ದೆಹಲಿ: ಕಳೆದ ಕೆಲ ದಿನಗಳಿಂದ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿರುವ ಟ್ವಿಟರ್ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ನೀಡಿದ ದೂರನ್ನು ಆಧರಿಸಿ ದೆಹಲಿ ಪೊಲೀಸರು ಪೊಕ್ಸೋ ಕಾಯ್ದೆ ಹಾಗೂ ಐಟಿ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಕಳೆದ ವಾರ ದೆಹಲಿ ಸೈಬರ್ ಸೆಲ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದ ಎನ್ಸಿಪಿಸಿಆರ್, ಜೂನ್ 29 ಅಥವಾ ಅದಕ್ಕಿಂತ ಮುಂಚಿತವಾಗಿ ವೈಯಕ್ತಿಕವಾಗಿ ಸಂಪರ್ಕಿಸುವುದಾಗಿ ತಿಳಿಸಿತ್ತು. ಅಲ್ಲದೇ, ಟ್ವಿಟರ್ ವಿರುದ್ಧ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮೇ 29ರಂದು ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದರೂ ಇನ್ನೂ ಕ್ರಮ ಕೈಗೊಳ್ಳದಿರಲು ಕಾರಣವೇನು ಎಂದು ಡಿಸಿಪಿ ಅನ್ಯೇಷ್ ರಾಯ್ ಅವರ ಬಳಿ ವಿವರಣೆ ಕೇಳಿತ್ತು. ಈ ಬೆಳವಣಿಗೆಗಳ ನಂತರ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದೆಹಲಿ ಸೈಬರ್ ಪೊಲೀಸರಿಗೆ ಪತ್ರ ಬರೆದಿದ್ದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಟ್ವಿಟರ್ ವಿರುದ್ಧ ತಾನು ಇತ್ತೀಚೆಗೆ ನಡೆಸಿದ ಕೆಲ ತನಿಖೆಗಳ ವರದಿಗಳನ್ನು ಆಧರಿಸಿ ದೂರು ದಾಖಲಿಸುವಂತೆ ತಿಳಿಸಿತ್ತು. ಟ್ವಿಟರ್ ಜಾಲತಾಣದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಂಶಗಳು ಸುಲಭದಲ್ಲೇ ಸಿಗುತ್ತಿವೆ ಎಂದು ಆರೋಪಿಸಿತ್ತು. ಅಷ್ಟೇ ಅಲ್ಲದೇ, ಡಾರ್ಕ್ವೆಬ್ಗೆ ಸಂಬಂಧಿಸಿದಂತೆ ಟೂಲ್ ಕಿಟ್ ಕೂಡಾ ಟ್ವಿಟರ್ನಲ್ಲಿ ಲಭ್ಯವಿದೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದ ಎನ್ಸಿಪಿಸಿಆರ್, ಇದು ಎಲ್ಲಾ ಮಕ್ಕಳಿಗೂ ಅಂತಹ ಅಂಶಗಳನ್ನು ಪಡೆಯಲು ಸಹಕರಿಸುತ್ತದೆ ಎಂದು ಮೇ ತಿಂಗಳಲ್ಲಿ ಬರೆದ ಪತ್ರದಲ್ಲಿ ಉಲ್ಲೇಖಿಸಿತ್ತು.
ನಿನ್ನೆಯಷ್ಟೇ, ಟ್ವಿಟರ್ ತನ್ನ ವೆಬ್ಸೈಟ್ನಲ್ಲಿ ಭಾರತ ಭೂಪಟವನ್ನು ತಪ್ಪಾಗಿ ತೋರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಟ್ವಿಟರ್ ಒಂದಲ್ಲ ಒಂದು ವಿಚಾರಕ್ಕೆ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದು, ಭಾರತದ ಭೂಪಟದಲ್ಲಿ ಬಹುದೊಡ್ಡ ಪ್ರಮಾದವನ್ನೇ ಮಾಡಿತ್ತು. ಜಮ್ಮು-ಕಾಶ್ಮೀರ ಒಂದು ಪ್ರತ್ಯೇಕ ದೇಶ ಮತ್ತು ಲಡಾಖ್ ಚೀನಾದ ಒಂದು ಭಾಗ ಎಂದು ಬಿಂಬಿಸಿತ್ತು. ಹಾಗಂತ ಟ್ವಿಟರ್ ಹೀಗೆ ಭಾರತ ಭೂಪಟವನ್ನು ತಪ್ಪಾಗಿ ತೋರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಒಮ್ಮೆ ಇದೇ ಪ್ರಮಾದ ಎಸಗಿತ್ತು. ಟ್ವಿಟರ್ನ ಟ್ವೀಪ್ ಲೈಫ್ ವಿಭಾಗದಲ್ಲಿ ತೋರಿಸಲಾದ ಭಾರತದ ತಪ್ಪು ಭೂಪಟವನ್ನು ನೋಡಿ ಕೇಂದ್ರ ಸರ್ಕಾರವಷ್ಟೇ ಅಲ್ಲ, ಭಾರತೀಯ ನೆಟ್ಟಿಗರೂ ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ಬೆನ್ನಲ್ಲೇ ಮೊನ್ನೆ ತಪ್ಪು ಭೂಪಟವನ್ನು ಟ್ವಿಟರ್ ತೆಗೆದು ಹಾಕಿದೆ.
ಇದನ್ನೂ ಓದಿ:
ಸಚಿವ ರವಿಶಂಕರ್ ಪ್ರಸಾದ್, ಶಶಿ ತರೂರ್ ಖಾತೆಯನ್ನು ಲಾಕ್ ಮಾಡಿದ್ದಕ್ಕೆ ಟ್ವಿಟರ್ ಬಳಿ ವಿವರಣೆ ಕೇಳಿದ ಸಂಸದೀಯ ಸ್ಥಾಯಿ ಸಮಿತಿ