೀತಿ ಗಣಿಗಾರಿಕೆ ನಡೆಸುತ್ತಿದ್ದು, ಉದ್ಯೋಗ ಕಳೆದುಕೊಂಡವರಿಗೂ ತಿಂಗಳಿಗೆ 5000 ರೂ.ನೀಡಲಾಗುವುದು ಎಂದಿದ್ದಾರೆ. ಅಷ್ಟೇ ಅಲ್ಲ, ಗೋವಾದಲ್ಲಿ ಕೌಶಲ ವಿಶ್ವವಿದ್ಯಾಲಯ ನಿರ್ಮಿಸುವ ಮೂಲಕ ಯುವಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದೂ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ₹12 ಕೋಟಿ ಗೆದ್ದ ಆಟೋ ಚಾಲಕ; ಕೇರಳ ತಿರುವೋಣಂ ಬಂಪರ್ ಲಾಟರಿ ವಿಜೇತ ಯಾರು ಎಂಬ ಪ್ರಶ್ನೆಗೆ  ಕೊನೆಗೂ ಸಿಕ್ಕಿತು ಉತ್ತರ

Karnataka High Court: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಿತು ರಾಜ್ ಅವಸ್ತಿ ನೇಮಕಕ್ಕೆ ಶಿಫಾರಸು

(Delhi Chief Minister Arvind Kejriwal announced one unemployed youth per household in Goa)

Published On - 5:10 pm, Tue, 21 September 21