ಪಶ್ಚಿಮಬಂಗಾಳದ ಭವಾನಿಪುರ ವಿಧಾನಸಭಾಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನೂ ಕಣಕ್ಕೆ ಇಳಿಸುವುದಿಲ್ಲ ಎಂದು ಅಲ್ಲಿನ ರಾಜ್ಯಾ ಅಧ್ಯಕ್ಷ ಅಧೀರ್ ರಂಜನ್ ಚೌಧರಿ, ಯುಪಿಎ ಒಕ್ಕೂಟದ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಭವಾನಿಪುರ ಸಿಎಂ ಮಮತಾ ಬ್ಯಾನರ್ಜಿಯವರ ಸ್ವಕ್ಷೇತ್ರವಾಗಿದ್ದು, ಅಲ್ಲಿ ನಮ್ಮ ಪಕ್ಷದ ಯಾವುದೇ ಅಭ್ಯರ್ಥಿಯನ್ನೂ ಹಾಕುವ ಇಚ್ಛೆ ಇಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಮತಾ ಬ್ಯಾನರ್ಜಿಯವರು ಈ ಬಾರಿ ತಮ್ಮ ಸ್ವಕ್ಷೇತ್ರ ಭವಾನಿಪುರವನ್ನು ಬಿಟ್ಟು ನಂದಿಗ್ರಾಮದಲ್ಲಿ, ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ. ಹಾಗೇ ಭವಾನಿಪುರ ಕ್ಷೇತ್ರದಲ್ಲಿ ಗೆದ್ದಿದ್ದ ಟಿಎಂಸಿಯ ಮುಖಂಡ ಸೋವನ್ದೇಬ್ ಚಟ್ಟೋಪಾಧ್ಯಾಯ ಮೇ 21 ರಂದು ತಮ್ಮ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂವಿಧಾನದ ಆರ್ಟಿಕಲ್ (164(4) ಪ್ರಕಾರ ನಂದಿಗ್ರಾಮದಲ್ಲಿ ಸೋತ ಮಮತಾ ಬ್ಯಾನರ್ಜಿ ತಮ್ಮ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕಾದರೆ, ಆರು ತಿಂಗಳ ಒಳಗೆ ಇನ್ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಬೇಕಾಗುತ್ತದೆ. ಹಾಗಾಗಿ ತಮ್ಮ ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಲು ಮಮತಾ ಬ್ಯಾನರ್ಜಿ ಸಿದ್ಧತೆ ನಡೆಸಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಇರಲು ಕಾಂಗ್ರೆಸ್ನ ಅಧೀರ್ ರಂಜನ್ ಚೌಧರಿ ನಿರ್ಧರಿಸಿದ್ದಾರೆ.
ಮಮತಾ ಬ್ಯಾನರ್ಜಿ ವಿರುದ್ಧ ಭವಾನಿಪುರದಲ್ಲಿ ಅಭ್ಯರ್ಥಿ ನಿಲ್ಲಿಸಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ತಿಳಿಸಿದ್ದೇನೆ. ಟಿಎಂಸಿ ವಿರುದ್ಧ ನಾವು ಖಂಡಿತ ಹೋರಾಡುತ್ತೇವೆ. ಆದರೆ ಈಗಿಲ್ಲಿ ಅಭ್ಯರ್ಥಿ ಹಾಕುವುದು ಬೇಡವೆಂದಷ್ಟೇ ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಟಿಎಂಸಿ ಬಗ್ಗೆ ಸಾಫ್ಟ್ಕಾರ್ನರ್ ತೋರಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. 2019ರಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಅಬ್ದುಲ್ ಮನ್ನಾನ್ ಕೂಡ ಇದೇ ಅಭಿಪ್ರಾಯ ಹೊರಹಾಕಿದ್ದರು. ಬಿಜೆಪಿಯನ್ನು ಗೆಲ್ಲಲು ಕೊಡಬಾರದು, ಅದನ್ನು ತಡೆಯಬೇಕು ಎಂದರೆ ನಾವು ಪಶ್ಚಿಮಬಂಗಾಳದಲ್ಲಿ ಟಿಎಂಸಿಗೆ ಬೆಂಬಲ ನೀಡಬೇಕು ಎಂದು ಸೋನಿಯಾಗಾಂಧಿಯವರಿಗೆ ಪತ್ರಬರೆದಿದ್ದರು. ಇನ್ನು ಈ ಬಾರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್ ಪಶ್ಚಿಮಬಂಗಾಳದಲ್ಲಿ ದೊಡ್ಡ ಮಟ್ಟದ ಪ್ರಚಾರವನ್ನೇನೂ ನಡೆಸಲಿಲ್ಲ. ಕೇರಳ, ತಮಿಳುನಾಡಿಗೆ ಕೊಟ್ಟಷ್ಟು ಮಹತ್ವವನ್ನು ಪಶ್ಚಿಮಬಂಗಾಳಕ್ಕೆ ನೀಡಿಲ್ಲ.
ಇದನ್ನೂ ಓದಿ: ಖ್ಯಾತ ಫುಟ್ಬಾಲ್ ಆಟಗಾರ ನೇಮರ್ ಮೇಲೆ ಮುಗಿಬಿದ್ದು ಶೂ ಕದ್ದೊಯ್ದ ಹುಚ್ಚು ಅಭಿಮಾನಿ; ವಿಡಿಯೋ ನೋಡಿ
Published On - 8:54 am, Sat, 5 June 21