Delhi Fridge Murder Case: ಪ್ರೇಯಸಿಯ ಕೊಂದು ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದ ಆರೋಪಿ ಸಾಹಿಲನ ತಂದೆ, ಸ್ನೇಹಿತರೂ ಅಂದರ್ ಆದರು
ಆರೋಪಿಯ ತಂದೆ ವೀರೇಂದ್ರ, ಆತನ ಸೋದರ ಸಂಬಂಧಿಗಳಾದ ಆಶಿಶ್ ಮತ್ತು ನವೀನ್, ಆತನ ಸ್ನೇಹಿತರಾದ ಲೋಕೇಶ್ ಮತ್ತು ಅಮರ್ ಅವರನ್ನು ಶುಕ್ರವಾರ ತಡರಾತ್ರಿ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.
ದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ಶ್ರದ್ಧಾ ಹತ್ಯೆ ಕೇಸ್(Delhi Shraddha Walker Murder Case) ಬಳಿಕ ಅದೇ ರೀತಿ ಹೋಲುವಂತಹ ಮರ್ಡರ್ ಕೇಸ್ಗಳ ಸಂಖ್ಯೆ ಹೆಚ್ಚಾಗಿತ್ತು. ಈಗ ಮತ್ತೆ ಅದೇ ಮಾದರಿಯ ಮತ್ತೊಂದು ಹತ್ಯೆ ರಾಜಧಾನಿ ದೆಹಲಿಯಲ್ಲೇ ನಡೆದಿದ್ದು ಪೊಲೀಸರು ಆರೋಪಿಯ ಕುಟುಂಬಸ್ಥರನ್ನೂ ಬಂಧಿಸಿದ್ದಾರೆ. ಈ ಹಿಂದೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಸದ್ಯ ಈಗ ಕುಟುಂಬಸ್ಥರು ಮತ್ತು ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ.
ದೆಹಲಿಯ ನಜಾಫ್‌ಗಢ್‌ನ ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ಧಾಬಾವೊಂದರಲ್ಲಿ ತನ್ನ 22 ವರ್ಷದ ಪ್ರಿಯತಮೆ ನಿಕ್ಕಿ ಯಾದವ್ ಕೊಂದು ಶವವನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಆರೋಪದ ಮೇಲೆ ದೆಹಲಿ ಪೊಲೀಸರು 24 ವರ್ಷದ ಸಾಹಿಲ್ ಗೆಹ್ಲೋಟ್ನನ್ನು ಬಂಧಿಸಿದ್ದರು. ಸದ್ಯ ಈಗ ಆರೋಪಿ ಸಾಹಿಲ್ ಕೃತ್ಯಕ್ಕೆ ನೆರವು ನೀಡಿದ್ದ ಆರೋಪದಡಿ ಸಾಹಿಲ್ ತಂದೆ, ಇಬ್ಬರು ಸೋದರರು, ಇಬ್ಬರು ಸ್ನೇಹಿತರನ್ನು ಬಂಧಿಸಲಾಗಿದೆ.
ಆರೋಪಿಯ ತಂದೆ ವೀರೇಂದ್ರ, ಆತನ ಸೋದರ ಸಂಬಂಧಿಗಳಾದ ಆಶಿಶ್ ಮತ್ತು ನವೀನ್, ಆತನ ಸ್ನೇಹಿತರಾದ ಲೋಕೇಶ್ ಮತ್ತು ಅಮರ್ ಅವರನ್ನು ಶುಕ್ರವಾರ ತಡರಾತ್ರಿ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಸಾಹಿಲ್‌ನ ತಾಯಿಯ ಚಿಕ್ಕಮ್ಮನ ಮಗ ನವೀನ್ ದೆಹಲಿ ಪೊಲೀಸ್‌ನಲ್ಲಿ ಕಾನ್ಸ್‌ಟೇಬಲ್ ಆಗಿ ನೇಮಕಗೊಂಡಿದ್ದಾನೆ. ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಸಾಹಿಲ್‌ನ ತಂದೆಗೆ ಈ ಅಪರಾಧದ ಬಗ್ಗೆ ಮಾಹಿತಿ ತಿಳಿದಿತ್ತು. ಆದರೆ ನಿಕ್ಕಿಯನ್ನು ಕೊಂದ ಕೆಲವೇ ಗಂಟೆಗಳ ನಂತರ ತನ್ನ ಮಗನನ್ನು ಬೇರೊಬ್ಬರೊಂದಿಗೆ ಮದುವೆಯಾಗುವಂತೆ ತಂದೆಯೇ ಒತ್ತಾಯ ಮಾಡಿದ್ದರು ಎಂದು ತಿಳಿದು ಬಂದಿದೆ. ಸಾಹಿಲ್‌ನ ಸಂಬಂಧಿಕರು ಮತ್ತು ಸ್ನೇಹಿತರು ಶವವನ್ನು ಫ್ರಿಡ್ಜ್‌ನಲ್ಲಿ ಬಚ್ಚಿಡಲು ಸಹಾಯ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ
ಸಾಹಿಲ್ ಮತ್ತು ನಿಕ್ಕಿ ನಾಲ್ಕು ವರ್ಷಗಳಿಂದ ರಿಲೇಷನ್ಶಿಪ್ನಲ್ಲಿದ್ದರು. ಹಂತಕ ಸಾಹಿಲ್ ಗೆಹ್ಲೋಟ್ ತನ್ನ ಕುಟುಂಬ ಸದಸ್ಯರಿಗೆ ನಿಕ್ಕಿ ಯಾದವ್ ಜೊತಗಿನ ಸಂಬಂಧದ ಬಗ್ಗೆ ತಿಳಿಸಿರಲಿಲ್ಲ. ಸಾಹಿಲ್‌ನ ಮನೆಯವರು ಬೇರೊಬ್ಬ ಮಹಿಳೆಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರು. ಮದುವೆಯ ದಿನಾಂಕ ನಿಗದಿಪಡಿಸಿದ್ರು. ಈ ಮದುವೆಯ ಬಗ್ಗೆ ನಿಕ್ಕಿಗೆ ತಿಳಿದಾಗ, ಅವಳು ಸಾಹಿಲ್‌ಗೆ ಕರೆ ಮಾಡಿ ಮಾತನಾಡಬೇಕೆಂದು ಇಬ್ಬರೂ ಲಾಂಗ್ ಡ್ರೈವ್‌ಗೆ ಹೋಗಿದ್ದರು. ಈ ವಿಷಯದ ಕುರಿತು ಇಬ್ಬರ ನಡುವೆ ವಾದ-ವಿವಾದವಾಗಿದೆ. ನಂತರ ಕಾಶ್ಮೀರಿ ಗೇಟ್ ಐಎಸ್‌ಬಿಟಿ ಬಳಿ ನಿಕ್ಕಿ ಯಾದವ್ ಳನ್ನು ಆಕೆಯ ಸಾಹಿಲ್ ಗೆಹ್ಲೋಟ್ ಕತ್ತು ಹಿಸುಕಿ ಕೊಂದಿದ್ದಾನೆ. ಪ್ರಿಯತಮೆಯನ್ನು ಕೊಲ್ಲಲು ಆರೋಪಿಯು ತನ್ನ ಮೊಬೈಲ್‌ನ ಡೇಟಾ ಕೇಬಲ್ ಅನ್ನು ಬಳಸಿದ್ದಾನೆ. ಕಾರಿನಲ್ಲಿ ಆಕೆಯ ಕತ್ತು ಹಿಸುಕಿ ಸಾಯಿಸಿದ್ದಾನೆ. ಆಕೆಯನ್ನು ಕೊಂದ ನಂತರ ಆರೋಪಿ ಯುವತಿಯ ಶವವನ್ನು ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ಧಾಬಾದ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದಾನೆ. ಧಾಬಾದಲ್ಲಿ ಮಹಿಳೆಯ ಶವವನ್ನು ಫ್ರಿಡ್ಜ್‌ನಲ್ಲಿ ಪೊಲೀಸರು ಪತ್ತೆ ಮಾಡಿದ ಬಳಿಕ ಆರೋಪಿ ಸಾಹಿಲ್ ಗೆಹ್ಲೋಟ್ ನನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಸಾಹಿಲ್ ಗೆಹ್ಲೋಟ್ ಮತ್ತು ನಿಕ್ಕಿ ಪರಸ್ಪರ ಪ್ರೀತಿಸುತ್ತಿದ್ದರು. ಮಿತ್ರಾನ್ ಗ್ರಾಮದ ನಿವಾಸಿಯಾದ ಸಾಹಿಲ್, ಹರಿಯಾಣದ ಜಜ್ಜರ್ ನಿವಾಸಿ ನಿಕ್ಕಿಯನ್ನು 2018 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಗ ಭೇಟಿಯಾಗಿದ್ರು. ನಂತರ ಅವರು ಗ್ರೇಟರ್ ನೋಯ್ಡಾದ ಅದೇ ಕಾಲೇಜಿಗೆ ಪ್ರವೇಶ ಪಡೆದಿದ್ರು. ಒಟ್ಟಿಗೆ ಇದ್ದ ಇವರು ಗ್ರೇಟರ್ ನೋಯ್ಡಾದಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ರು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಅವರು ತಮ್ಮ ಮನೆಗಳಿಗೆ ಮರಳಿದರು ಮತ್ತು ಲಾಕ್‌ಡೌನ್ ಮುಗಿದ ನಂತರ, ಅವರು ಮತ್ತೆ ದ್ವಾರಕಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ರು.
ಇದನ್ನೂ ಓದಿ: ಶ್ರದ್ಧಾ ರೀತಿಯಲ್ಲೇ ಮತ್ತೊಂದು ಕೊಲೆ: ಢಾಬಾದ ಫ್ರಿಡ್ಜ್‌ನಲ್ಲಿ ಬಾಲಕಿಯ ಶವ ಪತ್ತೆ
ಹಂತಕ ಸಾಹಿಲ್ ಗೆಹ್ಲೋಟ್ ನನ್ನು ಇಂದು ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಸಾಹಿಲ್ ನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಅಫ್ತಾಬ್ ಶ್ರದ್ಧಾಳನ್ನು ಕೊಲೆ ಮಾಡಿದಂತೆಯೇ ಸಾಹಿಲ್ ನಿಕ್ಕಿಯನ್ನು ತುಂಡುಗಳಾಗಿ ಕತ್ತರಿಸಿ ನಂತರ ವಿವಿಧ ಸ್ಥಳಗಳಲ್ಲಿ ಎಸೆಯುತ್ತಾನೆ ಎಂದು ಪೊಲೀಸರು ಇಲ್ಲಿಯವರೆಗೆ ಊಹಿಸಿದ್ದರು. ಆದರೆ, ಈಗ ಬಹಿರಂಗವಾಗಿರುವುದು ಅದಕ್ಕಿಂತ ಭಿನ್ನವಾಗಿದೆ.
ಸಾಹಿಲ್ ಮದುವೆಯಾದ ನಂತರ ನಿಕ್ಕಿಯ ಶವವನ್ನು ಧಾಬಾದಲ್ಲಿ ಇಟ್ಟಿದ್ದ ಫ್ರಿಡ್ಜ್‌ನಿಂದ ಹೊರತೆಗೆದು ಸೂಟ್‌ಕೇಸ್‌ನಲ್ಲಿ ತುಂಬಿಸಿ ಬೇರೆ ರಾಜ್ಯಕ್ಕೆ ಹೋಗಿ ವಿಲೆವಾರಿ ಮಾಡುವ ಪ್ಲಾನ್ ಮಾಡಿದ್ದೆ ಎಂದು ಸಾಹಿಲ್ ವಿಚಾರ ವೇಳೆ ಹೇಳಿದ್ದಾನೆ. ನಿಕ್ಕಿಯ ಗುರುತನ್ನು ಮರೆಮಾಚಲು ಪ್ರಯತ್ನ ಪಟ್ಟಿದ್ದ ಆದರೆ ಇದು ಸಾಧ್ಯವಾಗಲಿಲ್ಲ ಮತ್ತು ಮೃತದೇಹವನ್ನು ವಿಲೇವಾರಿ ಮಾಡುವ ಮೊದಲೇ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.ನಿಕ್ಕಿಯನ್ನು ಕೊಂದು 40 ಕಿಲೋಮೀಟರ್ ದೂರದಲ್ಲಿ ಕೊಂಡೊಯ್ದಿದ್ದ ಕಾರನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿಕ್ಕಿ ಯಾದವ್ ಕೊಲೆಯಾಗುವ ರಾತ್ರಿ ಸಾಹಿಲ್ ಮನೆಗೆ ಆಗಮಿಸಿರುವ ಸಿಸಿಟಿವಿ ದೃಶ್ಯಗಳು ಸಿಕ್ಕಿವೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:15 am, Sat, 18 February 23