ಕಳೆದ ವರ್ಷ ಮೊದಲ ಅಲೆ ಎದುರಾದಾಗ ಏಷ್ಯಾದ ಅತಿದೊಡ್ಡ ಕೊಳೆಗೇರಿ ಪ್ರದೇಶವಾದ ಮುಂಬೈನ ಧಾರಾವಿಯಲ್ಲಿ (Dharavi) ಕೊರೊನಾ ಪ್ರಕರಣಗಳು ಮಿತಿಮೀರಿದ್ದವು. ಧಾರಾವಿಯಲ್ಲಿ ಕೊರೊನಾ ಕಾಣಿಸಿಕೊಂಡರೆ ಏನಪ್ಪಾ ಮಾಡೋದು ಅಂತಾ ಮುಂಬೈ ಆಡಳಿತ ಬಿಎಂಸಿ ಆತಂಕಕ್ಕೆ ಒಳಗಾಗಿತ್ತು. ಆದರೆ ಈಗ ಎರಡನೆಯ ಅಲೆ ಕೊನೆಯ ಹಂತದಲ್ಲಿದೆ. ಈಗ ಹೇಗಿದೆ ಧಾರಾವಿ ಪರಿಸ್ಥಿತಿ ಎಂದು ನೋಡಿದಾಗ ಅಲ್ಲೀಗ ಕೊರೊನಾ ಸೋಂಕಿನ ಸುಇವೇ ಇಲ್ಲ ಎಂಬಷ್ಟು ನಗಣ್ಯವಾಗಿದೆ. ಮುಂಬೈನ ಧಾರಾವಿ ಬೃಹತ್ ಕೊಳೆಗೇರಿ 2.5 ಚದರ ಕಿಲೊ ಮೀಟರ್ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ. ಬಿಎಂಸಿ (Brihanmumbai Municipal Corporation -BMC) ಪ್ರಕಾರ ಇದುವರೆಗೂ ಧಾರಾವಿಯಲ್ಲಿ 6,798 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 2,500 ಕೊರೊನಾ ಕೇಸ್ಗಳು (ಶೇ. 36) ಇದೇ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪತ್ತೆಯಾಗಿದ್ದವು. ನಿನ್ನೆ ಬುಧವಾರ ಮೂರೇ ಮೂರು ಪ್ರಕರಣ ಪತ್ತೆಯಾಗಿವೆ. ಫೆಬ್ರವರಿ 11ರಿಂದೀಚೆಗೆ ಇದು ಅತ್ಯಂತ ಕಡಿಮೆ ಪ್ರಕರಣವಾಗಿದೆ.
ಇದೇ ಫೆಬ್ರವರಿ ಎರಡನೆಯ ವಾರದಲ್ಲಿ ಕೊರೊನಾ ಎರಡನೆಯ ಅಲೆ ಇಡೀ ಮುಂಬೈ ಮಹಾನಗರಿಯನ್ನು ಆವರಿಸಿತ್ತು. ಆಗ ಧಾರಾವಿಯಲ್ಲಿ ದಿನಂಪ್ರತಿ 10 ಕೇಸ್ಗಳು ಕಾಣಿಸಿಕೊಳ್ಳತೊಡಗಿದ್ದವು. ಅಲ್ಲಿಗೆ, 37 ದಿನಗಳ ಬಳಿಕ ಅಲ್ಲಿ ಎರಡಂಕಿಯ ಪ್ರಕರಣಗಳು ಪತ್ತೆಯಾಗತೊಡಗಿದ್ದವು. ಮಾರ್ಚ್ ತಿಂಗಳಲ್ಲಿ ದಿನಕ್ಕೆ 50 ಕೊರೊನಾ ಕೇಸ್ಗಳು ಪತ್ತೆಯಾಗತೊಡಗಿದವು. ಹಾಗಾಗಿ, ಮಾರ್ಚ್ 23ರ ವೇಳೆಗೆ 250 ಹಾಸಿಗೆಗಳ ವನಿತಾ ಸಮಾಜ ಕ್ವಾರೆಂಟೈನ್ ಕೇಂದ್ರದಲ್ಲಿ ಸೋಂಕಿತರು ತುಂಬಿ ತುಳುಕತೊಡಗಿದರು. ಏಪ್ರಿಲ್ 8ರಂದು ಒಂದೇ ದಿನ 99 ಕೇಸ್ಗಳು ವರದಿಯಾದವು. ಇದು BMC ಯನ್ನು ನಿಜಕ್ಕೂ ಆತಂಕಕ್ಕೆ ದೂಡಿತು. ಮೇ 1ರಂದು 947 ಸಕ್ರಿಯ ಪ್ರಕರಣಗಳಿಗೆ ಎಗರಿತ್ತು. ಆದರೆ ನಿನ್ನೆ ಬುಧವಾರದ ಅಂಕಿ ಅಂಶದ ಪ್ರಕಾರ ಧಾರಾವಿಯಲ್ಲಿ 62 ಸಕ್ರಿಯ ಪ್ರಕರಣಗಳಿದ್ದವು.
ಈ ಬಾರಿ BMC ಉಸ್ತುವಾರಿ ಹೊತ್ತಿದ್ದ ಸಹಾಯಕ ಮುನ್ಸಿಪಲ್ ಕಮೀಷನರ್ ಕಿರಣ್ ದಿಗಾವಕರ್ ಹೇಳುವಂತೆ ಕಳೆದ ವರ್ಷದ ಸ್ಟ್ರಾಟಜಿಯನ್ನೇ ಈ ಬಾರಿಯೂ ಅಳವಡಿಸಿಕೊಳ್ಳಲಾಯಿತು. ಏನಂದ್ರೆ ತಪಾಸಣೆ, ಟೆಸ್ಟ್ ಮತ್ತು ಐಸೊಲೇಶನ್ (screen, test, isolate). ಧಾರಾವಿಯಂತಹ ಬೃಹತ್ ಪ್ರದೇಶದಲ್ಲಿ ಕೊರೊನಾ ನಿಯಂತ್ರಿಸಲು ಇದೇ ಪ್ರಧಾನ ಮಾನದಂಡವಾಯಿತು.
ಧಾರಾವಿ ಕೊಳೆಗೇರಿಯಲ್ಲಿ 9-10 ಲಕ್ಷ ಮಂದಿಯಿದ್ದಾರೆ. ಇವರಲ್ಲಿ ಶೇ. 40 ರಷ್ಟು ಮಂದಿ ವಲಸೆ ಕಾರ್ಮಿಕರು. 10 X 10 ವಿಸ್ತೀರ್ಣದ ಚಿಕ್ಕ ಗೂಡಿನಂತಹ ಮನೆಗಳಲ್ಲಿ ಅನೇಕ ಮಂದಿ ವಾಸಿಸುವ ಪ್ರದೇಶ ಇದಾಗಿದೆ. ಜನ ಸಾಂದ್ರತೆ ಈ ಪರಿಯಾಗಿರುವಾಗ ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡುವುದು ಹೇಗೆ? ಐಸೊಲೇಶನ್ ಮಂತ್ರ ಜಪಿಸುವುದು ಹೇಗಾದೀತು? ಆದರೂ ಮೊದಲ ಅಲೆ ವೇಳೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳು ಮತ್ತು ಆನಂತರ ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿ ಕೊರೊನಾ ಪ್ರಕರಣಗಳು ಕುಸಿಯತೊಡಗಿದವು.
ಅದಾದ ಬಳಿಕ BMC ವಾರ್ಡ್ ಅಧಿಕಾರಿಗಳು ಫಿವರ್ ಕ್ಲಿನಿಕ್ಗಳನ್ನು ಹಾಗೆಯೇ ತೆರೆದಿಟ್ಟುಕೊಂಡು ಕೊರೊನಾ ಎಂದು ಬರುತ್ತಿದ್ದ ಒಬ್ಬಿಬ್ಬರನ್ನೂ ಉಪಚರಿಸತೊಡಗಿತು. ಎಲ್ಲೂ ನಿರ್ಲಕ್ಷ್ಯ ತೋರದೆ ಕೊಳೆಗೇರಿಯಲ್ಲಿ ತಪಾಸಣೆ ಮತ್ತು ಐಸೊಲೇಶನ್ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಿಲ್ಲ. ಚಿಕ್ಕ ಚಿಕ್ಕ ಸಂದಿಗೊಂದಿಗಳನ್ನೂ ತಲುಪುವಂತಾಗಲು BMC ಅಧಿಕಾರಿಗಳು ಮೊಬೈಲ್ ಟೆಸ್ಟಿಂಗ್ ವಾಹನಗಳನ್ನು ಬಳಸತೊಡಗಿದರು. ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಸಂದೇಶಗಳನ್ನೂ ನೀಡತೊಡಗಿದರು.
ಇದೆಲ್ಲದರ ಫಲಶ್ರುತಿ ಎಂಬಂತೆ ಧಾರಾವಿಯಲ್ಲಿ ಮೇ 10ರಿಂದೀಚೆಗೆ ದಿನವೂ ಕೇಸ್ಗಳ ಸಂಖ್ಯೆ ಕಡಿಮೆಯಾಗುತ್ತಾ ಕೊರೊನಾ ಪ್ರಭಾವ ಕ್ಷೀಣಿಸತೊಡಗಿತು. ಮುಂಬೈನಲ್ಲೂ ಇದೇ ವಿದ್ಯಮಾನ ಕಂಡುಬಂದಿದ್ದು ಬಿಎಂಸಿ ಅಧಿಕಾರಿಗಳಿಗೆ ಚೇತೋಹಾರಿಯಾಗಿತ್ತು. ಮೇ 18ರಂದು ದೇಶದ ವಾಣಿಜ್ಯ ರಾಜಧಾನಿಯಲ್ಲಿ ಸಾವಿರಕ್ಕಿಂತ ಕಡಿಮೆಯಾಯಿತು.
ಮುಂದೆ ಧಾರಾವಿಯನ್ನು ಮತ್ತಷ್ಟು ಸುರಕ್ಷಿತವಾಗಿಡುವುದು ಹೇಗೆ? ಬಿಎಂಸಿಯ ಮಂತ್ರ ತಂತ್ರಗಳೇನು?
ಏನಿಲ್ಲಾ ಇಡೀ ಧಾರಾವಿಯಲ್ಲಿ ಎಲ್ಲರಿಗೂ ವ್ಯಾಕ್ಸಿನೇಶನ್ ಹಾಕಿಸುವುದು. ಇದಕ್ಕಾಗಿ ಮಾರ್ಚ್ 22ರಂದು ಛೋಟಾ ಸಿಯಾನ್ ಹಾಸ್ಪಿಟಲ್ ಅನ್ನು ತೆರೆಯಲಾಯಿತು. ಅದಾದ ಬಳಿಕ ಇನ್ನೂ ಎರಡು ವ್ಯಾಕ್ಸಿನೇಶನ್ ಕೇಂದ್ರಗಳನ್ನು ತೆರೆಯಲಾಗಿದ್ದು, ಬಹುತೇಕ ಧಾರಾವಿಯಲ್ಲಿ ಎಲ್ಲರಿಗೂ ಲಸಿಕೆ ಹಾಕಿಸಲಾಗುತ್ತಿದೆ. ತಪಾಸಣೆ, ಟೆಸ್ಟ್ ಮತ್ತು ಐಸೊಲೇಶನ್ ಜೊತೆಗೆ ಲಸಿಕೆ ಹಾಕಿಸುವುದು ಬಿಎಂಸಿಯ ಮಂತ್ರ ತಂತ್ರವಾಗಿದೆ. ತನ್ಮೂಲಕ ಏಷ್ಯಾದ ಬೃಹತ್ ಕೊಳೆಗೇರಿಯನ್ನು ಕೊರೊನಾ ಪೆಡಂಭೂತದಿಂದ ರಕ್ಷಿಸುವುದಾಗಿದೆ.
(Dharavi Model screen, test and isolate along with vaccination turns Once a Covid hotspot Dharavi in to safe slum)
Published On - 1:54 pm, Thu, 27 May 21