ಮಧ್ಯಪ್ರದೇಶದಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗೆ ನಡುರಸ್ತೆಯಲ್ಲಿಯೇ ಹಿಗ್ಗಾಮುಗ್ಗ ಥಳಿಸಿದ ಪೊಲೀಸ್, ವಿಡಿಯೊ ವೈರಲ್
Police Thrash Mask less Man, Video Viral: ವಿಡಿಯೊದಲ್ಲಿರುವ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು ತನಿಖೆ ನಡೆಸುವಂತೆ ನಗರ ಪೊಲೀಸ್ ಸುಪರಿಟೆಂಡೆಂಟ್ಗೆ (CSP) ಆದೇಶಿಸಲಾಗಿದೆ ಎಂದು ಸಿಎಸ್ಪಿ (ಪೂರ್ವ) ಅಶುತೋಶ್ ಬಾಗ್ರಿ ಹೇಳಿದ್ದಾರೆ.
ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಮಸ್ಕ್ ಧರಿಸದ ವ್ಯಕ್ತಿಯೊಬ್ಬರಿಗೆ ಇಬ್ಬರು ಪೊಲೀಸರು ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೊ ವೈರಲ್ ಆಗಿದ್ದು, ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಕೊವಿಡ್ ಕಾಲದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಈ ನಡುವೆ ಮಾಸ್ಕ್ ಧರಿಸಿಲ್ಲ ಎಂದು35ರ ಹರೆಯದ ವ್ಯಕ್ತಿಗೆ ಥಳಿಸಿರುವ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ವ್ಯಕ್ತಿಯ ಹದಿಹರೆಯದ ಮಗ ಮತ್ತು ಕೆಲವು ಮಹಿಳೆಯರು ಪೊಲೀಸರಲ್ಲಿ ಮನವಿ ಮಾಡುತ್ತಿದ್ದರೂ ಅದಕ್ಕೆ ಕ್ಯಾರೇ ಎನ್ನದೆ ಪೊಲೀಸರು ಆ ವ್ಯಕ್ತಿಗೆ ಥಳಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಆದಾಗ್ಯೂ, ಆ ವ್ಯಕ್ತಿ ನಮ್ಮನ್ನು ಬೈದಿದ್ದ ಎಂದು ಪೊಲೀಸರು ವಾದಿಸಿದ್ದಾರೆ.
ವಿಡಿಯೊದಲ್ಲಿರುವ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು ತನಿಖೆ ನಡೆಸುವಂತೆ ನಗರ ಪೊಲೀಸ್ ಸುಪರಿಟೆಂಡೆಂಟ್ಗೆ (CSP) ಆದೇಶಿಸಲಾಗಿದೆ ಎಂದು ಸಿಎಸ್ಪಿ (ಪೂರ್ವ) ಅಶುತೋಶ್ ಬಾಗ್ರಿ ಹೇಳಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಆ ವ್ಯಕ್ತಿ ಮಾಸ್ಕ್ ಧರಿಸಿರಲಿಲ್ಲ. ಹಾಗಾಗಿ ಪೊಲೀಸರು ಆತನನ್ನು ತಡೆದು ನಿಲ್ಲಿಸಿ ಕೊವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಕ್ಕೆ ವಿವರಣೆ ಕೇಳಿದ್ದರು. ಆದ ಆ ವ್ಯಕ್ತಿ ಪೊಲೀಸ್ ಸಿಬ್ಬಂದಿಯ ಕೊರಳು ಪಟ್ಟಿ ಹಿಡಿದು ಬೈದಿದ್ದಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಪೊಲೀಸರು ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಆ ವಿಡಿಯೊ ಎಡಿಟ್ ಮಾಡಿದ್ದು. ಪೊಲೀಸರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಈ ರೀತಿ ಎಡಿಟ್ ಮಾಡಲಾಗಿದೆ ಎಂದಿದ್ದಾರೆ ಬಾಗ್ರಿ. ವಿಡಿಯೊದಲ್ಲಿರುವ ವ್ಯಕ್ತಿಯ ವಿರುದ್ಧ ವಂಚನೆ ಮತ್ತು ಸುಲಿಗೆ ಆರೋಪ ಇದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
On the basis of initial information, 2 police officers have been suspended. The man had several cases against him. He was adamant about not wearing a mask, the police were only trying to control him, they weren’t beating him: BJP leader Rahul Kothari, in Bhopal pic.twitter.com/iLp6L0iWnO
— ANI (@ANI) April 7, 2021
ನಾನು ಆಸ್ಪತ್ರೆಯಲ್ಲಿರುವ ಅಪ್ಪನಿಗೆ ಆಹಾರ ತೆಗೆದುಕೊಂಡು ಹೋಗುತ್ತಿದ್ದೆ. ಆಗ ನನ್ನ ಮಾಸ್ಕ್ ಜಾರಿದ್ದನ್ನು ನೋಡಿ ಪೊಲೀಸ್ ಠಾಣೆಗೆ ಬರುವಂತೆ ಪೊಲೀಸರು ಹೇಳಿದರು. ಆಮೇಲೆ ಪೊಲೀಸ್ ಠಾಣೆಗೆ ಬರುತ್ತೇನೆ ಎಂದು ನಾನು ಮನವಿ ಮಾಡಿಕೊಂಡಾಗ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
MP: In a viral video, 2 policemen seen thrashing a man in Indore for not wearing mask properly
“Was taking food for my father in hospital when Police asked me to come to PS as my mask had slipped. I requested that I could report later but they began hitting me,” he said (06.04) pic.twitter.com/gOYaljmV1q
— ANI (@ANI) April 6, 2021
ಮಾಸ್ಕ್ ಧರಿಸದವರಿಗೆ ಜೈಲು ಮಧ್ಯಪ್ರದೇಶದಲ್ಲಿ ಮಾಸ್ಕ್ ಧರಿಸದವರನ್ನು ಜೈಲಿಗೆ ಹಾಕಲಾಗುತ್ತದೆ. ಕಳೆದ ಐದು ದಿನಗಳಲ್ಲಿ ಇಂದೋರ್ ಪೊಲೀಸರು ಮಾಸ್ಕ್ ಧರಿಸದ 258 ಮಂದಿಯನ್ನು ಬಂಧಿಸಿದ್ದಾರೆ. ಸ್ಥಳೀಯ ಆಡಳಿತ ಸಂಸ್ಥೆಯ ನಿರ್ದೇಶನದ ಮೇರೆಗೆ ಇಂದೋರ್ನ ಸ್ನೇಹಲತಾಗಂಜ್ ಪ್ರದೇಶದಲ್ಲಿರುವ ಸಮುದಾಯ ಅತಿಥಿಗೃಹವನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸಿದ್ದು, ಅಲ್ಲಿ 300 ಜನರನ್ನು ಇರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸೆಂಟ್ರಲ್ ಜೈಲಿನ ಸುಪರಿಟೆಂಡೆಂಟ್ ರಾಕೇಶ್ ಕುಮಾರ್ ಭಂಗ್ರೆ ಹೇಳಿದ್ದಾರೆ.
ಕಳೆದ ಐದು ದಿನಗಳಲ್ಲಿ ನಗರದ ಬೇರೆ ಬೇರೆ ಪ್ರದೇಶಗಳಿಂದ ಒಟ್ಟು 258 ಮಂದಿಯನ್ನು ಬಂಧಿಸಿ ತಾತ್ಕಾಲಿಕ ಜೈಲಿನಲ್ಲಿರಿಸಲಾಗಿದೆ. ಸಿಆರ್ಪಿಸಿ ಸೆಕ್ಷನ್ 151 (ಅಪರಾಧಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ) ಅಡಿ ಯಲ್ಲಿ ಇವರನ್ನು ಬಂಧಿಸಲಾಗಿದೆ. ಇವರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಅಡ್ಡಾಡುತ್ತಿದ್ದರು. ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಮೂರುಗಂಟೆಗಳ ಕಾಲ ಜೈಲಿನಲ್ಲಿರಿಸಿ ಆಮೇಲೆ ಕೊವಿಡ್ ಮಾರ್ಗಸೂಚಿ ಉಲ್ಲಂಘನ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ ಭಂಗ್ರೆ.
ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಕೊವಿಡ್ ರೋಗಿಗಳು ಇರುವ ನಗರವಾಗಿದೆ ಇಂದೋರ್. ಮಂಗಳವಾರ ಇಲ್ಲಿ 805 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದೆ. ಮಧ್ಯಪ್ರದೇಶದಲ್ಲಿ 74,029 ಕೊವಿಡ್ ರೋಗಿಗಳಿದ್ದು 977 ಮಂದಿ ಸಾವಿಗೀಡಾಗಿದ್ದಾರೆ.
(Mask less man Thrashed by Two Police Constables on the road in Madhya Pradesh Indore city both Policemen were Suspended)