Pariksha Pe Charcha 2021: ಎಕ್ಸಾಂ ವಾರಿಯರ್ ಪುಸ್ತಕ ಓದಿ ನನಗೆ ಪತ್ರ ಬರೆಯಿರಿ: ಪ್ರಧಾನಿ ನರೇಂದ್ರ ಮೋದಿ
Pariksha Pe Charcha 2021: ಈವರೆಗೆ ಪರೀಕ್ಷಾ ಪೆ ಚರ್ಚಾದಲ್ಲಿ ಮುಖಾಮುಖಿ ಸಂವಾದ ಇರುತ್ತಿತ್ತು. ಆದರೆ ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣ ವರ್ಚ್ಯುವಲ್ ಆಗಿ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಸಂಜೆ 7ಗಂಟೆಯಿಂದ ವಿದ್ಯಾರ್ಥಿಗಳು, ಅವರ ಪಾಲಕರು ಮತ್ತು ಶಿಕ್ಷಕರೊಂದಿಗೆ ವರ್ಚ್ಯುವಲ್ ಆಗಿ ಪರೀಕ್ಷಾ ಪೆ ಚರ್ಚಾ ಸಂವಾದ ನಡೆಸುತ್ತಿದ್ದಾರೆ. ಈವರೆಗೆ ಪರೀಕ್ಷಾ ಪೆ ಚರ್ಚಾದಲ್ಲಿ ಮುಖಾಮುಖಿ ಸಂವಾದ ಇರುತ್ತಿತ್ತು. ಆದರೆ ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣ ವರ್ಚ್ಯುವಲ್ ಆಗಿ ನಡೆಯಲಿದೆ. 14 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮೋದಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ.
ನೀವು ಒಂದು ದಿನದಲ್ಲಿ ಬಳಸುವ ಎಲ್ಲ ವಸ್ತುಗಳ ಬಗ್ಗೆ ನಿಮ್ಮ ಕುಟುಂಬದ ಜೊತೆಗೂಡಿ ಒಂದು ಪಟ್ಟಿ ಮಾಡಿಕೊಳ್ಳಿ. ಅದರಲ್ಲಿ ಎಷ್ಟು ವಿದೇಶದ ನೆಲದಲ್ಲಿ ತಯಾರಾಗಿದೆ? ಎಷ್ಟು ಭಾರತದಲ್ಲಿ ತಯಾರಾಗಿದೆ ಅಂತ ಪಟ್ಟಿ ಮಾಡಿಕೊಳ್ಳಿ. ನಿಮ್ಮ ಪರೀಕ್ಷೆಯ ನಂತರ ನೀವು ಮಾಡಬೇಕಾದ ಪ್ರಾಜೆಕ್ಟ್ ಇದು. ಇದು ದೇಶದ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಶುಭ ಸಂದರ್ಭ. ಈ ಕಾರ್ಯಕ್ರಮಗಳಲ್ಲಿ ನೀವೂ ಪಾಲ್ಗೊಳ್ಳಿ. ನಿಮ್ಮ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರು, ಕ್ರಾಂತಿಕಾರಿಗಳು, ದೇಶಪ್ರೇಮಿಗಳ ಬಗ್ಗೆ ಪ್ರಾಜೆಕ್ಟ್ ಮಾಡಿ ಎಲ್ಲ ಕಿರಿಯ ಗೆಳೆಯರಿಗೂ ಧನ್ಯವಾದಗಳು ಎಂದು ಮೋದಿ ಮಾತನಾಡಿದ್ದಾರೆ.
ನಿಮ್ಮ ಶಿಕ್ಷಕರು, ತಂದೆ-ತಾಯಿ, ಅಜ್ಜ-ಅಜ್ಜಿಯ ಮಾರ್ಗದರ್ಶನ ಪಡೆದುಕೊಳ್ಳಿ.ಸೇವೆಯಿಂದಲೇ ಆನಂದ ಎಂದು ಗುರುದೇವ ರವೀಂದ್ರನಾಥ್ ಠಾಗೋರ್ ಹೇಳಿದ್ದರು. ನೀವು ಇದನ್ನು ಅನುಭವಿಸಿ. ದೇಶದ ಬಗ್ಗೆ ಯೋಚಿಸಿ. ನೀವು ಈ ಪರೀಕ್ಷೆಯನ್ನು ಉತ್ತಮ ಅಂಕ ಪಡೆದು ತೇರ್ಗಡೆಯಾಗ್ತೀರಿ, ಚೆನ್ನಾಗಿ ಓದಿ, ಆಡಿ, ಖುಷಿಪಡಿ. ನಿಮ್ಮಲ್ಲರ ಜೊತೆಗೆ ಮಾತನಾಡಿದ್ದು ಖುಷಿಯಾಯ್ತು. ನಿಮ್ಮ ಬಗ್ಗೆ ನೀವು ಯೋಚಿಸಿಕೊಳ್ಳಿ. ನೀವು ದೊಡ್ಡ ಪರೀಕ್ಷೆಯ ಬಗ್ಗೆ ಯೋಚಿಸಬೇಕು. ನಿಮ್ಮ ಭಾರತವನ್ನು ನೀವು ‘ಆತ್ಮನಿರ್ಭರ್’ ಮಾಡಬೇಕು. ವೋಕಲ್ ಫಾರ್ ಲೋಕಲ್ ನಿಮ್ಮ ಮಂತ್ರವಾಗಲಿ ಎಂದು ಮೋದಿ ಹೇಳಿದ್ದಾರೆ.
ಈ ವರ್ಚ್ಯುವಲ್ ಸಂವಾದದಲ್ಲಿ ಯಾರೆಲ್ಲ ಗೆಲ್ಲುತ್ತಾರೋ, ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರೊಟ್ಟಿಗೆ ಮುಖತಃ ಚರ್ಚೆ ನಡೆಸುವ ಅವಕಾಶ ಇರಲಿದೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ. ಪರೀಕ್ಷಾ ಪೆ ಚರ್ಚಾದ ತಾಜಾ ಮಾಹಿತಿ ಇಲ್ಲಿ ಲಭ್ಯ.
LIVE NEWS & UPDATES
-
ಪರೀಕ್ಷೆಯಲ್ಲಿ ವಿಫಲವಾದರೆ ಜೀವನದಲ್ಲಿಯೂ ಸೋತು ಹೋಗ್ತೀವಾ?
ಪರೀಕ್ಷೆಯ ನಂತರ ಏನಾಗುತ್ತೆ ಅಂತ ಭಯವಾಗುತ್ತೆ. ಪರೀಕ್ಷೆಯಲ್ಲಿ ವಿಫಲವಾದರೆ ಜೀವನದಲ್ಲಿಯೂ ಸೋತು ಹೋಗ್ತೀವಾ? ಎಂದು ಕೊಲ್ಕತ್ತಾದ ವಿದ್ಯಾರ್ಥಿ ಶ್ರೇಯಾನ್ ಪ್ರಶ್ನೆ ಮಾಡಿದ್ದಾರೆ. ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂತು ಅಂತಂದ್ರೆ ಅದು ಜೀವನದಲ್ಲಿ ಸೋಲು ಅಂತ ಭಾವಿಸಬೇಡಿ ಎಂದು ಮೋದಿ ಉತ್ತರಿಸಿದ್ದಾರೆ. ನಿಮ್ಮಲ್ಲರ ಜೊತೆಗೆ ಮಾತನಾಡಿದ್ದು ಖುಷಿಯಾಯ್ತು. ನಿಮ್ಮ ಬಗ್ಗೆ ನೀವು ಯೋಚಿಸಿಕೊಳ್ಳಿ. ನೀವು ದೊಡ್ಡ ಪರೀಕ್ಷೆಯ ಬಗ್ಗೆ ಯೋಚಿಸಬೇಕು. ನಿಮ್ಮ ಭಾರತವನ್ನು ನೀವು ‘ಆತ್ಮನಿರ್ಭರ್’ ಮಾಡಬೇಕು. ವೋಕಲ್ ಫಾರ್ ಲೋಕಲ್ ನಿಮ್ಮ ಮಂತ್ರವಾಗಲಿ ಎಂದು ಮೋದಿ ಹೇಳಿದ್ದಾರೆ.
-
ಮಕ್ಕಳು ಮತ್ತು ದೊಡ್ಡವರು ಪರಸ್ಪರ ಅರ್ಥ ಮಾಡಿಕೊಳ್ಳಬೇಕು
ನಿಮ್ಮ ಕಣ್ಣು, ಮನಸ್ಸು ತೆರೆದಿಡಿ. ಮಕ್ಕಳ ಆನಂದದಲ್ಲಿ ಭಾಗಿಯಾಗಿ. ಮಗು ಒಂದು ಹಾಡು ಕೇಳಿಸಿಕೊಂಡು ಖುಷಿಪಡುತ್ತಿದ್ದರೆ ನೀವೂ ಅದರಲ್ಲಿ ಪಾಲ್ಗೊಳ್ಳಿ. ಅದುಬಿಟ್ಟು ನಮ್ಮ ಕಾಲದ ಹಾಡುಗಳೇ ಚೆನ್ನಾಗಿರುತ್ತಿತ್ತು ಅಂತ ವಾದಿಸುತ್ತಾ ಮಕ್ಕಳ ಮನಸ್ಸು ನೋಯಿಸಬೇಡಿ. ನೀವು ನಿಮ್ಮದೇ ಕಥೆಯನ್ನು ಹೇಳಿಕೊಳ್ಳುತ್ತಾ ಇದ್ದರೆ ಜನರೇಷನ್ ಗ್ಯಾಪ್ ಕಡಿಮೆಯಾಗುವುದು ಹೇಗೆ? ಜನರೇಷನ್ ಗ್ಯಾಪ್ ಕಡಿಮೆ ಮಾಡಲು ಇರುವ ಒಂದೇ ಉಪಾಯ ಅಂದ್ರೆ- ಮಕ್ಕಳು ಮತ್ತು ದೊಡ್ಡವರು ಪರಸ್ಪರ ಅರ್ಥ ಮಾಡಿಕೊಳ್ಳಬೇಕು.
-
ಮಕ್ಕಳಿಗೆ ಅವರ ತಪ್ಪನ್ನು ಮನವರಿಕೆ ಮಾಡಿಕೊಡಿ
ಮಕ್ಕಳನ್ನು ಎಂದಿಗೂ ಡಾಮಿನೇಟ್ ಮಾಡಬೇಡಿ, ಮಕ್ಕಳಿಗೆ ಎಲ್ಲವನ್ನೂ ಒತ್ತಾಯಪೂರ್ಕವಾಗಿ ಕಲಿಸಲು ಯತ್ನಿಸಬೇಡಿ. ಮಕ್ಕಳು ಸಮಾಜವನ್ನು ನೋಡುತ್ತಿರುತ್ತಾರೆ. ಮನೆಯಲ್ಲಿ ನೀವು ಹೇಗೆ ವರ್ತಿಸುತ್ತೀರಿ ಎಂಬುದನ್ನು ನೋಡುತ್ತಿರುತ್ತಾರೆ. ಅದರಿಂದಲೇ ಸಾಕಷ್ಟು ಕಲಿಯುತ್ತಾರೆ. ನೀವು ಅವರ ಪ್ರತಿ ಮಾತನ್ನೂ ಗಮನಕೊಟ್ಟು ಕೇಳಿಸಿಕೊಳ್ಳಿ. ನಿಮಗೆ ಇಷ್ಟವಿಲ್ಲದ ಕೆಲಸವನ್ನು ಮಕ್ಕಳು ಮಾಡಿಕೊಂಡು ಬಂದಿದ್ದರೂ ನಿಧಾನವಾಗಿ ಅವರಿಗೆ ಅದೇಕೆ ತಪ್ಪು ಎಂದು ಮನವರಿಕೆ ಮಾಡಿಕೊಡಿ. ನೀವು ಅವರ ಮಾತನ್ನು ಎಷ್ಟು ಕೇಳಿಸಿಕೊಳ್ತೀರೋ, ಎಷ್ಟು ಮನವರಿಕೆ ಮಾಡಿಕೊಡ್ತೀರೋ ಅಷ್ಟೂ ಒಳ್ಳೆಯದು ಎಂದು ಮೋದಿ ಪೋಷಕರಿಗೆ ಸಲಹೆ ನೀಡಿದ್ದಾರೆ.
ಮಕ್ಕಳ ಜೊತೆಗೆ ಗ್ಯಾಪ್ ಕಡಿಮೆ ಮಾಡಿಕೊಳ್ಳಿ, ಬಾಂಧವ್ಯ ಹೆಚ್ಚಿಸಿಕೊಳ್ಳಿ
ಪೋಷಕರು ಹೊಸ ಬದುಕಿನಲ್ಲಿ ಮುಂದಕ್ಕೆ ಹೋಗಬೇಕು ಎಂದಿದ್ದರೆ ನೀವು ನಿಮ್ಮ ಮಕ್ಕಳ ಜೊತೆಗೆ ಗ್ಯಾಪ್ ಕಡಿಮೆ ಮಾಡಿಕೊಳ್ಳಿ. ಬಾಂಧವ್ಯ ಹೆಚ್ಚಿಸಿಕೊಳ್ಳಿ. ಬೇಡ ಎಂದಾದರೆ ಮಕ್ಕಳ ಜೊತೆಗೆ ಬೆರೆಯಿರಿ. ಪೋಷಕರು ಅವರ ಬಾಲ್ಯ, ಯೌವ್ವನದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಯೋಚಿಸಿಕೊಳ್ಳಬೇಕು. ಅವರು ಅವರ ಖುಷಿಗಾಗಿ ತಾನೆ ಹಾಗೆ ಮಾಡಿರುತ್ತಾರೆ. ತಮ್ಮ ಮಕ್ಕಳ ವಿಚಾರದಲ್ಲಿಯೂ ಹೀಗೆಯೇ ಯೋಚಿಸಬೇಕು. ಮಕ್ಕಳನ್ನು ಆಡಿಸುವಾಗ ನೀವು ಕುದುರೆಯಾಗ್ತೀರಿ, ಕುಣೀತೀರಿ. ಸಮಾಜ ಏನು ಅಂದ್ಕೊಳ್ಳುತ್ತೆ ಎಂದಾದರೂ ಯೋಜನೆ ಮಾಡಿದ್ದೀರಾ? ಇಲ್ಲ ತಾನೆ? ಎಂದು ಮೋದಿ ಪೋಷಕರ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜನರೇಷನ್ ಗ್ಯಾಪ್ ಕಡಿಮೆ ಮಾಡುವುದು ಹೇಗೆ?
ಜನರೇಷನ್ ಗ್ಯಾಪ್ ಕಡಿಮೆ ಮಾಡುವುದು ಹೇಗೆ? ಎಂದು ಕೃಷ್ಟಿ ಸಾಂಖ್ಯಾ ಎಂಬವರು ಪ್ರಶ್ನೆ ಕೇಳಿದ್ದಾರೆ. ನೀವು ಈ ವಿಷಯ ಪ್ರಸ್ತಾಪಿಸುವ ಮೂಲಕ ಜನರೇಷನ್ ಗ್ಯಾಪ್ ಕಡಿಮೆ ಮಾಡಲು ಪ್ರಯತ್ನ ಮಾಡ್ತಿದ್ದೀರಿ. ನನಗೆ ಈ ವಿಷಯದ ಬಗ್ಗೆ ಪೋಷಕರ ಜೊತೆಗೆ ಮಾತನಾಡಬೇಕು ಎನಿಸುತ್ತದೆ. ಒಮ್ಮೆ ಪೋಷಕರು ನಿರ್ಧಾರ ಮಾಡಿಕೊಳ್ಳಬೇಕು. ನೀನು ಇದೇ ಪ್ರಶ್ನೆಯನ್ನು ನಿನ್ನ ಅಪ್ಪ-ಅಮ್ಮನ ಬಳಿಯೂ ಕೇಳು ಎಂದು ಮೋದಿ ಉತ್ತರಿಸಲು ತೊಡಗಿದ್ದಾರೆ.
ಕೊರೊನಾ ಕಾಲದ ಕೌಟುಂಬಿಕ ಬದುಕಿನ ಬಗ್ಗೆ ಅಧ್ಯಯನ ಮಾಡಬೇಕು
ಕೊರೊನಾ ನಂತರವೂ ಕೊರೊನಾ ಕಾಲದಲ್ಲಿ ಕಲಿತ ಪಾಠವನ್ನು ನಾವು ಉಪೇಕ್ಷಿಸುವುದಿಲ್ಲ ಅಂತ ನಿರ್ಧಾರ ಮಾಡಿಕೊಳ್ಳಿ. ಕೊರೊನಾದಿಂದಾಗಿ ನಾವು ನಮ್ಮ ಪರಿವಾರದಲ್ಲಿ ಚೆನ್ನಾಗಿ ಬೆರೆಯಲು ಸಾಧ್ಯವಾಯಿತು ಅಲ್ವಾ? ಕುಟುಂಬದ ಬಾಂಧವ್ಯ ಹೆಚ್ಚಾಯಿತು. ಅವಿಭಕ್ತ ಕುಟುಂಬದ ಶಕ್ತಿ ಏನು ಎಂಬುದು ಕೊರೊನಾದಿಂದ ಎಲ್ಲರಿಗೂ ಮನವರಿಕೆಯಾಯಿತು. ನಮ್ಮ ವಿಶ್ವವಿದ್ಯಾಲಯಗಳ ಸಮಾಜಶಾಸ್ತ್ರ ವಿದ್ವಾಂಸರು ಕೊರೊನಾ ಕಾಲದ ಕೌಟುಂಬಿಕ ಬದುಕಿನ ಬಗ್ಗೆ ಅಧ್ಯಯನ ಮಾಡಬೇಕು. ನಮ್ಮ ಮಕ್ಕಳು ಇಂಥ ಗಂಭೀರ ವಿಚಾರಗಳ ಬಗ್ಗೆ ಚರ್ಚೆ ಮಾಡ್ತಿದ್ದಾರೆ ಅನ್ನೋದು ಸಂತೋಷ ವಿಚಾರ ಎಂದು ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕೊರೊನಾ ಕಾಲದಲ್ಲಿ ಸಾಕಷ್ಟು ಕಳೆದುಕೊಂಡಿದ್ದೀರಿ, ಸಾಕಷ್ಟು ಗಳಿಸಿದ್ದೀರಿ
ಕೊರೊನಾದಿಂದ ಮಕ್ಕಳಿಗೆ ಉಂಟಾದ ತೊಡಕನ್ನು ಇದನ್ನು ಸರಿಮಾಡುವುದು ಅಷ್ಟು ಸುಲಭವಲ್ಲ. ಶಾಲೆಗಳಿಗೆ ಹೋದಾಗ ಗೆಳೆಯರ ಜೊತೆಗೆ ಆಡುವುದು, ಮಣ್ಣಿನಲ್ಲಿ ಆಡುವುದು ಎಲ್ಲವೂ ಇತ್ತು. ಶಾಲೆಗಳಲ್ಲಿ ಮನೆಯ ವಿಚಾರವನ್ನು ಗೆಳೆಯರ ಜೊತೆಗೆ ಮಾತನಾಡಲು ಅವಕಾಶವಿತ್ತು. ಆದರೆ ಈಗ ನಿಮಗೆ ಅದ್ಯಾವುದೂ ಸಾಧ್ಯವಾಗಿಲ್ಲ. ಕೊರೊನಾಗೆ ಮೊದಲಿನಿಂದಲೂ ನೀವು ಸಾಕಷ್ಟು ಕಳೆದುಕೊಂಡಿದ್ದೀರಿ. ಇದೇ ಕಾಲದಲ್ಲಿ ನೀವು ಸಾಕಷ್ಟು ಗಳಿಸಿದ್ದೀರಿ ಅಲ್ವಾ? ಕೊರೊನಾದಲ್ಲಿ ನೀವು ಮಿಸ್ ಮಾಡಿಕೊಂಡವರನ್ನು, ಮಿಸ್ ಮಾಡಿಕೊಂಡಿದ್ದನ್ನು ನೆನೆದುನೋಡಿ. ಅವರಿಗೆ ನಿಮ್ಮ ಜೀವನದಲ್ಲಿ ಎಷ್ಟು ಬೆಲೆಯಿದೆ ಅಂತ ಅರ್ಥವಾಗುತ್ತೆ. ನಾವು ಯಾವಾಗ ಯಾರನ್ನಾದರೂ-ಯಾವುದನ್ನಾದರೂ ಮಿಸ್ ಮಾಡಿಕೊಳ್ತೀವೋ ಅಗಲೇ ಅವುಗಳ ಮಹತ್ವ ಅರ್ಥವಾಗುವುದು ಎಂದು ಮೋದಿ ಹೇಳಿದ್ದಾರೆ.
ಕೊರೊನಾದಿಂದಾಗಿ ಮಕ್ಕಳ ಒಂದು ವರ್ಷದ ಬಾಲ್ಯ ವ್ಯರ್ಥವಾಯಿತು: ಮೋದಿ ವಿಷಾದ
ಕೊರೊನಾದಿಂದಾಗಿ ವಿದ್ಯಾರ್ಥಿಗಳಿಗೆ ನಾವು ನಿರರ್ಥಕ ಅಂತ ಅನ್ನಿಸ್ತಿದೆ. ನೀವು ನಮ್ಮ ಜಾಗದಲ್ಲಿ ಇದ್ದಿದ್ರೆ ನಿಮಗೆ ಹೇಗೆ ಅನ್ನಿಸ್ತಿತ್ತು? ಎಂದು ಧಾರವಿ, ಅಹಮದಾಬಾದ್ ವಿದ್ಯಾರ್ಥಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಕೊರೊನಾದಿಂದಾಗಿ ಜನರಿಗೆ ಕಷ್ಟವಾಗಿದೆ ಅನ್ನೋದು ನಿಜ. ನಾನು ಅದನ್ನು ಒಪ್ಪಿಕೊಳ್ತೀನಿ. ಜೀವನದಲ್ಲಿ ಸಾಕಷ್ಟು ಅಚಾನಕ್, ಅಕಲ್ಪನೀಯವಾದುದು ನಡೆಯುತ್ತೆ. ಕೊರೊನಾ ಸಹ ಇಂಥದ್ದೇ . ಕೊರೊನಾದಿಂದಾಗಿ ಮಕ್ಕಳ ಒಂದು ವರ್ಷದ ಬಾಲ್ಯ ವ್ಯರ್ಥವಾಯಿತು ಎಂಬ ವಿಷಾದವಿದೆ ಎಂದು ಮೋದಿ ಹೇಳಿದ್ದಾರೆ.
ಎಕ್ಸಾಂ ವಾರಿಯರ್ ಪುಸ್ತಕ ಓದಿ ನನಗೆ ಪತ್ರ ಬರೆಯಿರಿ
ಪರೀಕ್ಷೆಯ ಭಯ ಕಡಿಮೆ ಮಾಡಿಕೊಳ್ಳಲು ಬೇಕಾದ ಹಲವು ಉಪಾಯಗಳು ಎಕ್ಸಾಂ ವಾರಿಯರ್ ಪುಸ್ತಕದಲ್ಲಿ ಕೊಟ್ಟಿದ್ದೇನೆ. ಹೊಸ ಆವೃತ್ತಿಯಲ್ಲಿ ಪೋಷಕರ ಬಗ್ಗೆಯೂ ಒಂದಿಷ್ಟು ಚಟುವಟಿಕೆಗಳನ್ನು ಕೊಟ್ಟಿದ್ದೇನೆ. ನಮೋ ಆ್ಯಪ್ನಲ್ಲಿಯೂ ಇದೆ. ಅದನ್ನು ನೋಡಿ. ನಿಮ್ಮ ಗೆಳೆಯರ ಜೊತೆಗೆ ಚರ್ಚಿಸಿ. ನಿಮ್ಮ ಪರೀಕ್ಷಾ ಭಯ ಹೊರಟುಹೋಗುತ್ತೆ. ಎಕ್ಸಾಂ ವಾರಿಯರ್ ಓದಿ ನನಗೆ ಪತ್ರ ಬರೆಯಿರಿ ಎಂದು ಮೋದಿ ತಿಳಿಸಿದ್ದಾರೆ.
ಪರೀಕ್ಷೆಗೆ ಹೋದಾಗ ಎಲ್ಲವನ್ನೂ ಮರೆತುಹೋದಂತೆ ಆಗುತ್ತೆ. ಏನು ಮಾಡುವುದು?
ಪಾಠ ಓದಿದಾಗ ಎಲ್ಲವೂ ನೆನಪಿರುವಂತೆ ಅನ್ನಿಸುತ್ತೆ. ಆದರೆ ಪರೀಕ್ಷೆಗೆ ಹೋದಾಗ ಎಲ್ಲವನ್ನೂ ಮರೆತುಹೋದಂತೆ ಆಗುತ್ತೆ. ಏನು ಮಾಡುವುದು? ಎಂದು ದೆಹಲಿಯ ಸುಹಾನ್ ಸೆಹಗಲ್ ಎಂಬ ವಿದ್ಯಾರ್ಥಿ ಪ್ರಶ್ನೆ ಕೇಳಿದ್ದಾರೆ. ಪರೀಕ್ಷೆ ಹಾಲ್ಗೆ ಹೋಗುವಾಗ ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಬೇಕು. ನಿಮ್ಮ ಮುಖ ನೋಡಿದರೆ ಶಾಂತವಾಗಿರುವಂತೆ ಇದೆ. ಪರೀಕ್ಷೆಯಲ್ಲಿಯೂ ಹೀಗೆಯೇ ಇರಿ. ನೀವು ಎಂದಿಗೂ ಯಾವುದನ್ನೂ ಮರೆಯುವುದಿಲ್ಲ. ನೀವು ನಿಮ್ಮ ಎಲ್ಲ ಒತ್ತಡಗಳನ್ನು ಪರೀಕ್ಷಾ ಹಾಲ್ನಿಂದ ಹೊರಗೆ ಇಟ್ಟು ಬನ್ನಿ. ನೀವು ಎಷ್ಟು ತಯಾರಿ ಮಾಡಿಕೊಳ್ಳಬೇಕು ಅಷ್ಟು ಮಾಡಿಕೊಂಡಿದ್ದೀರಿ. ಏನಾದ್ರೂ ಹೊಸದು ಬಂದ್ರೆ ಏನು ಮಾಡಬೇಕು ಅಂತ ಹೆದರಬೇಡಿ ಎಂದು ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ನೆನಪಿನ ಶಕ್ತಿಯ ಬಗ್ಗೆ ಪ್ರಧಾನಿ ಮೋದಿ ಮಾತುಗಳು
ಸರಿಯಾದ ರೀತಿಯಲ್ಲಿ ಪುನರಾವರ್ತನೆ ಮಾಡಿಕೊಳ್ಳಿ. ಮೇಲಿಂದ ಮೇಲೆ ನೆನಪಿಸಿಕೊಳ್ಳಿ. ಓದುತ್ತಿರುವಾಗ ಕೈಲಿ ಪುಸ್ತಕ ಹಿಡಿದು, ಮನಸ್ಸು ಗೆಳತಿಯರು-ಮೈದಾನದಲ್ಲಿದ್ದರೆ ಪಾಠ ಹೇಗೆ ಅರ್ಥವಾಗುತ್ತೆ? ಜನಗಣಮನವನ್ನು ನಾವೆಲ್ಲರೂ ಹೇಳ್ತೀವಿ. ಆ ರಾಷ್ಟ್ರಗೀತೆಯ ಜೊತೆಗೆ ಮಾನಸಿಕವಾಗಿ ದೇಶವಿಡೀ ನೀವು ಓಡಾಡಿದ್ದೀರಾ? ನಿಮ್ಮ ಮನಸ್ಸಿನಲ್ಲಿ ಅಂಥ ಚಿತ್ರಗಳು ತೇಲಿಬರುವಂತೆ ಆಗಬೇಕು. ನಿಮ್ಮ ಪಾಲ್ಗೊಳ್ಳುವಿಕೆ, ಅಂತರ್ಗತ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ನೆನಪಿನ ಶಕ್ತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಬ್ಯಾಗಿನಲ್ಲಿ ಇಂಥ ನಂಬರ್ ಮೇಲೆ ಇಂಥ ವಿಷಯದ ಪುಸ್ತಕವಿದೆ ಎಂದು ಗುರುತು ಮಾಡಿಕೊಳ್ಳಿ. ಪ್ರತಿದಿನ ಒಂದೇ ರೀತಿ ಪುಸ್ತಕಗಳನ್ನು ಜೋಡಿಸಿಕೊಳ್ಳಿ. ಕಣ್ಮುಚ್ಚಿ ತೆಗೆದರೂ ನಮಗೆ ಬೇಕಾದ್ದು ಸಿಗುತ್ತೆ ಆಗ. ನೀವೇ ನೋಡಿ, ನಿಮ್ಮ ಆತ್ಮವಿಶ್ವಾಸ ಎಷ್ಟು ಹೆಚ್ಚಾಗುತ್ತೆ ಆಂತ ಎಂದು ತಿಳಿಸಿದ್ದಾರೆ.
ಸಹಜ, ಸರಳ ಮತ್ತು ಸಮಗ್ರವಾಗಿ ಬದುಕುವುದನ್ನು ರೂಢಿಸಿಕೊಳ್ಳಿ
ನೀವು ಮಗ್ನರಾಗಿ ತೊಡಗಿಸಿಕೊಳ್ಳುವುದು ನಿಮಗೆ ನೆನಪಿರುತ್ತೆ. ಅದನ್ನು ನೀವೆಂದಿಗೂ ಮರೆಯುವುದೇ ಇಲ್ಲ. ಇದು ನೆನಪಿಟ್ಟುಕೊಳ್ಳುವುದು ಅಲ್ಲ, ಇದು ನಮ್ಮ ಅಂತರ್ಗತಗೊಳಿಸಿಕೊಳ್ಳುವುದು. ಸಹಜ, ಸರಳ ಮತ್ತು ಸಮಗ್ರವಾಗಿ ಬದುಕುವುದನ್ನು ರೂಢಿಸಿಕೊಳ್ಳಿ. ಆಗ ಅತ್ಯಂತ ಬುದ್ಧಿವಂತರಲ್ಲಿರುವ ಶಕ್ತಿ ನಿಮಗೂ ಬರುತ್ತೆ ಎಂದು ಮೋದಿ ತಿಳಿಸಿದ್ದಾರೆ.
ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?
ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ? ಎಂದು ದಿವ್ಯಾಂಕಾ ಪುಷ್ಕರ್ ಎಂಬವರು ಕೇಳಿದ ಪ್ರಶ್ನೆಗೆ ಮೋದಿ ಉತ್ತರಿಸುತ್ತಾ, ನೀವು ಮರೆವು ಎಂಬ ಶಬ್ದವನ್ನು ನಿಮ್ಮ ಶಬ್ದಕೋಶದಿಂದ ಡಿಲೀಟ್ ಮಾಡಿಬಿಡಿ. ನಿಮಗೆ ಎಷ್ಟೆಲ್ಲಾ ನೆನಪಿದೆ ಯೋಚಿಸಿನೋಡಿ. ನಿಮ್ಮ ಮಾತೃಭಾಷೆಯನ್ನು ಎಂದಾದರೂ ವ್ಯಾಕರಣ ಕಲಿತ ಮೇಲೆ ಕಲಿತಿದ್ದೀರಾ? ಇಲ್ಲ ತಾನೆ. ನಿಮಗೆ ಇಷ್ಟವಾದದ್ದನ್ನು ನೀವು ಹಾಗೆಯೇ ಕಲೀತೀರಿ, ನೆನಪಿನಲ್ಲಿ ಇಟ್ಟುಕೊಳ್ತೀರಿ ಎಂದು ಮೋದಿ ಹೇಳಿದ್ದಾರೆ.
ಪೌಷ್ಟಿಕ ಆಹಾರದ ಬಗ್ಗೆ ಹೆಚ್ಚು ಮಾತನಾಡಿ, ಶಿಕ್ಷಕರಿಂದ ಮಕ್ಕಳಿಗೆ ಹೇಳಿಸಿ ನೋಡಿ
ಕ್ಯಾರೆಟ್ನ ಪ್ರಾಮುಖ್ಯತೆ ಬಗ್ಗೆ ಹೇಳಿನೋಡಿ, ತೋರಿಸಿ. ನಮ್ಮ ಕುಟುಂಬದ ವೈದ್ಯರ ಜೊತೆಗೆ ಮಾತನಾಡುವಾಗ, ಅವರ ಮನೆಗೆ ಹೋಗುವಾಗ ಅಥವಾ ಅವರು ನಮ್ಮ ಮನೆಗೆ ಬಂದಾಗ ಅವರಿಂದ ಪೌಷ್ಟಿಕ ಆಹಾರದ ಬಗ್ಗೆ ಮಾತನಾಡಿಸಿ. ಮನೆಮಂದಿಯೆಲ್ಲರೂ ಕೇಳಿಸಿಕೊಳ್ಳಿ. ನಿಮ್ಮ ಕುಟುಂಬಕ್ಕೆ ಯಾವ ಕಾಯಿಲೆ ವಂಶಪಾರಂಪರ್ಯ? ಅದನ್ನು ಹೋಗಲಾಡಿಸುವುದು ಹೇಗೆ ಎಂಬ ಬಗ್ಗೆ ಹೇಳಿಸಿ ನೋಡಿ. ಶಿಕ್ಷಕರಿಂದ ಮಕ್ಕಳಿಗೆ ಹೇಳಿಸಿ ನೋಡಿ. ಮಕ್ಕಳು ಶಿಕ್ಷಕರ ಮಾತನ್ನು ಕೇಳುತ್ತಾರೆ ಎಂದು ಮೋದಿ ತಿಳಿಸಿದ್ದಾರೆ.
ಸಾಂಪ್ರದಾಯಿಕ ಆಹಾರಗಳನ್ನು ನಾವು ಗೌರವದಿಂದ ಕಾಣಬೇಕು
ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮನೋವೈಜ್ಞಾನಿಕ ಆಯಾಮದಿಂದ ಯೋಚಿಸಬೇಕು. ನಮ್ಮ ಸಾಂಪ್ರದಾಯಿಕ ಆಹಾರಗಳನ್ನು ನಾವು ಗೌರವದಿಂದ ಕಾಣಬೇಕು. ಆಹಾರ ತಯಾರಿಕೆ ಚಟುವಟಿಕೆಗಳಲ್ಲಿ ಕುಟುಂಬದಲ್ಲಿರುವ ಇತರರೂ ಪಾಲ್ಗೊಳ್ಳುವಂತೆ ಆಗಬೇಕು. ಮಕ್ಕಳ ಎದುರು ಈ ವಿಚಾರಗಳನ್ನೂ ಚರ್ಚೆಗೆ ತನ್ನಿ. ಆಹಾರ ಹೇಗೆ ತಯಾರಿಸುತ್ತೇ? ಅದಕ್ಕೆ ಏನೆಲ್ಲಾ ಹಾಕುತ್ತೇವೆ? ಎಷ್ಟು ಕಷ್ಟವಾಗುತ್ತೆ ಆಂತ ಮಕ್ಕಳಿಗೆ ಗೊತ್ತು ಮಾಡಿಸಿ. ಆಗ ಅವರಲ್ಲಿ ಗೌರವ ಮೂಡುತ್ತೆ. ಆಹಾರದ ಬಗ್ಗೆ ಇರುವ ವೆಬ್ಸೈಟ್ಗಳನ್ನೂ ತೋರಿಸಿ ಎಂದು ಮೋದಿ ಮಕ್ಕಳ ಆಹಾರ ಕ್ರಮದ ಬಗ್ಗೆ ಸಲಹೆ ನೀಡಿದ್ದಾರೆ.
ಮಕ್ಕಳು ಜಂಕ್ ಫುಡ್ ಇಷ್ಟಪಡ್ತಾರೆ. ಹೇಗೆ ಸಂಭಾಳಿಸುವುದು?
ಮಕ್ಕಳು ಜಂಕ್ ಫುಡ್ ಇಷ್ಟಪಡ್ತಾರೆ. ಹೇಗೆ ಸಂಭಾಳಿಸುವುದು? ಎಂದು ಉತ್ತರ ಪ್ರದೇಶ ಮೊರಾದಾಬಾದ್ನ ಅಮೃತಾ ಜೈನ್ ಎಂಬವರು ಕೇಳಿದ್ದಾರೆ. ನಾವು ಸಿದ್ಧಪಡಿಸಿದ್ದನ್ನು ಮಕ್ಕಳು ತಿನ್ನಲು ಇಷ್ಟಪಡಲ್ಲ. ಏನು ಮಾಡುವುದು? ಎಂದು ಛತ್ತೀಸಗಡ ರಾಯಪುರದ ಸುನೀತಾ ಪೌಲ್ ಪ್ರಶ್ನೆ ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮನೋವೈಜ್ಞಾನಿಕ ಆಯಾಮದಿಂದ ಯೋಚಿಸಬೇಕು. ನಮ್ಮ ಸಾಂಪ್ರದಾಯಿಕ ಆಹಾರಗಳನ್ನು ನಾವು ಗೌರವದಿಂದ ಕಾಣಬೇಕು ಎಂದು ಮೋದಿ ಉತ್ತರಿಸಲು ತೊಡಗಿದ್ದಾರೆ.
ಕನಸು ಕಾಣಲೆಂದೇ ಮಲಗಿರುವುದು ಸರಿಯಲ್ಲ
ಕನಸು ಕಾಣುವುದು ಒಳ್ಳೇದು. ಆದರೆ ಕನಸು ಕಾಣಲೆಂದೇ ಮಲಗಿರುವುದು ಸರಿಯಲ್ಲ. ಕನಸಿನಿಂದ ಮುಂದಕ್ಕೆ ಯೋಚಿಸಿ, ಅದನ್ನು ಬೆನ್ನಟ್ಟಲು ಯತ್ನಿಸಿ. ನಿಮಗೆ ಎಂಥ ಕನಸು ಇದೆ ಅಂತ ನಿರ್ಧರಿಸಿ. ಅದನ್ನು ಸಂಕಲ್ಪ ಮಾಡಿಕೊಳ್ಳಿ. ಆಗಲೇ ನಿಮ್ಮ ಮುಂದಿನ ಮಾರ್ಗವೂ ಸುಲಭವಾಗಿ ಕಾಣುತ್ತದೆ ಎಂದು ಮೋದಿ ಹೇಳಿದರು.
ಸೆಲಬ್ರಿಟಿ ಸಂಸ್ಕೃತಿಯ ಪ್ರಭಾವದಿಂದಾಗಿ ಮಕ್ಕಳಿಗೆ ಭವಿಷ್ಯದ ಬಗ್ಗೆ ಆತಂಕ ಮೂಡುತ್ತಿದೆ
ಯಾರಾದರೂ ಭವಿಷ್ಯದ ಬಗ್ಗೆ ಹೆದರಿಸುವ ಮಾತುಗಳನ್ನು ಆಡಿದರೆ ಒಂದು ಕಿವಿಯಲ್ಲಿ ಕೇಳಿ, ಮತ್ತೊಂದು ವಿವಿಯಲ್ಲಿ ಬಿಟ್ಟುಬಿಡಿ. ಸೆಲಬ್ರಿಟಿ ಸಂಸ್ಕೃತಿಯ ಪ್ರಭಾವದಿಂದಾಗಿ ಮಕ್ಕಳಿಗೆ ಭವಿಷ್ಯದ ಬಗ್ಗೆ ಆತಂಕ ಮೂಡುತ್ತಿದೆ. ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಕೆಲವೇ ಜನರಷ್ಟೇ ಜಗತ್ತಿನಲ್ಲಿ ಇರುವುದಲ್ಲ. ಜಗತ್ತು ದೊಡ್ಡದು, ಬದಲಾವಣೆಯೂ ಅತ್ಯಂತ ವೇಗವಾಗಿ ನಡೆಯುತ್ತಿದೆ. ಜಗತ್ತಿನಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಅಗತ್ಯಗಳು ಇರುತ್ತವೆ. ಭವಿಷ್ಯವಂತೂ ಇದ್ದೇ ಇರುತ್ತೆ. ನೀವು ಮೊದಲು ಬದುಕು ಗಮನಿಸುವುದನ್ನು ಕಲಿಯಿರಿ. ಉದ್ಯೋಗದ ರೀತಿನೀತಿಗಳು ಬದಲಾಗುತ್ತಲೇ ಇರುತ್ತವೆ. ಅವನ್ನು ಗಮನಿಸಿ ಎಂದು ಮೋದಿ ಸಲಹೆ ನೀಡಿದ್ದಾರೆ.
ಜೀವನದ ಹೋರಾಟಕ್ಕೆ ನಾವು ಹೇಗೆ ಸಿದ್ಧರಾಗಬೇಕು?
ಜೀವನದ ಹೋರಾಟಕ್ಕೆ ನಾವು ಹೇಗೆ ಸಿದ್ಧರಾಗಬೇಕು? ಎಂದು ಕುವೈತ್ನ ತನಯ್ ಎಂಬ ವಿದ್ಯಾರ್ಥಿ ಪ್ರಶ್ನೆ ಮಾಡಿದ್ದಾರೆ. ಭವಿಷ್ಯದ ಸವಾಲುಗಳಿಗೆ ನಾವು ಸಿದ್ಧತೆ ಮಾಡಿಕೊಳ್ಳುವುದು ಹೇಗೆ? ಎಂದು ಉತ್ತರಾಖಂಡದ ಅಶ್ರಫ್ ಖಾನ್ ಪ್ರಶ್ನಿಸಿದ್ದಾರೆ.
ಧನಾತ್ಮಕವಾಗಿ ಯೋಚಿಸಿ
ನಿಮ್ಮ ಜೇಬಿನಲ್ಲಿರುವ ಕನ್ನಡಕ ಅಥವಾ ಪೆನ್ ಬೇಕು ಅಂತ ಮಗು ಹಟ ಹಿಡಿಯಿತು ಎಂದಿಟ್ಟುಕೊಳ್ಳೋಣ. ನೀವೇನು ಮಾಡ್ತೀರಿ? ಮಗುವಿನ ಗಮನ ಬದಲಿಸಲು ಪ್ರಯತ್ನಿಸ್ತೀರಿ ತಾನೆ? ಇದೇ ತರ್ಕವನ್ನು ಇಲ್ಲಿಗೂ ಅನ್ವಯಿಸಿಕೊಳ್ಳಿ. ಮಕ್ಕಳೊಳಗೆ ಜ್ಯೋತಿಯಿದೆ. ಅದನ್ನು ನೀವು ಬೆಳಗಬೇಕು ಅಷ್ಟೇ. ನಿಮ್ಮ ವರ್ತನೆಯನ್ನು ಮಕ್ಕಳು ಗಮನಿಸುತ್ತಿರುತ್ತಾರೆ. ಪಾಸಿಟಿವ್ ಪ್ರೇರಣೆಗೆ ಸದಾ ಗಮನಕೊಡಿ ಎಂದು ಮೋದಿ ಹೇಳಿದ್ದಾರೆ.
ಉತ್ತಮ ಪುಸ್ತಕಗಳು, ಉತ್ತಮ ಸಿನಿಮಾ, ಉತ್ತಮ ಕಥೆಗಳಿಂದ ಮಕ್ಕಳು ಕಲಿಯಲಿ
ಉತ್ತಮ ಪುಸ್ತಕಗಳು, ಉತ್ತಮ ಸಿನಿಮಾ, ಉತ್ತಮ ಕಥೆ, ಉತ್ತಮ ಕಲೆಗಳೆಲ್ಲವೂ ಒಂದಲ್ಲ ಒಂದು ರೀತಿ ಅನುಕೂಲವಾಗುತ್ತವೆ. ಬೆಳಿಗ್ಗೆ ಬೇಗ ಏಳುವುದರಿಂದ ಆಗುವ ಅನುಕೂಲಗಳ ಬಗ್ಗೆ ನಿಮ್ಮ ಮನೆಯಲ್ಲಿ ಎಂದಾದರೂ ಚರ್ಚೆಯಾಗಿದೆಯೇ? ಮುಂಜಾನೆ 5 ಗಂಟೆಯ ಕ್ಲಬ್ ಬಗ್ಗೆ ಮಾತಾಡಿದ್ದೀರಾ? ಬ್ರಹ್ಮಮುಹೂರ್ತದಲ್ಲಿ ಏಳುವುದರಿಂದ ಆಗುವ ಅನುಕೂಲಗಳ ಬಗ್ಗೆ ಸಾಕ್ಷ್ಯಚಿತ್ರ ಎಂದಾದರೂ ನೋಡಿದ್ದೀರಾ? ಮಕ್ಕಳಿಗೆ ತೋರಿಸಿದ್ದೀರಾ? ಬೆಳಿಗ್ಗೆ ಬೇಗ ಏಳುವುದರಿಂದ ಆಗುವ ಅನುಕೂಲಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರೆ ನಾವು ಅವರ ಬೆನ್ನುಹತ್ತುವ ಅಗತ್ಯಬರುವುದಿಲ್ಲ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಪೋಷಕರು ತಮ್ಮ ಗುರಿಯನ್ನು ಮಕ್ಕಳ ಮೇಲೆ ಹೇರುತ್ತಾರೆ
ತಂದೆ-ತಾಯಿ ತಮ್ಮ ಮನಸ್ಸಿನಲ್ಲಿ ಒಂದಿಷ್ಟು ಮಾನದಂಡಗಳನ್ನು ಮಾಡಿಟ್ಟುಕೊಂಡಿರುತ್ತಾರೆ. ಇದನ್ನು ಮಕ್ಕಳ ಮೇಲೆ ಹೇರುತ್ತಿರುತ್ತಾರೆ. ನಮ್ಮ ಗುರಿಗಳನ್ನು ಮಕ್ಕಳು ಈಡೇರಿಸಬೇಕು ಎಂದು ಆಸೆ ಪಡುತ್ತೇವೆ. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಪ್ರೇರಣೆ, ಸ್ಫೂರ್ತಿ ಕಡಿಮೆಯಾಗುತ್ತೆ. ಮಕ್ಕಳಲ್ಲಿ ಪ್ರೇರಣೆ ಹೆಚ್ಚಿಸಲು ಅವರ ಮನಸ್ಸಿಗೆ ತರಬೇತಿ ಸಿಗಬೇಕು. ಅವರಿಗೆ ಪ್ರೇರಣೆ ಸಿಕ್ಕರೆ ಸ್ಫೂರ್ತಿ ಒದಗಿಬರುತ್ತದೆ ಎಂದು ಮೋದಿ ಹೇಳಿ್ದ್ದಾರೆ.
ಮಕ್ಕಳನ್ನು ಸೆಲ್ಫ್ ಮೋಟಿವೇಟೆಡ್ ಮಾಡೋದು ಹೇಗೆ?
ಮಕ್ಕಳನ್ನು ಸೆಲ್ಫ್ ಮೋಟಿವೇಟೆಡ್ ಮಾಡೋದು ಹೇಗೆ? ಎಂದು ಪಂಜಾಬ್ ಲೂಧಿಯಾನಾದ ಪ್ರತಿಭಾ ಗುಪ್ತ ಪ್ರಶ್ನೆ ಕೇಳಿದ್ದಾರೆ. ಮಕ್ಕಳ ಹಿಂದೆ ಪೋಷಕರು ಓಡುವುದೇ ವಿಚಿತ್ರ ಅನ್ನಿಸುತ್ತೆ ನನಗೆ. ಇಂಥ ವರ್ತನೆಯಲ್ಲಿ ಮಕ್ಕಳಿಗಿಂತ ಜಾಸ್ತಿ ನಮಗೆ ಗೊತ್ತು ಎನ್ನುವ ಅಭಿಪ್ರಾಯ ಇರುತ್ತೆ. ಇದು ಖಂಡಿತ ತಪ್ಪಲ್ಲ. ಆದರೆ ಮಕ್ಕಳ ಸಾಮರ್ಥ್ಯ ಅರಿತುಕೊಳ್ಳಲು ನಾವು ಯತ್ನಿಸಬೇಕು ಎಂದು ಮೋದಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ನೀವು ನಡೆದುಕೊಳ್ಳುವ ರೀತಿಯನ್ನು ಮಕ್ಕಳು ಗಮನಿಸುತ್ತಲೇ ಇರುತ್ತಾರೆ
ಹೆಣ್ಣು-ಗಂಡು ಮಕ್ಕಳು ನಮಗೆ ಸಮಾನ. ನಮ್ಮ ಅಧ್ಯಾತ್ಮ ಚಿಂತನೆಯೂ ಅದನ್ನೇ ಹೇಳುತ್ತೆ. ಆದರೆ ಮನೆಗಳಲ್ಲಿ ಅಸಮಾನತೆ ಇದೆಯಲ್ಲವೇ? ಇದೇ ಹುಡುಗ ದೊಡ್ಡವನಾದ ನಂತರ ಹೆಣ್ಣುಮಕ್ಕಳನ್ನು ಸಮಾನವಾಗಿ ಕಾಣಲು ಸಾಧ್ಯವೇ? ನೀವು ಹೇಳಿದ್ದನ್ನು ಮಕ್ಕಳು ಕೇಳುತ್ತಾರೋ ಇಲ್ಲವೋ ಹೇಳುವುದು ಕಷ್ಟ. ಆದರೆ ನೀವು ನಡೆದುಕೊಳ್ಳುವ ರೀತಿಯನ್ನಂತೂ ಮಕ್ಕಳು ಗಮನಿಸುತ್ತಲೇ ಇರುತ್ತಾರೆ. ಇದಂತೂ ಸ್ಪಷ್ಟ ಎಂದು ಮೋದಿ ಮಾತನಾಡುತ್ತಿದ್ದಾರೆ.
ನೀವು ಸರಿಯಾಗಿ ನಡೆದುಕೊಳ್ಳಿ: ಹೆತ್ತವರಿಗೆ ಮೋದಿ ಸಲಹೆ
ನಮ್ಮನ್ನು ಶಾಲೆಗಳಿಗೆ ಬಿಡುವ ಆಟೊ ಡ್ರೈವರ್, ಮನೆಗಳ ಲಿಫ್ಟ್ ಆಪರೇಟರ್, ಕಸಗುಡಿಸುವವರ ಕಷ್ಟಸುಖ ನೀವು ಎಂದಾದರೂ ವಿಚಾರಿಸಿದ್ದೀರಾ? ಹೆತ್ತವರು ಹೀಗೆ ನಡೆದುಕೊಂಡರೆ ಮಕ್ಕಳಿಗೆ ಅದೇ ದೊಡ್ಡ ಮಾರ್ಗದರ್ಶನವಾಗುತ್ತದೆ. ಯಾವುದೇ ಸಮಾರಂಭದಲ್ಲಿ ಒಬ್ಬರಾದರೂ ಕೆಲಸದವರಿಗೆ ನೀವು ಬೇಗ ಬಂದು ಕೆಲಸ ಮುಗಿಸಿ, ನಮ್ಮ ಜೊತೆಗೆ ನಮ್ಮವರಾಗಿ ಸಮಾರಂಭದಲ್ಲಿ ಪಾಲ್ಗೊಳ್ಳು ಎಂದು ಹೇಳಿದ್ದೀರಾ? ಇದರ ಬದಲು ನೀವು ಹೇಗೆ ನಡೆದುಕೊಳ್ಳುತ್ತಿದ್ದೀರಾ? ನೀವೇ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ಮೋದಿ ತಿಳಿಸಿದ್ದಾರೆ.
ಮಕ್ಕಳನ್ನು ಬೆಳೆಸುವ ಬಗ್ಗೆ ಆತ್ಮ ಚಿಂತನೆ ಮಾಡಿಕೊಳ್ಳಿ
ಈಗ ಅಪ್ಪ-ಅಮ್ಮನಿಗೆ ಮಕ್ಕಳನ್ನು ಬೆಳೆಸುವುದು ಕಷ್ಟವಾಗಿದೆ. ಮಕ್ಕಳನ್ನು ಚೆನ್ನಾಗಿ ಬೆಳೆಸುವುದು ಹೇಗೆ? ಎಂದು ಪಾಟ್ನಾದ ಪ್ರವೀಣ್ ಕುಮಾರ್ ಎಂಬವರು ಪ್ರಶ್ನೆ ಕೇಳಿದ್ದಾರೆ. ಮಕ್ಕಳನ್ನು ಬೆಳೆಸುವ ಬಗ್ಗೆ ಆತ್ಮ ಚಿಂತನೆ ಮಾಡಿಕೊಳ್ಳಿ. ನಾನು ಒಂದು ಸಮಾರಂಭದಲ್ಲಿ ಸ್ಟಾರ್ಟಪ್ ಮಾಡಿದವರೊಂದಿಗೆ ಮಾತನಾಡುತ್ತಿದ್ದೆ. ಬಂಗಾಳದ ಒಬ್ಬ ಹೆಣ್ಣುಮಗಳು ‘ನನ್ನ ಅಮ್ಮ ನೀನು ಸರ್ವನಾಶ ಆಗ್ತೀಯಾ’ ಅಂತ ಹೆದರಿಸಿದ್ದಳು ಅಂತ ಹೇಳಿದ್ದಳು. ನಾವು ಮಕ್ಕಳ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬೇಕು. ಜಗತ್ತು ನಿಮ್ಮನ್ನು ಧಾರ್ಮಿಕರು ಅಂದ್ಕೊಬಹುದು. ಆದರೆ ನೀವು ಸಮಾಜಸೇವೆಗೆ ಬಂದಿಲ್ಲ ಎನಿಸುತ್ತೆ. ನಮಗೆ ಜೀವನ ಪದ್ಧತಿಯಿಂದಲೇ ದೇವರನ್ನು ಕಾಣಲು ಸಾಧ್ಯ ಎನ್ನುವುದು ನಮ್ಮ ಅಧ್ಯಾತ್ಮ ಎಂದು ಮೋದಿ ಉತ್ತರ ನೀಡಿದ್ದಾರೆ.
ಇದು ಸೃಜನಶೀಲತೆಯ ಶಕ್ತಿ
ಖಾಲಿ ಸಮಯದಲ್ಲಿ ಜಿಜ್ಞಾಸೆ ಮಾಡಬೇಕು. ನಿಮ್ಮ ಅಪ್ಪ-ಅಮ್ಮ ಅಡುಗೆ ಮಾಡ್ತಾ ಇರುವಾಗ ಅದನ್ನು ಗಮನಿಸಿ, ಪ್ರಶ್ನಿಸಿ, ತಿಳಿದುಕೊಳ್ಳಿ. ಹೊಸತನ್ನು ಕಲಿಯಲು ಬಿಡುವಿನ ಸಮಯ ಬಳಸಿಕೊಳ್ಳಿ. ನೀವು ಸಾಕಷ್ಟು ಕಲಿಯಬಹುದು. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. ನಿಮ್ಮ ಸುತ್ತಮುತ್ತಲೂ ಸಾಕಷ್ಟು ಜ್ಞಾನವಿದೆ. ಸೃಜನಶೀಲರಾಗಲು ಯತ್ನಿಸಿ. ‘ರವಿ ಕಾಣಲು ಆಗದ್ದನ್ನು ಕವಿ ಕಂಡ’ ಅನ್ನುವ ಮಾತು ನೀವು ಕೇಳಿರ್ತೀರಿ. ಇದು ಸೃಜನಶೀಲತೆಯ ಶಕ್ತಿ ಎಂದು ಮೋದಿ ಹೇಳಿದ್ದಾರೆ.
ಖಾಲಿ ಸಮಯ ಅಂತ ಒಂದಿಷ್ಟು ನಿಮಗೆ ಇರಲಿ, ಸಿಗಲಿ
ಸ್ವಂತ ಸುಖಕ್ಕಾಗಿಯೂ ನಾವು ಬದುಕಿನ ಕೆಲ ಸಮಯವನ್ನು ಮೀಸಲಿಡಬೇಕು. ನನ್ನ ದಿನಚರಿಯಲ್ಲಿ ನನಗೆ ಸ್ವಲ್ಪ ಖಾಲಿ ಸಮಯ ಸಿಕ್ಕರೂ ಎಲ್ಲಾದರೂ ಉಯ್ಯಾಲೆ ಮೇಲೆ ಕೂರೋಣ ಅನ್ನಿಸುತ್ತೆ. ಇದಕ್ಕೇನು ಕಾರಣ ಅಂತ ನನಗೆ ಗೊತ್ತಿಲ್ಲ. ಆದರೆ ನನಗಂತೂ ಉಯ್ಯಾಲೆ ಮೇಲೆ ಕೂರೋದು ಇಷ್ಟ, ಖುಷಿಯಾಗುತ್ತೆ. ಹೀಗಾಗಿಯೇ ನಿಮಗೂ ನಾನು ಹೇಳೋದು ಇಷ್ಟೇ. ಖಾಲಿ ಸಮಯ ಅಂತ ಒಂದಿಷ್ಟು ನಿಮಗೆ ಇರಲಿ.
ಸಮಯದ ಸದುಪಯೋಗದ ಬಗ್ಗೆ ಮೋದಿ ಮಾತು
ನಿಮ್ಮ ಜೀವನದಲ್ಲಿ ಖಾಲಿ ಸಮಯ ಅಂತ ಇರಲೇಬೇಕು. ಇಲ್ಲದಿದ್ರೆ ನೀವು ರೋಬಾಟ್ ಥರ ಆಗಿಬಿಡ್ತೀರಿ. ನೀವು ಇಂದು 3ರಿಂದ 4ರವರೆಗೆ ಬಿಡುವು ಅಂತ ಅಂದ್ಕೊಳಿ, ರವಿವಾರ ಇನ್ನೊಂದು ಸಮಯದಲ್ಲಿ ಬಿಡುವು ಅಂದ್ಕೊಳಿ. ಇಂಥ ಬಿಡುವುಗಳು ನಿಮಗೆ ಮೊದಲೇ ಗೊತ್ತಾಗಿದ್ರೆ ಅದನ್ನು ಖುಷಿಯಾಗಿ ಅಪ್ಪ-ಅಮ್ಮ, ಅಣ್ಣ-ತಂಗಿ ಜೊತೆಗೆ ಕಳೆಯಲು ಬಳಸಬಹುದು. ಅವರಿಗೆ ಸಹಾಯ ಮಾಡಬಹುದು ಎಂದು ಸಮಯದ ಸದುಪಯೋಗದ ಕುರಿತಾಗಿ ಮೋದಿ ತಿಳಿಹೇಳಿದ್ದಾರೆ.
ನನಗೆ ಶಾಲೆಯಿಲ್ಲ, ಹೆಚ್ಚು ಸಮಯ ಸಿಗ್ತಿದೆ. ಅದರ ಸದುಪಯೋಗ ಹೇಗೆ?
ನನಗೆ ಶಾಲೆಯಿಲ್ಲ, ಹೆಚ್ಚು ಸಮಯ ಸಿಗ್ತಿದೆ. ಅದರ ಸದುಪಯೋಗ ಹೇಗೆ? ಎಂದು ಕನ್ಯಾಕುಮಾರಿಯ ನೀಲ್ ಅನಂತ್ ಎಂಬ ವಿದ್ಯಾರ್ಥಿ ಮೋದಿಗೆ ಪ್ರಶ್ನೆ ಕೇಳಿದ್ದಾರೆ. ನೀವು ಪರೀಕ್ಷಾ ಸಮಯದಲ್ಲಿಯೂ ಬಿಡುವಿನ ಸಮಯದ ಬಗ್ಗೆ ಮಾತಾಡ್ತಾ ಇದ್ದೀರಿ. ಇದು ನಿಜಕ್ಕೂ ನನಗೆ ಖುಷಿಕೊಟ್ಟ ಪ್ರಶ್ನೆ. ಖಾಲಿ ಸಮಯ ಅಂತ ಯಾವುದೂ ಇಲ್ಲ. ಅದೊಂದು ಸೌಭಾಗ್ಯ, ಅದೊಂದು ಖಜಾನೆ ಎಂದು ನರೇಂದ್ರ ಮೋದಿ ಉತ್ತರಿಸಲು ಆರಂಭಿಸಿದ್ದಾರೆ.
ಕಲಿಯಲು ಕಷ್ಟ-ಸುಲಭ ಎಂಬ ಯೋಚನೆಗಳ ಬಗ್ಗೆ ಮೋದಿ ಅಭಿಪ್ರಾಯ
ನಿಮ್ಮ ಜೀವನದಲ್ಲಿ ನೀವು ತುಂಬಾ ಕಷ್ಟ ಎಂದುಕೊಳ್ಳುವುದು ಯಾವುದು? ಒಂದು ಪಟ್ಟಿ ಮಾಡಿಕೊಳ್ಳಿ. ಕೆಲವರಿಗೆ ಕೆಲವೊಮ್ಮೆ ಸೈಕಲ್ ಕಷ್ಟ ಅನ್ನಿಸಿರಬಹುದು. ಆದರೆ ಈಗ ಚೆನ್ನಾಗಿ ತುಳಿತಾ ಇರ್ತೀರಿ. ನಿಮ್ಮ ಬದುಕಿನಲ್ಲಿ ಇಂಥ ಎಷ್ಟೋ ವಿಚಾರಗಳು ಇರುತ್ತವೆ. ಕಠಿಣ ಯಾವುದು? ಸುಲಭ ಯಾವುದು ಅಂತ ಶಾಶ್ವತವಾಗಿ ಹೇಳಲು ಆಗುವುದಿಲ್ಲ ಎಂದು ಕಷ್ಟದ ವಿಷಯ ಕಲಿಯುವಿಕೆ ಬಗ್ಗೆ ಮೋದಿ ಉತ್ತರಿಸಿದ್ದಾರೆ.
ಲತಾ ಮಂಗೇಶ್ಕರ್ ಉದಾಹರಿಸಿ ಪ್ರಧಾನಿ ಮೋದಿ ಮಾತು
ಲತಾ ಮಂಗೇಶ್ಕರ್ ಗೊತ್ತಲ್ವಾ? ದೊಡ್ಡ ಸಂಗೀತ ವಿದುಷಿ. ಆದರೆ ಅವರಿಗೆ ಭೂಗೋಳ ಕಲಿಯುವ ಸಂದರ್ಭ ಹೇಗಿರುತ್ತೆ? ಅವರಿಗೆ ಅದು ಕಷ್ಟವಾಗಬಹುದು. ಹಾಗೆಂದು ಅವರ ಸಂಗೀತ ಸಾಧನೆಯನ್ನು ನಾವು ಕಡಿಮೆ ಮಾಡಲು ಸಾಧ್ಯವೇ? ನಾನು ಹೇಳುವುದು ಇಷ್ಟೇ. ಕಷ್ಟದ ವಿಷಯ ಅಂತ ಯಾವುದನ್ನೂ ಬಿಡಬೇಡಿ. ಕಲಿಯಲು ಪ್ರಯತ್ನಿಸಿ. ಶಿಕ್ಷಕರು ಮತ್ತು ಅಪ್ಪ-ಅಮ್ಮ ಸಹ ಅಷ್ಟೇ. ಮಕ್ಕಳಿಗೆ ಸಮಯ ನಿರ್ವಹಣೆ ಕಲಿಸಬೇಕು. ಇದು ನಿನಗೆ ಬರಲ್ಲ ಅಂತ ಅವರನ್ನು ಯಾವುದರಿಂದಲೂ ದೂರ ಇಡಬಾರದು ಎಂದು ಮೋದಿ ಲತಾ ಮಂಗೇಶ್ಕರ್ ಉದಾಹರಿಸಿ ಮಾತನಾಡಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದೆ, ಈಗ ಪ್ರಧಾನಿಯಾದೆ
ನಿಮ್ಮ ಶಕ್ತಿಯನ್ನು ವಿವಿಧ ವಿಷಯಗಳ ಜೊತೆಗೆ ಹಂಚಿಕೆ ಮಾಡಿ. ಶಿಕ್ಷಕರು, ಅಪ್ಪ-ಅಮ್ಮ ನಮಗೆ ಹಲವು ವಿಷಯಗಳನ್ನು ಕಲಿಸಲು ಪ್ರಯತ್ನ ಮಾಡ್ತಾರೆ. ಪರೀಕ್ಷೆಗಳಲ್ಲಿಯೂ ಎಚ್ಚರಿಕೆಯಿಂದ ಬರೀರಿ, ಸಮಯ ಹಾಳು ಮಾಡಬೇಡಿ ಅಂತ ಹೇಳ್ತಾನೇ ಇರ್ತಾರೆ ಅಲ್ವಾ? ಓದುವ ವಿಚಾರದಲ್ಲಿ ಕಷ್ಟದ ವಿಷಯವನ್ನು ಮೊದಲು ಓದಲು ಪ್ರಯತ್ನಿಸಿ. ನಾನು ಮುಖ್ಯಮಂತ್ರಿಯಾಗಿದ್ದೆ, ಈಗ ಪ್ರಧಾನಿಯಾದೆ. ನಾನು ಸಾಕಷ್ಟು ಹೊಸ ವಿಷಯಗಳನ್ನು ಕಲಿಯಬೇಕಾಯಿತು. ನಾನು ಪ್ರತಿದಿನ ಬೆಳಿಗ್ಗೆ ಅತ್ಯಂತ ಕಷ್ಟದ ವಿಚಾರವನ್ನು ತಿಳಿಯುವ ಮೂಲಕ ದಿನ ಆರಂಭಿಸುತ್ತೇನೆ. ರಾತ್ರಿ ಸಮಯವಾದ ನಂತರ ಸುಲಭದ ವಿಚಾರಗಳನ್ನು ಗಮನಿಸಿ, ನಿರ್ಣಯ ತೆಗೆದುಕೊಳ್ಳಲು ಮುಂದಾಗ್ತೀನಿ ಎಂದು ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು ತಿಳಿಸಿದ್ದಾರೆ.
ಇಷ್ಟ ಅನ್ನೋದು ಮನುಷ್ಯನ ಸ್ವಭಾವದ ಭಾಗ
ನಿಮಗೆ ಯಾವುದಾದರೂ ಬಟ್ಟೆ ಇಷ್ಟವಾದ್ರೆ ಏನು ಮಾಡ್ತೀರಿ? ಪದೇಪದೆ ಅದನ್ನೇ ಹಾಕಿಕೊಳ್ತೀರಿ. ಅಪ್ಪ-ಅಮ್ಮ ಬೈದ್ರೂ ಬಿಡಲ್ಲ. ಇಷ್ಟ ಅನ್ನೋದು ಮನುಷ್ಯನ ಸ್ವಭಾವದ ಭಾಗ. ನಿಮಗೆ ಯಾವುದು ಇಷ್ಟವಾಗುತ್ತೋ ಅದರ ಜೊತೆಗೆ ನೀವು ಅತ್ಯಂತ ಸಹಜವಾಗಿ, ಕಂಫರ್ಟಬಲ್ ಆಗಿ ಇರ್ತೀರಿ. ನಿಮ್ಮ ಸಂಪೂರ್ಣ ಶಕ್ತಿಯನ್ನು ಅದರ ಮೇಲೆ ಕೇಂದ್ರೀಕರಿಸ್ತೀರಿ ಅಲ್ವಾ? ನಾನು ಇದೇ ಉದಾಹರಣೆಯನ್ನು ವಿಸ್ತರಿಸಲು ಇಷ್ಟಪಡ್ತೀನಿ ಎಂದು ಮೋದಿ ನಮ್ಮ ಬಟ್ಟೆಯ ಉದಾಹರಣೆ ನೀಡಿ ಉತ್ತರ ನೀಡಿದ್ದಾರೆ.
ಕೆಲ ವಿಷಯಗಳನ್ನು ಓದಲು ಕಷ್ಟವಾಗುತ್ತೆ. ಏನು ಮಾಡುವುದು?
ಕೆಲ ವಿಷಯಗಳನ್ನು ಓದಲು ಕಷ್ಟವಾಗುತ್ತೆ. ಏನು ಮಾಡುವುದು? ಎಂದು ಅರುಣಾಚಲ ಪ್ರದೇಶ ವಿದ್ಯಾರ್ಥಿನಿ ಪುಣ್ಯೊ ಪ್ರಶ್ನೆ ಕೇಳಿದ್ದಾಳೆ. ವಿನೀತಾ ಎಂಬ ಶಿಕ್ಷಕಿ ಕೆಲವು ವಿಷಯಗಳನ್ನು ಹೇಗೆ ನಿರ್ವಹಿಸುವುದು? ಮಕ್ಕಳಿಗೆ ಹೇಗೆ ಕಲಿಸುವುದು ಅಂತ ಪ್ರಶ್ನೆ ಬರುತ್ತೆ. ವಿಜ್ಞಾನ-ಗಣಿತವನ್ನು ಸರಳವಾಗಿ ಕಲಿಸುವುದು ಹೇಗೆ? ಎಂದು ಕೇಳಿದ್ದಾರೆ.
ಅಂಕಗಳ ಹೊರತಾಗಿಯೂ ಬದುಕು ಇದೆ
ಅಂಕಗಳ ಹೊರತಾಗಿಯೂ ಬದುಕು ಇದೆ. ನಮ್ಮಲ್ಲಿ ಪರೀಕ್ಷೆಗಳಿಗೆ ಕಸೂತಿ ಅಂತ ಪದವಿದೆ. ಇದು ನೀವೇ ಗೆಲ್ಲಬೇಕಾದ ಸವಾಲು. ದೊಡ್ಡ ಬದುಕಿನಲ್ಲಿ ಜೀವನ ಸಾಗಿಸಲು ಇದು ಅಗತ್ಯ. ಆದರೆ ಖಂಡಿತ ಇದು ಜೀವನ್ಮರಣ ಪ್ರಶ್ನೆ ಅಲ್ಲ ಎಂದು ಮೋದಿ ಪರೀಕ್ಷಾ ಪೆ ಚರ್ಚಾದಲ್ಲಿ ಮಾತನಾಡಿದ್ದಾರೆ.
ಮಕ್ಕಳ ಜೊತೆಗೆ ಬೆರೆತರೆ ಮಾತ್ರ ಅವರ ಶಕ್ತಿ-ದೌರ್ಬಲ್ಯಗಳು ನಿಮಗೆ ಅರಿವಾಗಲು ಸಾಧ್ಯ
ಮಕ್ಕಳನ್ನು ಭಯವಿಲ್ಲದ ವಾತಾವರಣದಲ್ಲಿ ಬದುಕಲು ಅವಕಾಶ ಮಾಡಿಕೊಡಿ. ಮೊದಲು ಅಪ್ಪ-ಅಮ್ಮ ಮಕ್ಕಳ ಜೊತೆಗೆ ಹೆಚ್ಚು ಸಹಜವಾಗಿ ಬೆರೆಯುತ್ತಿದ್ದರು. ಎಲ್ಲ ಥರದ ವಿಷಯಗಳನ್ನೂ ಮಾತಾಡ್ತಾ ಇದ್ರು. ಆದರೆ ಇವತ್ತು ಏನಾಗಿದೆ. ನೀವು ಅಂದ್ರೆ ಪೋಷಕರು ಮಕ್ಕಳ ಜೊತೆಗೆ ಕೇವಲ ಉದ್ಯೋಗಾವಕಾಶ, ಪರೀಕ್ಷೆ ಬಗ್ಗೆ ಮಾತ್ರ ಮಾತಾಡ್ತಿದ್ದೀರಿ. ನೀವು ಮಕ್ಕಳ ಎಲ್ಲ ವಿಷಯಗಳತ್ತ ಗಮನ ಕೊಡಬೇಕು. ಮಕ್ಕಳ ಜೊತೆಗೆ ಬೆರೆತರೆ ಮಾತ್ರ ಅವರ ಶಕ್ತಿ-ದೌರ್ಬಲ್ಯಗಳು ನಿಮಗೆ ಅರಿವಾಗಲು ಸಾಧ್ಯ. ಆದರೆ ಈಗ ಅಪ್ಪ-ಅಮ್ಮನಿಗೆ ಸಮಯವಿಲ್ಲ. ಹೀಗಾಗಿ ಅವರಿಗೆ ಮಕ್ಕಳ ಸಾಮರ್ಥ್ಯದ ನಿಜವಾದ ಅರಿವು ಸಿಕ್ಕಿಲ್ಲ. ಹೀಗಾಗಿಯೇ ಅವರು ಪರೀಕ್ಷೆಗಳಿಂದ ಮಕ್ಕಳ ಸಾಮರ್ಥ್ಯ ಅರಿಯಲು ಯತ್ನಿಸುತ್ತಿದ್ದಾರೆ ಎಂದು ಮೋದಿ ಮಾತನಾಡಿದ್ದಾರೆ.
ಜೀವನ ಅನ್ನೋದು ತುಂಬಾ ದೊಡ್ಡದು, ಪರೀಕ್ಷೆ ಅದರಲ್ಲಿ ಒಂದು ಚಿಕ್ಕ ಭಾಗ
ಪೋಷಕರೇ ನೀವೇನು ಮಾಡಿದ್ದೀರಿ? ಇದು ಅತ್ಯಂತ ದೊಡ್ಡ ತಪ್ಪು. ಅಗತ್ಯಕ್ಕಿಂತ ಹೆಚ್ಚು ಕಾಳಜಿ ಮಾಡಿದ್ದೀರಿ. ನಾನು ನಿಮಗೆ ಹೇಳಲು ಇಷ್ಟಪಡುವುದು ಇಷ್ಟೇ. ಜೀವನ ಅನ್ನೋದು ತುಂಬಾ ದೊಡ್ಡದು. ಪರೀಕ್ಷೆ ಅದರಲ್ಲಿ ಒಂದು ಚಿಕ್ಕ ಭಾಗ. ನೀವು ಶಿಕ್ಷಕರು ಅಥವಾ ಪೋಷಕರೇ ಆಗಿರಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಯತ್ನಿಸಿ. ಅವರಲ್ಲಿ ಹೆದರಿಕೆ ತುಂಬಬೇಡಿ ಎಂದು ಮೋದಿ ಹೆತ್ತವರು ಹಾಗೂ ಶಿಕ್ಷಕರಿಗೆ ಕಿವಿಮಾತು ಹೇಳಿದ್ದಾರೆ.
ಪರೀಕ್ಷೆ ಬಂದಾಗ ಒತ್ತಡ ಹೆಚ್ಚಾಗುತ್ತೆ. ಏನು ಮಾಡುವುದು?
ಪರೀಕ್ಷೆ ಬಂದಾಗ ಒತ್ತಡ ಹೆಚ್ಚಾಗುತ್ತೆ. ಏನು ಮಾಡುವುದು ಎಂದು ಪಲ್ಲವಿ ಎಂಬ ವಿದ್ಯಾರ್ಥಿ ಪ್ರಶ್ನೆ ಕೇಳಿದ್ದಾಳೆ. ಹಾಗೂ ಪರೀಕ್ಷೆ ವೇಳೆ ಬರುವ ಗೊಂದಲಗಳನ್ನು ಹೇಗೆ ನಿವಾರಿಸಿಕೊಳ್ಳುವುದು? ಉತ್ತಮ ಕಾಲೇಜು ಸಿಗುತ್ತೋ ಇಲ್ವೋ ಅಂತ ಭಯವಾಗುತ್ತೆ ಏನು ಮಾಡುವುದು? ಎಂದು ಅರ್ಪಣ್ ಪಾಂಡೆ ಎಂಬ ಮತ್ತೊಬ್ಬ ವಿದ್ಯಾರ್ಥಿ ಕೇಳಿದ ಪ್ರಶ್ನೆಗೂ ಮೋದಿ ಉತ್ತರ ನೀಡಿದ್ದಾರೆ. ಹೆದರಬೇಡಿ ಆಕಾಶವೇನೂ ತೂತುಬಿದ್ದಿಲ್ಲ. ಈ ಪರೀಕ್ಷೆಯೇ ಜೀವನ ಅಂತ ನೀವೆಲ್ಲಾ ನಂಬಿಕೊಂಡಿದ್ದೀರಿ. ಆದರೆ ಬದುಕು ಎಲ್ಲದಕ್ಕೂ ದೊಡ್ಡದು ಎಂದು ಮೋದಿ ಧೈರ್ಯ ತುಂಬಿದ್ದಾರೆ. ನೀವೇನು ಮೊದಲ ಸಲ ಪರೀಕ್ಷೆಗೆ ಹೋಗ್ತಿದ್ದೀರಾ? ಎಷ್ಟೋ ಸಲ ಹೋಗಿದ್ದೀರಾ ತಾನೆ? ಪರೀಕ್ಷೆ ಅಚಾನಕ್ ಆಗಿ ಬಂದಿಲ್ಲ. ಹಾಗಾಗಿ ಹೆದರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದ್ದಾರೆ.
ಈ ಕಾರ್ಯಕ್ರಮವನ್ನು ಇಡೀ ಕುಟುಂಬ ನೋಡಬೇಕು: ಮೋದಿ ಟ್ವೀಟ್
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ಕೇವಲ ಮಕ್ಕಳು ಮಾತ್ರವಲ್ಲ ಇಡೀ ಕುಟುಂಬ ನೋಡಬೇಕು ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Parents and teachers are as involved in the exam journey. They can be an extremely positive influence on our #ExamWarriors. This time, the number of parents and teachers who’ve sent their inputs and questions is at a record high. #PPC2021 https://t.co/bb80Edj5hd
— Narendra Modi (@narendramodi) April 7, 2021
Play #PPC2021 and eject stress from the lives of our phenomenal #ExamWarriors.
The programme begins in a short while. You can watch it on @PrimeVideoIN or just #AskAlexa! https://t.co/yCSTtpXZNK
— Narendra Modi (@narendramodi) April 7, 2021
ಈ ಬಾರಿ ಪೋಷಕರಿಗೂ ಅವಕಾಶ
ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಈ ಬಾರಿ ಮಕ್ಕಳು ಮಾತ್ರವಲ್ಲದೆ ಪೋಷಕರು, ಶಿಕ್ಷಕರು ಭಾಗಿಯಾಗಲಿದ್ದಾರೆ. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳ ಜತೆ ಪ್ರಧಾನಿ ಸಂವಾದ ನಡೆಸುತ್ತಿದ್ದಾರೆ.
Published On - Apr 07,2021 8:33 PM