Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಲ್ಲಿ ಸತ್ಯೇಂದ್ರ ಜೈನ್​ಗೆ ಮಸಾಜ್ ಮಾಡಲು ವೈದ್ಯರೇ ಹೇಳಿದ್ದರು; ವೈರಲ್ ವಿಡಿಯೋಗೆ ಆಮ್ ಆದ್ಮಿ ನಾಯಕರ ಸ್ಪಷ್ಟನೆ

ಈ ವಿಡಿಯೋವನ್ನು ಬಿಡುಗಡೆ ಮಾಡಬಾರದು ಎಂದು ಇಡಿಗೆ ಕೋರ್ಟ್ ಸೂಚನೆ ನೀಡಿತ್ತು. ಆದರೂ ಈ ವಿಡಿಯೋವನ್ನು ಲೀಕ್ ಮಾಡಲಾಗಿದೆ. ಹಾಗಾಗಿ, ಇದರ ವಿರುದ್ಧ ಪ್ರತ್ಯೇಕವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಜೈಲಿನಲ್ಲಿ ಸತ್ಯೇಂದ್ರ ಜೈನ್​ಗೆ ಮಸಾಜ್ ಮಾಡಲು ವೈದ್ಯರೇ ಹೇಳಿದ್ದರು; ವೈರಲ್ ವಿಡಿಯೋಗೆ ಆಮ್ ಆದ್ಮಿ ನಾಯಕರ ಸ್ಪಷ್ಟನೆ
ಸತ್ಯೇಂದ್ರ ಜೈನ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 19, 2022 | 2:06 PM

ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಸಚಿವ ಸತ್ಯೇಂದ್ರ ಜೈನ್​ಗೆ (Satyendar Jain) ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್​ಮೆಂಟ್ ನೀಡಲಾಗುತ್ತಿತ್ತು ಎಂಬುದನ್ನು ಸಾಬೀತುಪಡಿಸುವ ವಿಡಿಯೋವೊಂದನ್ನು ಬಿಜೆಪಿ ಇಂದು ಬೆಳಗ್ಗೆ ಬಿಡುಗಡೆ ಮಾಡಿತ್ತು. ಸತ್ಯೇಂದ್ರ ಜೈನ್ ಅವರ ಕಾಲು, ತಲೆಗೆ ಜೈಲಿನೊಳಗೆ ಮಸಾಜ್ ಮಾಡುತ್ತಿರುವ ಸಿಸಿಟಿವಿ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಅಪ್​ಲೋಡ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ (Aam Aadmi Party) ನಾಯಕರು, ವೈದ್ಯರ ಸಲಹೆಯ ಮೇರೆಗೆ ಸತ್ಯೇಂದ್ರ ಜೈನ್​ಗೆ ಮಸಾಜ್ ಮಾಡಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ದೆಹಲಿ ಉಪಮುಖ್ಯಮಂತ್ರಿ ಹಾಗೂ ಆಪ್ ನಾಯಕ ಮನೀಶ್ ಸಿಸೋಡಿಯಾ, ಕೆಳಗೆ ಬಿದ್ದು ಬೆನ್ನುಹುರಿಗೆ ಪೆಟ್ಟು ಮಾಡಿಕೊಂಡಿದ್ದರಿಂದ ವೈದ್ಯರ ಶಿಫಾರಸಿನ ಮೇರೆಗೆ ಚಿಕಿತ್ಸೆ ನೀಡಲಾಗಿತ್ತು. ಅದೇ ಕಾರಣಕ್ಕೆ ಅವರಿಗೆ ಮಸಾಜ್ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ.

ಕಳೆದ ಆರು ತಿಂಗಳಿನಿಂದ ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದಾರೆ. ಆಗ ಅವರು ಕೆಳಗೆ ಬಿದ್ದ ಕಾರಣ ಗಾಯಗೊಂಡಿದ್ದರು. ಆಗ ಅವರ ಬೆನ್ನುಹುರಿಗೆ ಗಾಯವಾಗಿತ್ತು. ಎರಡು ಆಪರೇಷನ್​ಗಳು ನಡೆದಿದ್ದವು. ವೈದ್ಯರು ಅವರಿಗೆ ನಿಯಮಿತ ಫಿಸಿಯೋಥೆರಪಿಯನ್ನು ಶಿಫಾರಸು ಮಾಡಿದ್ದರು. ಹೀಗಾಗಿ, ಜೈಲಿನೊಳಗೆ ಮಸಾಜ್ ಮಾಡಿಸಲಾಗುತ್ತಿತ್ತು ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಆಪ್ ಸಚಿವ ಸತ್ಯೇಂದ್ರ ಜೈನ್​ಗೆ ವಿಐಪಿ ಉಪಚಾರ; ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್

ಈ ವಿಡಿಯೋವನ್ನು ಬಿಡುಗಡೆ ಮಾಡಬಾರದು ಎಂದು ಇಡಿಗೆ ಕೋರ್ಟ್ ಸೂಚನೆ ನೀಡಿತ್ತು. ಆದರೂ ಈ ವಿಡಿಯೋವನ್ನು ಲೀಕ್ ಮಾಡಲಾಗಿದೆ. ಹಾಗಾಗಿ, ಇದರ ವಿರುದ್ಧ ಪ್ರತ್ಯೇಕವಾಗಿ ಕ್ರಮ ಕೈಗೊಳ್ಳುತ್ತೇವೆ. ಸೆಲ್‌ನೊಳಗೆ ಇರುವವರು ಪರಸ್ಪರ ಭೇಟಿಯಾಗಬಹುದು. ಇಂತಹ ಹೇಳಿಕೆ ನೀಡುವ ಮುನ್ನ ಬಿಜೆಪಿ ಜೈಲು ಕೈಪಿಡಿಯನ್ನು ಮೊದಲು ಓದಬೇಕಿತ್ತು ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಸತ್ಯೇಂದ್ರ ಜೈನ್ ಅವರನ್ನು ಬಿಜೆಪಿಯವರು ನಕಲಿ ಪ್ರಕರಣದಲ್ಲಿ ಜೈಲಿಗೆ ಹಾಕಿಸಿದ್ದಾರೆ. ಇಂದು ಬಿಜೆಪಿಯವರು ಅವರ ಕಾಯಿಲೆಯನ್ನು ಗೇಲಿ ಮಾಡುವಷ್ಟು ಕೆಳಮಟ್ಟಕ್ಕಿಳಿದಿದ್ದಾರೆ. ಯಾರಿಗೆ ಬೇಕಾದರೂ ಕಾಯಿಲೆ ಬರಬಹುದು. ಆದರೆ ವೀಡಿಯೋ ರಿಲೀಸ್ ಮಾಡಿ ತಮಾಷೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಪ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸತ್ಯೇಂದ್ರ ಜೈನ್‌ಗೆ ತಿಹಾರ್ ಜೈಲಿನಲ್ಲಿ ವಿಐಪಿ ಚಿಕಿತ್ಸೆ ನೀಡಲಾಗುತ್ತಿದ್ದು, ತಲೆಗೆ ಮಸಾಜ್, ಪಾದಕ್ಕೆ ಮಸಾಜ್ ಮತ್ತು ಬೆನ್ನಿಗೆ ಮಸಾಜ್‌ ಮಾಡುತ್ತಿರುವುದನ್ನು ಸಿಸಿಟಿವಿಯ ವಿಡಿಯೋದಲ್ಲಿ ನೋಡಬಹುದು. ಆಪ್ ದೆಹಲಿ ಸಚಿವರಿಗೆ ಜೈಲಿನಲ್ಲಿ ಐಷಾರಾಮಿ ವ್ಯಸ್ಥೆ ಕಲ್ಪಿಸಿಕೊಟ್ಟಿರುವುದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಇಡಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಇದನ್ನೂ ಓದಿ: ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ನ್ಯಾಯಾಲಯ

58 ವರ್ಷದ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರನ್ನು ಮೇ 30ರಂದು ಬಂಧಿಸಲಾಗಿತ್ತು. ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ, “ಜೈಲಿನಲ್ಲಿ ವಿವಿಐಪಿ ಚಿಕಿತ್ಸೆ! ಕೇಜ್ರಿವಾಲ್ ಇಂತಹ ಮಂತ್ರಿಯನ್ನು ಸಮರ್ಥಿಸಿಕೊಳ್ಳುತ್ತಾರಾ? ಅವರನ್ನು ವಜಾ ಮಾಡಬೇಕಲ್ಲವೇ? ಇದು ಎಎಪಿಯ ನಿಜವಾದ ಮುಖವನ್ನು ತೋರಿಸುತ್ತದೆ!” ಎಂದು ಬಿಜೆಪಿಯ ಶೆಹಜಾದ್ ಜೈ ಹಿಂದ್ ಅವರು ಟ್ವಿಟ್ಟರ್​​ನಲ್ಲಿ ಸತ್ಯೇಂದ್ರ ಜೈನ್ ಕಾಲಿಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ಮತ್ತೊಂದು ಸಿಸಿಟಿವಿ ದೃಶ್ಯವನ್ನು ಹಂಚಿಕೊಂಡಿದ್ದಾರೆ.

ದೆಹಲಿ ನ್ಯಾಯಾಲಯವು ನವೆಂಬರ್ 17ರಂದು ಸತ್ಯೇಂದ್ರ ಜೈನ್ ಅವರ ಜಾಮೀನು ಕೋರಿಕೆಯನ್ನು ತಿರಸ್ಕರಿಸಿತ್ತು. ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು ಇದು ಎರಡನೇ ಬಾರಿಯಾಗಿದೆ. ಈ ತಿಂಗಳ ಆರಂಭದಲ್ಲಿ ದೆಹಲಿಯ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಸಚಿವರಿಗೆ ವಿಐಪಿ ಚಿಕಿತ್ಸೆ ನೀಡಿದ ಆರೋಪದ ಮೇಲೆ ಅಮಾನತುಗೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ