ನಕ್ಸಲರಿಂದ ಅಪಹೃತ ಕಮಾಂಡೊ ರಾಕೇಶ್ವರ್ ಸಿಂಗ್ ಚಿತ್ರ ಬಿಡುಗಡೆ; ಮಾತುಕತೆಗೆ ಮಧ್ಯವರ್ತಿ ನೇಮಕಕ್ಕೆ ಒತ್ತಾಯ

ಅಪಹೃತ ಯೋಧನ ಬಿಡುಗಡೆಗಾಗಿ ಮಾತಕತೆ ನಡೆಸಬಲ್ಲ ಮಧ್ಯವರ್ತಿಗಳನ್ನು ಗುರುತಿಸುವಂತೆ ಪತ್ರಿಕಾ ಹೇಳಿಕೆಯ ಮೂಲಕ ನಕ್ಸಲರು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.

  • TV9 Web Team
  • Published On - 16:55 PM, 7 Apr 2021
ನಕ್ಸಲರಿಂದ ಅಪಹೃತ ಕಮಾಂಡೊ ರಾಕೇಶ್ವರ್ ಸಿಂಗ್ ಚಿತ್ರ ಬಿಡುಗಡೆ; ಮಾತುಕತೆಗೆ ಮಧ್ಯವರ್ತಿ ನೇಮಕಕ್ಕೆ ಒತ್ತಾಯ
ಅಪಹೃತ ಸಿಆರ್​ಪಿಎಫ್ ಕಮಾಂಡೊ ರಾಕೇಶ್ವರ್ ಸಿಂಗ್

ರಾಯಪುರ: ಸಿಆರ್​ಪಿಎಫ್ ಮತ್ತು ಇತರ ಭದ್ರತಾ ಸಿಬ್ಬಂದಿ ಮೇಲೆ ಈಚೆಗೆ ನಕ್ಸಲರು ನಡೆಸಿದ ದಾಳಿಯಲ್ಲಿ ಸೆರೆಸಿಕ್ಕಿರಬಹುದು ಎನ್ನಲಾದ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ (Central Reserve Police Force – CRPF) ಕೋಬ್ರಾ ತುಕಡಿಯ ಯೋಧ ರಾಕೇಶ್ವರ್​ ಸಿಂಗ್ ಅವರ ಚಿತ್ರವನ್ನು ನಕ್ಸಲರು ಬಿಡುಗಡೆ ಮಾಡಿದ್ದಾರೆ. ಮಾವೋವಾದಿ ನಾಯಕನ ವಾಟ್ಸಾಪ್​ ಸಂಖ್ಯೆಯಿಂದ ಅಪಹೃತ ಯೋಧನ ಚಿತ್ರ ಬಿಡುಗಡೆಯಾಗಿದೆ ಎಂದು ಸುಕ್ಮ ಮತ್ತು ಬಿಜಾಪುರದ ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಅಪಹೃತ ಯೋಧನ ಬಿಡುಗಡೆಗಾಗಿ ಮಾತುಕತೆ ನಡೆಸಬಲ್ಲ ಮಧ್ಯವರ್ತಿಗಳನ್ನು ಗುರುತಿಸುವಂತೆ ಪತ್ರಿಕಾ ಹೇಳಿಕೆಯ ಮೂಲಕ ನಕ್ಸಲರು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.

ಕಳೆದ ಶನಿವಾರ (ಏಪ್ರಿಲ್ 3) ಸಿಆರ್​ಪಿಎಫ್​ನ ಕೋಬ್ರಾ ಘಟಕ, ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆಯ ಸಿಬ್ಬಂದಿಯ ಮೇಲೆ ನಕ್ಸಲರು ಹೊಂಚುದಾಳಿ ನಡೆಸಿದ್ದರು. ಈ ವೇಳೆ ಸುಮಾರು ಐದು ತಾಸು ಗುಂಡಿನ ಚಕಮಕಿ ನಡೆದಿತ್ತು. ಭದ್ರತಾಪಡೆಗಳಿಗೆ ಸೇರಿದ 22 ಮಂದಿ ಹುತಾತ್ಮರಾಗಿದ್ದರು. ಈ ವೇಳೆ ಸುಮಾರು 20 ಮಾವೋವಾದಿಗಳನ್ನು ಕೊಲ್ಲಲಾಗಿದೆ ಎಂದು ಭದ್ರತಾ ಪಡೆಗಳ ಸಿಬ್ಬಂದಿ ಹೇಳಿದ್ದರು. ಆದರೆ ಈ ಹೇಳಿಕೆಯನ್ನು ನಿರಾಕರಿಸಿದ್ದ ನಕ್ಸಲರು ತಮ್ಮ ಪಾಳಯದಲ್ಲಿ ಕೇವಲ ನಾಲ್ವರು ಸತ್ತಿದ್ದಾರೆ ಎಂದು ಹೇಳಿದ್ದರು.

ಶೂಟ್​ಔಟ್​ ವೇಳೆ ಸಿಆರ್​ಪಿಎಫ್​ ತುಕಡಿಯಲ್ಲಿದ್ದ ಜಮ್ಮು ಮೂಲದ ರಾಕೇಶ್ವರ್ ಸಿಂಗ್ ಮಾನ್ಹಸ್ ನಂತರ ನಾಪತ್ತೆಯಾಗಿದ್ದರು. ಅವರನ್ನು ನಕ್ಸಲರು ಅಪಹರಿಸಿರಬಹುದು ಎಂದು ಶಂಕಿಸಲಾಗಿತ್ತು. ನಾಪತ್ತೆಯಾಗಿದ್ದ ಯೋಧನ ಚಿತ್ರವು ಇಂದು (ಏಪ್ರಿಲ್ 7) ಮುಂಜಾನೆ 11.27ಕ್ಕೆ ಸ್ಥಳೀಯ ಪತ್ರಕರ್ತರಿಗೆ ಸಿಕ್ಕಿದೆ. ಮಾವೋವಾದಿಗಳ ನಾಯಕ ವಿಕಲ್ಪ ಈ ಫೋಟೊ ಕಳಿಸಿದ್ದಾರೆ ಎಂದು ಸುಕ್ಮದ ಪತ್ರಕರ್ತ ರಾಜಾ ರಾಥೋಡ್ ತಿಳಿಸಿದ್ದಾರೆ.

ನಕ್ಸಲರು ಮಂಗಳವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ‘ಅಪಹೃತ ಸಿಆರ್​ಪಿಎಫ್ ಯೋಧನ ಬಿಡುಗಡೆಗಾಗಿ ಮಾತುಕತೆಗಾಗಿ ಮಧ್ಯವರ್ತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ’ ಎಂದು ಹೇಳಿದೆ. 2012ರಲ್ಲಿ ಸುಕ್ಮದ ಜಿಲ್ಲಾಧಿಕಾರಿ ಅಲೆಕ್ಸ್​ ಪೌಲ್ ಮೆನನ್ ಅಪಹೃತರಾಗಿದ್ದಾಗ ಹೈದರಾಬಾದ್ ಮೂಲದ ಪ್ರಾಧ್ಯಾಪಕ ಜಿ.ಹರಗೋಪಾಲ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಿ.ಡಿ.ಶರ್ಮಾ ಮಧ್ಯವರ್ತಿಗಳಾಗಿ ಸಂಧಾನ ನಡೆಸಿದ್ದರು.

ಈ ಬಾರಿಯೂ ಸರ್ಕಾರ ಸ್ಥಳೀಯ ಪತ್ರಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮೂಲಕ ನಕ್ಸಲರ ಜೊತೆಗೆ ಮಾತುಕತೆ ನಡೆಸಬೇಕು ಎಂದು ಬಸ್ತಾರ್​ನಲ್ಲಿ ಶಾಂತಿಗಾಗಿ ಶ್ರಮಿಸುತ್ತಿರುವ ಹೋರಾಟಗಾರ ಶುಭ್ರಾಶು ಚೌಧರಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನಕ್ಸಲ್ ದಾಳಿಯ ಮಾಸ್ಟರ್ ಮೈಂಡ್ ಮಾದ್ವಿ ಹಿದ್ಮಾ ಯಾರೀತ?

Naxal

ಪ್ರಾತಿನಿಧಿಕ ಚಿತ್ರ

ಏನಾಗಿತ್ತು?
ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಕಳೆದ ಶನಿವಾರ (ಏಪ್ರಿಲ್ 4) ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಟ್ಟು 22 ಯೋಧರು ಹುತಾತ್ಮರಾಗಿದ್ದರು. ಗಾಯಗೊಂಡ 23 ಯೋಧರಿಗೆ ಬಿಜಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 7 ಯೋಧರಿಗೆ ರಾಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯೋಧನ ಮಗಳ ಕಣ್ಣೀರಿನ ಮನವಿ
ನಕ್ಸಲರ ಹಿಡಿತದಲ್ಲಿರುವ ತಮ್ಮ ಪತಿಯನ್ನು ಬಿಡುಗಡೆ ಮಾಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಆರ್​ಪಿಎಫ್ ಯೋಧ ರಾಕೇಶ್ವರ್ ಸಿಂಗ್ ಅವರ ಪತ್ನಿ ಮೀನು ಮನ್ಹಾಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದರು. ರಾಕೇಶ್ವರ್ ಸಿಂಗ್​ ಅವರ ಮಗಳು ಸಹ, ನಾನು ಅಪ್ಪನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ‘ನನಗೆ ನನ್ನ ಅಪ್ಪನೆಂದರೆ ತುಂಬ ಪ್ರೀತಿ, ನಕ್ಸಲ್​ ಅಂಕಲ್​ ದಯವಿಟ್ಟು ನನ್ನ ಅಪ್ಪನನ್ನು ಬಿಟ್ಟು ಕಳಿಸಿ..’ ಎಂದು ಕಣ್ಣೀರಿಡುತ್ತ, ಮುಗ್ಧವಾಗಿ ಕೇಳಿಕೊಂಡಿದ್ದಾಳೆ. ಈ ವಿಡಿಯೊ ದೇಶವ್ಯಾಪಿ ವೈರಲ್ ಆಗಿ, ಜನರ ಮನಸ್ಸು ಕಲಕಿತ್ತು.

ಇದನ್ನೂ ಓದಿ: ‘ನಕ್ಸಲ್ ಅಂಕಲ್.. ಪ್ಲೀಸ್ ನನ್ನ ಅಪ್ಪನನ್ನು ಬಿಟ್ಟುಬಿಡಿ’- ನಾಪತ್ತೆಯಾದ ಯೋಧ ರಾಕೇಶ್ವರ್ ಸಿಂಗ್​ರ 5ವರ್ಷದ ಮಗಳಿಂದ ಮನವಿ.. ಕಣ್ಣೀರು

Raghavi Daughter of CRPF Jawan

ರಾಕೇಶ್ವರ್​ ಸಿಂಗ್ ಪುತ್ರಿ ಅಳುತ್ತ ಮನವಿ ಮಾಡುತ್ತಿರುವುದು

ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಕೇಶ್ವರ್ ಸಿಂಗ್ ಪತ್ನಿ, ಮೀನು ಮನ್ಹಾಸ್​, ಐದು ದಿನಗಳ ಹಿಂದಷ್ಟೇ ನಾನು ನನ್ನ ಪತಿಯೊಂದಿಗೆ ಫೋನ್​​ನಲ್ಲಿ ಮಾತನಾಡಿದ್ದೆ. ಮುಖ್ಯವಾದ ಕಾರ್ಯಾಚರಣೆಗೆ ಹೋಗುತ್ತಿದ್ದೇನೆ, ಅಲ್ಲಿಂದ ಬಂದ ನಂತರ ಮಾತನಾಡುತ್ತೇನೆ ಎಂದು ಹೇಳಿದ್ದರು. ನಂತರ ಶನಿವಾರ ನಕ್ಸಲರ ಕ್ರೌರ್ಯದ ವರದಿಯನ್ನು ಮಾಧ್ಯಮಗಳಲ್ಲಿ ನೋಡಿದೆ. ತುಂಬ ಹೆದರಿಕೆಯಾಗಿ ನನ್ನ ಪತಿಗೆ ಕರೆ ಮಾಡಿದೆ. ಆದರೆ ಪ್ರತಿಕ್ರಿಯೆ ಇರಲಿಲ್ಲ. ಅದಾದ ಬಳಿಕ ಪತಿಯ ಸಹೋದ್ಯೋಗಿಗೆ ಕರೆ ಮಾಡಿದೆ. ಆಗ ನನ್ನ ಪತಿ ನಾಪತ್ತೆಯಾಗಿರುವುದು ನನಗೆ ತಿಳಿಯಿತು ಎಂದು ಹೇಳಿದ್ದಾರೆ.

ನನ್ನ ಪತಿ ಸುರಕ್ಷಿತರಾಗಿ ವಾಪಸ್​ ಬರುತ್ತಾರೆಂಬ ನಂಬಿಕೆ ಖಂಡಿತ ಇದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಹಾಯ ಮಾಡುತ್ತಾರೆ ಎಂದೂ ನಂಬಿಕೊಂಡಿದ್ದೇನೆ. ವಿಂಗ್ ಕಮಾಂಡರ್​ ಅಭಿನಂದನ್​ರನ್ನು ಪಾಕಿಸ್ತಾನ ಬಂಧಿಸಿದಾಗ ಅವರನ್ನು ಸುರಕ್ಷಿತವಾಗಿ ವಾಪಸ್​ ಕರೆದುಕೊಂಡು ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದರು. ಈಗ ನನ್ನ ಪತಿಯನ್ನೂ ಕಾಪಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದರು.

ಇದನ್ನೂ ಓದಿ: ಚತ್ತೀಸ್​ಗಡ್​ನಲ್ಲಿ ನಕ್ಸಲರ ಅಟ್ಟಹಾಸ; ಗುಂಡಿನ ಚಕಮಕಿಯಲ್ಲಿ 22 ಯೋಧರು ಹುತಾತ್ಮ