Agnipath: ಅಗ್ನಿಪಥ್ ಯೋಜನೆಗೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಣೆ, ನೇಮಕಾತಿ ಅಬಾಧಿತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 26, 2022 | 7:07 AM

Delhi High Court: ‘ಅನಗತ್ಯವಾಗಿ ವಿಷಯವನ್ನು ಸಂಕೀರ್ಣಗೊಳಿಸಲು ನಾವು ಇಚ್ಛಿಸುವುದಿಲ್ಲ. ಹೀಗಾಗಿ ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ’ ಎಂದು ದೆಹಲಿ ಹೈಕೋರ್ಟ್ ಹೇಳಿತು.

Agnipath: ಅಗ್ನಿಪಥ್ ಯೋಜನೆಗೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಣೆ, ನೇಮಕಾತಿ ಅಬಾಧಿತ
ದೆಹಲಿ ಹೈಕೋರ್ಟ್​ ಮತ್ತು ಸೇನೆ (ಪ್ರಾತಿನಿಧಿಕ ಚಿತ್ರ)
Follow us on

ದೆಹಲಿ: ಅಗ್ನಿಪಥ್ ಯೋಜನೆಗೆ (Agnipath Scheme) ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ (Delhi High Court) ಗುರುವಾರ ನಿರಾಕರಿಸಿದೆ. ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳಿಗೆ ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಸಮಯ ನೀಡಲು ಹೈಕೋರ್ಟ್​ ಸಮ್ಮತಿಸಿದೆ. ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಪ್ರಸಾದ್ ಅವರಿದ್ದ ನ್ಯಾಯಪೀಠವು ಮಧ್ಯಂತರ ಆದೇಶ ನೀಡಲು ಒಪ್ಪಲಿಲ್ಲ. ಈ ಬಗ್ಗೆ ಅರ್ಜಿದಾರರು ಮತ್ತು ಕೇಂದ್ರ ಸರ್ಕಾರದ ವಾದಗಳನ್ನು ಆಲಿಸಿ, ನಂತರ ತೀರ್ಮಾನಿಸುವುದಾಗಿ ಹೇಳಿತು.

ಮುಂದಿನ ನಿರ್ಧಾರದವರೆಗೆ ಯೋಜನೆಯಡಿ ನೇಮಕಾತಿ ಸ್ಥಗಿತಗೊಳಿಸಬೇಕು ಎನ್ನುವ ಅರ್ಜಿದಾರರ ಮನವಿ ಆಲಿಸಿದ ನ್ಯಾಯಪೀಠವು, ‘ನಾವು ನಿಮ್ಮ ವಾದವನ್ನು ಆಲಿಸಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅನಗತ್ಯವಾಗಿ ವಿಷಯವನ್ನು ಸಂಕೀರ್ಣಗೊಳಿಸಲು ಇಚ್ಛಿಸುವುದಿಲ್ಲ. ಹೀಗಾಗಿ ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ’ ಎಂದು ಹೇಳಿತು.

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾತಿ, ‘ಎಲ್ಲ ಅರ್ಜಿದಾರರು ಪ್ರಸ್ತಾಪಿಸಿರುವ ಅಂಶಗಳಿಗೆ ಸಮಗ್ರ ಪ್ರತಿಕ್ರಿಯೆ ದಾಖಲಿಸಲು ಅವಕಾಶ ನೀಡಬೇಕು’ ಎಂದು ಕೋರಿದರು. ‘ಕೆಲ ಅರ್ಜಿದಾರರು ಸೈನಿಕ, ಏರ್​ಮನ್, ಸೈಲರ್ ಮತ್ತಿತರ ಹುದ್ದೆಗಳ ಜಾಹೀರಾತಿನ ಬಗ್ಗೆ ಆಕ್ಷೇಪಿಸಿದ್ದಾರೆ. ಈ ಅರ್ಜಿಗಳ ಬಗ್ಗೆ ಪ್ರತ್ಯೇಕವಾಗಿ ಪ್ರತಿಕ್ರಿಯೆ ದಾಖಲಿಸಬೇಕು’ ಎಂದು ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಈ ಪ್ರಕರಣವನ್ನು ಎಳೆದಾಡಲು ನಮಗೆ ಇಷ್ಟವಿಲ್ಲ. ಕೆಲ ಹುದ್ದೆಗಳ ನೇಮಕಾತಿ ಆರಂಭವಾಗಿದೆ. ಕೆಲ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ವಿವಿಧ ರೀತಿಯ ಪ್ರಕರಣಗಳು ನಮ್ಮೆದುರು ಇವೆ. ನಾವು ಈ ಎಲ್ಲವನ್ನೂ ಒಂದೇ ಬಾರಿಗೆ ಇತ್ಯರ್ಥಪಡಿಸಬೇಕಿದೆ ಎಂದು ನ್ಯಾಯಾಲಯವು ಹೇಳಿತು. ಅಕ್ಟೋಬರ್ 19ಕ್ಕೆ ಪ್ರಕರಣವನ್ನು ಮುಂದೂಡಲಾಯಿತು.

ಕಳೆದ ಜೂನ್ 14ರಂದು ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯಡಿ 17.5 ವರ್ಷದಿಂದ 21 ವರ್ಷದೊಳಗಿನವರಿಗೆ ಸಶಸ್ತ್ರ ದಳಗಳಲ್ಲಿ ನಾಲ್ಕು ವರ್ಷಗಳ ಅವಧಿಗೆ ನೇಮಿಸಿಕೊಳ್ಳುವುದಾಗಿ ಹೇಳಿತ್ತು. ಈ ಪೈಕಿ ಶೇ 25ರಷ್ಟು ಸಿಬ್ಬಂದಿಗೆ 15 ವರ್ಷಗಳ ಸೇವಾವಧಿ ಸಿಗಲಿದೆ ಎಂದು ಕೇಂದ್ರ ಹೇಳಿತ್ತು. ಈ ಯೋಜನೆ ವಿರೋಧಿಸ ದೇಶಾದ್ಯಂತ ಪ್ರತಿಭಟನೆಗಳು ನಡೆದಿತ್ತು. ನಂತರದ ದಿನಗಳಲ್ಲಿ ಸರ್ಕಾರವು ಗರಿಷ್ಠ ವಯೋಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿತು.