ದೆಹಲಿ: ಲೋಕಸಭೆಯಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ನಾಯಕರಾಗಿ ಪಶುಪತಿ ಕುಮಾರ್ ಪಾರಸ್ ಅವರಿಗೆ ಮಾನ್ಯತೆ ಕೊಡುವ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ನಿರ್ಧಾರ ಪ್ರಶ್ನಿಸಿ ದೆಹಲಿ ಹೈಕೋರ್ಟ್ಗೆ ಎಲ್ಜೆಪಿಯ ಮತ್ತೊಂದು ಬಣದ ನಾಯಕ ಚಿರಾಗ್ ಪಾಸ್ವಾನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಶುಕ್ರವಾರ ತಳ್ಳಿಹಾಕಿದೆ. ಈ ಅರ್ಜಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಷ್ಟು ಪೂರಕ ಅಂಶಗಳು ಇಲ್ಲ ಎಂದು ಕೋರ್ಟ್ ಹೇಳಿದೆ.
ಸದನದ ವಿಚಾರಗಳನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್ಗೆ ಇದೆ ಎಂಬುದು ಈಗಾಗಲೇ ಸ್ಪಷ್ಟಗೊಂಡಿರುವ ಅಂಶ. ಈ ರಿಟ್ ಅರ್ಜಿಯಲ್ಲಿ ಹೆಚ್ಚಿನ ಕಾನೂನಾತ್ಮಕ ಅಂಶಗಳಿಲ್ಲ, ಹೀಗಾಗಿ ವಜಾ ಮಾಡುತ್ತಿದ್ದೇನೆ ಎಂದು ನ್ಯಾಯಮೂರ್ತಿ ರೇಖಾ ಪಲ್ಲಿ ತಿಳಿಸಿದರು. ಅರ್ಜಿ ಸಲ್ಲಿಸಿದ ಕಾರಣಕ್ಕೆ ಚಿರಾಗ್ಗೆ ದಂಡ ವಿಧಿಸಲು ಒಂದು ಹಂತದಲ್ಲಿ ನ್ಯಾಯಾಲಯ ಮುಂದಾಗಿತ್ತು. ಆದರೆ ಚಿರಾಗ್ ವಕೀಲರು ಮಧ್ಯಪ್ರವೇಶಿಸಿ ವಿನಂತಿಸಿದ ಹಿನ್ನೆಲೆಯಲ್ಲಿ ದಂಡ ವಿಧಿಸದೆ ಅರ್ಜಿ ವಜಾ ಮಾಡಿತು.
ಲೋಕಸಭೆ ಸ್ಪೀಕರ್ ಜೂನ್ 14ರಂದು ಪಾರಸ್ ಅವರನ್ನು ಲೋಕಸಭೆಯಲ್ಲಿ ಲೋಕ ಜನಶಕ್ತಿ ಪಕ್ಷದ ನಾಯಕ ಎಂದು ಘೋಷಿಸಿದ್ದರು. ಈ ಘೋಷಣೆಯನ್ನು ತಿರಸ್ಕರಿಸಬೇಕು ಎಂದು ಚಿರಾಗ್ ಪಾಸ್ವಾನ್ ವಿನಂತಿಸಿದ್ದರು. ತಮ್ಮ ಸೋದರ ರಾಮ್ ವಿಲಾಸ್ ಪಾಸ್ವಾನ್ ಅವರ ನೆರಳಿನಂತೆಯೇ ರಾಜಕೀಯ ಜೀವನದ ಬಹುಭಾಗ ಕಳೆದಿದ್ದ ಪಾರಸ್ ಜುಲೈ 7ರಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ನ್ಯಾಯಾಲಯದಲ್ಲಿ ಚಿರಾಗ್ ಪರವಾಗಿ ಮಾತನಾಡಿದ ವಕೀಲ ಅರವಿಂದ ಬಾಜಪೇಯಿ, ಲೋಕಸಭೆಯಲ್ಲಿ ಪಕ್ಷದ ಸಂಸದರಾಗಿರುವ ಆರು ಮಂದಿಯ ಪೈಕಿ ಐವರು ಪಾರಸ್ ಅವರನ್ನು ಪಕ್ಷದ ನಾಯಕರಾಗಿ ಮಾಡಬೇಕೆಂದು ಸ್ಪೀಕರ್ಗೆ ಪತ್ರ ಬರೆದಿದ್ದರು. ಇವರ ಪತ್ರ ಆಧರಿಸಿ ಸ್ಪೀಕರ್ ಕ್ರಮ ತೆಗೆದುಕೊಂಡರು. ನಂತರದ ಬೆಳವಣಿಗೆಯಲ್ಲಿ ಈ ಐವರನ್ನೂ ಪಕ್ಷದಿಂದ ವಜಾ ಮಾಡಲಾಯಿತು. ಚಿರಾಗ್ ಪಾಸ್ವಾನ್ ಅವರನ್ನು ಪಕ್ಷದ ಸಭಾ ನಾಯಕ ಎಂದು ಘೋಷಿಸಲು ಸ್ಪೀಕರ್ಗೆ ಮನವಿ ಮಾಡಲಾಯಿತು. ಆದರೂ ಸ್ಪೀಕರ್ ಈ ಸಂಬಂಧ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಸದನದಲ್ಲಿ ಪಾರಸ್ ಅವರನ್ನೇ ಸಭಾನಾಯಕರಾಗಿ ಮುಂದುವರಿಸಿದರು ಎಂದು ಹೇಳಿದರು.
ಕೇಂದ್ರ ಸರ್ಕಾರವನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಕೀಲ ರಾಜ್ಶೇಖರ್ ಈ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದರು. ಪಕ್ಷದ ಆಂತರಿಕ ಸಂಘರ್ಷವನ್ನು ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಲು ಚಿರಾಗ್ ಪಾಸ್ವಾನ್ ಯತ್ನಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಸ್ಪೀಕರ್ ಕಾರ್ಯನಿರ್ವಹಣೆ ಕುರಿತು ಕೇಂದ್ರ ಸರ್ಕಾರದ ವಕೀಲರ ವಾದವನ್ನು ಪುರಸ್ಕರಿಸುವುದಾಗಿ ನ್ಯಾಯಾಲಯ ಹೇಳಿತು. ಇದು ನಿಮ್ಮ ಪಕ್ಷದ ಆಂತರಿಕ ಸಂಘರ್ಷದ ವಿಚಾರ ಎಂದು ನನಗೆ ಮನವರಿಕೆಯಾಗಿದೆ. ನೀವು ಅಗತ್ಯಕ್ಕೆ ತಕ್ಕಂತೆ ಕ್ರಮ ತೆಗೆದುಕೊಳ್ಳಬಹುದು. ನಿಮ್ಮ ನಿರ್ಧಾರ ನೀವು ತೆಗೆದುಕೊಳ್ಳಿ. ನಾವು ನಂತರ ಈ ಸಂಬಂಧ ಆದೇಶ ಹೊರಡಿಸುತ್ತೇನೆ ಎಂದು ನ್ಯಾಯಾಧೀಶರು ಹೇಳಿದರು.
ನಾವು ಪಕ್ಷದ ಆಂತರಿಕ ವಿಚಾರ ಪರಿಹರಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ ಎಂದು ಹೇಳಿದ ಚಿರಾಗ್ ಪಾಸ್ವಾನ್ ಪರ ವಕೀಲರು, ಪಕ್ಷದ ಮುಖ್ಯ ಸಚೇತಕರು ತಮ್ಮಷ್ಟಕ್ಕೆ ತಾವೇ ತಮ್ಮನ್ನು ಸಭಾ ನಾಯಕರಾಗಿ ಪರಿಗಣಿಸಬೇಕೆಂದು ಸ್ಪೀಕರ್ಗೆ ಹೇಗೆ ಮನವಿ ಸಲ್ಲಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಆದರೆ ಹೈಕೋರ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಿತು. ಈ ವಿಚಾರದಲ್ಲಿ ಮಧ್ಯಪ್ರವೇಸಿಸುವುದಿಲ್ಲ ಮತ್ತು ಈ ಅರ್ಜಿಯಲ್ಲಿ ಪುರಸ್ಕರಿಸುವುದಿಲ್ಲ ಎಂದು ಹೇಳಿತು.
(Delhi High Court dismisses Chirag Paswan’s plea challenging decision to recognise Paras as leader of LJP in Lok Sabha)
ಇದನ್ನೂ ಓದಿ: Chirag Paswan ಮುಂದಿನ ತಿಂಗಳು ಬಿಹಾರದಾದ್ಯಂತ ರೋಡ್ ಶೋ ನಡೆಸಲಿದ್ದಾರೆ ಚಿರಾಗ್ ಪಾಸ್ವಾನ್
ಇದನ್ನು ಓದಿ: LJP Crisis: ಚಿರಾಗ್ ಪಾಸ್ವಾನ್ ಚಿಕ್ಕಪ್ಪನ ಮಗ ಪ್ರಿನ್ಸ್ ರಾಜ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ