ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆ; ಲಸಿಕೆ ಪಡೆದವರಿಗೂ ತಗುಲುತ್ತಿದೆ ಈ ವೈರಸ್
ಪುಣೆ, ಸತಾರಾ, ಕೊಲ್ಲಾಪುರ, ಸೋಲಾಪುರ, ಸಾಂಘ್ಲಿ, ಅಹ್ಮದ್ನಗರ ಮತ್ತು ರತ್ನಗಿರಿಯಲ್ಲಿ ಪ್ರತಿದಿನ ದಾಖಲಾಗುವ ಕೊರೊನಾ ಸೋಂಕಿನ ಸಂಖ್ಯೆ ಇನ್ನೂ ಅಧಿಕವಾಗಿಯೇ ಇದೆ.
ಮುಂಬೈ: ಮಹಾರಾಷ್ಟ್ರದಲ್ಲಿ ಡೆಡ್ಲಿ ಡೆಲ್ಟಾ ಪ್ಲಸ್ ರೂಪಾಂತರಿ (Delta Plus Variant) ವೈರಾಣು ಕಾಟ ಅಧಿಕವಾಗಿದೆ. ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 10 ಮಂದಿ ಎರಡೂ ಡೋಸ್ ಲಸಿಕೆ (Corona Vaccination) ಪಡೆದವರೇ ಆಗಿದ್ದಾರೆ. ಇನ್ನು 12 ಮಂದಿ ಮೊದಲ ಡೋಸ್ ಲಸಿಕೆ ಪಡೆದವರು. ಕಳೆದ 24ಗಂಟೆಯಲ್ಲಿ 10 ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ (Delta Plus Variant) ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಇದು ಸಹಜವಾಗಿಯೇ ಆತಂಕ ಸೃಷ್ಟಿಸಿದೆ. ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ ಕೊವಿಡ್ 19 (Covid 19) ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ನಿಂದ ಐವರು ಮೃತಪಟ್ಟಿದ್ದಾರೆ. ಅದರಲ್ಲಿ ಒಂದು ಸಾವು ಮುಂಬೈನಲ್ಲಾಗಿದೆ. ಮೃತಪಟ್ಟ ಐವರಲ್ಲಿ ಇಬ್ಬರು ಎರಡೂ ಡೋಸ್ ಕೊರೊನಾ ಲಸಿಕೆ ಪಡೆದವರೇ ಆಗಿದ್ದಾರೆ.
ಇನ್ನು ಮಹಾರಾಷ್ಟ್ರದ ಬಹುತೇಕ ಪ್ರದೇಶಗಳಲ್ಲಿ ಕೊರೊನಾವನ್ನು ಗಣನೀಯವಾಗಿ ನಿಯಂತ್ರಣ ಮಾಡಲಾಗಿದೆ. ಇನ್ನುಳಿದಂತೆ ಪುಣೆ, ಸತಾರಾ, ಕೊಲ್ಲಾಪುರ, ಸೋಲಾಪುರ, ಸಾಂಘ್ಲಿ, ಅಹ್ಮದ್ನಗರ ಮತ್ತು ರತ್ನಗಿರಿಯಲ್ಲಿ ಪ್ರತಿದಿನ ದಾಖಲಾಗುವ ಕೊರೊನಾ ಸೋಂಕಿನ ಸಂಖ್ಯೆ ಇನ್ನೂ ಅಧಿಕವಾಗಿಯೇ ಇದ್ದು, ಈ ಜಿಲ್ಲೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ.
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 4800 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ನಿನ್ನೆ 130 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಕೊರೊನಾದಿಂದ ಸತ್ತವರ ಒಟ್ಟು ಸಂಖ್ಯೆ 1.35 ಲಕ್ಷಕ್ಕೆ ಏರಿದೆ. ನಿನ್ನೆ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯದಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗದಂತೆ ಸಾರ್ವಜನಿಕರೂ ಎಚ್ಚರ ವಹಿಸಬೇಕು. ಹಾಗೊಮ್ಮೆ ಪ್ರಕರಣಗಳು ಹೆಚ್ಚಾಗುತ್ತ ಹೋದರೆ ಮತ್ತೆ ಲಾಕ್ಡೌನ್ ಅನಿವಾರ್ಯವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ರಾಜ್ಯ ರಸ್ತೆ ನಿಗಮದಿಂದ ಹೆಚ್ಚುವರಿ 50 ಎಲೆಕ್ಟ್ರಿಕ್ ಬಸ್ ಆರ್ಡರ್ ಪಡೆದ ಒಲೆಕ್ಟ್ರಾ ಗ್ರೀನ್ ಟೆಕ್
ಅಫ್ಘಾನಿಸ್ತಾನದಿಂದ ಭಾರತೀಯರನ್ನು ಕರೆತರಲು ಕಾಬೂಲ್ನಲ್ಲಿ ಲ್ಯಾಂಡ್ ಆಯ್ತು ಭಾರತೀಯ ವಾಯುಪಡೆಯ ದೈತ್ಯ ಸಿ-17 ವಿಮಾನ
Delta Plus Variant cases reach to 76 in Maharashtra