ದೆಹಲಿ ಸೆಪ್ಟೆಂಬರ್ 17: ಮಂಗಳವಾರ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಎಎಪಿ ನಾಯಕಿ ಅತಿಶಿ (Atishi), ತನಗೆ ಇಂತಹ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ‘ಗುರು’ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಧನ್ಯವಾದ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ಘೋಷಣೆಗೆ ಮೊದಲ ಪ್ರತಿಕ್ರಿಯೆ ನೀಡಿದ ಸಚಿವೆ, ಕೇಜ್ರಿವಾಲ್ ಅವರು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ವಾರ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಪಡೆದ ನಂತರ, ಅರವಿಂದ್ ಕೇಜ್ರಿವಾಲ್ ಅವರು 48 ಗಂಟೆಗಳ ಒಳಗೆ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾನುವಾರ ಘೋಷಿಸಿದ್ದರು. ರಾಷ್ಟ್ರ ರಾಜಧಾನಿಯ ಜನರಿಂದ “ಪ್ರಾಮಾಣಿಕತೆಯ ಪ್ರಮಾಣಪತ್ರ” ಪಡೆಯುವವರೆಗೆ ನಾನು ದೆಹಲಿಯ ಮುಖ್ಯಮಂತ್ರಿ ಪಾತ್ರವನ್ನು ವಹಿಸುವುದಿಲ್ಲ. ನವೆಂಬರ್‌ನಲ್ಲಿ ದೆಹಲಿ ವಿಧಾನಸಭಾ ಚುನಾವಣೆಯನ್ನು ಚುನಾವಣಾ ಆಯೋಗ ನಡೆಸಬೇಕು ಎಂದು ಕೇಜ್ರಿವಾಲ್ ಒತ್ತಾಯಿಸಿದ್ದರು.
ಆಮ್ ಆದ್ಮಿ ಪಕ್ಷ (ಎಎಪಿ) ಇಂದು ಅರವಿಂದ್ ಕೇಜ್ರಿವಾಲ್ ಅವರ ಉತ್ತರಾಧಿಕಾರಿಯಾಗಿ ಅತಿಶಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಘೋಷಿಸಿದೆ.
“ದೆಹಲಿಯ ಜನಪ್ರಿಯ ಸಿಎಂ, ನನ್ನ ಗುರು ಅರವಿಂದ್ ಕೇಜ್ರಿವಾಲ್ ಅವರು, ಇಂತಹ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮೊದಲ ಬಾರಿಗೆ ರಾಜಕಾರಣಿಯೊಬ್ಬರು ಸಿಎಂ ಆಗುವುದು ಆಮ್ ಆದ್ಮಿ ಪಕ್ಷದಲ್ಲಿ ಮಾತ್ರ ಸಾಧ್ಯ. ನಾನು ಸಾಮಾನ್ಯ ಕುಟುಂಬದಿಂದ ಬಂದಿದ್ದೇನೆ. ನಾನು ಬೇರೆ ಪಕ್ಷದಲ್ಲಿ ಇರುತ್ತಿದ್ದರೆ ನನಗೆ ಚುನಾವಣೆ ಟಿಕೆಟ್ ಕೂಡ ಸಿಗುತ್ತಿರಲಿಲ್ಲ ಎಂದು ಅತಿಶಿ ಹೇಳಿದ್ದಾರೆ.
“ಅರವಿಂದ್ ಕೇಜ್ರಿವಾಲ್ ನನ್ನ ಮೇಲೆ ನಂಬಿಕೆ ಇಟ್ಟು, ನನ್ನನ್ನು ಶಾಸಕಿ, ಸಚಿವರನ್ನಾಗಿ ಮಾಡಿ, ಇಂದು ಸಿಎಂ ಆಗುವ ಜವಾಬ್ದಾರಿ ನೀಡಿದ್ದಾರೆ, ಅರವಿಂದ್ ಕೇಜ್ರಿವಾಲ್ ನನ್ನ ಮೇಲೆ ಇಷ್ಟೊಂದು ನಂಬಿಕೆ ಇಟ್ಟಿದ್ದಕ್ಕೆ ಖುಷಿಯಾಗಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ನನ್ನ ಅಣ್ಣ ಅರವಿಂದ್ ಕೇಜ್ರಿವಾಲ್ ಇಂದು ರಾಜೀನಾಮೆ ನೀಡುತ್ತಿರುವುದು ನನಗೆ ಬೇಸರವಾಗಿದೆ ಎಂದಿದ್ದಾರೆ ಅತಿಶಿ
ದೆಹಲಿಯಲ್ಲಿ ಒಬ್ಬರೇ ಸಿಎಂ ಮತ್ತು ಅವರ ಹೆಸರು ಅರವಿಂದ್ ಕೇಜ್ರಿವಾಲ್ ಎಂದು ದೆಹಲಿಯ ಎರಡು ಕೋಟಿ ಜನರ ಪರವಾಗಿ ನಾನು ಇಂದು ಹೇಳಲು ಬಯಸುತ್ತೇನೆ ಎಂದು ಅತಿಶಿ ಹೇಳಿದ್ದಾರೆ .
ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾದ ಅತಿಶಿ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಹಿರಿಯ ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಬಂಧಿತರಾಗಿದ್ದಾಗ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸಿದರು. ಅತಿಶಿ ಹಲವಾರು ಪ್ರಮುಖ ಖಾತೆಗಳನ್ನು ಹೊಂದಿದ್ದರು. ಕೇಜ್ರಿವಾಲ್ ಅನುಪಸ್ಥಿತಿಯಲ್ಲಿ ದೆಹಲಿ ಸರ್ಕಾರದ ನೀತಿಗಳನ್ನು ಸಮರ್ಥಿಸಿಕೊಂಡರು
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 11 ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಮುಖ್ಯಮಂತ್ರಿ ಕಚೇರಿಗೆ ಪ್ರವೇಶಿಸುವಂತಿಲ್ಲ ಎಂಬ ಷರತ್ತಿನಡಿ ಕಳೆದ ವಾರ ಸುಪ್ರೀಂಕೋರ್ಟ್‌ನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಇದನ್ನೂ ಓದಿ: Atishi Net Worth: ತನ್ನ ಹೆಸರಲ್ಲಿ ಜಮೀನು, ಒಡವೆ ಇಲ್ಲದೇ ಇದ್ದರೂ ಕೋಟ್ಯಾಧಿಪತಿ ಈ ಅತಿಶಿ
ಸುಪ್ರೀಂಕೋರ್ಟ್‌ನ ಷರತ್ತುಗಳಿಂದಾಗಿ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ