ನವದೆಹಲಿ, ಜನವರಿ 3: ದಟ್ಟವಾದ ಮಂಜಿನಿಂದಾಗಿ ಉತ್ತರ ಭಾರತದ ವಿವಿಧ ನಗರಗಳಲ್ಲಿ ವಿಮಾನ ಸಂಚಾರ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಗೋಚರತೆ ಶೂನ್ಯಕ್ಕೆ ಇಳಿದಿದ್ದರಿಂದ 202 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಂಡಿ) ಮಾಹಿತಿಯ ಪ್ರಕಾರ, ದೆಹಲಿಯಲ್ಲಿ 16 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇದ್ದು, ಸಾಮಾನ್ಯಕ್ಕಿಂತ ಮೂರು ಡಿಗ್ರಿಗಳಷ್ಟು ಕಡಿಮೆಯಾಗಿದೆ. ಕನಿಷ್ಠ ತಾಪಮಾನ 7.6 ಡಿಗ್ರಿ ಸೆಲ್ಸಿಯಸ್ ಇದೆ.
ಪ್ರತಿಕೂಲ ಹವಾಮಾನದಿಂದಾಗಿ ಅಮೃತಸರ ಮತ್ತು ಗುವಾಹಟಿಗೆ ಬರುವ ಮತ್ತು ಹೋಗುವ ಎಲ್ಲಾ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಸ್ಪೈಸ್‌ಜೆಟ್ ಹೇಳಿದೆ. ದೆಹಲಿ, ಅಮೃತಸರ, ಲಕ್ನೋ, ಬೆಂಗಳೂರು ಮತ್ತು ಗುವಾಹಟಿ ಮಾರ್ಗಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಇಂಡಿಗೋ ತಿಳಿಸಿದೆ.
ಹವಾಮಾನ ಇದೇ ರೀತಿ ಮುಂದುವರಿದರೆ ಕಡಿಮೆ ಗೋಚರತೆಯಿಂದಾಗಿ ವಿಮಾನಗಳು ರದ್ದಾಗಬಹುದು ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ಹವಾಮಾನ ಸಂಬಂಧಿತ ಪರಿಸ್ಥಿತಿಗಳಿಂದಾಗಿ ದೆಹಲಿಯಿಂದ ಹೊರಡುವ ಕನಿಷ್ಠ 24 ರೈಲುಗಳು ವಿಳಂಬವಾಗಿವೆ. ಅಯೋಧ್ಯೆ ಎಕ್ಸ್‌ಪ್ರೆಸ್ ನಾಲ್ಕು ಗಂಟೆಗಳ ಕಾಲ ವಿಳಂಬವಾಗಿ ಸಂಚರಿಸಿದೆ. ಗೋರಖ್‌ಧಾಮ್ ಎಕ್ಸ್‌ಪ್ರೆಸ್ ಎರಡು ಗಂಟೆಗಳಿಗಿಂತ ಹೆಚ್ಚು ತಡವಾಗಿ ಪ್ರಯಾಣ ಬೆಳೆಸಿದೆ. ಬಿಹಾರ ಕ್ರಾಂತಿ ಎಕ್ಸ್‌ಪ್ರೆಸ್ ಮತ್ತು ಶ್ರಮ ಶಕ್ತಿ ಎಕ್ಸ್‌ಪ್ರೆಸ್ ಮೂರು ಗಂಟೆಗಳಿಗೂ ಹೆಚ್ಚು ವಿಳಂಬವಾಗಿದೆ.
ಇದನ್ನೂ ಓದಿ: ಗರ್ಲ್ಸ್ ಹಾಸ್ಟೆಲ್ ಬಾತ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಕೆ ಆರೋಪ; 300ಕ್ಕೂ ವಿಡಿಯೋ ಇರುವ ಶಂಕೆ
ದೆಹಲಿ, ಲಕ್ನೋ, ಬೆಂಗಳೂರು, ಅಮೃತಸರ ಮತ್ತು ಗುವಾಹಟಿಯಲ್ಲಿ ದಟ್ಟವಾದ ಮಂಜು ಆವರಿಸಿದೆ. ದೆಹಲಿ, ರಾಜಸ್ಥಾನದ ಕೋಟಾ, ಬುಂದಿ, ಸಿಕರ್, ಜುಂಜುನು, ಚುರು, ಶ್ರೀ ಗಂಗಾನಗರ ಮತ್ತು ಟೋಂಕ್, ಪಂಜಾಬ್‌ನ ಅಮೃತಸರ, ಗುರುದಾಸ್‌ಪುರ, ತರ್ನ್ ತರಣ್ ಮತ್ತು ಕಪುರ್ತಲ, ಮತ್ತು ಹರಿಯಾಣದ ಕುರುಕ್‌ಶೆತ್ರಾದಲ್ಲಿ ದಟ್ಟವಾದ ಮಂಜು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Fri, 3 January 25