ನವದೆಹಲಿ: ರದ್ದಾಗಿರುವ ಅಬಕಾರಿ ನೀತಿಗೆ ಸಂಬಂಧಿಸಿದಂತೆ (Delhi Excise Policy Scam) ಇಡಿಯಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ತಿಹಾರ್ ಜೈಲಿನಿಂದ (Tihar Jail) ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರಕ್ಕೆ ನಿಗದಿಪಡಿಸಿತ್ತು. ಆದರೆ, ಅದಕ್ಕೂ ಒಂದು ದಿನದ ಮೊದಲೇ ಸಿಬಿಐ ಅವರನ್ನು ಬಂಧಿಸುವ ಮೂಲಮ ಕೇಜ್ರಿವಾಲ್‌ಗೆ ಮತ್ತೊಂದು ಶಾಕ್ ನೀಡಿದೆ.
ಇಡಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಜಾಮೀನಿನ ವಿಚಾರಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಸಂಜೆ ತಿಹಾರ್ ಜೈಲಿನಿಂದ ಬಂಧಿಸಿದೆ. ಕೇಂದ್ರೀಯ ತನಿಖಾ ದಳ ಸೋಮವಾರ ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಅವರನ್ನು ಪರೀಕ್ಷಿಸಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆಯನ್ನು ದಾಖಲಿಸಿದೆ. ಬುಧವಾರ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಕೇಜ್ರಿವಾಲ್ ಅವರನ್ನು ಹಾಜರುಪಡಿಸಲು ಸಿಬಿಐ ಅನುಮತಿ ಪಡೆದಿದೆ. ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಇದನ್ನೂ ಓದಿ: Arvind Kejriwal: ಅರವಿಂದ್ ಕೇಜ್ರಿವಾಲ್‌ಗೆ ಮತ್ತೊಂದು ಶಾಕ್; ಜಾಮೀನು ನಿರಾಕರಿಸಿದ ಹೈಕೋರ್ಟ್
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು ನೀಡುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಡೆದಿತ್ತು. ವಿಚಾರಣಾ ನ್ಯಾಯಾಲಯದ ಆದೇಶವು “ವಿಕೃತತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.
ದೆಹಲಿ ಅಕ್ರಮ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಕಳೆದ ಮಾರ್ಚ್ 21ರಂದು ಇಡಿ (ಜಾರಿ ನಿರ್ದೇಶನಾಲಯ) ಬಂಧಿಸಿತ್ತು. ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್ 2ರಂದು ಅವರು ಮತ್ತೆ ನ್ಯಾಯಾಲಯದ ಮುಂದೆ ಶರಣಾಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ