ದೆಹಲಿ: ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುತ್ತಿದ್ದರೂ ಸಹ ಮಾಸ್ಕ್ ಧರಿಸಲೇಬೇಕು ಎಂದು ದೆಹಲಿ ಹೈಕೋರ್ಟ್ ಇಂದು ಆದೇಶ ಹೊರಡಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಎಲ್ಲೆಡೆ ಆವರಿಸಿರುವುದರಿಂದ ಮುಖಗವಸು ಧರಿಸುವುದು ವ್ಯಕ್ತಿಗೆ ಮತ್ತು ಸುತ್ತಲಿನ ಜನರಿಗೂ ‘ಸುರಕ್ಷಾ ಕವಚ’ ಆಗಲಿದೆ ಎಂದು ಹೈಕೋರ್ಟ್ ಆದೇಶ ನೀಡಿದೆ.
ಏಕಾಂಗಿಯಾಗಿ ಮಾಸ್ಕ್ ಧರಿಸದೇ ಕಾರಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ದಂಢ ವಿಧಿಸಿದ್ದಾರೆ ಎಂದು ಪ್ರಶ್ನಿಸಿದ್ದ ಅರ್ಜಿದಾರರ ವಿಚಾರಣೆಯ ಬಳಿಕ ನ್ಯಾಯಾಧೀಶೆ ಪ್ರತಿಭಾ ಎಂ. ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ನೀವು ಕಾರಿನಲ್ಲಿ ಏಕಾಂಗಿಯಾಗಿದ್ದರೂ ಏಕೆ ಮಾಸ್ಕ್ ಧರಿಸಲು ಆಕ್ಷೇಪಿಸುತ್ತೀರಿ? ಇದು ನಿಮ್ಮ ವೈಯಕ್ತಿಕ ಸುರಕ್ಷತೆಗಾಗಿ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕೊರೊನಾ ಸೋಂಕಿನ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಿದೆ. ಲಸಿಕೆಯನ್ನು ಕೂಡಾ ನಿಡಲಾಗುತ್ತಿದೆ. ವ್ಯಕ್ತಿ ಲಸಿಕೆ ಪಡೆದಿದ್ದರೂ ಕೂಡಾ ಮಾಸ್ಕ್ ಧರಿಸಬೇಕು ಎಂದು ಅವರು ಹೇಳಿದ್ದಾರೆ.
ದಾರಿಯಲ್ಲಿ ಸಾಗುವಾಗ ಮಧ್ಯ ಸಿಗ್ನಲ್ ಬಿದ್ದರೆ ಕಾರನ್ನು ನಿಲ್ಲಿಸುತ್ತೇವೆ. ಕಾರಿನ ಕಿಟಕಿಯನ್ನೂ ತೆರೆಯುತ್ತೇವೆ. ಕೊರೊನಾ ಸೋಂಕು ಎಷ್ಟು ಭಯಂಕರವಾಗಿದೆ ಎಂದರೆ ಆ ಸಮಯದಲ್ಲಾದರೂ ಸೋಂಕು ವ್ಯಕ್ತಿಗೆ ತಗುಲಿ ಪರಿಣಾಮ ಬೀರಬಲ್ಲದು ಎಂದು ಅವರು ತಿಳಿಸಿದ್ದಾರೆ. ಕಾರನ್ನು ಹಿಡಿದು ಮಾಸ್ಕ್ ಧರಿಸದಿದ್ದಕ್ಕಾಗಿ ₹500 ರೂಪಾಯಿ ದಂಡ ಪಾವತಿಸಿದ್ದನ್ನು ಪ್ರಶ್ನೆ ಮಾಡಿದ ಮೂವರಲ್ಲಿ ವಕೀಲ ಸೌರಭ್ ಶರ್ಮಾ ಕೂಡಾ ಒಬ್ಬರಾಗಿದ್ದಾರೆ.
ವಿಚಾರಣೆಯ ಸಮಯದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಒಬ್ಬರೇ ಇದ್ದು ವಾಹನ ಚಲಾಯಿಸುವಾಗ ಮಾಸ್ಕ್ ಕಡ್ಡಾಯವಿಲ್ಲ ಎಂದು ಹೇಳಿಕೆ ನೀಡಿತ್ತು. ಆದರೆ, ಪ್ರತಿಯೊಂದು ರಾಜ್ಯಕ್ಕೂ ತಮ್ಮದೇ ಆದ ನಿಯಮಾವಳಿಗಳನ್ನು ಜಾರಿಗೆ ತರಲು ಹಕ್ಕಿದೆ ಎಂದು ಸಚಿವಾಲಯ ಪ್ರತಿಪಾದಿಸಿದೆ. ದೆಹಲಿಯ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಖಾಸಗಿ ಅಥವಾ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಎಲ್ಲರೂ ಮುಖಗವಸು ಧರಿಸಬೇಕೆಂದು ವಾದಿಸಿತ್ತು. ಜೊತೆಗೆ ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಆದೇಶವನ್ನು ಸಹ ಜಾರಿಗೊಳಿಸಿತ್ತು.
ಆದರೆ, ದೆಹಲಿ ಸರ್ಕಾರದ ನಿಯಮದ ಹೊರತಾಗಿಯೂ, ಒಬ್ಬನೇ ವಾಹನ ಚಲಾಯಿಸುವ ವ್ಯಕ್ತಿಯು ಮುಖಗವಸು ಧರಿಸುವುದು ಅನಿವಾರ್ಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಪತ್ರಿಕಾಗೋಷ್ಠಿಯಲ್ಲಿ ಹೇಳಿತ್ತು.
ದೆಹಲಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣದ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಹೀಗೆ ಆದೇಶ ಹೊರಡಿಸಿದೆ. ಭಾರತದಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ಕಳೆದ 24 ಗಂಟೆಗಳಲ್ಲಿ ಮೊದಲ ಬಾರಿಗೆ 1.15 ಲಕ್ಷಕ್ಕೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗೆ ನಡುರಸ್ತೆಯಲ್ಲಿಯೇ ಹಿಗ್ಗಾಮುಗ್ಗ ಥಳಿಸಿದ ಪೊಲೀಸ್, ವಿಡಿಯೊ ವೈರಲ್
ದೇಶದ ವಿವಿಧೆಡೆ ಮತ್ತೆ ಕೊರೊನಾ ಆತಂಕ: ಮಾಸ್ಕ್ ಕಡ್ಡಾಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ